Fact Check: ರವಿ ದಹಿಯಾ ಹಾಗೂ ಕೋಚ್ ಸಂಭ್ರಮಾಚರಣೆ ಎಂದು ವೈರಲ್ ಆದ ವಿಡಿಯೋ ಒಲಿಂಪಿಕ್ಸ್ನದ್ದೇ ಅಲ್ಲ!
Tokyo Olympics 2020: ವಿಡಿಯೋದಲ್ಲಿ ಅಪೂರ್ಣವಾದ ‘pest 2018’ ಎಂಬ ಸಾಲನ್ನು ನೀವು ರಿಂಗ್ನಲ್ಲಿ ನೋಡಬಹುದು. ಇದು ವಿಡಿಯೋ ಒಲಿಂಪಿಕ್ನದ್ದು ಅಲ್ಲ ಹಾಗೂ 2018ರದ್ದು ಎಂದು ಹೇಳಲು ಮಹತ್ವದ ಪುರಾವೆ ಆಗಿದೆ.
ಕುಸ್ತಿಪಟು ರವಿ ದಹಿಯಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪರ ಬೆಳ್ಳಿ ಪದಕ ವಿಜೇತರಾದರು. ದೇಶಾದ್ಯಂತ ಮತ್ತು ಸಹಜವಾಗಿ ಸಾಮಾಜಿಕ ಜಾಲತಾಣದಲ್ಲಿ ಕೂಡ ರವಿ ದಹಿಯಾ ಬಗ್ಗೆ ವಿವಿಧ ಪೋಸ್ಟ್ಗಳು ಹರಿದಾಡಿದವು. ಅದರಲ್ಲೂ ಗೆಲುವಿನ ಬಳಿಕ, ರವಿ ದಹಿಯಾ ಕೋಚ್, ರವಿ ದಹಿಯಾರನ್ನು ಹಿಡಿದೆತ್ತಿ ಎಸೆದರು. ಅವರ ಸಂಭ್ರಮಾಚರಣೆ ಹೀಗಿತ್ತು ಎಂಬ ಪೋಸ್ಟ್ ಒಂದು ವೈರಲ್ ಆಯ್ತು. ಕುಸ್ತಿಪಟುವಿನ ಸಂಭ್ರಮಾಚರಣೆ ಇನ್ನು ಹೇಗಿರಲು ಸಾಧ್ಯ ಎಂದೂ ಬಹಳಷ್ಟು ಮಂದಿ ಆ ಪೋಸ್ಟ್ ಹಂಚಿಕೊಂಡರು.
ರವಿ ದಹಿಯಾ ಹಾಗೂ ಕೋಚ್ ತಮ್ಮ ಗೆಲುವನ್ನು ಸಂಭ್ರಮಿಸಿದ್ದು ಹೀಗೆ ಎಂದು ಜನರು ಕ್ಯಾಪ್ಶನ್ ಬರೆದು ವಿಡಿಯೋ ಹಂಚಿಕೊಂಡಿದ್ದರು. ರವಿ ದಹಿಯಾಗೆ ಚಿಯರ್ ಅಪ್ ಮಾಡಿದ್ದರು. ಆದರೆ ಆ ಸುದ್ದಿ ನಿಜವೇ? ರವಿ ದಹಿಯಾ ಮತ್ತು ಕೋಚ್ ಹಾಗೆ ಸಂಭ್ರಮಿಸಿದ್ದಾರೆಯೇ? ಆ ವಿಡಿಯೋ ತುಣುಕು ಈ ಬಾರಿಯ ಒಲಿಂಪಿಕ್ನದ್ದೇ ಹೌದಾ? ಈ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಇಂಡಿಯಾ ಟುಡೇ ಸಂಸ್ಥೆಯ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿರುವ ಫ್ಯಾಕ್ಟ್ ಚೆಕ್ ವರದಿಯಂತೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆ ವಿಡಿಯೋ, ಮೂರು ವರ್ಷಗಳ ಹಿಂದಿನದು. ಕುಸ್ತಿಪಟು ಬಜರಂಗ್ ಪುನಿಯಾ ಹಾಗೂ ಕೋಚ್ ಶಾಕೋ ಬೆಂಟಿಂಡಿಸ್ ವರ್ಲ್ಡ್ ವ್ರಸ್ಲಿಂಗ್ ಚಾಂಪಿಯನ್ಶಿಪ್ ಸೆಮಿಫೈನಲ್ ಗೆಲುವಿನ ಬಳಿಕ ಸಂಭ್ರಮಿಸುತ್ತಿರುವುದು ಆಗಿದೆ.
ವೈರಲ್ ಆಗಿರುವ ವಿಡಿಯೋ
This is how Dahiya’s coach celebrated their victory ?#Olympicsindia #Cheer4India #RaviDahiya Many Congratulations #Wrestling #Olympicsindia #TokyoOlympics2020 pic.twitter.com/TGnomcIDbf
— @Sushishere? (@Sushishere1) August 6, 2021
ವಿಡಿಯೋದಲ್ಲಿ ಅಪೂರ್ಣವಾದ ‘pest 2018’ ಎಂಬ ಸಾಲನ್ನು ನೀವು ರಿಂಗ್ನಲ್ಲಿ ನೋಡಬಹುದು. ಇದು ವಿಡಿಯೋ ಒಲಿಂಪಿಕ್ನದ್ದು ಅಲ್ಲ ಹಾಗೂ 2018ರದ್ದು ಎಂದು ಹೇಳಲು ಮಹತ್ವದ ಪುರಾವೆ ಆಗಿದೆ. ಮತ್ತು ಪೆಸ್ಟ್ ಎಂಬುದು ಬಹುಶಃ ಬುಡಾಪೆಸ್ಟ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ವಿಡಿಯೋ 2018ರದ್ದು ಆಗಿದೆ. ವರ್ಲ್ಡ್ ವ್ರಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಕ್ಯೂಬಾದ ಕುಸ್ತಿಪಟು ಅಲೆಜಾಂಡ್ರೋ ಎನ್ರಿಕ್ ಸೋಲಿಸಿದ ಬಳಿಕ ಪುನಿಯಾ ಹಾಗೂ ಕೋಚ್ ಸಂಭ್ರಮಿಸಿದ ತುಣುಕು ಇದಾಗಿದೆ. ಯುನೈಟೆಡ್ ವರ್ಲ್ಡ್ ವ್ರಸ್ಲಿಂಗ್ ಇದರ ಅಧಿಕೃತ ಯೂಟ್ಯೂಬ್ ಚಾನಲ್ನಲ್ಲಿ ಪಂದ್ಯದ ವಿಡಿಯೋ ತುಣುಕನ್ನೂ ಅಕ್ಟೋಬರ್ 21, 2018ರಂದು ಹಂಚಿಕೊಳ್ಳಲಾಗಿದೆ. ಒಟ್ಟು 8 ನಿಮಿಷ 3 ಸೆಕೆಂಡ್ಗಳ ಕಾಲ ಇರುವ ಆ ವಿಡಿಯೋದ 7.40 ನಿಮಿಷದಲ್ಲಿ ಕೋಚ್ ಪುನಿಯಾರನ್ನು ಎತ್ತಿ ಎಸೆಯುವ ದೃಶ್ಯ ಕಾಣಬಹುದು. ಅಂದಿನ ನಿಜವಾದ ಮತ್ತು ಸಂಪೂರ್ಣ ವಿಡಿಯೋ ಇಲ್ಲಿದೆ.
ಬಜರಂಗ್ ಪುನಿಯಾ ಈ ಬಾರಿ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದರೆ, ರವಿ ದಹಿಯಾ ಬೆಳ್ಳಿ ಪದಕ ಪಡೆದಿದ್ದಾರೆ.
ಇದನ್ನೂ ಓದಿ: Fact Check: ಮೀರಾಬಾಯಿ ಚಾನುಗೆ ಪದಕ ನೀಡಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ; ಬ್ಯಾನರ್ನ ಸತ್ಯಾಸತ್ಯತೆ ಏನು?
Bajrang Punia: ಕಂಚಿನ ಪದಕಕ್ಕೆ ಕೊರೊಳೊಡ್ಡುತ್ತಿದ್ದಂತೆ ಬಜರಂಗ್ಗೆ ಕರೆ ಮಾಡಿದ ಪ್ರಧಾನಿ ಮೋದಿ
(Fact Check on Viral Video which says Celebration of Ravi Dahiya and Coach after winning Silver is a old video)
Published On - 8:25 pm, Sun, 8 August 21