ಜಾತಿ ನಿಂದನೆ ಆರೋಪ: ಕ್ರಿಕೆಟಿಗ ಯುವರಾಜ್​ ಸಿಂಗ್​ ವಿರುದ್ಧ 8 ತಿಂಗಳ ನಂತರ ದಾಖಲಾಯ್ತು FIR

Caste Abuse Allegations: 2020 ರಲ್ಲಿ ಯುವರಾಜ್ ದಲಿತ ಸಮಾಜದ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದು, ಈ ಬಗ್ಗೆ ಹರಿಯಾಣ ಪೊಲೀಸರು ಈಗ FIR ದಾಖಲಿಸಿದ್ದಾರೆ. ದಲಿತ ಮಾನವ ಹಕ್ಕುಗಳ ವಕೀಲ ಕನ್ವೀನರ್ ರಜತ್ ಕಲ್ಸನ್ ಅವರ ದೂರಿನ ಮೇರೆಗೆ ಭಾರತದ ಮಾಜಿ ಆಲ್‌ರೌಂಡರ್ ವಿರುದ್ಧ FIR ದಾಖಲಿಸಲಾಗಿದೆ.

  • TV9 Web Team
  • Published On - 12:30 PM, 15 Feb 2021
ಜಾತಿ ನಿಂದನೆ ಆರೋಪ: ಕ್ರಿಕೆಟಿಗ ಯುವರಾಜ್​ ಸಿಂಗ್​ ವಿರುದ್ಧ 8 ತಿಂಗಳ ನಂತರ ದಾಖಲಾಯ್ತು FIR

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತೊಂದರೆಯಲ್ಲಿದ್ದು, ಕಳೆದ ವರ್ಷ ತಮ್ಮ ಗೆಳೆಯರೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ ಚಾಟ್​ನಲ್ಲಿ ಜಾತಿ ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ FIR​ ದಾಖಲಾಗಿದೆ. 2020 ರಲ್ಲಿ ಯುವರಾಜ್ ದಲಿತ ಸಮಾಜದ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದು, ಈ ಬಗ್ಗೆ ಹರಿಯಾಣ ಪೊಲೀಸರು ಈಗ FIR ದಾಖಲಿಸಿದ್ದಾರೆ. ದಲಿತ ಮಾನವ ಹಕ್ಕುಗಳ ವಕೀಲ ಕನ್ವೀನರ್ ರಜತ್ ಕಲ್ಸನ್ ಅವರ ದೂರಿನ ಮೇರೆಗೆ ಭಾರತದ ಮಾಜಿ ಆಲ್‌ರೌಂಡರ್ ವಿರುದ್ಧ FIR ದಾಖಲಿಸಲಾಗಿದೆ.

ಯುವರಾಜ್ ಬಗ್ಗೆ 8 ತಿಂಗಳ ಹಿಂದೆ ದೂರು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಈಗ ಅದರ ಬಗ್ಗೆ FIR ದಾಖಲಿಸಿದ್ದಾರೆ. ಹಿಸಾರ್‌ನ ಹನ್ಸಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತೀಯ ಕ್ರಿಕೆಟಿಗ ಸಿಕ್ಸರ್ ಕಿಂಗ್ ವಿರುದ್ಧ ಐಪಿಸಿ ಸೆಕ್ಷನ್‌ 153, 153 ಎ, 295, 505 ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳು ಸೇರಿದಂತೆ ಹಲವಾರು ಸೆಕ್ಷನ್​ಗಳ ಅಡಿಯಲ್ಲಿ ಯುವರಾಜ್ ಕುರಿತು FIR ದಾಖಲಿಸಲಾಗಿದೆ.


8 ತಿಂಗಳ ಹಿಂದೆ ಮಾಡಿದ ಕಾಮೆಂಟ್‌..
ಟೀಂ ಇಂಡಿಯಾ ಆರಂಭಿಕ ಆಟಗಾರ‌ ರೋಹಿತ್‌ ಶರ್ಮಾ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿದ್ದ 2 ವಿಶ್ವಕಪ್‌ ಗೆದ್ದುಕೊಟ್ಟ ಸ್ಟಾರ್‌ ಆಲ್‌ರೌಂಡರ್‌ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಆನ್‌ಲೈನ್​ಲ್ಲಿ‌ ಇದ್ದಂತ ಚಹಲ್‌ ಮತ್ತು ಕುಲ್ದೀಪ್‌ ಅವರನ್ನು ‘ಭಂಗಿ’ ಎಂದು ಕರೆದು ಅನಗತ್ಯ ವಿವಾದವನ್ನು ಮೇಲೆ ಎಳೆದಕೊಂಡಿದ್ದರು. “ಈ ಭಂಗಿ ಜನರಿಗೆ ಮಾಡಲು ಬೇರೆ ಕೆಲಸವಿಲ್ಲ,” ಎಂದು ಕುಲ್ದೀಪ್‌ ಮತ್ತು ಚಹಲ್‌ ಉದ್ದೇಶಿಸಿ ಯುವಿ ಮಾತನಾಡಿದ್ದರು.

‘ಭಂಗಿ’ ಎಂಬುದು ಉತ್ತರ ಭಾರದಲ್ಲಿನ ದಲಿತ ಜಾತಿಯ ಜನರನ್ನು ಕರೆಯಲು ಮೇಲ್ವರ್ಗದ ಜನರು ಬಳಕೆ ಮಾಡುವ ಪದವಾಗಿದೆ. ಅಂದಹಾಗೆ ಜಾತಿ ನಿಂದನೆ ನಿರ್ಮೂಲನೆ ಸಲುವಾಗಿ ಈ ಪದ ಬಳಕೆಗೆ ನಿಷೇಧವಿದೆ. ಹೀಗಿದ್ದರೂ ಯುವರಾಜ್‌ ಸಿಂಗ್‌ ಸೋಷಿಯಲ್‌ ಮೀಡಿಯಾ ವೇದಿಕೆಯಲ್ಲಿ ಈ ಪದ ಬಳಕೆ ಮಾಡಿದ್ದು, ಇದರ ವಿರುದ್ಧ ಹರಿಯಾಣದಲ್ಲಿ ದಲಿತ ಪರ ಹೋರಾಟಗಾರ/ ವಕೀಲರೊಬ್ಬರು ಪೊಲೀಸ್‌ ಕಂಪ್ಲೇಂಟ್‌ ನೀಡಿದ್ದರು.


ವಿವಾದದ ನಂತರ ಕ್ಷಮೆಯಾಚಿಸಿದ್ದ ಯುವರಾಜ್​..
ಟ್ವಿಟ್ಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ವಿಶ್ವಕಪ್ ವಿಜೇತ ಮಾಜಿ ಆಲ್​ರೌಂಡರ್, ತಾನು ಎಂದಿಗೂ ಅಸಮಾನತೆಯನ್ನು ನಂಬುವುದಿಲ್ಲ ಎಂದು ಹೇಳಿದ್ದರು. ಜಾತಿ, ಬಣ್ಣ, ಮತ ಅಥವಾ ಲಿಂಗದ ಆಧಾರದ ಮೇಲೆ ನಾನು ಯಾವುದೇ ರೀತಿಯ ಅಸಮಾನತೆಯನ್ನು ನಂಬಿಲ್ಲ. ಜನರ ಕಲ್ಯಾಣಕ್ಕಾಗಿ ನಾನು ನನ್ನ ಜೀವನವನ್ನು ಕಳೆದಿದ್ದೇನೆ ಮತ್ತು ಜನರ ಸೇವೆಯನ್ನೇ ಇಂದಿಗೂ ಮುಂದುವರಿಸಿದ್ದೇನೆ ಎಂದು ಯುವರಾಜ್ ಸಿಂಗ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದರು.

ನಾನು ನನ್ನ ಸ್ನೇಹಿತರೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ, ನಾನು ತಪ್ಪಾಗಿ ಅರ್ಥೈಸಲ್ಪಟ್ಟಿದ್ದೇನೆ. ಅದು ಅನಗತ್ಯ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದಾಗ್ಯೂ, ಒಬ್ಬ ಜವಾಬ್ದಾರಿಯುತ ಭಾರತೀಯನಾಗಿ ನಾನು ಯಾರೊಬ್ಬರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ನೋಯಿಸಿದ್ದರೆ, ನಾನು ವಿಷಾದ ವ್ಯಕ್ತಪಡಿಸಲು ಬಯಸುತ್ತೇನೆ ಎಂದಿದ್ದರು.

ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ನಂತರ FIR​..
ದೂರುದಾರ ಹಿಸಾರ್ ಜಿಲ್ಲೆಯ ಹನ್ಸಿ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿಗೆ ಈ ಬಗ್ಗೆ ವರದಿ ಸಲ್ಲಿಸಿ ಯುವರಾಜ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಆದರೆ, ದೀರ್ಘಕಾಲದಿಂದ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲದಿದ್ದಾಗ, ದೂರುದಾರ ಕಲ್ಸನ್ ನ್ಯಾಯಾಲಯದ ಮೊರೆಹೋಗಿದ್ದರು. ಈಗ ನ್ಯಾಯಾಲಯದ ಆದೇಶದ ನಂತರ ಹರಿಯಾಣ ಪೊಲೀಸರು ಯುವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.