ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಪದಕ ಭರವಸೆಯಾಗಿದ್ದ ಲಕ್ಷ್ಯ ಸೇನ್ ಸೋಲುವುದರೊಂದಿಗೆ ಬ್ಯಾಡ್ಮಿಂಟನ್ನಲ್ಲಿ ಭಾರತದ ಪದಕದ ಭರವಸೆಯೂ ಅಂತ್ಯಗೊಂಡಿದೆ. ವಾಸ್ತವವಾಗಿ ಈ ಬಾರಿ ಬ್ಯಾಡ್ಮಿಂಟನ್‌ನಿಂದ ಭಾರತಕ್ಕೆ ಅಧಿಕ ಪದಕಗಳನ್ನು ಗೆಲ್ಲುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಅದೆಲ್ಲವೂ ಹುಸಿಯಾಗಿದೆ. ಪಿವಿ ಸಿಂಧು ಸೇರಿದಂತೆ ದೇಶದ ಸ್ಟಾರ್ ಶಟ್ಲರ್ಗಳಿಗೆ ಕನಿಷ್ಠ ಕಂಚಿನ ಪದಕ ಗೆಲ್ಲಲೂ ಸಾಧ್ಯವಾಗಲಿಲ್ಲ. ಆಟಗಾರರ ಈ ನೀರಸ ಪ್ರದರ್ಶನವನ್ನು ಕಂಡು ಇದೀಗ ದೇಶದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ವಾಸ್ತವವಾಗಿ 2008ರ ನಂತರ ಇದೇ ಮೊದಲ ಬಾರಿಗೆ ಭಾರತದ ಶಟ್ಲರ್‌ಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿರುವುದು. 2012 ರ ಒಲಿಂಪಿಕ್ಸ್‌ನಲ್ಲಿ, ಸೈನಾ ನೆಹ್ವಾಲ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ನಲ್ಲಿ ದೇಶಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದರು. ಆ ಬಳಿಕ ಪಿವಿ ಸಿಂಧು ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡಕ್ಕಿಂತ ಹೆಚ್ಚು ಪದಕಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡುವಲ್ಲಿ ಭಾರತದ ಆಟಗಾರರು ಎಡವಿದ್ದಾರೆ.
ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಪ್ರಕಾಶ್ ಪಡುಕೋಣೆ, ‘ಒಲಿಂಪಿಕ್ಸ್‌ಗೂ ಮುನ್ನ ಭಾರತೀಯ ಅಥ್ಲೀಟ್‌ಗಳ ಪ್ರತಿಯೊಂದು ಬೇಡಿಕೆಯೂ ಈಡೇರಿದ್ದು, ಅವರಿಂದ ವಿಶೇಷವಾಗಿ ಬ್ಯಾಡ್ಮಿಂಟನ್ ತಂಡದಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಿದ್ದೇವು. ಆದರೆ ಬ್ಯಾಡ್ಮಿಂಟನ್‌ನಿಂದ ಒಂದೇ ಒಂದು ಪದಕವನ್ನು ಗೆಲ್ಲಲಾಗಲಿಲ್ಲ ಎಂಬುದು ನನಗೆ ಸ್ವಲ್ಪ ನಿರಾಶೆ ತಂದಿದೆ ಎಂದಿದ್ದಾರೆ. ಆದರೆ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಭಾರತದ ಆಟಗಾರರಿಗೆ ಸಂಪೂರ್ಣ ಬೆಂಬಲ ನೀಡಿದ ಕ್ರೀಡಾ ಸಚಿವಾಲಯ ಮತ್ತು ಇತರ ಮಧ್ಯಸ್ಥಗಾರರನ್ನು ಪ್ರಕಾಶ್ ಪಡುಕೋಣೆ ಶ್ಲಾಘಿಸಿದ್ದಾರೆ. ಆದರೆ ಪ್ಯಾರಿಸ್‌ನಲ್ಲಿನ ನಿರಾಶಾದಾಯಕ ಪ್ರದರ್ಶನಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ‘ನಾವು ಬ್ಯಾಡ್ಮಿಂಟನ್ನಲ್ಲಿ ಮೂರು ಪದಕಗಳನ್ನು ನಿರೀಕ್ಷಿಸಿದ್ದೇವು. ಕನಿಷ್ಠ ಪಕ್ಷ ಒಂದು ಪದಕ ಗೆದ್ದಿದ್ದರೂ ನನಗೆ ಖುಷಿ ಕೊಡುತ್ತಿತ್ತು. ನಾನು ವೈಯಕ್ತಿಕವಾಗಿ ನಿರಾಶೆಗೊಂಡಿದ್ದೇನೆ. ಆದರೆ, ಈ ಬಾರಿ ಸರ್ಕಾರ, ಎಸ್ಎಐ ಮತ್ತು ಫೌಂಡೇಶನ್ ಎಲ್ಲವನ್ನೂ ಪೂರೈಸಿದೆ. ಹಾಗಾಗಿ, ಅದರ ವಿರುದ್ಧ ನನ್ನದೇನೂ ಅಸಮಾಧಾನ ಇಲ್ಲ. ಸರ್ಕಾರ, ಕ್ರೀಡಾ ಸಚಿವಾಲಯ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಯಾರಾದರೂ ಮಾಡಬಹುದೆಂದು ನಾನು ಭಾವಿಸುವುದಿಲ್ಲ. ಹೀಗಾಗಿ ಆಟಗಾರರು ಸ್ವಲ್ಪ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ.
Breaking 🚨 #PrakashPadukone Explosive!
🗣️ It’s high time players take responsibility. The Govt and Federations are doing enough!
🗣️ Vimal and I are not happy with this result!
Prakash Padukone after #LakshyaSen‘s loss in the bronze medal match.
Listen in 👇… pic.twitter.com/4TXVb8DLu8
— RevSportz Global (@RevSportzGlobal) August 5, 2024
ಕೆಲವು ವರ್ಷಗಳ ಹಿಂದೆ ನಾವು ಸಾಕಷ್ಟು ಸೌಲಭ್ಯಗಳು ಅಥವಾ ಪ್ರೋತ್ಸಾಹಕಗಳಿಲ್ಲ ಎಂಬ ಕಾರಣವನ್ನು ನೀಡಬಹುದಿತ್ತು. ಆದರೆ, ಈ ಬಾರಿ ಸರ್ಕಾರದಿಂದ ಎಲ್ಲಾ ಪ್ರೋತ್ಸಾಹ, ಸವಲತ್ತುಗಳು ಸಿಕ್ಕಿವೆ ಎಂದು ನಾನು ಭಾವಿಸುತ್ತೇನೆ. ನಾನು ಕೇವಲ ಬ್ಯಾಡ್ಮಿಂಟನ್ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಬದಲಿಗೆ ಪದಕ ಗೆಲ್ಲಬಹುದಾದಂತ 30 ರಿಂದ 40 ಅಗ್ರ ಆಟಗಾರರಿಗೆ ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡಿದೆ. ಕೆಲವೊಮ್ಮೆ ಆಟಗಾರರ ಅಸಮಂಜಸ ಬೇಡಿಕೆಗಳಾಗಿದ್ದರೂ ಸಹ, ಅವುಗಳನ್ನು ಪೂರೈಸಲಾಯಿತು. ಆದರೂ ಈ ಬಾರಿ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಎಂದು ಪಡುಕೋಣೆ ಅಸಮಾಧಾನ ಹೊರಹಾಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Mon, 5 August 24