Neeraj Chopra: ಚಿನ್ನ ಗೆದ್ದು, ಸಿಹಿ ತಿಂಡಿ ತಂದುಕೊಡುವೆ: ಪ್ರಧಾನಿಗೆ ನೀರಜ್ ಚೋಪ್ರಾ ಭರವಸೆ

Neeraj Chopra: ನೀರಜ್ ಚೋಪ್ರಾ ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟು ಕೊಂಡಿದ್ದರು. ಅಂದು ಚಿನ್ನ ಗೆದ್ದಿದ್ದ ಒಲಿವರ್ ಹೆಲ್ಯಾಂಡರ್ ಅವರನ್ನು ಈ ಬಾರಿ ಹಿಂದಿಕ್ಕುವಲ್ಲಿ ಭಾರತೀಯ ತಾರೆ ಯಶಸ್ವಿಯಾಗಿದ್ದಾರೆ. ಈ ಮೂಲಕ ಪಾವೊ ನೂರ್ಮಿ ಗೇಮ್ಸ್​ 2024 ರಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇದೇ ಆತ್ಮ ವಿಶ್ವಾಸದಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲೂ ಕಣಕ್ಕಿಳಿಯಲಿದ್ದಾರೆ.

Neeraj Chopra: ಚಿನ್ನ ಗೆದ್ದು, ಸಿಹಿ ತಿಂಡಿ ತಂದುಕೊಡುವೆ: ಪ್ರಧಾನಿಗೆ ನೀರಜ್ ಚೋಪ್ರಾ ಭರವಸೆ
PM Modi - Neeraj Chopra
Follow us
|

Updated on: Jul 06, 2024 | 3:12 PM

ಜುಲೈ 26 ರಿಂದ ಶುರುವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್​ಗಾಗಿ ತೆರಳಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಶೇಷ ಸಂವಾದ ನಡೆಸಿದ್ದಾರೆ. ಆನ್​ಲೈನ್​ನಲ್ಲಿ ನಡೆದ ಈ ಸಂವಾದ ವೇಳೆ ಪ್ರಧಾನಿ, ಕಳೆದ ಬಾರಿ ಸಿಹಿ ತಂದು ಕೊಡುತ್ತೇನೆ ಎಂದಿರುವ ತಮ್ಮ ಮಾತನ್ನು ಇನ್ನೂ ಸಹ ಈಡೇರಿಸಿಲ್ಲ ಎಂದು ನೀರಜ್ ಚೋಪ್ರಾಗೆ ನೆನಪಿಸಿದರು.

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನಿಮ್ಮ ಮನೆಯಲ್ಲಿ ತಯಾರಿಸಿದ ‘ಚುರ್ಮಾ’ (ಹರಿಯಾಣದ ಜನಪ್ರಿಯ ಸಿಹಿ ತಿಂಡಿ) ತಂದು ಕೊಡಬೇಕೆಂದು ತಿಳಿಸಿದ್ದರು. ಇದೇ ವೇಳೆ ಮುಂದಿನ ಬಾರಿ ತಂದು ಕೊಡುವುದಾಗಿ ನೀರಜ್ ಚೋಪ್ರಾ ಹೇಳಿದ್ದರು.

2020 ರಲ್ಲಿ ನಡೆದ ಈ ಮಾತುಕತೆಯನ್ನು ಇದೀಗ ಪ್ರಧಾನಿ ಮೋದಿ ಮತ್ತೆ ನೆನಪಿಸಿದ್ದಾರೆ. ಈ ವೇಳೆ ಈ ಸಲ ಖಂಡಿತವಾಗಿಯೂ ತಂದು ಕೊಡುತ್ತೇನೆ ಎಂದು ನೀರಜ್ ಚೋಪ್ರಾ ಮಾತು ನೀಡಿದ್ದಾರೆ. ಈ ಸಲ ಪದಕ ಗೆದ್ದು, ನಿಮ್ಮ ಮನೆಯಲ್ಲಿ ತಾಯಿ ತಯಾರಿಸಿದ ಚುರ್ಮಾ ತಂದುಕೊಡಬೇಕೆಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪ್ರಧಾನಿಯ ಕೋರಿಕೆಗೆ ನೀರಜ್ ಚೋಪ್ರಾ ಒಕೆ ಅಂದಿದ್ದು, ಈ ಸಲ ಚಿನ್ನದ ಪದಕದೊಂದಿಗೆ ಹಿಂತಿರುಗುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಿಮಗೆ ಚುರ್ಮಾ ತೆಗೆದುಕೊಂಡು ಬರುವುದಾಗಿ ಪಿಎಂ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

ಮಗ ಚಿನ್ನದ ಪದಕ ಗೆದ್ದೇ ಗೆಲ್ಲುತ್ತಾನೆ:

ಈ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ ತಾಯಿ ಸರೋಜ ದೇವಿ, ಪ್ಯಾರಿಸ್ ಒಲಿಂಪಿಕ್ಸ್​ನಿಂದ ಮಗ ಚಿನ್ನದ ಪದಕದೊಂದಿಗೆ ಹಿಂತಿರುಗುತ್ತಾನೆ ಎಂಬ ವಿಶ್ವಾಸವಿದೆ. ಅಲ್ಲದೆ ಈ ಬಾರಿ ನಾನೇ ಪ್ರಧಾನಿಗೆ ಸಿಹಿ ತಿಂಡಿ ಕಳುಹಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ನೀರಜ್ ಮತ್ತೊಮ್ಮೆ ಚಿನ್ನದ ಪದಕವನ್ನು ಗೆದ್ದು ಮತ್ತೆ ಪ್ರಧಾನಿ ಮೋದಿಯನ್ನು ಭೇಟಿಯಾಗುವ ಅವಕಾಶವನ್ನು ಪಡೆಯಲಿ ಎಂದು ನಾವು ಬಯಸುತ್ತೇವೆ. ಈ ಬಾರಿ ನಾನು ದೇಸಿ ತುಪ್ಪ ಮತ್ತು ಸಕ್ಕರೆಯಿಂದ ಮಾಡಿದ ವಿಶೇಷ ಚುರ್ಮಾವನ್ನು ಕಳುಹಿಸುತ್ತೇನೆ ಎಂದು ಸರೋಜ್ ದೇವಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

7 ​ರಿಂದ 8 ಗಂಟೆ ಪರಿಶ್ರಮ:

ನೀರಜ್​ಗೆ ಈ ಬಾರಿ ಚಿನ್ನದ ಪದಕ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ದೇಶವು ಹೆಮ್ಮೆಪಡುವಂತೆ ಮಾಡಲು 100% ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಕಠಿಣ ಪರಿಶ್ರಮದಲ್ಲಿ ನಿರತರಾಗಿದ್ದಾರೆ ಎಂದು ನೀರಜ್ ಚೋಪ್ರಾ ಅವರ ತಂದೆ ಸತೀಶ್ ಚೋಪ್ರಾ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನೀರಜ್ ಚೋಪ್ರಾ ಗಾಯಗೊಂಡಿದ್ದರು. ಗಾಯದ ಹಿನ್ನಲೆ 63 ನೇ ಒಸ್ಟ್ರಾವ ಗೋಲ್ಡನ್ ಸ್ಪೈಕ್ 2024 ಅಥ್ಲೆಟಿಕ್ಸ್ ಮೀಟ್​ನಿಂದ ಹಿಂದೆ ಸರಿದಿದ್ದರು. ಇದೀಗ ಅವರು ಗಾಯದಿಂದ ಚೇತರಿಸಿಕೊಂಡಿದ್ದಾರೆ ಎಂದು ತಂದೆ ತಿಳಿಸಿದ್ದಾರೆ.

ನೀರಜ್ ಚೋಪ್ರಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇದೀಗ ಪ್ರತಿನಿತ್ಯ 7 ರಿಂದ 8 ಗಂಟೆಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಕಳೆದ ಒಲಿಂಪಿಕ್ಸ್‌ಗಿಂತ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದು, ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಉತ್ತಮ ಗುರಿ ಮುಟ್ಟುವ ವಿಶ್ವಾಸದಲ್ಲಿದ್ದಾರೆ ಎಂದು ಸತೀಶ್ ಚೋಪ್ರಾ ಹೇಳಿದ್ದಾರೆ.

ಕೆಲ ವಾರಗಳ ಹಿಂದೆಯಷ್ಟೇ  ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ ಪ್ರತಿಷ್ಠಿತ ಪಾವೊ ನೂರ್ಮಿ ಗೇಮ್ಸ್ 2024 ರ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಅತ್ಯುತ್ತಮ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ 85.97 ಮೀಟರ್​ ಥ್ರೋನೊಂದಿಗೆ ಚೋಪ್ರಾ ಅಗ್ರಸ್ಥಾನ ಅಲಂಕರಿಸಿದರು.

ಇದನ್ನೂ ಓದಿ: Neeraj Chopra: ಬಂಗಾರದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ

ಇದೇ ಆತ್ಮ ವಿಶ್ವಾಸದೊಂದಿಗೆ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್​ನಲ್ಲೂ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಟೋಕಿಯೊ ಒಲಿಂಪಿಕ್ಸ್​ನಲ್ಲಿ 87.58 ಮೀಟರ್ ದೂರಕ್ಕೆ ಭರ್ಜಿ ಎಸೆದು ಚಿನ್ನದ ಪದಕ ಗೆದ್ದಿದ್ದ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.