AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: ಬಂಗಾರದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra: ನೀರಜ್ ಚೋಪ್ರಾ ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟು ಕೊಂಡಿದ್ದರು. ಅಂದು ಚಿನ್ನ ಗೆದ್ದಿದ್ದ ಒಲಿವರ್ ಹೆಲ್ಯಾಂಡರ್ ಅವರನ್ನು ಈ ಬಾರಿ ಹಿಂದಿಕ್ಕುವಲ್ಲಿ ಭಾರತೀಯ ತಾರೆ ಯಶಸ್ವಿಯಾಗಿದ್ದಾರೆ. ಈ ಮೂಲಕ ಪಾವೊ ನೂರ್ಮಿ ಗೇಮ್ಸ್​ 2024 ರಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

Neeraj Chopra: ಬಂಗಾರದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ
Neeraj Chopra
ಝಾಹಿರ್ ಯೂಸುಫ್
|

Updated on: Jun 19, 2024 | 9:35 AM

Share

ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ ಪ್ರತಿಷ್ಠಿತ ಪಾವೊ ನೂರ್ಮಿ ಗೇಮ್ಸ್ 2024 ರ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಗೆದ್ದಿದ್ದಾರೆ. ಅತ್ಯುತ್ತಮ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ 85.97 ಮೀಟರ್​ ಥ್ರೋನೊಂದಿಗೆ ಚೋಪ್ರಾ ಅಗ್ರಸ್ಥಾನ ಅಲಂಕರಿಸಿದರು.

ನೀರಜ್ ಚೋಪ್ರಾಗೆ ಉತ್ತಮ ಪೈಪೋಟಿ ನೀಡಿದ ಫಿನ್​ಲ್ಯಾಂಡ್​ನ ಒಲಿವರ್ ಹೆಲ್ಯಾಂಡರ್ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದರು. ಅದರಲ್ಲೂ ದ್ವಿತೀಯ ಸುತ್ತಿನಲ್ಲಿ 83.96 ಮೀಟರ್‌ಗಳನ್ನು ಎಸೆಯುವ ಮೂಲಕ ಚೋಪ್ರಾ ಅವರನ್ನು ಹಿಂದಿಕ್ಕಿದ್ದರು.

ಆದರೆ ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ ತೋಳ್ಬಲವನ್ನು ತೋರಿಸಿದ್ದಾರೆ. ಬರೋಬ್ಬರಿ 85.97 ಮೀಟರ್ ದೂರಕ್ಕೆ ಭರ್ಜಿ ಎಸೆದು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ಳಿ ಪದಕ ಗೆದ್ದಿದ್ದ ನೀರಜ್:

ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟು ಕೊಂಡಿದ್ದರು. ಅಂದು ಒಲಿವರ್ ಹೆಲ್ಯಾಂಡರ್ ಅತೀ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಒಲಿವರ್ 89.83 ಮೀ ಎಸೆದು ಚಿನ್ನ ಗೆದ್ದರೆ, ನೀರಜ್ ಚೋಪ್ರಾ ಕೂದಲೆಳೆಯ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಇದೀಗ ಹೆಲ್ಯಾಂಡರ್​ ಅವರನ್ನು ಹಿಂದಿಕ್ಕಿ ಬಂಗಾರದ ಪದಕಕ್ಕೆ ಕೊರೊಳೊಡ್ಡುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿರುವುದು ವಿಶೇಷ.

ದಿ ರೋಡ್ ಟು ಪ್ಯಾರಿಸ್:

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ನೀರಜ್ ಚೋಪ್ರಾ ಅವರ ಈ ಪ್ರದರ್ಶನವು ಹೊಸ ಉತ್ತೇಜನ ನೀಡಲಿದೆ. ಏಕೆಂದರೆ ಮೊದಲೆರಡು ಸುತ್ತುಗಳಲ್ಲಿ ಹಿಂದುಳಿದಿದ್ದ ಚೋಪ್ರಾ ತೃತೀಯ ಸುತ್ತಿನ ಮೂಲಕ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದರು.

ಈ ವಿಜಯವು ನಿಸ್ಸಂದೇಹವಾಗಿ ಅವರ ತಂತ್ರವನ್ನು ಉತ್ತಮಗೊಳಿಸಲು ಮತ್ತು ಅವರ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ ಈ ಬಾರಿ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಕಡೆಯಿಂದ ಪದಕ ನಿರೀಕ್ಷಿಸಬಹುದು.

ಇದನ್ನೂ ಓದಿ: EURO 2024: ಕ್ರಿಸ್ಟಿಯಾನೊ ರೊನಾಲ್ಡೊ ರೆಕಾರ್ಡ್​ ಬ್ರೇಕ್ ಮಾಡಿದ ಗುಲರ್

ಚಿನ್ನದ ಹುಡುಗ:

2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಅಂದು ಬರೋಬ್ಬರಿ 87.58 ಮೀ. ದೂರ ಭರ್ಜಿ ಎಸೆಯುವ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದಿರುವ ಚೋಪ್ರಾ ಮತ್ತೊಮ್ಮೆ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವ ವಿಶ್ವಾಸ ಮೂಡಿಸಿದ್ದಾರೆ.