ನೋ ಬಾಲ್ ಎಸೆದು ಸೆಹ್ವಾಗ್ಗೆ ಶತಕ ವಂಚಿಸಿದ್ದ ಶ್ರೀಲಂಕಾ ಬೌಲರ್ ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್.. ಯಾರವನು?
2010 ರ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಪರ ಆಡಿದ್ದ ರಂದೀವ್, ಗೆಲುವಿನ ಸನಿಹದಲ್ಲಿದ್ದ ಟೀಂ ಇಂಡಿಯಾದ ವಿರುದ್ಧ ಬೌಲಿಂಗ್ ಮಾಡಿದ್ದರು. ಆ ವೇಳೆ 99 ರನ್ಗಳಿಸಿ ಶತಕದ ಅಂಚಿನಲ್ಲಿದ್ದ ಸೆಹ್ವಾಗ್ ಅವರು ಶತಕ ವಂಚಿತರಾಗಲು ರಂದೀವ್ ಕಾರಣಕರ್ತರಾಗಿದ್ದರು.
ಶ್ರೀಲಂಕಾ ಪರ ಕ್ರಿಕೆಟ್ ಆಡಿದ್ದ ಸೂರಜ್ ರಂದೀವ್ ಈಗ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡಿದ್ದಾರೆ. ಕ್ರಿಕೆಟಿಗನಾಗಿದ್ದ ರಂದೀವ್, ಈಗ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕರಾಗಿ ತಮ್ಮ ಹೊಸ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಮೆಲ್ಬೋರ್ನ್ನಲ್ಲಿ ಫ್ರೆಂಚ್ ಮೂಲದ ಟ್ರಾನ್ಸ್‌ದೇವ್ ಎಂಬ ಕಂಪನಿಯಲ್ಲಿ ಬಸ್ ಚಾಲಕನಾಗಿ ರಂದೀವ್ ನೇಮಕಗೊಂಡಿದ್ದಾರೆ. 2019ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ ಶ್ರೀಲಂಕಾದ ಮಾಜಿ ಸ್ಪಿನ್ನರ್ ರಂದೀವ್, ಅಲ್ಲಿ ಕೇವಲ ಬಸ್ ಚಾಲನೆ ಮಾಡುವುದಲ್ಲದೆ, ಅಲ್ಲಿನ ಸ್ಥಳೀಯ ಕ್ಲಬ್ ಪರ ಕ್ರಿಕೆಟ್ ಸಹ ಆಡುತ್ತಾರೆ.
ಸೂರಜ್ ರಂದೀವ್ ಶ್ರೀಲಂಕಾ ಪರ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಕಣಕ್ಕಿಳಿದಿದ್ದಾರೆ. 2011 ರಲ್ಲಿ ಭಾರತದಲ್ಲಿ ಆಡಿದ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅವರು ಶ್ರೀಲಂಕಾ ತಂಡದ ಭಾಗವಾಗಿದ್ದರು. ಶ್ರೀಲಂಕಾ ಪರ 12 ಟೆಸ್ಟ್ ಪಂದ್ಯಗಳಲ್ಲಿ 46 ವಿಕೆಟ್ ಪಡೆದಿರುವ ರಂದೀವ್, 31 ಏಕದಿನ ಪಂದ್ಯಗಳಲ್ಲಿ 36 ವಿಕೆಟ್ ಪಡೆದಿದ್ದಾರೆ. ಜೊತೆಗೆ 7 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಮಿಂಚಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಂದೀವ್ ಅವರ ಅತ್ಯುತ್ತಮ ಸ್ಕೋರ್ 56 ರನ್ ಆಗಿದೆ. ಅವರು ಏಪ್ರಿಲ್ 2019 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ತವರಿನಲ್ಲಿ ಆಡಿದ್ದರು.
ಕೇವಲ ಬಸ್ ಚಾಲಕನ್ನಲ್ಲ, ಸ್ಥಳೀಯ ಕ್ರಿಕೆಟಿಗ ಕೂಡ.. 36 ವರ್ಷದ ಸೂರಜ್ ರಂದೀವ್ ಅವರು ಆಸ್ಟ್ರೇಲಿಯಾದಲ್ಲಿ ಬಸ್ ಚಾಲನೆ ಮಾಡುವುದರ ಜೊತೆಗೆ ಸ್ಥಳೀಯ ಸರ್ಕ್ಯೂಟ್‌ನಲ್ಲಿ ಕ್ರಿಕೆಟ್ ಆಡುತ್ತಾರೆ. ಭಾರತೀಯ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ, ಅವರು ಆಸ್ಟ್ರೇಲಿಯಾ ತಂಡಕ್ಕೆ ಎಂಸಿಜಿಯಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮಾಡಿ ಅಭ್ಯಾಸಕ್ಕೆ ಸಹಕಾರಿಯಾಗಿದ್ದರು.
ಪ್ರಸ್ತುತ, ರಂದೀವ್ ಆಸ್ಟ್ರೇಲಿಯಾದ ದಾಂಡೆನಾಂಗ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾರೆ. ಈ ಕ್ಲಬ್, ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್‌ನೊಂದಿಗೆ ಮಾನ್ಯತೆ ಪಡೆದಿದೆ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ರಾಜ್ಯ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುತ್ತದೆ. ಈ ಕ್ಲಬ್‌ಗೆ ರಂದೀವ್ ಮಾತ್ರವಲ್ಲದೆ, ಜೇಮ್ಸ್ ಪ್ಯಾಟಿನ್ಸನ್, ಪೀಟರ್ ಸಿಡಲ್ ಅವರಂತಹ ಕ್ರಿಕೆಟರ್ ಸಹ ಆಡುತ್ತಾರೆ.
ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಟ.. ಸೂರಜ್ ರಂದೀವ್ ಭಾರತದ ಟಿ20 ಲೀಗ್, ಐಪಿಎಲ್‌ನಲ್ಲಿ ಆಡಿದ್ದಾರೆ. ಈ ಲೀಗ್‌ನಲ್ಲಿ ಅವರು ಧೋನಿ ನೇತೃತ್ವದ ಸಿಎಸ್‌ಕೆ ತಂಡದ ಭಾಗವಾಗಿದ್ದರು. ಅಲ್ಲದೆ 2012 ರಲ್ಲಿ, ಈ ತಂಡ ಚಾಂಪಿಯನ್ ಆಗುವಲ್ಲಿ ಸೂರಜ್ ರಂದೀವ್ ಪಾತ್ರವಿತ್ತು. 2012 ರ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಆಡಿದ್ದ ರಂದೀವ್ 8 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು.
ಸೆಹ್ವಾಗ್ ಅವರ ಶತಕಕ್ಕೆ ವಂಚನೆ.. 2010 ರ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಪರ ಆಡಿದ್ದ ರಂದೀವ್, ಗೆಲುವಿನ ಸನಿಹದಲ್ಲಿದ್ದ ಟೀಂ ಇಂಡಿಯಾದ ವಿರುದ್ಧ ಬೌಲಿಂಗ್ ಮಾಡಿದ್ದರು. ಆ ವೇಳೆ 99 ರನ್ಗಳಿಸಿ ಶತಕದ ಅಂಚಿನಲ್ಲಿದ್ದ ಸೆಹ್ವಾಗ್ ಅವರು ಶತಕ ವಂಚಿತರಾಗಲು ರಂದೀವ್ ಕಾರಣಕರ್ತರಾಗಿದ್ದರು. ಅಸಲಿಗೆ ಅಲ್ಲಿ ಆಗಿದ್ದೇನೆಂದರೆ, ಟೀಂ ಇಂಡಿಯಾ ಆ ಪಂದ್ಯದಲ್ಲಿ ಗೆಲ್ಲಲು 1 ರನ್ ಬೇಕಿತ್ತು. ಹಾಗೆಯೇ ಬ್ಯಾಟಿಂಗ್ನಲ್ಲಿದ್ದ ಸೆಹ್ವಾಗ್ ಅವರ ಶತಕಕ್ಕೂ 1 ರನ್ ಬೇಕಿತ್ತು. ಈ ವೇಳೆ ಅಲ್ಲೆ ಫಿಲ್ಡಿಂಗ್ ಮಾಡುತ್ತಿದ್ದ ಶ್ರೀಲಂಕಾದ ಮತ್ತೊಬ್ಬ ಆಟಗಾರ ತಿಲಕರತ್ನೆ ದಿಲ್ಷನ್(ಈ ಬಾಲನ್ನು ನೀನು ಬೇಕಿದ್ದರೆ ನೋ ಬಾಲ್ ಎಸೆಯಬಹುದು) ಅವರ ಮಾತು ಕೇಳಿದ್ದ ರಂದೀವ್, ಅವರ ಮಾತಿನಂತೆ ನೋ ಬಾಲ್ ಎಸೆದಿದ್ದರು.
ಈ ಬಾಲನ್ನು ಸಿಕ್ಸರ್ ಬಾರಿಸಿದ್ದ ಸೆಹ್ವಾಗ್ ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ ಶತಕವನ್ನು ಸಂಭ್ರಮಿಸಲು ಯತ್ನಿಸಿದರು. ಆದರೆ ಆ ಎಸೆತ ನೋ ಬಾಲ್ ಆಗಿದ್ದರಿಂದ ಸೆಹ್ವಾಗ್ ಅವರ ಸಿಕ್ಸರ್ ಅವರ ವೈಯಕ್ತಿಕ ಖಾತೆಗೆ ಸೇರುವ ಬದಲು ತಂಡದ ಖಾತೆಗೆ (ಎಕ್ಸ್ಟಾ ರನ್) ಸೇರಿಕೊಂಡಿತು. ಹೀಗಾಗಿ ಅಂದು 1 ರನ್ನಿಂದ ಸೆಹ್ವಾಗ್ ಶತಕ ವಂಚಿತರಾಗಿದ್ದರು!
Published On - 3:48 pm, Tue, 2 March 21