India vs England | ಗಾವಸ್ಕರ್ ಫೋನ್ ಮಾಡಿದರೆ ಇಲ್ಲವೇ ಮೆಸೇಜ್ ಕಳಿಸಿದರೆ ನಾನು ಪ್ರತಿಕ್ರಿಯಿಸಲು ಸಿದ್ಧನಿದ್ದೇನೆ: ಬೇರ್ಸ್ಟೋ
ಒಂದು ದಿನದ ಪಂದ್ಯಗಳ ಸರಣಿಯ ಇದುವರೆಗೆ ನಡೆದಿರುವ ಎರಡು ಪಂದ್ಯಗಳಲ್ಲಿ 94 ಮತ್ತು 124 ರನ್ಗಳ ಇನ್ನಿಂಗ್ಸ್ಗಳನ್ನು ಆಡಿರುವ ಬೇರ್ಸ್ಟೋ ನಿಸ್ಸಂಶಯವಾಗಿ ಅದ್ಭುತವಾದ ಫಾರ್ಮ್ನಲ್ಲಿದ್ದಾರೆ. ಆದರೆ ಇದಕ್ಕೆ ಮೊದಲು ನಡೆದ ಟೆಸ್ಟ್ಗಳಲ್ಲಿ ಅವರು ಬ್ಯಾಟಿಂಗ್ ಗೊತ್ತಿಲ್ಲದವರ ರೀತಿಯಲ್ಲಿ ಆಡಿದರು.
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಪುಣೆಯಲ್ಲಿ ನಡೆದ ಎರಡನೇ ಒಂದು ದಿನದ ಆಂತರರಾಷ್ಟ್ರೀಯ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಪ್ರವಾಸಿ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತ ಆರಂಭ ಆಟಗಾರ ಜಾನಿ ಬೇರ್ಸ್ಟೋ ಅವರು, ಭಾರತದ ಲೆಜೆಂಡರಿ ಆರಂಭ ಆಟಗಾರ ಸುನಿಲ್ ಗಾವಸ್ಕರ್ ತನ್ನ ಬಗ್ಗೆ ಟೆಸ್ಟ್ ಕ್ರಿಕೆಟ್ನಲ್ಲಿ ‘ಒಲ್ಲದ ಮನಸ್ಸಿನ ಬ್ಯಾಟ್ಸ್ಮನ್’ ಅಂತ ಮಾಡಿರುವ ಕಾಮೆಂಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಾವಸ್ಕರ್ ಅವರು ತನಗೆ ಕರೆ ಮಾಡಿದಲ್ಲಿ ಅಥವಾ ಮೆಸೇಜ್ ಕಳಿಸಿದಲ್ಲಿ ಅವರೊಂದಿಗೆ ಮಾತಾಡಲು ಅಥವಾ ಅವರ ಮಾಡಿರುವ ಕಾಮೆಂಟ್ ಕುರಿತು ಚರ್ಚೆ ಮಾಡಲು ಸಿದ್ಧನಿರುವುದಾಗಿ ಆಂಗ್ಲ ಆಟಗಾರ ಹೇಳಿದ್ದಾರೆ. ಅವರು ತನ್ನ ಬಗ್ಗೆ ನಿಖರವಾಗಿ ಏನು ಹೇಳಿದ್ದಾರೆ ಅನ್ನುವುದನ್ನು ಕೇಳಿಸಿಕೊಂಡಿಲ್ಲ ಎಂದು ಬೇರ್ಸ್ಟೋ ಹೇಳಿದ್ದಾರೆ.
‘ಮೊದಲನೆಯದಾಗಿ ನಾನು ಹೇಳುವುದಿಷ್ಟು, ಗಾವಸ್ಕರ್ ನನ್ನ ಬಗ್ಗೆ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಎರಡನೇಯದಾಗಿ, ನಮ್ಮ ಮಧ್ಯೆ ಯಾವುದೇ ತೆರನಾದ ಸಂಪರ್ಕ, ಮಾತುಕತೆ ಇಲ್ಲದಿರುವಾಗ ಅವರು ನನ್ನ ಕುರಿತು ಕಾಮೆಂಟ್ ಮಾಡುವುದು ಹೇಗೆ ಸಾಧ್ಯ ಎಂದು ತಿಳಿದುಕೊಳ್ಳಲು ಉತ್ಸುನಾಗಿದ್ದೇನೆ, ಎಂದು ಬೇರ್ಸ್ಟೋ ಪುಣೆಯಲ್ಲಿ ಶುಕ್ರವಾರ ಹೇಳಿದರು.
‘ಈ ಹಿನ್ನೆಲೆಯಲ್ಲಿ ಅವರು ನನಗೆ ರಿಂಗ್ ಮಾಡಿದರೆ ಅದನ್ನು ನಾನು ಸ್ವಾಗತಿಸುತ್ತೇನೆ; ನನಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅಡುವ ಆಸಕ್ತಿ ಸದಾ ಇದ್ದು ಆ ಫಾರ್ಮಟ್ನಲ್ಲಿ ಅಡುವುದನ್ನು ನಾನು ಬಹಳ ಆನಂದಿಸುತ್ತೇನೆ ಅಂತ ಹೇಳಲು ಇಚ್ಛೆಯುಳ್ಳವನಾಗಿದ್ದೇನೆ. ನಾನು ಈಗಾಗಲೇ ಹೇಳಿರುವಂತೆ ನನ್ನ ಫೋನ್ ಆನ್ ಮೋಡ್ನಲ್ಲಿರುತ್ತದೆ. ಅವರು ಬಯಸಿದಲ್ಲಿ ನನಗೆ ಕಾಲ್ ಇಲ್ಲವೇ ಮೆಸೇಜ್ ಮಾಡಬಹುದು,’ ಎಂದು ಬೇರ್ಸ್ಟೋ ಹೇಳಿದರು.
ಒಂದು ದಿನದ ಪಂದ್ಯಗಳ ಸರಣಿಯ ಇದುವರೆಗೆ ನಡೆದಿರುವ ಎರಡು ಪಂದ್ಯಗಳಲ್ಲಿ 94 ಮತ್ತು 124 ರನ್ಗಳ ಇನ್ನಿಂಗ್ಸ್ಗಳನ್ನು ಆಡಿರುವ ಬೇರ್ಸ್ಟೋ ನಿಸ್ಸಂಶಯವಾಗಿ ಅದ್ಭುತವಾದ ಫಾರ್ಮ್ನಲ್ಲಿದ್ದಾರೆ. ಆದರೆ ಇದಕ್ಕೆ ಮೊದಲು ನಡೆದ ಟೆಸ್ಟ್ಗಳಲ್ಲಿ ಅವರು ಬ್ಯಾಟಿಂಗ್ ಗೊತ್ತಿಲ್ಲದವರ ರೀತಿಯಲ್ಲಿ ಆಡಿದರು. ತಾವಾಡಿದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಅವರು ಮೂರು ಬಾರಿ ಸೊನ್ನೆಗೆ ಔಟಾದರು. ಭಾರತದ ಸ್ಪಿನ್ನರ್ಗಳ ಎದುರು ಅವರು ಪರದಾಡಿದ್ದು ಸುಳ್ಳಲ್ಲ.
ಅಹಮದಾಬಾದನಲ್ಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಬೇರ್ಸ್ಟೋ ಔಟಾದ ನಂತರ ಕಾಮೆಂಟರಿ ಬಾಕ್ಸ್ನಲ್ಲಿದ್ದ ಗಾವಸ್ಕರ್, ಬೇರ್ಸ್ಟೋ ಅವರನ್ನು ಕುರಿತು ‘ಒಲ್ಲದ ಮನಸ್ಸಿನ ಟೆಸ್ಟ್ ಬ್ಯಾಟ್ಸ್ಮನ್,’ ಅಂತ ಕಾಮೆಂಟ್ ಮಾಡಿದ್ದು ಇಂಗ್ಲೆಂಡ್ ಮಾಧ್ಯಮಗಳಲ್ಲಿ ತೀವ್ರ ಸ್ವರೂಪದ ಚರ್ಚೆಗೊಳಗಾಯಿತು. ಟೆಸ್ಟ್ ಕ್ರಿಕೆಟ್ನಲ್ಲಿ ಬೇರ್ಸ್ಟೋ ಅವರ ಭವಿಷ್ಯದ ಬಗ್ಗೆಯೂ ಅಪಸ್ವರಗಳು ಕೇಳಿಬಂದವು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶುಕ್ರವಾರದಂದು ನಡೆದ ಎರಡನೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬೇರ್ಸ್ಟೋ ಭಾರತದ ಬೌಲರ್ಗಳನ್ನು ಮನಸಾರೆ ದಂಡಿಸಿ ಕೇವಲ 112 ಎಸೆತಗಳಲ್ಲಿ 124 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 7 ಸಿಕ್ಸ್ ಮತ್ತು 11 ಫೋರ್ಗಳಿದ್ದವು. ಬೇರ್ಸ್ಟೋ ಮತ್ತು ಕೇವಲ 1 ರನ್ನಿಂದ ಶತಕ ತಪ್ಪಿಸಿಕೊಂಡ ಬೆನ್ ಸ್ಟೋಕ್ಸ್ ಭಾರತದ 337 ರನ್ಗಳು ಬೃಹತ್ ಮೊತ್ತವನ್ನು ನೀರು ಕುಡಿದಷ್ಟು ಸುಲಭವಾಗಿ ದಾಟಲು ತಮ್ಮ ತಂಡಕ್ಕೆ ನೆರವಾದರು.
ಎರಡನೇ ಪಂದ್ಯವನ್ನು ಗೆದ್ದೇ ತೀರಬೇಕೆಂಬ ಛಲದೊಂದಿಗೆ ಭಾರತದ ಮೊತ್ತ ಚೇಸ್ ಮಾಡಿದ ಬೇರ್ಸ್ಟೋ ಮತ್ತು ಜೇಸನ್ ರಾಯ್ ಅವರ ಆರಂಬಿಕ ಜೋಡಿ ಮೊದಲ 19 ಓವರ್ಗಳಲ್ಲಿ 110 ರನ್ ಸೇರಿಸಿತು. ಅದಾದ ಮೇಲೆ ಬೇರ್ಸ್ಟೋ ಜೊತೆಗೂಡಿದ ಸ್ಟೋಕ್ಸ್ ಕೇವಲ 19 ಓವರ್ಗಳಲ್ಲಿ175 ರನ್ ಸೇರಿಸಿದರು. ತಾನು ಪ್ರದರ್ಶಿಸಿದ ನಿರ್ಭೀತಿಯ ಸ್ಟ್ರೋಕ್ಪ್ಲೇಗೆ ತಂಡದ ಬ್ಯಾಟಿಂಗ್ ಆಳ ಕಾರಣವೆಂದು ಬೇರ್ಸ್ಟೋ ಪಂದ್ಯ ಮುಗಿದ ನಂತರ ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘10 ಇಲ್ಲವೇ 11 ನೇ ಕ್ರಮಾಂಕದಲ್ಲಿ ಆದಿಲ್ ರಾಶಿದ್ ಆಡುತ್ತಾರೆ. ರಾಶಿದ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 10 ಶತಕಗಳನ್ನು ಬಾರಿಸಿದ್ದಾರೆ. ಬ್ಯಾಟಿಂಗ್ನಲ್ಲಿ ಈ ಮಟ್ಟಿನ ಆಳ ಬೇರೆ ಯಾವುದೇ ತಂಡದಲ್ಲಿ ಕಾಣಸಿಗದು. ನಾವು ನಿರ್ಭಯದಿಂದ ಹೊಡೆತಗಳನ್ನು ಬಾರಿಸುವುದಕ್ಕೆ ಇದೇ ಕಾರಣ,’ ಎಂದು ಬೇರ್ಸ್ಟೋ ಹೇಳಿದರು.
‘ಮೊಯೀನ್ ಅಲಿ ಮತ್ತು ಕರನ್ ಸಹೋದರರು ನಮ್ಮ ತಂಡದ ಪವರ್-ಹಿಟ್ಟರ್ಗಳು. ಈ ಪಟ್ಟಿ ಹೀಗೆ ಮುಂದುವರಿಯುತ್ತಲೇ ಹೊಗುತ್ತದೆ. ಹೌದು, ಈ ಬಗೆಯ ಬ್ಯಾಟಿಂಗ್ ಲೈನಪ್ ನಿಮ್ಮ ಆತ್ಮವಿಶ್ವಾಸವನ್ನು ನೂರುಪಟ್ಟು ಹೆಚ್ಚಿಸುತ್ತದೆ,’ ಎಂದು ಬೇರ್ಸ್ಟೋ ಹೇಳಿದರು.
ಇದನ್ನೂ ಓದಿ: India vs England | ಕ್ರಿಕೆಟನ್ನೇ ವೃತ್ತಿಬದುಕು ಮಾಡಿಕೊಳ್ಳುವಂತೆ ಯಾರೂ ನನಗೆ ಸಲಹೆ ನೀಡಲಿಲ್ಲ: ಪ್ರಸಿಧ್ ಕ್ರಿಷ್ಣ
Published On - 6:17 pm, Sat, 27 March 21