Apple iCloud+: ಆಪಲ್ ಕಂಪೆನಿಯಿಂದ ಹೊಸ ಫೀಚರ್​ಗಳ ಐಕ್ಲೌಡ್+ ಘೋಷಣೆ; ಏನಿದರ ವೈಶಿಷ್ಟ್ಯ ಎಂಬುದನ್ನು ತಿಳಿಯಿರಿ

| Updated By: Srinivas Mata

Updated on: Jun 09, 2021 | 5:01 PM

ಆಪಲ್ ಕಂಪೆನಿಯಿಂದ iCloud+ ಸೇವೆಯನ್ನು ಘೋಷಣೆ ಮಾಡಿದೆ. iCloud+ ಎಂಬುದು ಹೊಸ Cloud ಸಂಗ್ರಹ ಸೇವೆ. ಆಪಲ್ ಹೇಳಿರುವಂತೆ ಈ ಹೊಸ ಫೀಚರ್​ಗಳಿಗೆ ಹೆಚ್ಚುವರಿ ವೆಚ್ಚವಿಲ್ಲ. ಇದರರ್ಥ ಏನೆಂದರೆ, ಐಕ್ಲೌಡ್ ಸ್ಟೋರೇಜ್ ಪ್ಲಾನ್​ಗಳು ಏನಿದ್ದವೋ ಅದೇ ಇದಕ್ಕೂ ಅನ್ವಯ ಆಗುತ್ತದೆ.

Apple iCloud+: ಆಪಲ್ ಕಂಪೆನಿಯಿಂದ ಹೊಸ ಫೀಚರ್​ಗಳ ಐಕ್ಲೌಡ್+ ಘೋಷಣೆ; ಏನಿದರ ವೈಶಿಷ್ಟ್ಯ ಎಂಬುದನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಆಪಲ್ ಕಂಪೆನಿಯಿಂದ iCloud+ ಸೇವೆಯನ್ನು ಘೋಷಣೆ ಮಾಡಿದೆ. WWDC 2021ರ ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಲಾಗಿದೆ. ಹೊಸ ಸೇವೆಗಳ ಬಗ್ಗೆ ಆಪಲ್ ಹೇಳಿರುವ ಪ್ರಕಾರ, ಎಲ್ಲವನ್ನೂ ಈ ಐಕ್ಲೌಡ್ ಒಗ್ಗೂಡಿಸುತ್ತದೆ. ಈ ಹೊಸ ಪ್ರೀಮಿಯಮ್ ಫೀಚರ್​ಗಳನ್ನು ಬಳಕೆದಾರರು ಇಷ್ಟಪಡುತ್ತಾರೆ. ಈ ಹೊಸ ಕ್ಲೌಡ್ ಸೇವೆಗಳಿಗೆ ಹೆಚ್ಚುವರಿಯಾಗಿ ಯಾವುದೇ ಶುಲ್ಕವನ್ನು ಗ್ರಾಹಕರಿಗೆ ಹಾಕುವುದಿಲ್ಲ. ಈಗಿರುವ ಕ್ಲೌಡ್ ಸೇವೆಗಿಂತ ಹೊಸದು ಹೇಗೆ ಭಿನ್ನ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಏನಿದು iCloud+?
iCloud+ ಎಂಬುದು ಹೊಸ Cloud ಸಂಗ್ರಹ ಸೇವೆ. ಇದನ್ನು ಆಪಲ್​ನ ವಾರ್ಷಿಕ ಡೆವಲಪರ್ಸ್ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ. ಉತ್ತಮ ಖಾಸಗಿತನಕ್ಕಾಗಿ ಇದು ಸಾಕಷ್ಟು ಹೊಸ ಪ್ರೀಮಿಯಂ ವೈಶಿಷ್ಟ್ಯ​ಗಳ ಜತೆಗೆ ಬರುತ್ತದೆ. ಈ ಸೇವೆಯ ಬಗ್ಗೆ ಒಟ್ಟು ಸಾರಾಂಶದಲ್ಲಿ ಹೇಳಬೇಕೆಂದರೆ, ಐಕ್ಲೌಡ್ ಸಂಗ್ರಹವು ವಿಸ್ತೃತ ಖಾಸಗಿತನದೊಂದಿಗೆ ಬರುತ್ತದೆ. ಖಾಸಗಿ ರಿಲೇ, ಹೈಡ್ ಮೈ ಇಮೇಲ್, ವಿಸ್ತರಣೆಯಾದ ಹೋಮ್​ಕಿಟ್ ಸೆಕ್ಯೂರ್ ವಿಡಿಯೋ ಸಪೋರ್ಟ್​ನಂಥ ಫೀಚರ್​ಗಳಿವೆ.

iCloud+ ಮುಖ್ಯ ವೈಶಿಷ್ಟ್ಯಗಳೇನು?
ಮೊದಲ ಮತ್ತು ಅತ್ಯಂತ ಮುಖ್ಯವಾದದ್ದು ಖಾಸಗಿ ರಿಲೇ ವೈಶಿಷ್ಟ್ಯ. ಈ ಹೊಸ ಇಂಟರ್​ನೆಟ್ ಖಾಸಗಿತನ ಸೇವೆಯು ಬಳಕೆದಾರರಿಗೆ ಸುರಕ್ಷಿತವಾಗಿ ಮತ್ತು ಖಾಸಗಿ ವಿಧಾನದಲ್ಲಿ ವೆಬ್ ಬ್ರೌಸ್​ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಈ ಫೀಚರ್​ ಅನ್ನು ಐಕ್ಲೌಡ್​ನಲ್ಲಿ ರೂಪಿಸಲಾಗಿದೆ. ಈ ಮೂಲಕ ಬಳಕೆದಾರರ ಸಾಧನದಲ್ಲಿನ ಟ್ರಾಫಿಕ್ ಸಂಪೂರ್ಣ ಎನ್​ಕ್ರಿಪ್ಟ್ ಆಗಿರುತ್ತದೆ. ಈ ಹೊಸ ಫೀಚರ್​ ಇರುವುದರಿಂದ ಆಪಲ್ ಅಥವಾ ಬಳಕೆದಾರರ ನೆಟ್​ವರ್ಕ್​ ಒದಗಿಸುವವರು ಸಹ ಯಾವ್ಯಾವ ವೆಬ್​ಸೈಟ್ ನೋಡಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಸಾಧ್ಯವಿಲ್ಲ.

ಹೈಡ್​ ಮೈ ಇಮೇಲ್ ಫೀಚರ್ ಮೂಲಕವಾಗಿ ವಿಶಿಷ್ಟ ಮತ್ತು ಆಯ್ದ ಇಮೇಲ್ ವಿಳಾಸದಿಂದ ಬಂದ ಮೇಲ್ ಅನ್ನು ಪರ್ಸನಲ್ ಇನ್​ಬಾಕ್ಸ್​ಗೆ ಫಾರ್ವರ್ಡ್ ಮಾಡುತ್ತದೆ. ಈ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಇಮೇಲ್ ವಿಳಾಸವನ್ನು ಖಾಸಗಿಯಾಗಿ ಇಟ್ಟುಕೊಳ್ಳಬಹುದು. ಒಂದು ವೇಳೆ ಭವಿಷ್ಯದಲ್ಲಿ ವಂಚಕ ಸ್ಪ್ಯಾಮ್ ಸಂದೇಶಗಳು ಬಂದಲ್ಲಿ ಸುರಕ್ಷತೆ ದೊರೆಯುತ್ತದೆ. ಬಳಕೆದಾರರು ಎಷ್ಟು ವಿಳಾಸವಾದರೂ ಸೃಷ್ಟಿಸಬಹುದು ಮತ್ತು ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದು.

ಐಕ್ಲೌಡ್+ ಹೋಮ್ ಕಿಟ್ ಸೆಕ್ಯೂರ್ ವಿಡಿಯೋಗೆ ಬೆಂಬಲ ವಿಸ್ತರಿಸಿದೆ. ಇದರಿಂದ ಬಳಕೆದಾರರು ಹೋಮ್ ಆ್ಯಪ್​ನಲ್ಲಿ ಹೆಚ್ಚು ಕ್ಯಾಮೆರಾಗಳಿಗೆ ಸಂಪರ್ಕಿಸಬಹುದು. ಸದ್ಯಕ್ಕಿರುವ ಸಂಗ್ರಹ ಸಪೋರ್ಟ್ 5 ಹೋಮ್​ ಕಿಟ್ Xಸೆಕ್ಯೂರ್ ವಿಡಿಯೋಸ್ ಮಾತ್ರ. ಅದನ್ನು ಅನಿಯಮಿತವಾಗಿ ಬದಲಿಸಲಾಗಿದೆ. ಆದರೆ ಈ ಅನಿಯಮಿತ ವಿಡಿಯೋ ಸಪೋರ್ಟ್ ದೊರೆಯುವುದು ಟಾಪ್ ಮೋಸ್ಟ್ ಪ್ಲಾನ್​ನಲ್ಲಿ ಮಾತ್ರ.

ಐಕ್ಲೌಡ್​ಗಿಂತ ಐಕ್ಲೌಡ್+ ಹೇಗೆ ಭಿನ್ನ?
ಐಕ್ಲೌಡ್ ಎಂಬುದು ಬಹುತೇಕ ಕ್ಲೌಡ್ ಸೇವೆ ಪ್ಲಾಟ್​ಫಾರ್ಮ್. ಐಕ್ಲೌಡ್+ ಎಂಬುದು ಅದಕ್ಕೂ ಒಂದು ಹೆಜ್ಜೆ ಮುಂದೆ. ಈ ಹಿಂದೆಯೇ ಹೇಳಿದಂತೆ ಇನ್ನಷ್ಟು ಸುಧಾರಿತ ಖಾಸಗಿತನ ಫೀಚರ್​ಗಳೊಂದಿಗೆ ಇದು ಬರುತ್ತದೆ. ಹೊಸ ಐಕ್ಲೌಡ್+ ಸರ್ವೀಸ್ ಎಂಬುದು ಪಾವತಿ ಮಾಡುವ ಬಳಕೆದಾರರನ್ನು ಉಚಿತ ಐಕ್ಲೌಡ್ ಬಳಕೆದಾರರಿಂದ ಬೇರ್ಪಡಿಸುತ್ತದೆ.

ಈಗಿನ ಐಕ್ಲೌಡ್ ಚಂದಾದಾರರು ಐಕ್ಲೌಡ್+ ಪಡೆಯುವುದು ಹೇಗೆ?
ಮುಖ್ಯ ಭಾಷಣದ ವೇಳೆ ತಿಳಿಸಿರುವ ಪ್ರಕಾರ, ಐಕ್ಲೌಡ್ ಬಳಕೆದಾರರು ತಾವಾಗಿಯೇ ಐಕ್ಲೌಡ್+ಗೆ ಅಪ್​ಗ್ರೇಡ್ ಆಗುತ್ತಾರೆ. ಒಂದು ವೇಳೆ ಐಕ್ಲೌಡ್ ಪಾವತಿ ಬಳಕೆದಾರರಾಗಿದ್ದಲ್ಲಿ ಐಕ್ಲೌಡ್+ ಪ್ಲಾನ್​ಗಳನ್ನು ಖರೀದಿಸುವ ಅಗತ್ಯ ಇಲ್ಲ.

ಐಕ್ಲೌಡ್+ನಲ್ಲಿ ಇರುವ ಪ್ಲಾನ್​ಗಳೇನು?
ಆಪಲ್ ಹೇಳಿರುವಂತೆ ಈ ಹೊಸ ಫೀಚರ್​ಗಳಿಗೆ ಹೆಚ್ಚುವರಿ ವೆಚ್ಚವಿಲ್ಲ. ಇದರರ್ಥ ಏನೆಂದರೆ, ಐಕ್ಲೌಡ್ ಸ್ಟೋರೇಜ್ ಪ್ಲಾನ್​ಗಳು ಏನಿದ್ದವೋ ಅದೇ ಇದಕ್ಕೂ ಅನ್ವಯ ಆಗುತ್ತದೆ. ಭಾರತದಲ್ಲಿ ತಿಂಗಳಿಗೆ 75 ರೂಪಾಯಿಯೊಂದಿಗೆ ಪ್ಲಾನ್ ಶುರುವಾಗುತ್ತದೆ. ಇದು 50GB ಸಂಗ್ರಹದೊಂದಿಗೆ ಮತ್ತು ಒಂದು ಹೋಮ್​ಕಿಟ್ ಸೆಕ್ಯೂರ್ ವಿಡಿಯೋ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ.

ರೂ. 219ರ ಪ್ಲಾನ್​ನಲ್ಲಿ 200GB ಐಕ್ಲೌಡ್ ಸಂಗ್ರಹ ಆಫರ್ ಮಾಡುತ್ತದೆ. 5 ಹೋಮ್​ಕಿಟ್ ಸೆಕ್ಯೂರ್ ವಿಡಿಯೋ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ. ಅತಿ ಹೆಚ್ಚಿನ ದರದ ಪ್ಲಾನ್ ಅಂದರೆ ಅದು ರೂ. 749. ಇದು 2TB ಸ್ಟೋರೇಜ್ ನೀಡುತ್ತದೆ. ಜತೆಗೆ ಅನಿಯಮಿತವಾಗಿ ಹೋಮ್​ಕಿಟ್ ಸೆಕ್ಯೂರ್ ಪ್ಲಾನ್ ದೊರೆಯುತ್ತದೆ,

ಐಕ್ಲೌಡ್ ಉಚಿತ ಪ್ಲಾನ್ (5GB ಒಂದು) ಇರುವವರಿಗೆ ಐಕ್ಲೌಡ್+ ದೊರೆಯುತ್ತದೆಯೇ?
ಇಲ್ಲ. ಐಕ್ಲೌಡ್+ಗೆ ಅಪ್​ಗ್ರೇಡ್ ಆಗಲು ಸಾಧ್ಯವಿರುವುದು ಐಕ್ಲೌಡ್​ನ ಪೇಯ್ಡ್​ ಚಂದಾದಾರರು ಮಾತ್ರ. ಯಾರು ಉಚಿತವಾಗಿ ಐಕ್ಲೌಡ್ ಪ್ಲಾನ್ ಹೊಂದಿದ್ದಲ್ಲಿ ಪೇಯ್ಡ್ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಗಷ್ಟೇ ಐಕ್ಲೌಡ್+ ಫೀಚರ್​ಗಳು ದೊರೆಯುತ್ತವೆ.

ಇದನ್ನೂ ಓದಿ: Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?

(Apple company launched iCloud+ service in WWDC 2021 event. Here is the plan details with features)