ಆಸ್ಟ್ರೇಲಿಯಾ ವಿರುದ್ಧ50-ಓವರ್ಗಳ ಸರಣಿಯಲ್ಲಿ ಭಾರತದ ಸವಾಲು ಯಾವುದೇ ಸವಾಲೊಡ್ಡದೆ ಅಂತ್ಯಗೊಂಡಿದೆ. ಸಿಡ್ನಿಯಲ್ಲಿ ನಡೆದ ಎರಡನೇ ಪಂದ್ಯವನ್ನೂ ಸುಲಭವಾಗಿ ಸೋತ ಭಾರತ ಬುಧವಾರದಂದು ನಡೆಯುವ ಮೂರನೆ ಹಾಗೂ ಕೊನೆಯ ಪಂದ್ಯವನ್ನು ಔಪಚಾರಿಕತೆಗಾಗಿ ಆಡಲಿದೆ. ಭಾರತೀಯ ಬೌಲರ್ಗಳು ಸತತ ಎರಡನೆ ಬಾರಿಯೂ ಅತಿಥೇಯ ಬ್ಯಾಟ್ಸ್ಮನ್ಗಳನ್ನು 370ಕ್ಕಿಂತ ಹೆಚ್ಚು ರನ್ ಗಳಿಸಲು ಬಿಟ್ಟಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು. ದೊಡ್ಡ ಮೊತ್ತಗಳನ್ನು ಬೆನ್ನಟ್ಟುವಾಗ ಜೊತೆಯಾಟಗಳು ಮುಖ್ಯವಾಗುತ್ತವೆ ಮತ್ತು ಮೇಲಿನ ಕ್ರಮಾಂಕದ ಆಟಗಾರರಲ್ಲಿ ಇಬ್ಬರು ಬಿರುಸಿನ ಆಟವಾಡಲೇಬೇಕಾಗುತ್ತದೆ. ಎರಡನೆ ಪಂದ್ಯದಲ್ಲಿ ಅಂಥ ಪ್ರಯತ್ನಗಳು ಕಂಡುಬಂದವಾದರೂ ಅವು ಸಾಕೆನಿಸಲಿಲ್ಲ.
ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಕೆಗಳು ಶುರವಾಗುತ್ತಿದ್ದಂತೆಯೇ, ಭಾರತದ ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವಿನ
ಕೋಳಿ ಜಗಳಕ್ಕೆ ನಾಂದಿ ಹಾಡಿದೆ. ಹಲವಾರು ವರ್ಷಗಳಿಂದ ಇವರಿಬ್ಬರ ನಡುವೆ ವಾದ-ವಿವಾದಗಳು ನಡೆಯುತ್ತಲೇ ಬಂದಿವೆ. ಕೊಹ್ಲಿಯನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಡದ ಗಂಭೀರ್, ಈ ಬಾರಿ ಅವರ ನಾಯಕತ್ವ ಮತ್ತು ಬೌಲರ್ಗಳನ್ನು ನಿಭಾಯಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಟೀಮಿನ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಮೊದಲ ಸ್ಪೆಲ್ನಲ್ಲಿ ಕೇವಲ 2 ಓವರ್ಗಳನ್ನು ಬೌಲ್ ಮಾಡಿಸಿ ಆಕ್ರಮಣದಿಂದ ಸರಿಸಿದ್ದು ಯಾಕೆ ಅಂತ ಅರ್ಥವಾಗಲಿಲ್ಲ, ಅದು ಕಳಪೆ ನಾಯಕತ್ವ ಎಂದು ಗಂಭೀರ್ ಹೇಳಿದ್ದಾರೆ.
‘‘ಬುಮ್ರಾ ಅವರಿಂದ ಕೇವಲ 2 ಓವರ್ಗಳನ್ನು ಯಾಕೆ ಬೌಲ್ ಮಾಡಿಸಲಾಯಿತೆಂದು ನನಗೆ ಅರ್ಥವಾಗಲಿಲ್ಲ. ನನ್ನ ಪ್ರಾಮಾಣಿಕ ಆನಿಸಿಕೆ ಪ್ರಕಾರ ಅದು ಕಳಪೆ ನಾಯಕತ್ವ. 50 ಓವರ್ಗಳ ಪಂದ್ಯಗಳಲ್ಲಿ ಸಾಮಾನ್ಯವಾಗಿ, ಟೀಮಿನ ಪ್ರಮುಖ ಬೌಲರ್ನಿಂದ 4-3-3 ಓವರ್ಗಳ ಸ್ಪೆಲ್ನಲ್ಲಿ ಉಪಯೋಗಿಸಲಾಗುತ್ತದೆ. ಮೊದಲ ಸ್ಪೆಲ್ನಲ್ಲಿ ಪ್ರಿಮೀಯರ್ ಬೌಲರ್ನಿಂದ ಕನಿಷ್ಠ 4 ಓವರ್ಗಳನ್ನು ಬೌಲ್ ಮಾಡಿಸಲೇಬೇಕು. ಎದುರಾಳಿ ಬ್ಯಾಟ್ಸ್ಮನ್ಗಳು ಬೌಲರ್ಗಳ ಮಾರಣಹೋಮ ನಡೆಸುವ ಮನಸ್ಥಿತಿಯಲ್ಲಿದ್ದರೆ ಅವರನ್ನು ತಡೆಯಲು ಆರಂಭಿಕ ಓವರರಗಳಲ್ಲೇ ವಿಕೆಟ್ಗಳನ್ನು ಪಡೆಯಬೇಕಾಗುತ್ತದೆ, ಆದರೆ ಕೊಹ್ಲಿ ತಮ್ಮ ನಂಬರ್ ವನ್ ಬೌಲರ್ನಿಂದ ಕೇವಲ 2 ಓವರ್ ಬೌಲ್ ಮಾಡಿಸಿ ದಾಳಿಯಿಂದ ಹಿಂದೆ ಸರಿಸುತ್ತಾರೆ. ನನಗಂತೂ ಅವರ ಯೋಜನೆ ಅರ್ಥವಾಗಲಿಲ್ಲ ಮತ್ತು ವಿವರಿಸಲೂ ಸಾಧ್ಯವಾಗುತ್ತಿಲ್ಲ. ರವಿವಾರದಂದು ಭಾರತ ಆಡಿದ್ದು ಟಿ20 ಪಂದ್ಯವಲ್ಲ. ನನ್ನ ಪ್ರಕಾರ ಇದು ಕಳಪೆ ನಾಯಕತ್ವವಲ್ಲದೆ ಮತ್ತೇನೂ ಅಲ್ಲ,’’ ಎಂದು ಪಂದ್ಯದ ನಂತರ ಕ್ರೀಡಾ ವೆಬ್ಸೈಟೊಂದರ ಜೊತೆ ಮಾತಾಡುವಾಗ ಗಂಭೀರ್ ಹೇಳಿದರು.
ಒಂದು ದಿನದ ಪಂದ್ಯಗಳಿಗೆ ಅರನೇ ಬೌಲರ್ ರೂಪದಲ್ಲಿ ಮತ್ತೊಬ್ಬ ಆಲ್ರೌಂಡರ್ನ್ನು ಆರಿಸದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಸಹ ಪ್ರಮಾದವೆಸಗಿದೆ ಎಂದು ಗಂಭೀರ್ ಹೇಳಿದರು.
‘‘ಹಾರ್ದಿಕ್ ಪಾಂಡ್ಯ ಬೌಲ್ ಮಾಡಲಾರರು ಅಂತ ಗೊತ್ತಿದ್ದರೂ ಟೀಮಿನಲ್ಲಿ ಆರನೇ ಬೌಲರ್ ಅಗಿ ಮತ್ತೊಬ್ಬ ಆಲ್ರೌಂಡರ್ನನ್ನು ಆರಿಸದಿರುವುದು ಆಯ್ಕೆ ಮಂಡಳಿ ಎಸಗಿರುವ ದೊಡ್ಡ ತಪ್ಪು. ಶಿವಮ್ ದುಬೆ, ವಾಷಿಂಗ್ಟನ್ ಸುಂದರ್ ಅವರು ಟೀಮಿನಲ್ಲಿಲ್ಲದಿರುವುದರಿಂದ ಯಾರು ಲಭ್ಯರಿದ್ದಾರೋ ಅವರನ್ನು ಆರನೇ ಬೌಲರ್ ಆಗಿ ರವಿವಾರ ಆಡಿಸಬೇಕಿತ್ತು. ಒಬ್ಬ ಆಟಗಾರನ ಸಾಮರ್ಥ್ಯವನ್ನು ನೀವು ಗುರುತಿಸದೆ ಹೋದರೆ ಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಏಗಬಲ್ಲ ಅಂತ ತಿಳಿಯುವುದು ಹೇಗೆ? ಅರನೇ ಬೌಲರ್, ಆಲ್ರೌಂಡರ್ರಗಳ ವಿಷಯವನ್ನು ಆಯ್ಕೆ ಮಂಡಳಿ ಗಣನೆಗೆ ತೆಗೆದುಕೊಳ್ಳದಿರುವುದು ವಿಷಾದಕರ. ಈ ವಿಷಯ ಮಂಡಳಿಯ ಸದಸ್ಯರು ಮತ್ತು ಟೀಮ್ ಇಂಡಿಯಾದ ಅಟಗಾರರಿಗೂ ಬಹಳ ದಿನಗಳ ಕಾಲ ನೋಯಿಸಲಿದೆ,’’ ಎಂದು ಗಂಭೀರ್ ಹೇಳಿದ್ದಾರೆ.