AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಅಕ್ಷರ್ ಪಟೇಲ್ ಸ್ಥಾನ ಶುಭ್​ಮನ್ ಗಿಲ್ ಪಾಲು

Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್​ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್​ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

Asia Cup 2025: ಅಕ್ಷರ್ ಪಟೇಲ್ ಸ್ಥಾನ ಶುಭ್​ಮನ್ ಗಿಲ್ ಪಾಲು
Axar Patel - Shubman Gill
ಝಾಹಿರ್ ಯೂಸುಫ್
|

Updated on: Aug 11, 2025 | 1:10 PM

Share

ಏಷ್ಯಾಕಪ್ 2025ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯನ್ ಕ್ರಿಕೆಟ್ ಕದನದಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಸೂರ್ಯಕುಮಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಹೀಗಾಗಿ ಮುಂಬರುವ ಟೂರ್ನಿಗೆ ಲಭ್ಯರಿರಲಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ನಾಯಕನಾಗಿ ಕಾಣಿಸಿಕೊಂಡರೂ, ಅತ್ತ ಉಪನಾಯಕ ಬದಲಾಗುವ ಸಾಧ್ಯತೆ ಹೆಚ್ಚಿದೆ.

ಪ್ರಸ್ತುತ ಮಾಹಿತಿ ಪ್ರಕಾರ ಏಷ್ಯಾಕಪ್​ನಲ್ಲಿ ಭಾರತ ಟಿ20 ತಂಡದ ಉಪನಾಯಕನಾಗಿ ಶುಭ್​ಮನ್ ಗಿಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇದಕ್ಕೂ ಮುನ್ನ ಅಕ್ಷರ್ ಪಟೇಕ್ ಟೀಮ್ ಇಂಡಿಯಾದ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೀಗ ಗಿಲ್ ಅವರನ್ನು ಟಿ20 ತಂಡದ ವೈಸ್ ಕ್ಯಾಪ್ಟನ್ ಆಗಿ ನೇಮಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ಶುಭ್​ಮನ್ ಗಿಲ್ ಈಗಾಗಲೇ ಟೆಸ್ಟ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಇನ್ನು ರೋಹಿತ್ ಶರ್ಮಾ ಅವರ ನಿವೃತ್ತಿ ಬಳಿಕ ಏಕದಿನ ತಂಡದ ನಾಯಕತ್ವ ಕೂಡ ಅವರಿಗೆ ಒಲಿಯುವ ಸಾಧ್ಯತೆಯಿದೆ. ಇತ್ತ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬರುವ ಟಿ20 ವಿಶ್ವಕಪ್​ವರೆಗೆ ನಾಯಕರನ್ನಾಗಿ ಮುಂದುವರೆಸಲು ನಿರ್ಧರಿಸಲಾಗಿದೆ.

ಇದಾದ ಬಳಿಕ ಭಾರತ ಟಿ20 ತಂಡದ ನಾಯಕ ಕೂಡ ಬದಲಾಗಲಿದ್ದಾರೆ. ಏಕೆಂದರೆ ಮುಂದಿನ ವರ್ಷಕ್ಕೆ ಸೂರ್ಯಕುಮಾರ್ ಯಾದವ್​ಗೆ 35 ವರ್ಷ ತುಂಬಲಿದೆ. ಹೀಗಾಗಿ ಟಿ20 ವಿಶ್ವಕಪ್ ಬಳಿಕ ಯುವ ಆಟಗಾರನಿಗೆ ಕ್ಯಾಪ್ಟನ್ ಪಟ್ಟ ನೀಡಲು ಬಿಸಿಸಿಐ ಚಿಂತಿಸಿದೆ. ಇದಕ್ಕಾಗಿ ಈಗಲೇ ಶುಭ್​ಮನ್ ಗಿಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಿಕೊಳ್ಳಲು ಆಯ್ಕೆ ಸಮಿತಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ಅದರಂತೆ ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯಾಕಪ್​ನಲ್ಲಿ ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೆ, ಉಪನಾಯಕನಾಗಿ ಶುಭ್​​ಮನ್ ಗಿಲ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಬಹುದು.

ಇನ್ನು ಮುಂಬರುವ ಏಷ್ಯಾಕಪ್​ ಟೂರ್ನಿಗಾಗಿ ಯುವ ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಕಟ್ಟಲು ಪ್ಲ್ಯಾನ್ ರೂಪಿಸಲಾಗಿದೆ. ಏಕೆಂದರೆ ಈ ಏಷ್ಯಾಕಪ್ ಬಳಿಕ ಭಾರತ ತಂಡವು 2026ರ ಫೆಬ್ರವರಿ-ಮಾರ್ಚ್​​ನಲ್ಲಿ ಟಿ20 ವಿಶ್ವಕಪ್​ ಆಡಬೇಕಿದೆ. ಇದಕ್ಕಾಗಿ ಈಗಲೇ ಸಮತೋಲಿತ ತಂಡವನ್ನು ರೂಪಿಸಲು ನಿರ್ಧರಿಸಲಾಗಿದ್ದು, ಅದರಂತೆ ಈ ಬಾರಿ ಏಷ್ಯಾಕಪ್​ನಲ್ಲಿ ಯುವ ಪಡೆ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:

  • ಭಾರತ vs ಯುಎಇ – ಸೆಪ್ಟೆಂಬರ್ 10 (ದುಬೈ)
  • ಭಾರತ vs ಪಾಕಿಸ್ತಾನ್ – ಸೆಪ್ಟೆಂಬರ್ 14 (ದುಬೈ)
  • ಭಾರತ vs ಒಮಾನ್ – ಸೆಪ್ಟೆಂಬರ್ 19  (ಅಬುಧಾಬಿ)

ಇದನ್ನೂ ಓದಿ: ಮೊಹಮ್ಮದ್ ಸಿರಾಜ್​ಗೆ ಬರೋಬ್ಬರಿ 80 ಲಕ್ಷ ರೂ..!

ಈ ಮೂರು ಪಂದ್ಯಗಳ ಬಳಿಕ ಸೂಪರ್-4 ಹಂತದ ಪಂದ್ಯಗಳು ನಡೆಯಲಿದೆ. ಅಂದರೆ ಮೊದಲ ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ ತಂಡಗಳು ಸೂಪರ್-4 ಹಂತಕ್ಕೇರಲಿದೆ. ಇನ್ನು ಸೂಪರ್ ಫೋರ್ ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.