ಭಾರತದ ವಿರುದ್ಧ ಕೊನೆಯ 2 ಟೆಸ್ಟ್​ ಆಡಲು ನಿರ್ಧರಿಸಿದ್ದು ಪ್ರಮಾದ: ಡೇವಿಡ್ ವಾರ್ನರ್

ಟೆಸ್ಟ್​ ಕ್ರಿಕೆಟ್​ಗೆ ಅವಸರದಲ್ಲಿ ವಾಪಸ್ಸಾಗಿದ್ದು ವೈಯಕ್ತಿಕವಾಗಿ ವಾರ್ನರ್​ಗೂ ಒಳ್ಳೆಯದಾಗಲಿಲ್ಲ. ಗಾಯದ ಸಮಸ್ಯೆ ಉಲ್ಬಣಗೊಂಡಿತೆಂದು ಖುದ್ದು ಅವರೇ ಹೇಳಿದ್ದಾರೆ. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದು ಮಾಡಿದ್ದು ಅವರಿಗೆ ಗಾಯದಿಂದ ಚೇತರಿಸಿಕೊಳ್ಳಲು ನೆರವಾಯಿತು.

ಭಾರತದ ವಿರುದ್ಧ ಕೊನೆಯ 2 ಟೆಸ್ಟ್​ ಆಡಲು ನಿರ್ಧರಿಸಿದ್ದು ಪ್ರಮಾದ: ಡೇವಿಡ್ ವಾರ್ನರ್
ಡೇವಿಡ್ ವಾರ್ನರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 03, 2021 | 11:05 PM

ಅಡಿಲೇಡ್: ಭಾರತ ಮತ್ತು ಅಸ್ಟ್ರೇಲಿಯಾ ಮಧ್ಯೆ ಇತ್ತೀಚೆಗೆ ಕೊನೆಗೊಂಡ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಆಡಲು ತಾನು ಅವಸರಪಟ್ಟಿದ್ದು ಪ್ರಮಾದವೆಂದು ಕಾಂಗರೂಗಳ ಆರಂಭ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ. ತೊಂದರೆಯಲ್ಲಿದ್ದ ಜೊತೆ ಆಟಗಾರರಿಗೆ ನೆರವಾಗಲು ತಾನು ಹಾಗೆ ಮಾಡಬೇಕಾಯಿತು. ಹಾಗೆ ನೋಡಿದರೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ತಂಡಕ್ಕೆ ವಾಪಸ್ಸಾಗಲು ತಮ್ಮ ಮೇಲೆ ಒತ್ತಡವಿರಲಿಲ್ಲ ಎಂದು ಅವರು ಹೇಳಿದ್ದಾರೆ. ವಿಶ್ವದ ಶ್ರೇಷ್ಠ ಆರಂಭ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ವಾರ್ನರ್ ಭಾರತದ ವಿರುದ್ಧ ನಡೆಯುತ್ತಿದ್ದ ಒಂದು ದಿನದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ತೊಡೆಸಂದಿನ ಸಮಸ್ಯೆಗೀಡಾಗಿ ನಂತರ ನಡೆದ ಟಿ20 ಸರಣಿ ಮತ್ತು 4-ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೊದಲಿನವೆರಡನ್ನು ತಪ್ಪಿಸಿಕೊಂಡರು. ಆ ಎರಡು ಟೆಸ್ಟ್​ಗಳಲ್ಲಿ ತಲಾ ಒಂದನ್ನು ಭಾರತ ಮತ್ತು ಆಸ್ಟ್ರೇಲಿಯಾ ಗೆದ್ದಿದ್ದವು.

ಮೂರನೇ ಮತ್ತು ನಾಲ್ಕನೇ ಟೆಸ್ಟ್​ಗಳಿಗೆ ವಾಪಸ್ಸಾದ ವಾರ್ನರ್ 5, 13, 1 ಮತ್ತು 48 ರನ್​ ಗಳಿಸಿದರು. ಅದರರ್ಥ ಅವರು ಟೀಮಿಗೆ ವಾಪಸ್ಸಾಗಿದ್ದು ತಂಡಕ್ಕೆ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ. ಬ್ರಿಸ್ಬೇನ್​ನಲ್ಲಿ ನಡೆದ ಕೊನೆಯ ಟೆಸ್ಟ್​ ಪಂದ್ಯವನ್ನು ನಾಟಕೀಯ ಸನ್ನಿವೇಶದಲ್ಲಿ ಗೆದ್ದ ಭಾರತ ಸತತವಾಗಿ ಎರಡನೇ ಬಾರಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿಯ ಮೇಲೆ ಒಡೆತನ ಸ್ಥಾಪಿಸಿತು. ಟೆಸ್ಟ್​ ಕ್ರಿಕೆಟ್​ಗೆ ಅವಸರದಲ್ಲಿ ವಾಪಸ್ಸಾಗಿದ್ದು ವೈಯಕ್ತಿಕವಾಗಿ ವಾರ್ನರ್​ಗೂ ಒಳ್ಳೆಯದಾಗಲಿಲ್ಲ. ಗಾಯದ ಸಮಸ್ಯೆ ಉಲ್ಬಣಗೊಂಡಿತೆಂದು ಖುದ್ದು ಅವರೇ ಹೇಳಿದ್ದಾರೆ. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ರದ್ದು ಮಾಡಿದ್ದು ಅವರಿಗೆ ಗಾಯದಿಂದ ಚೇತರಿಸಿಕೊಳ್ಳಲು ನೆರವಾಯಿತು.

‘ದಕ್ಷಿಣ ಅಫ್ರಿಕಾ ಪ್ರವಾಸ ರದ್ದಾಗಿತ್ತು ನಿಜಕ್ಕೂ ನೆರವಾಯಿತು. ಆದರೆ, ನಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಯೋಚಿಸಿದಾಗ ಅವಸರ ಮಾಡಿದ್ದು ತಪ್ಪು ಅಂತ ಭಾಸವಾಗುತ್ತಿದೆ. ಟೀಮು ತೊಂದರೆಯಲ್ಲಿರುವುದರಿಂದ ನಾನು ವಾಪಸ್ಸಾಗುವುದು ತಂಡದ ಹಿತದೃಷ್ಟಿಯಿಂದ ಸೂಕ್ತವೆಂದು ಭಾವಿಸಿ ಆ ನಿರ್ಧಾರ ತೆಗೆದುಕೊಂಡೆ’ ಎಂದು ಮಾರ್ಷ್​ ಕಪ್​ಗೋಸ್ಕರ ಅವರು ಪ್ರತಿನಿಧಿಸುವ ನ್ಯೂ ಸೌತ್ ವೇಲ್ಸ್ ಮತ್ತು ಸೌತ್ ಆಸ್ಟ್ರೇಲಿಯಾ ಅಡಿಲೇಡ್​ ಓವಲ್​ನಲ್ಲಿ ನಡೆಯುವ ಪಂದ್ಯದ ಮುನ್ನಾ ದಿನವಾಗಿದ್ದ ಇಂದು ಅವರು ಸುದ್ದಿಗಾರರೊಂದಿಗೆ ಮಾತಾಡುತ್ತಾ ಹೇಳಿದರು.

Victorious Team India in Australia

ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದ ಟೀಮ್ ಇಂಡಿಯಾ

‘ಕೇವಲ ನನಗಾದ ಗಾಯ ಮತ್ತು ನನ್ನ ಬಗ್ಗೆ ನಾನು ಯೋಚಿಸಿದ್ದರೆ ಪ್ರಾಯಶಃ ನಾನು ಅಡುವ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಅದರೆ ಟೀಮಿಗೆ ನಾನು ಇನ್ನಿಂಗ್ಸ್ ಆರಂಭಿಸುವ ಅವಶ್ಯಕತೆಯಿದೆ ಎಂದು ಭಾವಿಸಿ ಆಡುವ ನಿರ್ಧಾರ ತೆಗೆದುಕೊಂಡೆ. ದಕ್ಷಿಣ ಅಫ್ರಿಕಾ ಪ್ರವಾಸ ರದ್ದಾಗಿದ್ದು ನಾನು ಗಾಯದಿಂದ ಚೇತರಿಸಿಕೊಳ್ಳಲು ಸಹಕಾರಿಯಾಯಿತು’ ಎಂದು ವಾರ್ನರ್ ಹೇಳಿದ್ದಾರೆ.

ಸ್ವದೇಶದ ಟೂರ್ನಿಗಳಲ್ಲಿ ಆಡಿದ ನಂತರ ವಾರ್ನರ್ ಭಾರತಕ್ಕೆ ಬಂದು ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಸಾರಥ್ಯವಹಿಸಲಿದ್ದಾರೆ. ಒಂದು ಪಕ್ಷ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್​ ಅತಿಥೇಯರನ್ನು ಕೊನೆ ಟೆಸ್ಟ್​ ಪಂದ್ಯದಲ್ಲಿ ಸೋಲಿಸಿದರೆ ಮಾತ್ರ ಈ ವರ್ಷಾಂತ್ಯಕ್ಕೆ ಮೊದಲು ವಾರ್ನರ್ ಟೆಸ್ಟ್​ ಪಂದ್ಯ ವೊಂದನ್ನು (ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​) ಆಡಲಿದ್ದಾರೆ. ಇಲ್ಲದಿದ್ದರೆ 34-ವರ್ಷದ ವಾರ್ನರ್ ಌಶಸ್ ಸರಣಿಯವರೆಗೆ ಕಾಯಬೇಕು. ತಾವು 2023ರ ವಿಶ್ವಕಪ್​ ಮೇಲೆ ಕಣ್ಣಿಟ್ಟರುವುದಾಗಿ ವಾರ್ನರ್ ಹೇಳಿರುವರಾದರೂ, ಇದೇ ವರ್ಷದ ಕೊನೆಭಾಗದಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ.

‘ನಿವೃತ್ತಿ ಘೋಷಿಸುವ ಬಗ್ಗೆ ನಾನು ಖಂಡಿತವಾಗಿಯೂ ಯೋಚಿಸುತ್ತಿಲ್ಲ. 2023 ರ ವಿಶ್ವಕಪ್​ನಲ್ಲಿ ಆಡುವುದು ನನ್ನ ಗುರಿಯಾಗಿದೆ. ಬಿಳಿ ಚೆಂಡಿನೊಂದಿಗೆ ಆಡುವ ಪಂದ್ಯಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ನಮ್ಮ ತಂಡದ ಅಡಿಪಾಯ ಅದ್ಭುತವಾಗಿದೆ. ಭಾರತದಲ್ಲಿ ನಡೆಯಲಿರುವ ಆ ಟೂರ್ನಮೆಂಟ್​ ಗೆಲ್ಲುವ ಉತ್ತಮ ಅವಕಾಶ ನಮಗಿದೆ. ನಮ್ಮಲ್ಲಿ ಕೆಲವರಿಗೆ ಇದೇ ಕೊನೆಯ ವಿಶ್ವಕಪ್​ ಅಗಲಿದೆ, ನಾನಂತೂ ಮುಂದಿನ ವಿಶ್ವಕಪ್​ (2027) ಹೊತ್ತಿಗೆ 41ರ ಪ್ರಾಯದವನಾಗಿರುತ್ತೇನೆ. ಹಳಬರು ಹೊಸಬರಿಗೆ ದಾರಿ ಬಿಡುವುದು ಸೂಕ್ತ’ ಎಂದು ವಾರ್ನರ್ ಹೇಳಿದ್ದಾರೆ.

‘ಟೆಸ್ಟ್ ಕ್ರಿಕೆಟ್​ ಬಗ್ಗೆ ಹೇಳುವುದಾದರೆ ನನಗೆ ಸಾಧ್ಯವಾಗುವಷ್ಟು ದಿನ ಆಡಲಿಚ್ಛಿಸುತ್ತೇನೆ. ಮುಂದಿನ ದಿನಗಳಲ್ಲಿ ನಾವು ಬಹಳಷ್ಟು ಕ್ರಿಕೆಟ್ ಆಡಬೇಕಿರುವುದರಿಂದ ಫಿಟ್ನೆಸ್​ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ ಮತ್ತು ಕುಟುಂಬಕ್ಕೂ ಹೆಚ್ಚಿನ ಸಮಯವನ್ನು ಮೀಸಲಿಡಬೇಕಿದೆ’ ಎಂದು ವಾರ್ನರ್ ಹೇಳಿದರು.

ಇದನ್ನೂ ಓದಿIndia vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!

Published On - 11:03 pm, Wed, 3 March 21