CWG 2026: ನೀರಜ್​ ಚೋಪ್ರಾ ಜೊತೆ ಪದಕ ಗೆದ್ದ ಯಶ್ ವೀರ್ ಸಿಂಗ್

Commonwealth Games 2026: ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ನೀರಜ್ ಚೋಪ್ರಾ ಮತ್ತು ಯಶ್ ವೀರ್ ಸಿಂಗ್ ಜಂಟಿಯಾಗಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ ಘಟಾನುಘಟಿ ಭರ್ಜಿ ಎಸೆತಗಾರರ ಸವಾಲನ್ನು ಮೆಟ್ಟಿ ನಿಂತ ಭಾರತೀಯರು ಜೊತೆಯಾಗಿ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

CWG 2026: ನೀರಜ್​ ಚೋಪ್ರಾ ಜೊತೆ ಪದಕ ಗೆದ್ದ ಯಶ್ ವೀರ್ ಸಿಂಗ್
Neeraj Chopra - Yash Vir Singh

Updated on: Aug 01, 2026 | 7:22 AM

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಉದಯೋನ್ಮುಖ ತಾರೆ ಯಶ್ ವೀರ್ ಸಿಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಡಬಲ್ ಸಂಭ್ರಮ ತಂದುಕೊಟ್ಟಿದ್ದಾರೆ.

ರೋಚಕ ಹಣಾಹಣಿ:

ಗ್ಲ್ಯಾಸ್ಗೋನ ಸ್ಕಾಟ್‌ಸ್ಟೌನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿತ್ತು. ತೀವ್ರ ಚಳಿ ಮತ್ತು ಬೀಸುತ್ತಿದ್ದ ವೇಗದ ಗಾಳಿಯ ನಡುವೆ ಕಣಕ್ಕಿಳಿದ ನೀರಜ್ ಚೋಪ್ರಾ, ತಮ್ಮ ಎರಡನೇ ಯತ್ನದಲ್ಲಿ 85.83 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಈ ವರ್ಷದ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದರು.

ಭಾರತಕ್ಕೆ ಡಬಲ್ ಧಮಾಕ:

ಶ್ರೀಲಂಕಾದ ರುಮೇಶ್ ತರಂಗ ಪತಿರಾಗೆ ಈ ಪಂದ್ಯಾವಳಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು. ಅವರು 89.75 ಮೀಟರ್ ದೂರ ಎಸೆಯುವ ಮೂಲಕ ತಮ್ಮ ವೈಯಕ್ತಿಕ ಗರಿಷ್ಠ ಸಾಧನೆಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಭಾರತದ ಯಶ್ ವೀರ್ ಸಿಂಗ್ 85.41 ಮೀಟರ್ ದೂರ ಎಸೆದು ವೈಯಕ್ತಿಕ ದಾಖಲೆಯೊಂದಿಗೆ ಕಂಚಿನ ಪದಕ ಗೆದ್ದು ಶ್ರೇಷ್ಠ ಸಾಧನೆ ಮಾಡಿದರು.

ಹಾಲಿ ಚಾಂಪಿಯನ್​ಗೆ ಆಘಾತ:

ಈ ಬಾರಿಯ ಫೈನಲ್ ಪಂದ್ಯವು ಜಾಗತಿಕ ಮಟ್ಟದಲ್ಲಿ ದೊಡ್ಡ ಅಚ್ಚರಿಯೊಂದಕ್ಕೆ ಸಾಕ್ಷಿಯಾಯಿತು. ಒಲಿಂಪಿಕ್ ಚಾಂಪಿಯನ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ ಹಾಲಿ ಚಾಂಪಿಯನ್ ಆಗಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ತೀವ್ರ ನಿರಾಶೆ ಅನುಭವಿಸಿದರು. ಕೇವಲ 77.41 ಮೀಟರ್ ಮಾತ್ರ ಎಸೆಯಲಷ್ಟೇ ಶಕ್ತರಾದ ಅವರು, ಅಗ್ರ 8ರ ಹಂತಕ್ಕೂ ಅರ್ಹತೆ ಪಡೆಯಲಾಗದೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಕೂಟದಿಂದ ಹೊರಬಿದ್ದರು.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

ನೀರಜ್ ಪದಕದ ಬೇಟೆ:

ನೀರಜ್ ಚೋಪ್ರಾ ಚಿನ್ನದ ಪದಕ ಕೈತಪ್ಪಿಸಿಕೊಂಡರೂ, ಈ ಕಠಿಣ ಪರಿಸ್ಥಿತಿಯಲ್ಲಿ ಅವರು ಪ್ರದರ್ಶಿಸಿದ ಸ್ಥಿರತೆ ಭಾರತೀಯ ಕ್ರೀಡಾಲೋಕದ ಹೆಮ್ಮೆಯನ್ನು ಹೆಚ್ಚಿಸಿದೆ. ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಷ್ಯನ್ ಗೇಮ್ಸ್ ಬಳಿಕ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಭಾರತದ ಪದಕದ ಖಾತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಜೊತೆಗೆ ಯಶ್ ವೀರ್ ಸಿಂಗ್ ಅವರ ಕಂಚಿನ ಪದಕವು ಮುಂಬರುವ ದಿನಗಳಲ್ಲಿ ಭಾರತೀಯ ಜಾವೆಲಿನ್ ರಂಗಕ್ಕೆ ಹೊಸ ಭರವಸೆ ನೀಡಿದೆ.

ಕಾಮನ್‌ವೆಲ್ತ್ ಗೇಮ್ಸ್‌ ಜಾವೆಲಿನ್ ಥ್ರೋ ಫೈನಲ್ ಪಂದ್ಯದ  ಫಲಿತಾಂಶಗಳ ಪಟ್ಟಿ:

ಸ್ಥಾನ (Rank) ಅಥ್ಲೀಟ್ (Athlete) ದೇಶ (Country) ಗರಿಷ್ಠ ದೂರ (Mark)
🥇 1 ರುಮೇಶ್ ತರಂಗ ಪತಿರಾಗೆ ಶ್ರೀಲಂಕಾ 89.75 ಮೀ.
🥈 2 ನೀರಜ್ ಚೋಪ್ರಾ ಭಾರತ 85.83 ಮೀ.
🥉 3 ಯಶ್ ವೀರ್ ಸಿಂಗ್ ಭಾರತ 85.41 ಮೀ.
4 ಆಂಡರ್ಸನ್ ಪೀಟರ್ಸ್  ಗ್ರೆನಡಾ 83.88 ಮೀ.
5 ಡೌವ್ ಸ್ಮಿತ್ ಸೌತ್ ಆಫ್ರಿಕಾ 82.88 ಮೀ.
6 ಕೇಶೋರ್ನ್ ವಾಲ್ಕಾಟ್ ಟ್ರಿನಿಡಾಡ್ ಮತ್ತು ಟೊಬಾಗೊ 82.55 Ble.
7 ರೋಹಿತ್ ಯಾದವ್ ಭಾರತ 81.56 ಮೀ.
8 ಬೆನ್ ಈಸ್ಟ್ ಇಂಗ್ಲೆಂಡ್ 81.12 ಮೀ.
9 ಅರ್ಷದ್ ನದೀಮ್ ಪಾಕಿಸ್ತಾನ್ 77.41 ಮೀ.
10 ಚಿನೆಚೆರೆಮ್ ನ್ ನಾಮ್ಡಿ  ನೈಜೀರಿಯಾ 76.29 ಮೀ.
11 ಕ್ಯಾಮರೂನ್ ಮೆಕ್ಇಂಟೈರ್ ಆಸ್ಟ್ರೇಲಿಯಾ 72.34 ಮೀ.
12 ಕೀಶಾನ್ ಸ್ಟ್ರಾಚನ್ ಬಹಾಮಾಸ್ 70.39 ಮೀ.

ಫೈನಲ್​ನಲ್ಲಿ ಕಾಣಿಸಿಕೊಂಡ 12 ಸ್ಪರ್ಧಿಗಳಲ್ಲಿ ಮೊದಲ 3 ಸುತ್ತುಗಳ ಬಳಿಕ ಅಗ್ರ 8 ಸ್ಪರ್ಧಿಗಳು ಮಾತ್ರ ಮುಂದಿನ ಅಂತಿಮ 3 ಎಸೆತಗಳ ಸುತ್ತಿಗೆ ಅರ್ಹತೆ ಪಡೆದರು. ಅರ್ಷದ್ ನದೀಮ್ ಸೇರಿದಂತೆ ಕೊನೆಯ 4 ಸ್ಪರ್ಧಿಗಳು 3ನೇ ಸುತ್ತಿನಲ್ಲೇ ಹೊರಬಿದ್ದಿದ್ದರು.

 

Loading...
Unable to load recommendations.
Follow Us