India vs England | ಕ್ರಿಕೆಟನ್ನೇ ವೃತ್ತಿಬದುಕು ಮಾಡಿಕೊಳ್ಳುವಂತೆ ಯಾರೂ ನನಗೆ ಸಲಹೆ ನೀಡಲಿಲ್ಲ: ಪ್ರಸಿಧ್ ಕ್ರಿಷ್ಣ
ಬೌಲಿಂಗ್ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು, ಹೊಸ ತಂತ್ರಗಳನ್ನು ಪ್ರಯೋಗಿಸಲು ಖುದ್ದು ಆರಂಭಿಸಿದೆ ಎಂದು ಹೇಳುವ ಕ್ರಿಷ್ಣ ತನ್ನ ವೃತ್ತಿಬದುಕನ್ನು ಯಾರೂ ಪ್ಲ್ಯಾನ್ ಮಾಡಲಿಲ್ಲ ಅದು ತಾನಾಗಿಯೇ ರೂಪುಗೊಂಡಿತು ಎನ್ನುತ್ತಾರೆ.
ಪುಣೆ: ತಾನಾಡಿದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲೇ ದಾಖಲೆ ನಿರ್ಮಿಸಿ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿರುವ ಕರ್ನಾಟಕದ ನೀಳಕಾಯದ ವೇಗದ ಬೌಲರ್ ಪ್ರಸಿಧ್ ಕ್ರಿಷ್ಣ ಪ್ರತಿಯೊಬ್ಬ ಸ್ಪಿನ್ನರ್ ಮತ್ತು ವೇಗದ ಬೌಲರ್ನ ಌಕ್ಷನ್ ಅನ್ನು ಯಥಾವತ್ತಾಗಿ ಕಾಪಿ ಮಾಡುತ್ತಾರಂತೆ! ಇವರು ಕ್ರಿಕೆಟ್ ರಂಗದ ಮಿಮಿಕ್ರಿ ಕಲಾವಿದ ಅಂತ ಕರೆದರೆ ತಪ್ಪಾಗಲಾರದೇನೋ. ಅಂದಹಾಗೆ. ಕ್ರಿಕೆಟ್ನಲ್ಲಿ ನಮ್ಮ ಹುಡುಗ ಕ್ರಿಷ್ಣನ ರೋಲ್ ಮಾಡೆಲ್ ಯಾರು ಗೊತ್ತಾ? ಬೆಂಕಿಯುಗುಳುವ ಎಸೆತಗಳಿಂದ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಆಸ್ಟ್ರೇಲಿಯಾದ ಬ್ರೆಟ್ ಲೀ. ಶುಕ್ರವಾರದಂದು ಪುಣೆಯಲ್ಲಿ ವರ್ಚ್ಯುಯಲ್ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಕ್ರಿಷ್ಣ, ತನಗೆ ಕ್ರಿಕೆಟ್ ಅನ್ನು ವೃತ್ತಿಬದುಕನ್ನಾಗಿ ಮಾಡಿಕೊಳ್ಳುವಂತೆ ಯಾರೂ ಸಲಹೆ ನೀಡಿರಲಿಲ್ಲ ಎಂದು ಹೇಳಿದರು.
ಕ್ರಿಕೆಟ್ ನಿನ್ನ ಕರೀಯರ್, ಅದರಿಂದಲೇ ಬದುಕು ರೂಪಿಸಿಕೋ ಅಂತ ನನಗೆ ಯಾರೂ ಹೇಳಲಿಲ್ಲ. ನನ್ನ ಶಾಲಾ ದಿನಗಳ ಕೋಚ್ ಅಗಿದ್ದ ಶ್ರೀನಿವಾಸ ಮುರ್ತಿ ಸರ್ ಅವರು ನನ್ನ ಎತ್ತರವನ್ನು ಗಮನಿಸಿ ಮತ್ತು ನಾನು ಬಾಲನ್ನು ಮೂವ್ ಮಾಡುತ್ತಿದ್ದುದನ್ನು ನೋಡಿ ವೇಗೆದ ಬೌಲರ್ ಅಗುವಂತೆ ಪ್ರೇರೇಪಿಸಿದರು,’ ಎಂದು ಕ್ರಿಷ್ಣ ಹೇಳಿದರು.
‘ನನ್ನ ಬೌಲಿಂಗ್ ಶೈಲಿಯನ್ನು ತಿದ್ದಿ ಸರಿಪಡಿಸಿದ್ದು ಮೂರ್ತಿ ಸರ್. ನನ್ನ ರನಪ್ ಕೋನವನ್ನು, ಬಾಲ್ ರಿಲೀಸ್ ಮಾಡುವ ಅಂಶವನ್ನು, ದಣಿವಾಗದಂತೆ ಬೌಲ್ ಮಾಡುವ ತಂತ್ರಗಾರಿಕೆಯನ್ನು ಹೇಳಿಕೊಟ್ಟಿದ್ದು ಮೂರ್ತಿ ಸರ್. ನನ್ನ ವೇಗ ವೃದ್ಧಿಯಾಗುತ್ತಿದ್ದಿದ್ದು ಮತ್ತು ಬೌಲಿಂಗ್ ಉತ್ತಮಗೊಳ್ಳುತ್ತಿದ್ದಿದ್ದು ನನ್ನ ಗಮನಕ್ಕೆ ಬಂತು. ಆಗಲೇ, ನಾನು ಸಹ ವೇಗದ ಬೌಲರ್ ಆಗಬಲ್ಲೆ ಅಂತ ನನಗೆ ಮನವರಿಕೆಯಾಗಿದ್ದು. ವೇಗದ ಬೌಲಿಂಗ್ನಲ್ಲಿ ಒಂದು ಸೊಬಗಿದೆಮತ್ತು ನಾನು ಅದನ್ನು ಇಷ್ಟಪಡಲಾರಂಭಿಸಿದೆ. ಈ ಕಲೆಯಲ್ಲಿ ಪರಿಣಿತಿಯನ್ನು ಸಾಧಿಸಲು ನಾನು ಬ್ರೆಟ್ ಲೀ ಅವರು ನನ್ನ ರೋಲ್ ಮಾಡೆಲ್ ಆಗಿ ಮಾಡಿಕೊಂಡೆ,’ ಎಂದು ಅವರು ಹೇಳಿದ್ದು ಕೊಲ್ಕತಾ ನೈಟ್ ರೈಡರ್ಸ್ ವೆಬ್ಸೈಟ್ನಲ್ಲಿ ದಾಖಲಾಗಿದೆ.
‘ಶಾಲಾದಿನಗಳಲ್ಲಿ ಮೂರ್ತಿ ಸರ್ ಅವರ ಸಹಾಯದಿಂದ ನನ್ನ ಕ್ರಿಕೆಟ್ ಪಯಣ ಹಾಗೆ ಶುರುವಾಯಿತು. ಆದರೆ ಅಲ್ಲಿಂದ ಬಹಳ ಜನರ ನೆರವು ನನಗೆ ಸಿಕ್ಕಿತು. ಆ ದಿನಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ನಾನು ಹೇಳಬೇಕು. ರಸ್ತೆಯಲ್ಲಿ ನನ್ನೊಂದಿಗೆ ಕಸಿನ್ ಆಗಲೀ, ಅಥವಾ ಸ್ನೇಹಿತರಾಗಲೀ ನಡೆದು ಬರುತ್ತಿದ್ದರೆ ಅವರಿಗೆ ತೀವ್ರ ಮುಜುಗುರ ಉಂಟಾಗುತ್ತಿತ್ತು. ಯಾಕೆಂದರೆ, ರಸ್ತೆಗಳ ಮೇಲೆ ನಾನು ಪ್ರಪಂಚದ ಪ್ರತಿಯೊಬ್ಬ ಬೌಲರ್ನ ಶೈಲಿಯನ್ನು ಅನುಕರಣೆ ಮಾಡುತ್ತಿದ್ದೆ. ಮುಂದೆ ಅವರಂತೆ ಹೆಸರು ಮಾಡುವ ಮಹದಾಸೆ ಇಟ್ಟುಕೊಂಡಿರುತ್ತಿದ್ದೆ. ಮುಂದಿನದೆಲ್ಲ ಅತ್ಯಂತ ಸ್ವಾಭಾವಿಕ ಬೆಳವಣಿಗೆಗಳು. ನಾನು ಬಾಲ್ ಎಸೆಯವ ಮುಂಚಿನ ಓಟವನ್ನು, ಬೌಲ್ ಮಾಡುವುದನ್ನು ನಿರಂತವಾಗಿ ಅಭ್ಯಾಸ ಮಾಡುತ್ತಾ ಪರಿಣಿತಿಯನ್ನು ಸಾಧಿಸಿದೆ,’ ಎಂದು ಕ್ರಿಷ್ಣ ಶುಕ್ರವಾರದಂದು ಹೇಳಿದರು.
ಟಿ20 ಕ್ರಿಕೆಟ್ ಅನ್ನು ಅತ್ಯಂತ ವೇಗದ ಆಟ ಎಂದು ಬಣ್ಣಿಸುವ ಕ್ರಿಷ್ಣ, ಈ ಫಾರ್ಮಾಟ್ನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಆಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳುತ್ತಾರೆ.
‘ಇದು ನಿಜಕ್ಕೂ ಬಹಳ ವೇಗದ ಆಟ. ಇಲ್ಲಿ ಅಟಗಾರನೊಬ್ಬ ಸಫಲಾಗಬೇಕಾದರೆ ಅವನು ತ್ವರಿತವಾಗಿ ಪರಿಸ್ಥಿಗೆ ಅನುಗುಣವಾದ ಪ್ರದರ್ಶನ ನೀಡಬೇಕಾಗುತ್ತದೆ. ಒಬ್ಬ ಬೌಲರ್ ಆಗಿ ನಾನು ಹೇಳುವುದೇನೆಂದರೆ, ಯಾರೊಬ್ಬರೂ ಪಂದ್ಯದುದ್ದಕ್ಕೂ ಒಂದೇ ತೆರನಾದ ಲೈನ್ ಮತ್ತು ಲೆಂಗ್ತ್ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ. ಅವನು ಪ್ರಯೋಗಗಳನ್ನು ನಡೆಸಲು ಪ್ರಯತ್ನಿಸುತ್ತಾನೆ. ಟಿ20 ಕ್ರಿಕೆಟ್ ಮಹತ್ವ ಪಡೆದುಕೊಳ್ಳುವುದು ಇದೇ ಹಿನ್ನೆಲೆಯಲ್ಲಿ, ನೀವು ಏನೆಲ್ಲ ಪ್ರಯೋಗಗಳನ್ನು, ಅವಿಷ್ಕಾರಗಳನ್ನು ಮಾಡಬಲ್ಲಿರಿ ಮತ್ತು ಅದನ್ನು ಎಷ್ಟು ಸಮಯದವರಗೆ ಅದನ್ನು ಕಾಯ್ದುಕೊಳ್ಳಬಲ್ಲಿರಿ ಎಂಬ ಸವಾಲನ್ನು ಅದು ನಿಮಗೆ ಎಸೆಯುತ್ತದೆ,’ ಎಂದು ಕ್ರಿಷ್ಣ ಹೇಳಿದರು.
‘ಜಾಸ್ತಿ ಎತ್ತರವಿರುವುದು ನನಗೆ ಲಾಭಕಾರಿಯಾಗಿದೆ, ಯಾಕೆಂದರೆ ಎತ್ತರದಿಂದಾಗಿ ನಾನು ನಿಖರವಾಗಿ ಯಾರ್ಕರ್ಗಳನ್ನು ಎಸೆಯಬಲ್ಲೆ. ಬಹಳ ಎತ್ತರದಿಂದ ಯಾರ್ಕರ್ಗಳು ತನ್ನೆಡೆ ಬರುತ್ತಿದ್ದರೆ, ಅವರಗಳನ್ನು ಎದುರಿಸಿ ಆಡುವುದು ಬ್ಯಾಟ್ಸ್ಮನ್ಗೆ ಕಷ್ಟವಾಗುತ್ತದೆ,’ ಎಂದು ಕ್ರಿಷ್ಣ ಹೇಳಿದರು.
ಅದಾದ ನಂತರ ತಾನು ಬೌಲಿಂಗ್ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು, ಹೊಸ ತಂತ್ರಗಳನ್ನು ಪ್ರಯೋಗಿಸಲು ಆರಂಭಿಸಿದೆ ಎಂದು ಹೇಳುವ ಕ್ರಿಷ್ಣ, ತನ್ನ ವೃತ್ತಿಬದುಕನ್ನು ಯಾರೂ ಪ್ಲ್ಯಾನ್ ಮಾಡಲಿಲ್ಲ ಅದು ತಾನಾಗಿಯೇ ರೂಪುಗೊಂಡಿತು ಎನ್ನುತ್ತಾರೆ.
‘ಎದುರಾಳಿಗಳಿಗೆ ನನ್ನ ಬೌಲಿಂಗ್ನಲ್ಲಿರುವ ವೈವಿಧ್ಯತೆಯ ಬಗ್ಗೆ ಪ್ರಾಯಶಃ ಗೊತ್ತಿರಲಿಲ್ಲ. ನಾನು ಆಗಲೇ ಹೇಳಿದಂತೆ, ಟಿ20 ಕ್ರಿಕೆಟ್ ಬಹಳ ವೇಗದ ಆಟ. ಒಂದೆರಡು ಎಸೆತಗಳನ್ನು ನೀವು ಗುರುತಿಸಲು ವಿಫಲರಾದರೆ, ಅದು ಯಾಕೆ ಅಂತ ಅರ್ಥಮಾಡಿಕೊಳ್ಳುವಷ್ಟರಲ್ಲಿ ಆ ಓವರ್ ಮುಗಿದು ಹೋಗಿರುತ್ತದೆ. ಯಾವುದಾದರೂ ಒಬ್ಬ ಬೌಲರ್ನನ್ನು ಆಯ್ದುಕೊಂಡು ಅವನ ಎಸೆತಗಳನ್ನು ದಂಡಿಸುವ ಅಂತ ಯೋಚನೆ ಮಾಡಲು ಬ್ಯಾಟ್ಸ್ಮನ್ಗೆ ಸಾಧ್ಯವಾಗುವುದಿಲ್ಲ. ಮೊದಲ ಎಸೆತದಿಂದಲೇ ಅವನು ಸಿದ್ಧನಾಗಿರಬೇಕು,’ ಎಂದು ಕ್ರಿಷ್ಣ ಹೇಳಿದರು.
ಇದನ್ನೂ ಓದಿ: India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್