ಮ್ಯಾಕ್ಸ್​ವೆಲ್ ಒಬ್ಬ ಶ್ರೇಷ್ಠ ಟೀಮ್ ಪ್ಲೇಯರ್: ರಾಹುಲ್

ಸತತ ವೈಫಲ್ಯಗಳ ಹೊರತಾಗಿಯೂ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಆಡುವ ಇಲೆವೆನ್​ನಲ್ಲಿ ಮುಂದುವರಿಸಿ ಕಾಮೆಂಟೇಟರ್ ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್, ಆಸ್ಸೀಯನ್ನು ಯಾಕೆ ಮುಂದುವರಿಸಲಾಯಿತೆಂದು ಕೊನೆಗೂ ಬಹಿರಂಗಪಡಿಸಿದ್ದಾರೆ. 13ನೇ ಅವೃತಿಯ ಐಪಿಎಲ್​ನಲ್ಲಿ ಅತ್ಯಂತ ಬಲಿಷ್ಠ ಮತ್ತು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಟೀಮನ್ನು ಮಂಗಳವಾರದಂದು ಪಂಜಾಬ್ 5 ವಿಕೆಟ್​ಗಳಿಂದ ಸೋಲಿಸುವಲ್ಲಿ 32 ರನ್​ಗಳ ಉಪಯುಕ್ತ ಕಾಣಿಕೆಯೊಂದಿಗೆ ನಿಕೊಲಾಸ್ ಪೂರನ್​ರೊಂದಿಗೆ ಮ್ಯಾಚ್ ವಿನ್ನಿಂಗ್ ಜೊತೆಗಾರಿಕೆಯ […]

ಮ್ಯಾಕ್ಸ್​ವೆಲ್ ಒಬ್ಬ ಶ್ರೇಷ್ಠ ಟೀಮ್ ಪ್ಲೇಯರ್: ರಾಹುಲ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 21, 2020 | 6:03 PM

ಸತತ ವೈಫಲ್ಯಗಳ ಹೊರತಾಗಿಯೂ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಆಡುವ ಇಲೆವೆನ್​ನಲ್ಲಿ ಮುಂದುವರಿಸಿ ಕಾಮೆಂಟೇಟರ್ ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್, ಆಸ್ಸೀಯನ್ನು ಯಾಕೆ ಮುಂದುವರಿಸಲಾಯಿತೆಂದು ಕೊನೆಗೂ ಬಹಿರಂಗಪಡಿಸಿದ್ದಾರೆ.

13ನೇ ಅವೃತಿಯ ಐಪಿಎಲ್​ನಲ್ಲಿ ಅತ್ಯಂತ ಬಲಿಷ್ಠ ಮತ್ತು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಟೀಮನ್ನು ಮಂಗಳವಾರದಂದು ಪಂಜಾಬ್ 5 ವಿಕೆಟ್​ಗಳಿಂದ ಸೋಲಿಸುವಲ್ಲಿ 32 ರನ್​ಗಳ ಉಪಯುಕ್ತ ಕಾಣಿಕೆಯೊಂದಿಗೆ ನಿಕೊಲಾಸ್ ಪೂರನ್​ರೊಂದಿಗೆ ಮ್ಯಾಚ್ ವಿನ್ನಿಂಗ್ ಜೊತೆಗಾರಿಕೆಯ ಭಾಗವಾಗಿದ್ದ ಮ್ಯಾಕ್ಸ್​ವೆಲ್ ಸತತ 9 ವೈಫಲ್ಯಗಳ ನಂತರ ಉತ್ತಮ ಪ್ರದರ್ಶನ ನೀಡಿದರು.

ಸತತವಾಗಿ ಮೂರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆಯನ್ನು ಜಿವಂವಾಗಿರಿಸಿಕೊಂಡಿರುವ ರಾಹುಲ್, ಮಂಗಳವಾರದ ಪಂದ್ಯದ ನಂತರ ಮ್ಯಾಕ್ಸ್​ವೆಲ್ ಅವರ ಉಪಯುಕ್ತತೆಯನ್ನು ಮುಕ್ತವಾಗಿ ಹೊಗಳಿದರು.

‘‘ಮ್ಯಾಕ್ಸಿ ಒಬ್ಬ ಅತ್ಯುತ್ತಮ ಟೀಮ್ ಪ್ಲೇಯರ್. ಅವರು ಟೀಮಿಗೆ ಒದಗಿಸುವ ಬ್ಯಾಲೆನ್ಸ್ ಮತ್ತು ಭದ್ರತೆ ಅಸಾಮಾನ್ಯವಾದದ್ದು. ತಂಡದ ಎಲ್ಲ 11 ಆಟಗಾರರು ಕಾಂಟ್ರಿಬ್ಯೂಟ್ ಮಾಡುವುದು ಸಾಧ್ಯವಾಗುವುದಿಲ್ಲ. ಕೆಲವರು ವಿಫಲರಾಗುವುದು ಆಟದ ಅವಿಭಾಜ್ಯ ಅಂಗ. ಮ್ಯಾಕ್ಸಿ, ನೆಟ್ಸ್​ನಲ್ಲಿ ಚೆಂಡನ್ನು ಚೆನ್ನಾಗಿ ಬಾರಿಸುತ್ತಿದ್ದರು, ಹಾಗಾಗಿ ಅವರ ಫಾರ್ಮ್ ಬಗ್ಗೆ ನಮಗೇನೂ ಅನುಮಾನವಿರಲಿಲ್ಲ. ಅವರು ಭಿನ್ನ ಬಗೆಯ ಆಟಗಾರ, ಒಮ್ಮೆ ಆಟಕ್ಕೆ ಕುದರಿಕೊಂಡರೆ ಎದುರಾಳಿಗಳಿಗೆ ಅವರನ್ನು ತಡೆಯುವುದು ಕಷ್ಟವಾಗಿಬಿಡುತ್ತದೆ,’’ ಎಂದು ರಾಹುಲ್ ಹೇಳಿದರು.

ಗಮನಿಸಬೇಕಾದ ಸಂಗತಿಯೇನೆಂದರೆ, ಪರಿಣಿತರ ಪ್ಯಾನೆಲ್​ನಲ್ಲಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕಥೆ ಬ್ರಿಯಾನ್ ಲಾರಾ, ತಮ್ಮೊಂದಿಗಿರುವ ಇತರ ಪರಿಣಿತರು, ಮ್ಯಾಕ್ಸ್​ವೆಲ್ ಅವರನ್ನು ಆಡಿಸುತ್ತಿರುವ ಕುರಿತು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರೂ ತಾವು ಮಾತ್ರ ಆಸ್ಸೀಗೆ ಬೆಂಬಲ ಸೂಚಿಸಿದ್ದರು. ಮ್ಯಾಕ್ಸ್​ವೆಲ್ ಅವರ ಆಫ್ ಸ್ಪಿನ್ ಬೌಲಿಂಗ್ ಟೀಮಿಗೆ ನೆರವಾಗುತ್ತದೆ ಎಂದು ಲಾರಾ ಹೇಳಿದ್ದರು.

ಮಂಗಳವಾರದ ಪಂದ್ಯದಲ್ಲಿ ರಾಹುಲ್, ಮ್ಯಾಕ್ಸ್​ವೆಲ್ ಅವರಿಂದಲೇ ಬೌಲಿಂಗ್ ದಾಳಿ ಆರಂಭಿಸಿದರು. ನಾಯಕನ ವಿಶ್ವಾಸವನ್ನು ಉಳಿಸಿಕೊಂಡ ಮ್ಯಾಕ್ಸ್​ವೆಲ್ 4 ಓವರ್​ಗಳಲ್ಲಿ ಕೇವಲ 31 ರನ್ ನೀಡಿ ರಿಷಬ್ ಪಂತ್ ಅವರ ಅಮೂಲ್ಯ ವಿಕೆಟ್ ಪಡೆದರು.

‘‘ಸಂತೋಷದ ವಿಷಯವೆಂದರೆ, ಇದುವರೆಗೆ ಫಾರ್ಮ್​ನಲ್ಲಿರದ ಆಟಗಾರರು ಸರಿಯಾದ ಸಮಯದಲ್ಲಿ ಅದನ್ನು ಕಂಡುಕೊಳ್ಳುತ್ತಿದ್ದಾರೆ. ನೆಟ್ಸ್​ನಲ್ಲಿ ಕೋಚ್​ಗಳು ಸುರಿಸುವ ಬೆವರು ಫಲ ನೀಡಿ ಈಗ ಎಲ್ಲವೂ ಸರಿಯಾಗುತ್ತಿದೆ, ನಮ್ಮ ಹುಡುಗರು ಮುಂದಿನ ಹಣಾಹಣಿಗಳಿಗೆ ಅದ್ಭುತವಾಗಿ ಅಣಿಯಾಗುತ್ತಿದ್ದಾರೆ,’’ ಎಂದು ರಾಹುಲ್ ಹೇಳಿದರು.