ಟೀಮ್ ಇಂಡಿಯಾದಲ್ಲಿ ಸೋಲರಿಯದ ದಿಟ್ಟತನವನ್ನು ಹುಟ್ಟಿಸಿದ್ದು ಸೌರವ್ ಗಂಗೂಲಿ: ಬ್ರಾಡ್ ಹಾಗ್

2007ರಲ್ಲಿ ಬಾತರ ಅಸ್ಟ್ರೇಲಿಯ ಪ್ರವಾಸ ಹೋಗಿದ್ದಾಗ ಟೆಸ್ಟ್ ಸರಣಿಯಲ್ಲಿ ಗಂಗೂಲಿ 4 ಬಾರಿ ಹಾಗ್​ಗೆ ವಿಕೆಟ್ ಒಪ್ಪಿಸಿದ್ದರು. ಗಂಗೂಲಿ ಇಂಡಿಯಾದ ನಾಯಕತ್ವ ವಹಿಸಿಕೊಂಡ ನಂತರ ಬಾರತ-ಅಸ್ಟ್ರೇಲಿಯ ನಡುವಿನ ಸರಣಿಗಳು ಹೆಚ್ಚು ರೋಮಾಂಚಕ ಮತ್ತು ಸ್ಪರ್ಧಾತ್ಮಕ ಅನಿಸತೊಡಗಿದವು ಎಂದು ಹಾಗ್ ಹೇಳಿದ್ದಾರೆ.

ಟೀಮ್ ಇಂಡಿಯಾದಲ್ಲಿ ಸೋಲರಿಯದ ದಿಟ್ಟತನವನ್ನು ಹುಟ್ಟಿಸಿದ್ದು ಸೌರವ್ ಗಂಗೂಲಿ: ಬ್ರಾಡ್ ಹಾಗ್
ಸೌರವ್ ಗಂಗೂಲಿ
TV9kannada Web Team

| Edited By: Arun Belly

Jul 18, 2021 | 12:36 AM

ಟೀಮ್ ಇಂಡಿಯಾದ ಫೀಯರ್​ಲೆಸ್ ಕ್ರಿಕೆಟ್​ ಧೋರಣೆಯನ್ನು ಎಲ್ಲರೂ ಮೆಚ್ಚುತ್ತಾರೆ, ಆದರೆ ಅಂಥ ಭಾವನೆಯನ್ನು ಟೀಮಿನಲ್ಲಿ ಹುಟ್ಟಿಸಿದ್ದು, ಭಾರತೀಯ ಆಟಗಾರನ್ನು ಸ್ಲೆಜಿಂಗ್ ಮೂಲಕ ಗೋಳು ಹೊಯ್ದುಕೊಳ್ಳುತ್ತಿದ್ದ ಆಸ್ಟ್ರೇಲಿಯ ತಂಡಕ್ಕೆ ಬಾಯಿ ಮುಚ್ಚುವಂತೆ ಮಾಡಿದ್ದು, ವಿದೇಶಗಳಲ್ಲೂ ಭಾರತ ಟೆಸ್ಟ್​ ಮತ್ತು ಸರಣಿಗಳನ್ನು ಗೆಲ್ಲಬಲ್ಲದು ಅಂತ ಪ್ರೂವ್ ಮಾಡಿದ್ದು ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ. ಟೀಮ್ ಇಂಡಿಯಾದಲ್ಲಿ ಪಾಸಿಟಿವ್ ಧೋರಣೆ ಮತ್ತು ಛಲಗಾರಿಕೆ ಹುಟ್ಟಿಸಿದ್ದು ನಿಸ್ಸಂದೇಹವಾಗಿ ದಾದಾನ ‘ದಾದಾಗಿರಿ’. ಅವರು ಟೀಮಿನ ನಾಯಕತ್ವ ವಹಿಸಿಕೊಂಡಾಗ ಭಾರತೀಯ ಕ್ರಿಕೆಟ್​ಗೆ ಮ್ಯಾಚ್​ ಫಿಕ್ಸಿಂಗ್ ಮಸಿ ಮೆತ್ತಿಕೊಂಡಿತ್ತು. ಅದನ್ನು ಹೋಗಲಾಡಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ ಗಂಗೂಲಿ ದಿಟ್ಟ ಮತ್ತು ಧೀಮಂತ ನಾಯಕತ್ವ ಟೀಮಿನ್ನು ಹೊಸ ದಿಶೆಯತ್ತ ಕರೆದೊಯ್ಯಿತು.

2001ರಲ್ಲಿ ಗಂಗೂಲಿ ನಾಯಕತ್ವದ ಟೀಮ್ ಇಂಡಿಯಾ ಇನ್​ವಿನ್ಸಿಬಲ್ಸ್ ಎಂದು ಕರೆಸಿಕೊಳ್ಳಲಾರಂಭಿಸಿದ್ದ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯವನ್ನು ಸೋಲಿಸಿತ್ತು. ಆ ಸರಣಿಯನ್ನು ಈಗಲೂ ಎರಡು ರಾಷ್ಟ್ರಗಳ ಮಧ್ಯೆ ನಡೆದಿರುವ ಅತ್ಯುತ್ತಮ ಸರಣಿ ಎನ್ನುತ್ತಾರೆ. ಆ ಸರಣಿಯಿಂದ ಟೀಮ್ ಇಂಡಿಯ ಒಂದು ಹೊಸ ಟ್ರೆಂಡ್​ ಸೆಟ್​ ಮಾಡಿತು. ಗಂಗೂಲಿ ಮುಂದಾಳತ್ವದ ಟೀಮಿಗೆ ಬಲಿಷ್ಠ ಆಸ್ಸೀಗಳನ್ನು ಮಣಿಸಿವುದು ದೊಡ್ಡ ಸಂಗತಿಯಾಗಿ ಉಳಿಯಲಿಲ್ಲ.

ಪಂದ್ಯವೊಂದು ಆರಂಭವಾಗುವ ಮೊದಲ ಟಾಸ್​ಗಾಗಿ ಅರೋಗೆಂಟ್ ಸ್ವಬಾವದ ಆಸ್ಸೀ ನಾಯಕ ಸ್ಟೀವ್ ವಾರನ್ನು ಕಾಯುವಂತೆ ಮಾಡಿದ್ದು ಕ್ರಿಕೆಟ್​ ಪ್ರೇಮಿಗಳು ಈಗಲೂ ಮರೆತಿಲ್ಲ. ಅಂದು ವಾ ಕೋಪದಿಂದ ಕುದಿಯುತ್ತಿದ್ದಿದ್ದು ನೋಡುವಂತಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದು, 2003-04 ಡೌನ್ ಅಂಡರ್ ಸರಣಿಯನ್ನು ಸಮ ಮಾಡಿಕೊಂಡಿದ್ದು ಆಸ್ಸೀಗಳ ವಿರುದ್ಧ ಗಂಗೂಲಿ ಮಾಡಿರುವ ಸಾಧನೆಗಳಲ್ಲಿ ಪ್ರಮುಖವಾದವು.

ಇಂಗ್ಲೆಂಡ್​ ಮಾಜಿ ವೇಗದ ಬೌಲರ್ ಸ್ಟೀವ್ ಹಾರ್ಮಿಸನ್ ಅವರ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಮಾತಾಡುವಾಗ ಆಸ್ಟ್ರೇಲಿಯದ ಮಾಜಿ ಸ್ಪಿನ್ನರ್ ಬ್ರಾಡ್​ ಹಾಗ್ ಅದನ್ನೇ ಹೇಳಿದ್ದಾರೆ.

‘ಆಸ್ಟ್ರೇಲಿಯ ಮತ್ತು ಅದರ ಆಟಗಾರರ ತಾಳ್ಮೆಯನ್ನು ಪರೀಕ್ಷಿಸಿದ್ದು ಗಂಗೂಲಿ. ವಾ ಅವರನ್ನು ಗಂಗೂಲಿ ಕಾಯುವಂತೆ ಮಾಡಿದ ಟೆಸ್ಟ್​ ಮ್ಯಾಚ್​ ಎಲ್ಲರಿಗೂ ನೆನೆಪಿದೆ. ಗಂಗೂಲಿ ಟಾಸ್​ ತೆಗೆದುಕೊಳ್ಳಲು ಬ್ಲೇಜರ್ ಧರಿಸದೆ ಬಂದಿದ್ದರು. ಆಸ್ಟ್ರೇಲಿಯನ್ನರನ್ನು ಹೇಗೆ ಕೆರಳಿಸಬೇಕೆನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು,’ ಎಂದು ಹಾಗ್ ಹೇಳಿದ್ದಾರೆ.

‘ನಾನಂದುಕೊಳ್ಳುವ ಹಾಗೆ ಅದಕ್ಕಿಂತ ಮೊದಲು ಮೈದಾನದದಲ್ಲಿ ಭಾರತೀಯರು ನಮ್ಮನ್ನು ನೋಡಿ ಹೆದರಿಕೊಳ್ಳುತ್ತಿದ್ದರು. ಆದರೆ ಗಂಗೂಲಿ ನಾಯಕನಾದ ಮೇಲೆ ಪರಿಸ್ಥಿತಿ ಬದಲಾಯಿತು. ಗಂಗೂಲಿ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು, ನಾವು ಸ್ಲೆಜ್ ಮಾಡಿದರೆ ಉಲ್ಟಾ ಸ್ಲೆಜ್ ಮಾಡುತ್ತಿದ್ದರು. ನಮ್ಮನ್ನು ಕೆರಳಿಸಿ ತೆಪ್ಪಗಾಗಿಸುವುದು ಅವರಿಗೆ ವಾಡಿಕೆಯಾಗಿಬಿಟ್ಟಿತ್ತು. ಭಾರತೀಯ ಕ್ರಿಕೆಟ್ ವಾತಾವರಣವನ್ನು ಅವರು ಬದಲಾಯಿದರು,’ ಎಂದು ಹಾಗ್ ಹೇಳಿದ್ದಾರೆ.

2007ರಲ್ಲಿ ಬಾತರ ಅಸ್ಟ್ರೇಲಿಯ ಪ್ರವಾಸ ಹೋಗಿದ್ದಾಗ ಟೆಸ್ಟ್ ಸರಣಿಯಲ್ಲಿ ಗಂಗೂಲಿ 4 ಬಾರಿ ಹಾಗ್​ಗೆ ವಿಕೆಟ್ ಒಪ್ಪಿಸಿದ್ದರು. ಗಂಗೂಲಿ ಇಂಡಿಯಾದ ನಾಯಕತ್ವ ವಹಿಸಿಕೊಂಡ ನಂತರ ಬಾರತ-ಅಸ್ಟ್ರೇಲಿಯ ನಡುವಿನ ಸರಣಿಗಳು ಹೆಚ್ಚು ರೋಮಾಂಚಕ ಮತ್ತು ಸ್ಪರ್ಧಾತ್ಮಕ ಅನಿಸತೊಡಗಿದವು ಎಂದು ಹಾಗ್ ಹೇಳಿದ್ದಾರೆ.

‘ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯಗಳು ಇಂಗ್ಲೆಂಡ್- ಆಸ್ಟ್ರೇಲಿಯ ಪಂದ್ಯಗಳಂತಾದವು. ಆಟ ನಡೆಯುವಾಗ ಪ್ರೇಕ್ಷಕರ ಗಲಾಟೆ ಹೆಚ್ಚಾಯಿತು, ಪ್ಯಾಶನ್ ಜಾಸ್ತಿಯಾಯಿತು, ಸ್ಪರ್ಧಾತ್ಮಕತೆ ಇಮ್ಮಡಿಗೊಂಡಿತು, ಇದಕ್ಕೆಲ್ಲ ಕಾರಣ ಸೌರವ್ ಗಂಗೂಲಿ,’ ಎಂದು ಹಾಗ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತ- ಇಂಗ್ಲೆಂಡ್ ಸರಣಿಗೂ ತಟ್ಟಿದ ಕೊರೊನಾ ಬಿಸಿ; ಅಶ್ವಿನ್ ಆಡುತ್ತಿರುವ ಕೌಂಟಿ ಕ್ರಿಕೆಟ್‌ನ ಆಟಗಾರರಿಗೆ ಕೊರೊನಾ ಸೋಂಕು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada