SMAT 2021: ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್-ಬೌಲಿಂಗ್ ಪ್ರದರ್ಶನ ನೀಡಿದ್ದು ಯಾರು ಗೊತ್ತಾ?
Syed Mushtaq Ali Trophy 2021-22: ಟಾಪ್ ರನ್ ಸ್ಕೋರರ್ ಪಟ್ಟಿಯಲ್ಲಿ 2ನೇ ಸ್ಥಾನವನ್ನು ರಾಜಸ್ಥಾನ್ ತಂಡದ ಆಟಗಾರ ದೀಪಕ್ ಹೂಡಾ ಅಲಂಕರಿಸಿದ್ದಾರೆ. 6 ಪಂದ್ಯಗಳನ್ನು ಆಡಿದ್ದ ಹೂಡಾ 4 ಅರ್ಧಶತಕಗಳೊಂದಿಗೆ 294 ರನ್ ಬಾರಿಸಿದ್ದರು.
ದೇಶೀಯ ಅಂಗಳದ ಚುಟುಕು ಕದನ ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ತೆರೆಬಿದ್ದಿದೆ. ಫೈನಲ್ನಲ್ಲಿ ಕರ್ನಾಟಕ ತಂಡವನ್ನು ಮಣಿಸಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಉಭಯ ತಂಡಗಳು ಅಂತಿಮ ಹಣಾಹಣಿಯಲ್ಲೂ ರೋಚಕತೆ ಸೃಷ್ಟಿಸಿದ್ದು ವಿಶೇಷ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ ತಮಿಳುನಾಡು ತಂಡಕ್ಕೆ 20ನೇ ಓವರ್ನ ಎಸೆತದಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ತಮಿಳುನಾಡು ತಂಡದ ಸ್ಪೋಟಕ ಬ್ಯಾಟರ್ ಶಾರೂಖ್ ಖಾನ್ ಪ್ರತೀಕ್ ಜೈನ್ ಎಸೆತದಲ್ಲಿ ಸಿಕ್ಸ್ ಸಿಡಿಸಿ 4 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಈ ರೋಚಕ ಗೆಲುವಿನೊಂದಿಗೆ ತಮಿಳುನಾಡು ತಂಡ ಸತತ ಎರಡನೇ ವರ್ಷ ಕೂಡ ಚಾಂಪಿಯನ್ ಪಟ್ಟಕ್ಕೇರಿತು.
ಇನ್ನು ಈ ಬಾರಿ ಟೂರ್ನಿಯಲ್ಲಿ ಬ್ಯಾಟ್ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದು ತನ್ಮಯ್ ಅಗರ್ವಾಲ್. ಹೈದರಾಬಾದ್ ಪರ ಆಡಿದ್ದ ತನ್ಮಯ್ 7 ಪಂದ್ಯಗಳಿಂದ 334 ರನ್ ಬಾರಿಸಿದ್ದರು. ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಹಾಗೆಯೇ 35 ಫೋರ್ ಹಾಗೂ 12 ಸಿಕ್ಸ್ ಸಿಡಿಸಿದ್ದರು. ಹಾಗೆಯೇ ಟಾಪ್ ರನ್ ಸ್ಕೋರರ್ ಪಟ್ಟಿಯಲ್ಲಿ 2ನೇ ಸ್ಥಾನವನ್ನು ರಾಜಸ್ಥಾನ್ ತಂಡದ ಆಟಗಾರ ದೀಪಕ್ ಹೂಡಾ ಅಲಂಕರಿಸಿದ್ದಾರೆ. 6 ಪಂದ್ಯಗಳನ್ನು ಆಡಿದ್ದ ಹೂಡಾ 4 ಅರ್ಧಶತಕಗಳೊಂದಿಗೆ 294 ರನ್ ಬಾರಿಸಿದ್ದರು. ಇನ್ನು ಈ ಇನಿಂಗ್ಸ್ಗಳ ವೇಳೆ ಹೂಡಾ ಬ್ಯಾಟ್ನಿಂದ 23 ಫೋರ್ ಹಾಗೂ 17 ಸಿಕ್ಸ್ಗಳು ಸಿಡಿದ್ದವು. ಮೂರನೇ ಸ್ಥಾನದಲ್ಲಿ ಮುಂಬೈ ತಂಡ ಅಜಿಂಕ್ಯ ರಹಾನೆ ಇದ್ದಾರೆ. ರಹಾನೆ 4 ಅರ್ಧಶತಕಗಳೊಂದಿಗೆ 5 ಪಂದ್ಯಗಳಿಂದ 286 ರನ್ ಕಲೆಹಾಕಿದ್ದಾರೆ. ಈ ವೇಳೆ 26 ಬೌಂಡರಿ ಹಾಗೂ 11 ಸಿಕ್ಸ್ ಬಾರಿಸಿದ್ದರು. ಇನ್ನು ಕರ್ನಾಟಕ ಪರ ಅತೀ ಹೆಚ್ಚು ರನ್ ಕಲೆಹಾಕಿದ್ದು ನಾಯಕ ಮನೀಷ್ ಪಾಂಡೆ. 9 ಪಂದ್ಯಗಳನ್ನಾಡಿದ ಪಾಂಡೆ 272 ರನ್ ಕಲೆಹಾಕಿದ್ದಾರೆ. ಈ ಇನಿಂಗ್ಸ್ನಲ್ಲಿ 3 ಅರ್ಧಶತಕ ಹಾಗೂ 20 ಫೋರ್ ಹಾಗೂ 8 ಸಿಕ್ಸ್ ಬಾರಿಸಿದ್ದರು.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಹೈದರಾಬಾದ್ ತಂಡದ ಸಿವಿ ಮಿಲಿಂದ್. 7 ಪಂದ್ಯಗಳನ್ನಾಡಿದ್ದ ಮಿಲಿಂದ್ 209 ರನ್ ನೀಡಿ 18 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಆಂಧ್ರಪ್ರದೇಶ ತಂಡ ಸಿವಿ ಸ್ಟೀಫನ್ ಇದ್ದು, 5 ಪಂದ್ಯಗಳಲ್ಲಿ 120 ರನ್ ನೀಡಿ 14 ವಿಕೆಟ್ ಪಡೆದಿದ್ದಾರೆ. ಹಾಗೆಯೇ 3ನೇ ಸ್ಥಾನದಲ್ಲಿ ಹಿಮಾಚಲ ಪ್ರದೇಶದ ರಿಷಿ ಧವನ್ ಇದ್ದಾರೆ. 6 ಪಂದ್ಯಗಳನ್ನಾಡಿರುವ ರಿಷಿ 156 ರನ್ ನೀಡಿ 14 ವಿಕೆಟ್ ಉರುಳಿಸಿದ್ದಾರೆ. ಇನ್ನು ಈ ಬಾರಿ ಕರ್ನಾಟಕದ ಪರ ಅತೀ ಹೆಚ್ಚು ವಿಕೆಟ್ ಪಡೆದಿರುವುದು ಕೆಸಿ ಕಾರ್ಯಪ್ಪ. 9 ಪಂದ್ಯಗಳನ್ನಾಡಿರುವ ಕಾರ್ಯಪ್ಪ 203 ರನ್ ನೀಡಿ 12 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: IPL 2022: 20 ಕೋಟಿ ಪಕ್ಕಾ…ಐಪಿಎಲ್ ದುಬಾರಿ ಆಟಗಾರ ಯಾರೆಂದು ತಿಳಿಸಿದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
Published On - 10:40 pm, Mon, 22 November 21