Vijay Hazare Trophy: ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾದ ಕರ್ನಾಟಕ, ಫೈನಲ್ಗೆ ಮುಂಬೈ ಲಗ್ಗೆ
ಬೆಳಗ್ಗೆ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗದುಕೊಂಡ ಸಮರ್ಥ ಪ್ರಾಯಶಃ ಅಲ್ಲೇ ಎಡವಿದರು. ಈ ಮೈದಾನ ಬ್ಯಾಟ್ಸ್ಮನ್ಗಳ ಸ್ವರ್ಗವಾಗರಿವುದರಿಂದ ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತ ಗಳಿಸಿ ಮುಂಬೈ ತಂಡವನ್ನು ಒತ್ತಡಕ್ಕೆ ಸಿಲುಕಿಸಬಹುದಿತ್ತು. ಆದರೆ ಸಮರ್ಥ ಅವರ ಯೋಚನೆ ಬೇರೆಯಾಗಿತ್ತು.
ದೆಹಲಿ: ಕರ್ನಾಟಕದ ಯುವ ತಂಡ ವಿಜಯ ಹಜಾರೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಂದು ವಿಫಲವಾಯಿತು. ದೆಹಲಿಯ ಪಾಲಂ ಎ ಮೈದಾನದಲ್ಲಿ ಇಂದು ನಡೆದ ಸೆಮಿಫೈನಲ್ನಲ್ಲಿ ಸಮರ್ಥ ರವಿಕುಮಾರ್ ನಾಯಕತ್ವದ ರಾಜ್ಯ ತಂಡ ಬಲಿಷ್ಠ ಮುಂಬೈ ತಂಡಕ್ಕೆ 72 ರನ್ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು. ಕರ್ನಾಟಕದ ಬೌಲರ್ಗಳನ್ನು ಮನಸಾರೆ ದಂಡಿಸಿದ ಮುಂಬೈ ಟೀಮಿನ ನಾಯಕ 122 ಎಸೆತಗಳಲ್ಲಿ 165 ರನ್ ಬಾರಿಸಿದ್ದೂ ಅಲ್ಲದೆ, ಮೂರನೇ ವಿಕೆಟ್ಗೆ ಶಮ್ಸ್ ಮುಲಾನಿ (45) ಜೊತೆ 159 ರನ್ ಸೇರಿಸಿ ಕರ್ನಾಟಕದ ಗೆಲುವಿನ ಆಸೆಗೆ ತಣ್ಣೀರೆರಚಿದರು. ಈ ಸಾಲಿನ ವಿಜಯ ಹಜಾರೆ ಟ್ರೋಫಿಯಲ್ಲಿ ಇದು ಅವರ ನಾಲ್ಕನೇ ಶತಕವಾಗಿದೆ. ಅವರ ಹಾಗೆಯೇ 4 ಶತಕಗಳನ್ನು ಬಾರಿಸಿ ಇಂದು ಐದನೇ ಶತಕವನ್ನು ಬಾರಿಸುವ ಕುರುಹು ತೋರಿದ್ದ ದೇವದತ್ ಪಡಿಕ್ಕಲ್ 64 ರನ್ ಗಳಿಸಿ ಔಟಾದರು. ಅವರು ಔಟಾದ ನಂತರ ಕರ್ನಾಟಕದ ಗೆಲುವಿನ ಆಸೆಯೂ ಕಮರಿತು.
ಬೆಳಗ್ಗೆ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗದುಕೊಂಡ ಸಮರ್ಥ ಪ್ರಾಯಶಃ ಅಲ್ಲೇ ಎಡವಿದರು. ಈ ಮೈದಾನ ಬ್ಯಾಟ್ಸ್ಮನ್ಗಳ ಸ್ವರ್ಗವಾಗರಿವುದರಿಂದ ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತ ಗಳಿಸಿ ಮುಂಬೈ ತಂಡವನ್ನು ಒತ್ತಡಕ್ಕೆ ಸಿಲುಕಿಸಬಹುದಿತ್ತು. ಆದರೆ ಸಮರ್ಥ ಅವರ ಯೋಚನೆ ಬೇರೆಯಾಗಿತ್ತು.
ಹಾಗೆ ನೋಡಿದರೆ, ವೇಗದ ಬೌಲರ್ ಪ್ರಸಿಧ್ ಕೃಷ್ಣ ತಮ್ಮ ಮೂರನೆ ಓವರ್ನಲ್ಲೇ ಪ್ರತಿಭಾವಂತ ಯುವ ಆಟಗಾರ ಯಶಸ್ವೀ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಎರಡನೇ ವಿಕೆಟ್ಗೆ ಆದಿತ್ಯ ತಾರೆ ಅವರೊಂದಿಗೆ ಶಾ 71 ರನ್ ಸೇರಿಸಿದರು, ಇದರಲ್ಲಿ ತಾರೆ ಕಾಣಿಕೆ ಕೇವಲ 16 ರನ್ ಮಾತ್ರ. ಆಮೇಲೆ, 4ನೇ ಕ್ರಮಾಂಕದಲ್ಲಿ ಆಡಲು ಬಂದ ಮುಲಾನಿ ಅವರೊಂದಿಗೆ ಶಾ ಶಿವರಾತ್ರಿಯ ದಿನವಾಗಿರುವ ಇಂದು ಅಕ್ಷರಶಃ ತಾಂಡವ ನೃತ್ಯ ಮಾಡಿದರು. ಅವರ ಶತಕ ಕೇವಲ 79 ಎಸೆತಗಳಲ್ಲಿ ಬಂದಿತು! ಮುಲಾನಿ ತಮ್ಮ ನಾಯಕನಿಗೆ ಅತ್ಯುತ್ತಮ ಸಾಥ್ ನೀಡಿದರು.
ಶಾ, ಅಂತಿಮವಾಗಿ, 122 ಎಸೆತಗಳಲ್ಲಿ 165 ರನ್ ಬಾರಿಸಿ (17X4 7X6) ಮಧ್ಯಮ ವೇಗದ ಬೌಲರ್ ವೈಶಾಖ್ ವಿಜಯ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಮುಂಬೈ ತಂಡ 49.4 ಓವರ್ಗಳಲ್ಲಿ 322 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕದ ಪರ ಯಶಸ್ವೀ ಬೌಲರ್ ಎನಿಸಿದ ವೈಶಾಖ್ 56 ರನ್ ನೀಡಿ 4 ವಿಕೆಟ್ ಪಡೆದರು.
ಬೃಹತ್ ಮೊತ್ತದ ಬೆನ್ನಟ್ಟಿದ ಕರ್ನಾಟಕದ ಆರಂಭವೂ ಚೆನ್ನಾಗಿರಲಿಲ್ಲ. ಅತ್ಯುತ್ತಮ ಫಾರ್ಮ್ನಲ್ಲಿದ್ದ ಸಮರ್ಥ ಅನುಭವಿ ಬೌಲರ್ ಧವಲ್ ಕುಲಕರ್ಣಿ ಅವರ ಮೊದಲ ಓವರ್ನಲ್ಲೇ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ಗೆ ಮರಳಿದರು. ಆದರೆ ಅವರ ಜೊತೆಗಾರ ಪಡಿಕ್ಕಲ್ ಮಾತ್ರ ಮುಂಬೈ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ ಬೌಂಡರಿಗಳನ್ನು ಬಾರಿಸುತ್ತಾ ಅರ್ಧ ಶತತ ಪೂರೈಸಿದರು. ಸೂಕ್ತವಾದ ಜೊತೆಗಾರ ಸಿಗದೆ ಹೋಗಿದ್ದರಿಂದ ಏಕಾಗ್ರತೆ ಕಳೆದುಕೊಂಡ ಪಡಿಕ್ಕಲ್ ಪ್ರಶಾಂತ್ ಸೋಳಂಕಿಗೆ ವಿಕೆಟ್ ಒಪ್ಪಿಸಿದರು. 64 ಎಸೆತಗಳಲ್ಲಿ 64 ರನ್ ಬಾರಿಸಿದ ಅವರು 9 ಬೌಂಡರಿ ಮತ್ತು 1 ಸಿಕ್ಸರ್ ಚಚ್ಚಿದರು.
ಅವರ ನಿರ್ಗಮನದ ನಂತರ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಶರತ್ ಬಿಆರ್ ಲಾಂಗ್ ಹ್ಯಾಂಡಲ್ ಪ್ರಯೋಗಿಸಿ 39 ಎಸೆತಗಳಲ್ಲಿ 61ರನ್ (8X4 2X6) ಬಾರಿಸಿದರಾದರೂ ಅದು ಕರ್ನಾಟಕಕ್ಕೆ ಗೆಲುವು ಕೊಡಿಸಲಿಲ್ಲ. ಅಂತಿಮವಾಗಿ ರಾಜ್ಯ ತಂಡ 42.2 ಓವರ್ಗಳಲ್ಲಿ 250 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಮುಂಬೈ ಪರ ತುಷಾರ್ ದೇಶಪಾಂಡೆ, ತನುಷ್ ಕೋಟಿಯಾನ್, ಸೋಳಂಕಿ ಮತ್ತು ಮುಲಾನಿ ತಲಾ 2 ವಿಕೆಟ್ ಪಡೆದರು.
ಫೈನಲ್ ಪಂದ್ಯದಲ್ಲಿ ಮುಂಬೈ; ಇಂದು ನಡೆದ ಮತ್ತೊಂದು ಸೆಮಿಫೈನಲ್ನಲ್ಲಿ ಗುಜರಾತನ್ನು ಸೋಲಿಸಿದ ಉತ್ತರ ಪ್ರದೇಶವನ್ನು ಎದುರಿಸಲಿದೆ.
ಇದನ್ನೂ ಓದಿ: Vijay Hazare Trophy: ಬಿಸಿಸಿಐನಿಂದ ಅವಕೃಪೆಗೊಳಗಾಗಿರುವ ಪೃಥ್ವಿ ಶಾ; ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಡಬಲ್ ಸೆಂಚುರಿ!
Published On - 8:32 pm, Thu, 11 March 21