ಬಲಿಷ್ಠ ಅರ್ಜೆಂಟೀನಾಗೆ ಸೋಲುಣಿಸಿದ ಸೌದಿ; ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಿಸಿದ ದೊರೆ..!
FIFA World Cup 2022: ಸೌದಿ ತಂಡದ ಪ್ರದರ್ಶನಕ್ಕೆ ಮನಸೋತಿರುವ ಸೌದಿ ಅರೇಬಿಯಾ ದೇಶದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬುಧವಾರದಂದು ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಣೆ ಮಾಡಿದ್ದಾರೆ.
ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ತಂಡಗಳು ಮುಖಾಮುಖಿಯಾಗಿದ್ದವು. ಮೆಸ್ಸಿ ನಾಯಕತ್ವದ ಅರ್ಜೆಂಟೀನಾ (Argentina) ತಂಡ ಸೌದಿಗಿಂತ ಬಲಿಷ್ಠವಾಗಿದ್ದರಿಂದ ಈ ತಂಡವೇ ಗೆಲ್ಲಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಪಂದ್ಯದ ಫಲಿತಾಂಶ ಎಲ್ಲರನ್ನೂ ಅಚ್ಚರಿಗೊಳಿಸಿತು. ಮೆಸ್ಸಿ ತಂಡಕ್ಕೆ ಸೋಲಿನ ಶಾಕ್ ನೀಡಿದ್ದ ಸೌದಿ ಅರೇಬಿಯಾ (Saudi Arabia) ತಂಡ 2-1 ಗೋಲುಗಳ ಅಂತರದಲ್ಲಿ ಗೆದ್ದುಬೀಗಿತ್ತು. ಈಗ ಸೌದಿ ತಂಡದ ಪ್ರದರ್ಶನಕ್ಕೆ ಮನಸೋತಿರುವ ಸೌದಿ ಅರೇಬಿಯಾ ದೇಶದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬುಧವಾರದಂದು ಇಡೀ ದೇಶಕ್ಕೆ ಒಂದು ದಿನ ರಜೆ ಘೋಷಣೆ ಮಾಡಿದ್ದಾರೆ.
ಅರ್ಜೆಂಟೀನಾ ವಿರುದ್ಧದ ಗೆಲುವಿನ ನಂತರ ಸೌದಿ ಅರೇಬಿಯಾದಲ್ಲಿ ಒಂದು ದಿನ ರಜೆ ಘೋಷಿಸಲಾಗಿದೆ. ಅರ್ಜೆಂಟೀನಾ ವಿರುದ್ಧದ ಗೆಲುವು ಸೌದಿ ಅರೇಬಿಯಾಕ್ಕೆ ದೊಡ್ಡದಾಗಿದ್ದು, ಈ ಗೆಲುವಿನ ಪರಿಣಾಮ ಅಲ್ಲಿನ ಫುಟ್ಬಾಲ್ ಅಭಿಮಾನಿಗಳ ಜೊತೆಗೆ ರಾಜನ ಮೇಲೂ ಗೋಚರವಾಗಿದೆ. ಖುಷಿಯ ಅಲೆಯಲ್ಲಿ ತೇಲುತ್ತಿರು ಸೌದಿ ರಾಜ ಇಡೀ ದೇಶಕ್ಕೆ ರಜೆ ಘೋಷಣೆ ಮಾಡಿದ್ದಾರೆ.
This Saudi Arabia fan got so excited over the win against Argentina that he threw his door ??pic.twitter.com/p1yKqBNGbt
— LADbible (@ladbible) November 22, 2022
ಪಾಕಿಸ್ತಾನ ಪ್ರಧಾನಿಯ ಸಂದೇಶ
ಅರ್ಜೆಂಟೀನಾ ವಿರುದ್ಧ ಗೆದ್ದು ಬೀಗಿದ ಸೌದಿ ಅರೇಬಿಯಾಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್ ಮಾಡುವ ಮೂಲಕ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಅವರಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಈ ವಿಜಯಕ್ಕಾಗಿ ಸೌದಿ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ ಎಂದು ಪಾಕ್ ಪ್ರಧಾನಿ ಟ್ವೀಟ್ನಲ್ಲಿ ಬರೆದಿದ್ದಾರೆ.
ಅದು ಎಂತಹ ಫುಟ್ಬಾಲ್ ಆಟ! ಸೌದಿ ಅರೇಬಿಯಾ ಇಂದು ಅರ್ಜೆಂಟೀನಾ ವಿರುದ್ಧ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. HRH ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಮಹಾನ್ ಗೆಲುವಿನಲ್ಲಿ ನಾವು ನಮ್ಮ ಸೌದಿ ಸಹೋದರರು ಮತ್ತು ಸಹೋದರಿಯರ ಸಂತೋಷವನ್ನು ಹಂಚಿಕೊಳ್ಳುತ್ತೇವೆ ಎಂದು ಪಾಕ್ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
What a game of football it was! Saudi Arabia made history today by staging the biggest upset in FIFA World Cup thriller against Argentina. Heartiest congratulations to HRH Crown Prince Mohammed Bin Salman. We share the happiness of our Saudi brothers & sisters on this great win.
— Shehbaz Sharif (@CMShehbaz) November 22, 2022
ದಾಖಲೆ ಬರೆದ ಸೌದಿ
ಸೌದಿ ಅರೇಬಿಯಾ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಲ್ಯಾಟಿನ್ ಅಮೇರಿಕನ್ ದೇಶವನ್ನು ಸೋಲಿಸಿದ ಎರಡನೇ ಏಷ್ಯಾದ ದೇಶವಾಗಿದೆ. 2018ರಲ್ಲಿ ಜಪಾನ್ ಕೊಲಂಬಿಯಾವನ್ನು ಸೋಲಿಸಿತ್ತು. ಸೌದಿ ಅರೇಬಿಯಾ ಅರ್ಜೆಂಟೀನಾವನ್ನು ಸೋಲಿಸುವ ಮೂಲಕ 36 ಪಂದ್ಯಗಳ ಗೆಲುವಿನ ಸರಣಿಯನ್ನು ಮುರಿದಿದೆ.
ಪಂದ್ಯ ಹೀಗಿತ್ತು
ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿಯೇ ಗೋಲು ಬಾರಿಸುವ ಮೂಲಕ ಮೆಸ್ಸಿ ಅರ್ಜೆಂಟೀನಾ ತಂಡಕ್ಕೆ ಮೊದಲು ಯಶಸ್ಸು ತಂದುಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಸೌದಿ ಅರೇಬಿಯಾ, ಅರ್ಜೆಂಟೀನಾ ತಂಡದ ರಕ್ಷಣಾ ವಿಭಾಗವನ್ನು ಭೇದಿಸುವಲ್ಲಿ ಯಶಸ್ವಿಯಾಗಿ ಎರಡು ಗೋಲು ಗಳಿಸಿ ಅದ್ಭುತ ಗೆಲುವು ದಾಖಲಿಸಿತು. ಈ ಪಂದ್ಯಕ್ಕೆ ಮರಳಿ ಬರಲು ಅರ್ಜೆಂಟೀನಾ ಸಾಕಷ್ಟು ಪ್ರಯತ್ನಪಟ್ಟರೂ ಸಮಬಲದ ಗೋಲು ಗಳಿಸಲು ಸಾಧ್ಯವಾಗದೆ ಸೋಲನುಭವಿಸಿತು. ಇದರೊಂದಿಗೆ ಸೌದಿ ಅರೇಬಿಯಾ ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಸರಣಿಯನ್ನು ಮುರಿದು ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದೆ.
Published On - 11:06 am, Wed, 23 November 22