Paris Olympics 2024: ಭಾರತಕ್ಕೆ 4ನೇ ಪದಕ; ಹಾಕಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ

|

Updated on: Aug 08, 2024 | 8:32 PM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ, ಸ್ಪೇನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಕಳೆದ ಬಾರಿಯ ಅಂದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು ಮಣಿಸಿ ಕಂಚಿನ ಪದಕ ಗೆದ್ದಿತ್ತು.

Paris Olympics 2024: ಭಾರತಕ್ಕೆ 4ನೇ ಪದಕ; ಹಾಕಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
Follow us on

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ, ಸ್ಪೇನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಕಳೆದ ಬಾರಿಯ ಅಂದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು ಮಣಿಸಿ ಕಂಚಿನ ಪದಕ ಗೆದ್ದಿತ್ತು. ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿತು. ಟೀಂ ಇಂಡಿಯಾ ಪರ ಇಡೀ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ ನಾಯಕ ಹರ್ಮನ್​ಪ್ರೀತ್ ಸಿಂಗ್, ಕಂಚಿನ ಪದಕದ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲೂ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡೂ ಗೋಲುಗಳನ್ನು ಬಾರಿಸಿ ತಂಡವನ್ನು ಕಂಚಿನ ಪದಕ ಗೆಲ್ಲುವಂತೆ ಮಾಡಿದರು.

ನಾಯಕನ ಅಮೋಘ ಆಟ

ಈ ಇಡೀ ಒಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾದ ಈ ಅಮೋಘ ಪ್ರದರ್ಶನದಲ್ಲಿ ಇಬ್ಬರ ಪಾತ್ರ ಪ್ರಮುಖವಾಗಿತ್ತು. ಅದರಲ್ಲಿ ಒಬ್ಬರು ಕೊನೆಯ ಬಾರಿಗೆ ಭಾರತದ ಪರ ಆಡುತ್ತಿರುವ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್. ಪಂದ್ಯಾವಳಿಯುದ್ದಕ್ಕೂ ಶ್ರೀಜೇಶ್, ಗೋಡೆಯಂತೆ ನಿಂತು ಎದುರಾಳಿಗಳ ಬೆಂಕಿ ಹೊಡೆತಗಳನ್ನು ತಡೆದು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಎರಡನೇಯದ್ದಾಗಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಇಡೀ ಕ್ರೀಡಾಕೂಟದಲ್ಲಿ 10 ಗೋಲು ಬಾರಿಸಿ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದರು. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದ ಹರ್ಮನ್‌ಪ್ರೀತ್ ಸಿಂಗ್, ತಂಡವನ್ನು ಕಂಚಿನ ಪದಕಕ್ಕೆ ಮುನ್ನಡೆಸಿದರು.

ಪಂದ್ಯಾವಳಿಯಲ್ಲಿ ಅಧಿಕ ಗೋಲು

ಗುಂಪು ಹಂತದ ಮೊದಲ ಪಂದ್ಯದಿಂದಲೇ ಗೋಲುಗಳ ಖಾತೆ ತೆರೆದ ಹರ್ಮನ್‌ಪ್ರೀತ್, ಗುಂಪು ಹಂತದ 5 ಪಂದ್ಯಗಳಲ್ಲಿ (ಪ್ರಥಮ, ದ್ವಿತೀಯ, ಮೂರನೇ ಮತ್ತು ಐದನೇ) 4 ಗೋಲುಗಳನ್ನು ದಾಖಲಿಸಿದರು. ಇದರ ನಂತರ, ಅವರು ಕ್ವಾರ್ಟರ್-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ, ಸೆಮಿ-ಫೈನಲ್‌ನಲ್ಲಿ ಜರ್ಮನಿ ಮತ್ತು ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ವಿರುದ್ಧವೂ ಗೋಲುಗಳನ್ನು ಗಳಿಸಿದರು. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಎರಡು ಗೋಲುಗಳನ್ನು ಬಾರಿಸಿದ ಹರ್ಮನ್‌ಪ್ರೀತ್, ಇಡೀ ಪಂದ್ಯಾವಳಿಯಲ್ಲಿ ಗರಿಷ್ಠ 10 ಗೋಲುಗಳನ್ನು ಬಾರಿಸಿದರು

ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅಬ್ಬರಿಸಿದ್ದ ಹರ್ಮನ್‌ಪ್ರೀತ್, ಭಾರತದ ಪರ ಗರಿಷ್ಠ 6 ಗೋಲುಗಳನ್ನು ಗಳಿಸಿದ್ದರು. ಆ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಅವರ ಡ್ರ್ಯಾಗ್ ಫ್ಲಿಕ್‌ನಿಂದಾಗಿ ಭಾರತ ತಂಡ, ಜರ್ಮನಿಯಂತಹ ಬಲಿಷ್ಠ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು. ಆ ಸಮಯದಲ್ಲಿ ಹರ್ಮನ್‌ಪ್ರೀತ್ ತಂಡದ ನಾಯಕರಾಗಿರಲಿಲ್ಲ ಆದರೆ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದರು. ಈ ಬಾರಿ ನಾಯಕನಾಗಿ ಮೊದಲಿಗಿಂತ ಉತ್ತಮ ಪ್ರದರ್ಶನ ನೀಡಿ ಹೆಚ್ಚು ಗೋಲು ಗಳಿಸುವ ಮೂಲಕ ತಂಡದ ಯಶಸ್ಸಿನ ಪ್ರಮುಖ ರೂವಾರಿ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Thu, 8 August 24