IND vs SL: ಮೂರನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ ಖಚಿತ

IND vs SL: ಟೀಂ ಇಂಡಿಯಾ ಈ ಹಿಂದಿನ ಎರಡು ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಾಗಿದೆ. ಆ ರಿಪೇರಿಯ ಕೆಲಸ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರುವ ಮುಖಾಂತರವೇ ಆಗಬೇಕಿದೆ. ಅದರಂತೆ ಮೂರನೇ ಏಕದಿನ ಪಂದ್ಯದಕ್ಕೆ ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ 3 ಬದಲಾವಣೆಗಳಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

IND vs SL: ಮೂರನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ ಖಚಿತ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Aug 05, 2024 | 9:42 PM

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಆಗಸ್ಟ್ 7 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಿದ್ದು, ಇದೀಗ ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಲು ಕೊನೆಯ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಹೀಗಾಗಿ ಟೀಂ ಇಂಡಿಯಾ ಈ ಹಿಂದಿನ ಎರಡು ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಾಗಿದೆ. ಆ ರಿಪೇರಿಯ ಕೆಲಸ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರುವ ಮುಖಾಂತರವೇ ಆಗಬೇಕಿದೆ. ಅದರಂತೆ ಮೂರನೇ ಏಕದಿನ ಪಂದ್ಯದಕ್ಕೆ ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ 3 ಬದಲಾವಣೆಗಳಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ದುಬೆ ಬದಲಿಗೆ ಪರಾಗ್

ಮೂರನೇ ಏಕದಿನಕ್ಕೆ ಶಿವಂ ದುಬೆ ಬದಲಿಗೆ ರಿಯಾನ್ ಪರಾಗ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸುವುದು ತಂಡಕ್ಕೆ ಬೂಸ್ಟ್ ನೀಡಲಿದೆ. ಏಕೆಂದರೆ ಕೊಲಂಬೊ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳಿಗೆ ಸಹಾಯ ಸಿಕ್ಕಿರುವುದೇ ಇದಕ್ಕೆ ಕಾರಣ. ದುಬೆ ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರು, ಆದರೆ ಸಂದರ್ಭಗಳನ್ನು ಪರಿಗಣಿಸಿ, ರಿಯಾನ್ ಪರಾಗ್ ಮೂರನೇ ಏಕದಿನಕ್ಕೆ ಉತ್ತಮ ಆಯ್ಕೆಯಾಗಬಹುದು. ಇದಲ್ಲದೆ ಶ್ರೇಯಸ್ ಅಯ್ಯರ್ ಬದಲಿಗೂ ರಿಯಾನ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಬಹುದು.

ರಾಹುಲ್ ಬದಲಿಗೆ ರಿಷಬ್ ಪಂತ್

ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕೆಎಲ್ ರಾಹುಲ್ ಈ ಏಕದಿನ ಸರಣಿಯಲ್ಲಿ ನಿರಾಸೆ ಮೂಡಿಸಿದ್ದಾರೆ. ಸರಣಿಯ ಎರಡೂ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಮೊದಲನೇ ಏಕದಿನದಲ್ಲಿ ರಾಹುಲ್ 31 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಇನ್ನು ಎರಡನೇ ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿದ ರಾಹುಲ್ ಶೂನ್ಯಕ್ಕೆ ಔಟಾದರು. ಇಂತಹ ಪರಿಸ್ಥಿತಿಯಲ್ಲಿ ಈಗ ರಿಷಬ್ ಪಂತ್​ಗೆ, ರಾಹುಲ್ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ಅವಕಾಶ ಸಿಗಬಹುದು. ರಿಷಭ್ ತಂಡಕ್ಕೆ ಎಂಟ್ರಿ ಕೊಡುವುದರೊಂದಿಗೆ ಎಡಗೈ ಬ್ಯಾಟ್ಸ್‌ಮನ್‌ಗಳ ಆಯ್ಕೆಯೂ ಇಲೆವೆನ್‌ನಲ್ಲಿ ಹೆಚ್ಚಾಗಲಿದೆ.

ಹರ್ಷಿತ್ ರಾಣಾಗೆ ಅವಕಾಶ

ಕೊಲಂಬೊದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಾಯವಿಲ್ಲ. ಇದಕ್ಕೆ ಪೂರಕವಾಗಿ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಇದುವರೆಗೆ ತಲಾ ಎರಡು ವಿಕೆಟ್‌ಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಬದಲಿಗೆ ಯುವ ವೇಗಿ ಹಾಗೂ ಆಕ್ರಮಣಕಾರಿ ಬೌಲರ್ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಉತ್ತಮ ಯೋಜನೆ ಎನಿಸಬಹುದು. ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಉತ್ತಮ ಕಟ್ಟರ್ ಮತ್ತು ನಿಧಾನಗತಿಯ ಚೆಂಡುಗಳನ್ನು ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ, ರಾಣಾ ಬ್ಯಾಟಿಂಗ್ ಮೂಲಕವೂ ಕೊಡುಗೆ ನೀಡಬಲ್ಲರು. ಹೀಗಾಗಿ ಮೂರನೇ ಪಂದ್ಯಕ್ಕೆ ರಾಣಾ ತಂಡದಲ್ಲಿ ಎಂಟ್ರಿಕೊಡುವ ಎಲ್ಲಾ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ