Updated on: Aug 19, 2021 | 6:56 PM
ಗೂಗಲ್ ತನ್ನ ಮುಂಬರುವ ಹೊಸ ಆಪರೇಟಿಂಗ್ ಸಿಸ್ಟಂ (ಓಎಸ್) ಅಂಡ್ರಾಯ್ಡ್ 12 ನಲ್ಲಿ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಟೆಕ್ ವೆಬ್‌ಸೈಟ್ ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಹೊಸ ಫೀಚರ್ ಸಹಾಯದಿಂದ ಅಂಡ್ರಾಯ್ಡ್-12 ಸ್ಮಾರ್ಟ್ಫೋನ್ ಬಳಕೆದಾರರು ಮುಖಭಾವದಲ್ಲೇ ತಮ್ಮ ಮೊಬೈಲ್ ಅನ್ನು ನಿಯಂತ್ರಿಸಬಹುದು.
ಅಂದರೆ ಹೊಸ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಸ ಅಪ್ಗ್ರೇಡ್ನಲ್ಲಿ ಮನುಷ್ಯನ ಹಾವಭಾವಗಳನ್ನು ಗುರುತಿಸುವ ಫೀಚರ್ ನೀಡಲಾಗುತ್ತದೆ. ಇದರ ಸಹಾಯದಿಂದ ನೀವು ಮೊಬೈಲ್ನ ಸ್ಕ್ರೀನ್ ಮುಟ್ಟದೇ ನಿಮಗೆ ಬೇಕಾದ ಆಯ್ಕೆಗಳನ್ನು ಪಡೆಯಬಹುದು.
ಉದಾಹರಣೆಗೆ: ಬಳಕೆದಾರರು ಬಾಯಿ ತೆರೆಯುವ ಫೋನ್ ಅನ್ಲಾಕ್ ಮಾಡಬಹುದು ಅಥವಾ ಕ್ಯಾಮೆರಾ ಆನ್ ಮಾಡಿಕೊಳ್ಳಬಹುದು. ಇನ್ನು ಕಣ್ಣಿನ ಹುಬ್ಬೇರಿಸುವ ಮೂಲಕ ಸ್ಕ್ರೀನ್ ಸ್ಕ್ರಾಲ್ ಮಾಡಬಹುದು. ಹಾಗೆಯೇ ಮುಖವನ್ನು ಎಡ, ಬಲ, ಮೇಲೆ, ಕೆಳಗೆ ಮಾಡುವ ಮೂಲಕ ಫೋನ್ನಲ್ಲಿರುವ ಆಯ್ಕೆಗಳನ್ನು ಓಪನ್ ಮಾಡಿಕೊಳ್ಳಬಹುದು.
ಇದಕ್ಕಾಗಿ ಅಂಡ್ರಾಯ್ಡ್-12 ಓಎಸ್ನಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುತ್ತಿದ್ದು, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗೆ ಸರಿಯಾಗಿ ಕ್ಯಾಮೆರಾದಲ್ಲಿ ಮುಖಭಾವವನ್ನು ಸೆರೆಯಿಡಿಯಬೇಕಾಗುತ್ತದೆ. ಉದಾಹರಣೆಗೆ: ನೀವು ನಿಮ್ಮ ನಗುವಿನ ಮೂಲಕ ಕ್ಯಾಮೆರಾ ಓಪನ್ ಮಾಡಬೇಕೆಂದು ಬಯಸಿದರೆ, ಹೊಸ ಫೀಚರ್ನಲ್ಲಿ ನೀಡಲಾದ ಆಯ್ಕೆಯಲ್ಲಿ ನಿಮ್ಮ ನಗುವನ್ನು ಸೆರೆಯಿಡಿಯಬೇಕು. ಆ ಬಳಿಕ ಮೊಬೈಲ್ ನೋಡಿ ನೀವು ನಕ್ಕರೆ ನಿಮ್ಮ ಕ್ಯಾಮೆರಾ ಆನ್ ಆಗುತ್ತದೆ. ಹೀಗೆ ಅಂಡ್ರಾಯ್ಡ್-12ನಲ್ಲಿ ಒಂದಷ್ಟು ಹಾವಭಾವ ಆಯ್ಕೆಗಳನ್ನು ನೀಡಲಾಗುತ್ತದೆ.
ಇದಾಗ್ಯೂ ಈ ಹೊಸ ಫೀಚರ್ ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಲಾಗಿದೆ. ಅಂದರೆ ಅಂಡ್ರಾಯ್ಡ್-12 ಹಾವಭಾವ ಆಯ್ಕೆಗಳನ್ನು ಬಳಸಿಕೊಂಡರೆ ಬ್ಯಾಟರಿ ಕೂಡ ಬೇಗನೆ ಮುಗಿಯಲಿದೆ.
ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ಅಂಡ್ರಾಯ್ಡ್-12 ಓಎಸ್ನ ಸ್ಮಾರ್ಟ್ಫೋನ್ಗಳಲ್ಲಿ ಹೊಸ ಆಯ್ಕೆ ಬರಲಿರುವುದಂತು ಪಕ್ಕಾ. ಇದರಿಂದ ಪದೇ ಪದೇ ಟಚ್ಸ್ಕ್ರೀನ್ ಮುಟ್ಟುವುದು ಕೂಡ ತಪ್ಪಲಿದೆ.