Chess World Cup 2023 Final: ಈ ಪಂದ್ಯ ರೋಚಕ ಹೋರಾಟವಾಗಿರಲಿದೆ: ಪ್ರಜ್ಞಾನಂದ

Chess World Cup 2023 Final: ಸೋಮವಾರ ಪ್ರಜ್ಞಾನಂದ ಟೈಬ್ರೇಕ್​ ಆಡುತ್ತಿದ್ದಾಗ ನಾನು ವಿಶ್ರಾಂತಿಯಲ್ಲಿದ್ದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ಎಲ್ಲವೂ ಸರಿಯಿಲ್ಲ. ಅಬಾಸೊವ್ ವಿರುದ್ಧದ ಪಂದ್ಯದ ಬಳಿಕ ನೀಡಲಾದ ಆಹಾರದಿಂದ ಫುಡ್​ ಪಾಯಿಸನ್ ಆಗಿದೆ.

Chess World Cup 2023 Final: ಈ ಪಂದ್ಯ ರೋಚಕ ಹೋರಾಟವಾಗಿರಲಿದೆ: ಪ್ರಜ್ಞಾನಂದ
R Praggnanandhaa
Updated By: ಝಾಹಿರ್ ಯೂಸುಫ್

Updated on: Aug 22, 2023 | 11:01 PM

ಅಝರ್​ಬೈಜಾನ್‌ನಲ್ಲಿ ನಡೆದ ಚೆಸ್ ವಿಶ್ವಕಪ್ ಫೈನಲ್‌ನ ಮೊದಲ ಗೇಮ್​ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಮತ್ತು ಆರ್. ಪ್ರಜ್ಞಾನಂದ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದ ಮೊದಲ ಗೇಮ್​ನಲ್ಲಿ ಇಬ್ಬರು ಆಟಗಾರರು ಸಮಬಲದ ಪ್ರದರ್ಶನ ನೀಡಿದ್ದು, ಪರಿಣಾಮ 35 ನಡೆಗಳ ಬಳಿಕ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಹಾಗೆಯೇ ಬುಧವಾರ ನಡೆಯಲಿರುವ 2ನೇ ಗೇಮ್​​ನಲ್ಲಿ ಫಲಿತಾಂಶ ನಿರ್ಧಾರವಾಗುವ ನಿರೀಕ್ಷೆಯಿದೆ.

ಮೊದಲ ಗೇಮ್​ ಮುಕ್ತಾಯದ ಬಳಿಕ ಮಾತನಾಡಿದ ಪ್ರಜ್ಞಾನಂದ, ಈ ಪಂದ್ಯವು ಹೋರಾಟವಾಗಿರಲಿದೆ. ಏಕೆಂದರೆ ಕಾರ್ಲ್​ಸೆನ್ ಅವರು ಕಠಿಣ ಸ್ಪರ್ಧೆಯೊಡ್ಡಲಿದ್ದಾರೆ. ಸದ್ಯ ನಾನು ವಿಶ್ರಾಂತಿ ಪಡೆದು, ನಾಳೆ ಮತ್ತಷ್ಟು ಫ್ರೆಶ್ ಆಗಿ ಬರಲು ಪ್ರಯತ್ನಿಸುತ್ತೇನೆ. ಸದ್ಯ ಉತ್ತಮ ವಿಶ್ರಾಂತಿ ಪಡೆಯುವುದೇ ನಾನು ಮಾಡಬೇಕಾದ ಮುಖ್ಯ ವಿಷಯ ಎಂದು ಭಾವಿಸುತ್ತೇನೆ ಎಂದು ಪ್ರಜ್ಞಾನಂದ ತಿಳಿಸಿದ್ದಾರೆ.

13… Rb8, ನಾನು ಅಲ್ಲಿ ಏನನ್ನಾದರೂ ಹೊಂದಿರಬೇಕು ಎಂದು ನಾನು ಭಾವಿಸಿದೆ. ಆದರೆ ಬಹುಶಃ ಈ ಸ್ಥಾನವು ಗಟ್ಟಿಯಾಗಿದೆ. ನನ್ನ ಬಳಿ ಏನೂ ಇಲ್ಲ. ನಾನು ಅಲ್ಲಿ ಆಡಿದ್ದು ಅತ್ಯುತ್ತಮ ಪ್ರಯತ್ನವಲ್ಲ. ಆದರೆ ಆ ಹಂತದಲ್ಲಿ ನನಗೆ ಬೇರೇನು ದಾರಿಯಿರಲಿಲ್ಲ. ಬುಧವಾರದ ಪಂದ್ಯದಲ್ಲಿ ಹೊಸ ಉತ್ಸುಕತೆಯಿಂದ ಆಡುವ ನಿರೀಕ್ಷೆಯಿದೆ ಎಂದು ಪ್ರಜ್ಞಾನಂದ ತಿಳಿಸಿದ್ದಾರೆ.

ನನಗೆ ಎನರ್ಜಿಯೇ ಇರಲಿಲ್ಲ-ಕಾರ್ಲ್​ಸೆನ್

ಈ ಪಂದ್ಯದ ಬಳಿಕ ಮಾತನಾಡಿದ ಮ್ಯಾಗ್ನಸ್ ಕಾರ್ಲ್‌ಸೆನ್, ಸೋಮವಾರ ಪ್ರಜ್ಞಾನಂದ ಟೈಬ್ರೇಕ್​ ಆಡುತ್ತಿದ್ದಾಗ ನಾನು ವಿಶ್ರಾಂತಿಯಲ್ಲಿದ್ದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ಎಲ್ಲವೂ ಸರಿಯಿಲ್ಲ. ಅಬಾಸೊವ್ ವಿರುದ್ಧದ ಪಂದ್ಯದ ಬಳಿಕ ನೀಡಲಾದ ಆಹಾರದಿಂದ ಫುಡ್​ ಪಾಯಿಸನ್ ಆಗಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಏನನ್ನು ತಿನ್ನಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ ನಾನು ಅಚಲತೆಯಲ್ಲಿದ್ದೇನೆ. ಏಕೆಂದರೆ ನನಲ್ಲಿ ನಿಜವಾಗಿಯೂ ಯಾವುದೇ ಎನರ್ಜಿ ಇರಲಿಲ್ಲ ಎಂದು ಕಾರ್ಲ್​ಸೆನ್ ತಿಳಿಸಿದ್ದಾರೆ.

ಇದನ್ನೂ ಓದಿ: ಚೆಸ್ ವಿಶ್ವಕಪ್​ ಫೈನಲ್​ ಪ್ರವೇಶಿಸಿದ 2ನೇ ಭಾರತೀಯ ಪ್ರಜ್ಞಾನಂದ

ಇದೇ ವೇಳೆ ಪ್ರಜ್ಞಾನಂದರ ಅವರ ಪ್ರದರ್ಶನವನ್ನು ನಾನು ಕಡೆಗಣಿಸುವುದಿಲ್ಲ ಎಂದಿರುವ ಕಾರ್ಲ್​ಸೆನ್, 18 ವರ್ಷದ ಯುವ ಚೆಸ್ ಚತುರ ಯುಎಸ್ ಗ್ರ್ಯಾಂಡ್ ಮಾಸ್ಟರ್ ಹಿಕರು ನಕಮುರಾ ಅವರನ್ನು ಸೋಲಿಸಿದ್ದಾರೆ. ಹಾಗೆಯೇ ವಿಶ್ವದ 3ನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು ಸಹ ಮಣಿಸಿದ್ದಾರೆ. ಹೀಗಾಗಿ ಎದುರಾಳಿಯನ್ನು ನಾನು ಗಂಭೀರವಾಗಿಯೇ ಪರಿಗಣಿಸಿದ್ದೇನೆ. ಇದಾಗ್ಯೂ ಮೊದಲ ಗೇಮ್​ನಲ್ಲಿ ಗೆಲ್ಲದಿರುವುದು ತುಸು ನಿರಾಶದಾಯಕ. ಇನ್ನೂ ಉತ್ತಮವಾಗಿ ಆಡಬೇಕಿತ್ತು ಎಂದೆನಿಸುತ್ತಿದೆ ಎಂದು ಕಾರ್ಲ್​ಸೆನ್ ತಿಳಿಸಿದ್ದಾರೆ.

 

 

Published On - 11:00 pm, Tue, 22 August 23