ಅಪ್ಪನ ಸಾವು, ಸೋಲು, ಸವಾಲು; ‘ಚಿನ್ನ’ದ ಹುಡುಗಿ ಮನಿಷಾ ಭಾನ್ವಾಲಾ ಸಾಧನೆಯ ಹಿಂದಿದೆ ಕಣ್ಣೀರಿನ ಕತೆ

ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿ, ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿರುವ ಮನಿಷಾ ಭಾನ್ವಾಲಾ ಕಜಕಸ್ತಾನ್‌ನ ಅಸ್ತಾನಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 'ಸ್ವರ್ಣ ಪದಕ' ಮುಡಿಗೇರಿಸಿಕೊಂಡ ಭಾರತದ ಪ್ರಥಮ ಮಹಿಳಾ ಕುಸ್ತಿಪಟು ಎಂಬ ಅಭೂತಪೂರ್ವ ಇತಿಹಾಸವನ್ನು ಅವರು ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹಿಳಾ ಕುಸ್ತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿರುವ ಮನಿಷಾ ಅವರ ಹಿನ್ನೆಲೆ, ಕ್ರೀಡಾ ಪಯಣ ಹಾಗೂ ಸಾಧನೆಯ ಹಿಂದಿನ ಕತೆ ಇಲ್ಲಿದೆ.

ಅಪ್ಪನ ಸಾವು, ಸೋಲು, ಸವಾಲು; ಚಿನ್ನದ ಹುಡುಗಿ ಮನಿಷಾ ಭಾನ್ವಾಲಾ ಸಾಧನೆಯ ಹಿಂದಿದೆ ಕಣ್ಣೀರಿನ ಕತೆ
ಮನಿಷಾ ಭಾನ್ವಾಲಾ

Updated on: Oct 30, 2026 | 10:27 PM

ರೋಹ್ಟಕ್, ಅಕ್ಟೋಬರ್ 30: ಕಜಕಸ್ತಾನ್‌ನ ಅಸ್ತಾನಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 59 ಕೆಜಿ ವಿಭಾಗದಲ್ಲಿ ಅಮೆರಿಕದ ಅಬಿಗೈಲ್ ಎಲಿಜಬೆತ್ ನೆಟ್ಟೆ ಅವರನ್ನು 8-6 ಅಂತರದಿಂದ ಮಣಿಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ‘ಚಿನ್ನದ ಪದಕ’ ಗೆದ್ದ ಭಾರತದ ಪ್ರಥಮ ಮಹಿಳಾ ಕುಸ್ತಿಪಟು ಎಂಬ ಐತಿಹಾಸಿಕ ದಾಖಲೆ ಬರೆದ ಹರ್ಯಾಣದ 29 ವರ್ಷದ ಮನಿಷಾ ಭಾನ್ವಾಲಾ ಸಾಧನೆಯ ಹಿಂದೆ ಕಣ್ಣೀರಿನ ಕತೆಯಿದೆ. ಕುಗ್ರಾಮದವರಾದ ಮನಿಷಾ ಇದ್ದ ಊರಿನಲ್ಲಿ ಹೆಣ್ಣುಮಕ್ಕಳಿಗೆ ಕುಸ್ತಿ ಕಲಿಸುವುದೆಲ್ಲ ಕನಸಿನ ಮಾತಾಗಿತ್ತು. ಆದರೆ, ಅವರ ಅಪ್ಪ ತಮ್ಮ ಮಗಳಿಗಾಗಿ ಮಾಡಿದ ತ್ಯಾಗ ಸಣ್ಣದೇನಲ್ಲ. ತಾವೇ ಮುಂದೆ ನಿಂತು ಮಗಳನ್ನು ಕುಸ್ತಿ ತರಬೇತಿಗೆ ಕರೆದುಕೊಂಡು ಹೋಗುತ್ತಿದ್ದ ಅವರು ಮನಿಷಾ ಅವರ ಬೆನ್ನೆಲುಬಾಗಿದ್ದರು. ಆದರೆ, 2022ರ ಏಷ್ಯನ್ ಚಾಂಪಿಯನ್‌ಷಿಪ್‌ಗಾಗಿ ಮಂಗೋಲಿಯಾಕ್ಕೆ ಪ್ರಯಾಣಿಸುತ್ತಿದ್ದಾಗ, ಕುಸ್ತಿಗೆ ಬರಲು ಪ್ರೇರಣೆಯಾಗಿದ್ದ ಅವರ ತಂದೆ ಸುರೇಶ್ ಅವರು ನಿಧನರಾದ ಸುದ್ದಿ ಮನಿಷಾ ಅವರನ್ನು ತಲುಪಿತು.

ಆ ವೇಳೆ ಭಾರತೀಯ ಕುಸ್ತಿ ಫೆಡರೇಶನ್ ಅವರಿಗೆ ಪಂದ್ಯದಿಂದ ಹಿಂದೆ ಸರಿದು ಮನೆಗೆ ಮರಳುವ ಅವಕಾಶ ನೀಡಿದ್ದರೂ, ಮನಿಷಾ ಕ್ರೀಡಾಂಗಣದಲ್ಲೇ ಉಳಿದರು. “ಯಾವುದೇ ಕೆಲಸವನ್ನು ಆರಂಭಿಸಿದರೂ ಅದನ್ನು ಪೂರ್ಣಗೊಳಿಸಬೇಕು” ಎಂಬ ತಂದೆಯ ಕೊನೆಯ ಮಾತನ್ನು ನೆನಪಿಸಿಕೊಂಡು ಕಣ್ಣೀರಿನ ನಡುವೆಯೇ ಕಣಕ್ಕಿಳಿದು ಪದಕ ಗೆದ್ದಿದ್ದರು. ಅಪ್ಪನ ಸಾವಿನ ಸುದ್ದಿ ಕೇಳಿ ನಿಂತ ನೆಲವೇ ಕುಸಿದಂತಾದರೂ ಅಪ್ಪನ ಕನಸು ನನಸಾಗಿಸಬೇಕೆಂದು ಧೈರ್ಯ ತಂದುಕೊಂಡ ಮನಿಷಾ ಅಖಾಡಕ್ಕಿಳಿದು ಕುಸ್ತಿ ಪಂದ್ಯವನ್ನು ಆಡಿದ್ದರು.

ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಮನಿಷಾ ಭಾನ್ವಾಲಾ; ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು!

ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನಿಷಾ ಭಾನ್ವಾಲಾ ಅವರ ಈ ಐತಿಹಾಸಿಕ ಸಾಧನೆಯ ಹಿಂದೆ ಆಕೆಯ ತಂದೆಯ ತ್ಯಾಗವಿದೆ, ದಶಕಗಳ ಆಕೆಯ ಪರಿಶ್ರಮವಿದೆ.

4 ದಶಕಗಳ ಕನಸು ನನಸಾಯ್ತು:

ಭಾರತೀಯ ಮಹಿಳಾ ಕುಸ್ತಿಯಲ್ಲಿ ಬರೋಬ್ಬರಿ 39 ವರ್ಷಗಳ ಚಿನ್ನದ ಪದಕದ ಕಾಯುವಿಕೆಗೆ ಅಂತ್ಯ ಹಾಡಿರುವ ಮನಿಷಾ, 2010ರಲ್ಲಿ ಚಿನ್ನ ಗೆದ್ದಿದ್ದ ಸುಶೀಲ್ ಕುಮಾರ್ ನಂತರ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ದೇಶದ ಎರಡನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ.


ಮನಿಷಾ ಆರಂಭಿಕ ದಿನಗಳು ಹೇಗಿತ್ತು?:

2013ರಲ್ಲಿ ಮನಿಷಾ ಅವರ ತಂದೆ ಅವರನ್ನು ಫಿಟ್‌ನೆಸ್‌ಗಾಗಿ ತರಬೇತಿ ಶಿಬಿರಕ್ಕೆ ಸೇರಿಸಿದ್ದರು. ಹರ್ಯಾಣದ ಜಿಂದ್‌ನಿಂದ ಆರಂಭವಾದ ಅವರ ಪಯಣ ನಂತರ ರೋಹ್ಟಕ್‌ನ ಪ್ರಸಿದ್ಧ ‘ಛೋಟು ರಾಮ್ ಸ್ಟೇಡಿಯಂ’ ತಲುಪಿತು.

ಮನಿಷಾ ಭಾನ್ವಾಲಾ ಅವರು ಕುಸ್ತಿಪಟುಗಳ ತವರು ಎಂದೇ ಹೆಸರುವಾಸಿಯಾದ ಹರ್ಯಾಣದ ಜಿಂದ್ ಜಿಲ್ಲೆಯವರು. ಮನಿಷಾ ತಮ್ಮ ವೃತ್ತಿಜೀವನದಲ್ಲಿ 57 ಕೆಜಿಯಿಂದ 65 ಕೆಜಿವರೆಗಿನ ವಿನ್ಯಾಸದ ವಿವಿಧ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 57 ಕೆಜಿ (ಒಲಿಂಪಿಕ್ ವಿಭಾಗ) ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾರಿ ಫ್ಯೂಜಿನಾಮಿ ವಿರುದ್ಧ ಸೋತು ಹೊರಬಿದ್ದಿದ್ದರು. ಆದರೆ, ಧೃತಿಗೆಡದೆ ವಿಶ್ವ ಚಾಂಪಿಯನ್‌ಷಿಪ್‌ಗಾಗಿ 59 ಕೆಜಿ ವಿಭಾಗಕ್ಕೆ ಬದಲಾಯಿಸಿಕೊಂಡು ಕಠಿಣ ತರಬೇತಿ ಪಡೆದರು.

ಇದನ್ನೂ ಓದಿ: ಪ್ರಸಿದ್ಧ್ ಕೃಷ್ಣ ಬದಲಿಗೆ ಸಿರಾಜ್‌ಗೆ ಹೆಚ್ಚಿನ ಜವಾಬ್ದಾರಿ; ಬಿಸಿಸಿಐ ಮಹತ್ವದ ಅಪ್‌ಡೇಟ್

ಇದೀಗ ಅಸ್ತಾನಾದಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಅಮೆರಿಕದ ಪ್ರಬಲ ಸ್ಪರ್ಧಿ ಹಾಗೂ ಪ್ಯಾನ್ ಅಮೆರಿಕನ್ ಚಾಂಪಿಯನ್ ‘ಎಲಿಜಬೆತ್ ನೆಟ್ಟೆ’ ವಿರುದ್ಧ 1-5 ರಿಂದ ಹಿನ್ನಡೆಯಲ್ಲಿದ್ದರೂ, ಅಂತಿಮ ಕ್ಷಣಗಳಲ್ಲಿ ದ್ವಿತೀಯಾರ್ಧದಲ್ಲಿ ಮನಿಷಾ ಭಾನ್ವಾಲಾ 8-6 ಅಂತರದ ರೋಚಕ ಗೆಲುವು ಸಾಧಿಸಿದರು. ಚಾಂಪಿಯನ್‌ಷಿಪ್‌ ಉದ್ದಕ್ಕೂ ಕೆನಡಾದ ಲಾರೆನ್ಸ್ ಬೊರೆಗಾರ್ಡ್, ಮಂಗೋಲಿಯಾದ ಬೊಲೊರ್ತುಯಾ ಹಾಗೂ ಕಜಕಸ್ತಾನ್‌ನ ಅಲ್ಟಿನ್ ಶಾಗಾಯೇವಾ ಅವರಂತಹ ಪ್ರಭಾವಿ ಕುಸ್ತಿಪಟುಗಳನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಭಾರತದ ಪ್ರಮುಖ ಮಹಿಳಾ ಕುಸ್ತಿಪಟುಗಳಾದ ಅಂಶು ಮಲಿಕ್ (ಬೆಳ್ಳಿ), ವಿನೇಶ್ ಫೋಗಟ್ (ಕಂಚು) ಹಾಗೂ ಅಂತಿಮ್ ಪಂಗಲ್ (ಕಂಚು) ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದರೂ, ಚಿನ್ನದ ಪದಕ ಗೆಲ್ಲಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಇದೀಗ ಮನಿಷಾ ಭಾನ್ವಾಲಾ ಈ ಸಾಧನೆ ಮಾಡುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us