IPL 2021: ವೈಯಕ್ತಿಕ ದುಃಖ ಮೆಟ್ಟಿನಿಂತು ಪದಾರ್ಪಣೆಯ ಪಂದ್ಯದಲ್ಲೇ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ ರಾಜಸ್ತಾನ್ ರಾಯಲ್ಸ್ ತಂಡದ ಚೇತನ್
ಭಾರತದ ಮಾಜಿ ಆರಂಭ ಆಟಗಾರ ವೀರೆಂದ್ರ ಸೆಹ್ವಾಗ್ ಅವರು ಚೇತನ್ ಬೌಲಿಂಗ್ನಿಂದ ಭಾರೀ ಪ್ರಭಾವಕ್ಕೊಳಗಾಗಿದ್ದಾರೆ. ಅವರಲ್ಲಿ ಅಸಾಧಾರಣವಾದ ಸ್ಥೈರ್ಯ ಅಡಗಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಚೇತನ್ ಸಕಾರಿಯಾ ಬಗ್ಗೆ ನಿನ್ನೆಯವರೆಗೆ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಆದರೆ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ತನ್ನ ಪಾದಾರ್ಪಣೆಯ ಪಂದ್ಯದಲ್ಲೇ ಆದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 22ರ ಪ್ರಾಯದ ಚೇತನ್ ಬೆಳಗಾಗುವದರಲ್ಲಿ ಮನೆಮಾತಾಗಿಬಿಟ್ಟಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಸೌರಾಷ್ಟ್ರ ಪರ ಆಡುವ ಅವರನ್ನು ರಾಜಸ್ತಾನ ರಾಯಲ್ಸ್ (ಆರ್ಆರ್) ಫ್ರಾಂಚೈಸಿಯ ಧಣಿಗಳು ಫೆಬ್ರುವರಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ₹ 1.2 ಕೋಟಿಗಳಿಗೆ ಖರೀದಿಸಿದ್ದರು. ಆರ್ಆರ್ ತಂಡ ತನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಚೇತನ್ ಕ್ರಿಕೆಟ್ ಪ್ರೇಮಿಗಳೆಲ್ಲ ಬೆರಗಾಗುವ ರೀತಿಯಲ್ಲಿ ಉಳಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಪಂದ್ಯದಲ್ಲಿ ಅವರು 31 ರನ್ಗಳಿಗೆ 3 ವಿಕೆಟ್ ಪಡೆದು ಕ್ರಿಕೆಟ್ ವಿಶ್ವಕ್ಕೆ ತನ್ನ ಆಗಮನವನ್ನು ಸಾರಿದ್ದಾರೆ. ಅವರ ಬೌಲಿಂಗ್ ಪ್ರದರ್ಶನ ಯಾಕೆ ಮಹತ್ವ ಪಡೆದುಕೊಂಡಿದೆಯೆಂದರೆ, ರಾಜಸ್ತಾನದ ಇತರ ಬೌಲರ್ಗಳು ಪಂಜಾಬಿನ ಬ್ಯಾಟ್ಸ್ಮನ್ಗಳಿಂದ ಮನಬಂದಂತೆ ಚಚ್ಚಿಸಿಕೊಂಡರೆ, ಚೇತನ್ ಅವರ ಶಿಸ್ತಿನ ದಾಳಿಯೆದರು ರನ್ ಗಳಿಸಲು ಪರದಾಡಿದರು.
ಭಾರತದ ಮಾಜಿ ಆರಂಭ ಆಟಗಾರ ವೀರೆಂದ್ರ ಸೆಹ್ವಾಗ್ ಅವರು ಚೇತನ್ ಬೌಲಿಂಗ್ನಿಂದ ಭಾರೀ ಪ್ರಭಾವಕ್ಕೊಳಗಾಗಿದ್ದಾರೆ. ಅವರಲ್ಲಿ ಅಸಾಧಾರಣವಾದ ಸ್ಥೈರ್ಯ ಅಡಗಿದೆ ಎಂದು ಸೆಹ್ವಾಗ್ ಹೇಳಿದ್ದಾರೆ. ವೈಯಕ್ತಿಕವಾಗಿ ಅಪಾರ ದುಃಖದಲ್ಲಿದ್ದರೂ ಅದನ್ನು ಹತ್ತಿಕ್ಕಿ ಅವರು ಬೌಲ್ ಮಾಡಿದರು ಎಂದು ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಹೇಳಿದ್ದಾರೆ. ರಾಜಸ್ತಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಕೊನೆಗೊಂಡ ನಂತರ ಟ್ವೀಟ್ ಮಾಡಿರುವ ಸೆಹ್ವಾಗ್, ಐಪಿಎಲ್ 2021 ಶುರುವಾಗುವ ಕೆಲವೇ ತಿಂಗಳು ಹಿಂದೆ ಚೇತನ್ ಅವರು ತಮ್ಮ ಸಹೋದರನನ್ನು ಕಳೆದುಕೊಂಡರು ಅಂತ ಹೇಳಿದ್ದಾರೆ.
‘ಚೇತನ್ ಸಕಾರಿಯಾ ಅವರ ಸಹೋದರ ಕೆಲವೇ ತಿಂಗಳುಗಳ ಹಿಂದೆ ಆತ್ಮಹತ್ಯೆ ಮೂಲಕ ಮರಣ ಹೊಂದಿದರು. ಆದರೆ ಚೇತನ್ ಆಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿದ್ದರಿಂದ ಅವರ ತಂದೆತಾಯಿಗಳು ವಿಷಯವನ್ನು ತಿಳಿಸಲಿಲ್ಲ. ಕ್ರಿಕೆಟ್ ಇಂದಿನ ಯುವಕರಲ್ಲಿ ಮತ್ತು ಅವರ ಕುಟುಂಬಗಳಲ್ಲಿ ನಿಸ್ಸಂದೇಹವಾಗಿ ಭಾರಿ ಮಹತ್ವ ಪಡೆದಿದೆ. ಯುವಕರಲ್ಲಿರುವ ಸ್ಥೈರ್ಯ ಮತ್ತು ಸಂಕಲ್ಪಗಳು ಐಪಿಎಲ್ ಮೂಲಕ ಹೊರಬೀಳುತ್ತಿವೆ’ ಎಂದು ಸೆಹ್ವಾಗ್ ಟ್ಟೀಟ್ ಮಾಡಿದ್ದಾರೆ. ಚೇತನ್ ಅವರ ಅಮ್ಮ ಅರೌಂಡ್ ದಿ ವಿಕೆಟ್ ಹೆಸರಿನ ಮಾಧ್ಯಮದೊಂದಿಗೆ ಆಡಿದ ಮಾತುಗಳ ಕಾಪಿಯನ್ನು ಅವರು ತಮ್ಮ ಟ್ವೀಟ್ಗೆ ಅಟ್ಯಾಚ್ ಮಾಡಿದ್ದಾರೆ.
Chetan Sakariya's brother died of suicide few months ago,his parents didn't tell him for 10 days as he was playing the SMA trophy. What cricket means to these young men,their families .IPL is a true measure of the Indian dream & some stories of extraordinary grit??Great prospect pic.twitter.com/r0mISy9Asv
— Virender Sehwag (@virendersehwag) April 12, 2021
ಐಪಿಎಲ್ ಹರಾಜಿನಲ್ಲಿ ಚೇತನ್ ಅವರನ್ನು ಖರೀದಿಸಲು ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ರಾಜಸ್ತಾನ ಅವರನ್ನು ರೂ. 1.2 ಕೋಟಿಗಳಿಗೆ ಖರೀದಿಸಿತು. ಇದುವರೆಗೆ ಕೇವಲ ತನ್ನ ರಾಜ್ಯವನ್ನು ಪ್ರತಿನಿಧಿಸಿರುವ ಚೇತನ್ಗೆ ಇದು ಭಾರಿ ದೊಡ್ಡ ಮೊತ್ತ.
ಎಡಗೈ ವೇಗದ ಬೌಲರ್ ಆಗಿರುವ ಚೇತನ್ ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ನ ಅಪಾಯಕಾರಿ ಆರಂಭ ಆಟಗಾರ ಮಾಯಾಂಕ್ ಅಗರ್ವಾಲ್ ಅವರನ್ನು ತಮ್ಮ ಮೊದಲ ಸ್ಪೆಲ್ನಲ್ಲಿ ಔಟ್ ಮಾಡಿದರು. ಟೀಮಿನ ನಾಯಕ ಸಂಜು ಸ್ಯಾಮ್ಸನ್ಗೆ ಚೇತನ್ ಮೇಲೆ ಅದೆಷ್ಟು ಭರವಸೆ ಹುಟ್ಟಿಬಿಟ್ಟಿದೆ ಎಂದರೆ ಅವರು ಮೊದಲ ಪಂದ್ಯ ಆಡುತ್ತಿದ್ದರೂ ಕೊನೆಯ ಅಂದರೆ 20 ನೇ ಓವರನ್ನು ಬೌಲ್ ಮಾಡುವ ಜವಾಬ್ದಾರಿ ವಹಿಸಿದರು.
ಸ್ಯಾಮ್ಸನ್ ಅವರ ನಂಬಿಕೆಯನ್ನೂ ಉಳಿಸಿಕೊಂಡ ಚೇತನ್ ಆ ಓವರ್ನಲ್ಲಿ 91 ರನ್ ಗಳಿಸಿ ಆಡುತ್ತಿದ್ದ ಕೆ ಎಲ್ ರಾಹಲ್ ಅವರನ್ನು ಔಟ್ ಮಾಡಿದ್ದೂ ಅಲ್ಲದೆ ಜೈ ರಿಚರ್ಡ್ಸನ್ ಅವರ ವಿಕೆಟ್ ಸಹ ಕಬಳಿಸಿದರು. ಈ ಪಂದ್ಯವನ್ನು ರಾಜಸ್ತಾನ ತಂಡ ಸೋತಿತಾದರೂ ಚೇತನ್ ತಮ್ಮ ಅಮೋಘ ಬೌಲಿನ್ ಪ್ರದರ್ಶನದ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು.
ಇದನ್ನೂ ಓದಿ: IPL 2021: ಪಾಂಡೆ ಬೌಂಡರಿ ಮತ್ತು ಸಿಕ್ಸ್ರಗಳನ್ನು ಬಾರಿಸಲು ಅಸಫಲರಾಗಿದ್ದೇ ಹೈದರಾಬಾದ್ ಸೋಲಿಗೆ ಕಾರಣಯಿತು: ಸೆಹ್ವಾಗ್
Published On - 9:16 pm, Tue, 13 April 21