ಬೀಜಿಂಗ್, ಏಪ್ರಿಲ್ 19: ಚೀನಾ ಸರ್ಕಾರದ ಆದೇಶದ ಅನುಸಾರ ಆ್ಯಪಲ್ ತನ್ನ ಚೀನಾ ಆ್ಯಪ್ ಸ್ಟೋರ್ನಿಂದ (Apple storefront) ವಾಟ್ಸಾಪ್ ಮತ್ತು ಥ್ರೆಡ್ಸ್ ಆ್ಯಪ್ಗಳನ್ನು ತೆಗೆದುಹಾಕಿದೆ. ವಾಟ್ಸಾಪ್ ಮತ್ತು ಥ್ರೆಡ್ನಿಂದ ದೇಶದ ಭದ್ರತೆಗೆ ಅಪಾಯ ಆಗುತ್ತದೆ ಎಂಬ ಕಾರಣಕ್ಕೆ ಆ ಎರಡು ಆ್ಯಪ್ಗಳನ್ನು ಚೀನಾ ನಿಷೇಧಿಸಿದೆ. ಹೀಗಾಗಿ, ಆ್ಯಪಲ್ನ ಆ್ಯಪ್ ಸ್ಟೋರ್ನಿಂದ ಅದನ್ನು ತೆಗೆಯಲಾಗಿದೆ. ಇದು ಚೀನಾದಲ್ಲಿ ಮಾತ್ರ ಅನ್ವಯ ಆಗುತ್ತದೆ. ಭಾರತದಲ್ಲಿರುವ ಐಫೋನ್ ಬಳಕೆದಾರರಿಗೆ ಅವರ ಆ್ಯಪ್ ಸ್ಟೋರ್ನಲ್ಲಿ ವಾಟ್ಸಾಪ್ ಲಭ್ಯ ಇರುತ್ತದೆ.
‘ನಾವು ಕಾರ್ಯಾಚರಿಸುವ ದೇಶಗಳಲ್ಲಿನ ಕಾನೂನುಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದ್ದರೂ ಅವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗುತ್ತದೆ. ರಾಷ್ಟ್ರೀಯ ಭದ್ರತಾ ಅಪಾಯ ಇದೆ ಎಂಬ ಕಾರಣಕ್ಕೆ ಈ ಆ್ಯಪ್ಗಳನ್ನು ಸ್ಟೋರ್ನಿಂದ ತೆಗೆಯುವಂತೆ ಚೀನಾದ ಸೈಬರ್ಸ್ಪೇಸ್ ಆಡಳಿತ ಆದೇಶ ಮಾಡಿದೆ,’ ಎಂದು ಆ್ಯಪಲ್ ಹೇಳಿಕೆ ನೀಡಿರುವುದಾಗಿ ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ. ಚೀನಾದ ಸ್ಟೋರ್ಫ್ರಂಟ್ನಿಂದ ಮಾತ್ರ ವಾಟ್ಸಾಪ್ ಮತ್ತು ಥ್ರೆಡ್ ಆ್ಯಪ್ಗಳನ್ನು ತೆಗೆಯಲಾಗಿದೆ. ಬೇರೆ ಸ್ಟೋರ್ಫ್ರಂಟ್ಗಳಲ್ಲಿ ಈ ಆ್ಯಪ್ಗಳು ಲಭ್ಯ ಇರುತ್ತವೆ ಎಂದೂ ಆ್ಯಪಲ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಭಾರತದ ಮೊದಲ ಹಳ್ಳಿ ಕೌರಿಕ್, ಗುಯೇಗೆ ಮೊದಲ ಬಾರಿಗೆ ತಲುಪಿದೆ ಟೆಲಿಕಾಂ ಕನೆಕ್ಟಿವಿಟಿ
ಇತ್ತೀಚೆಗೆ ಪಾಕಿಸ್ತಾನ ಸರ್ಕಾರ ಎಕ್ಸ್ ಆ್ಯಪ್ ಅನ್ನು ಇದೇ ಭದ್ರತಾ ಅಪಾಯದ ಕಾರಣಕ್ಕೆ ನಿಷೇಧಿಸಿದೆ. ಚೀನಾದಲ್ಲೂ ಟ್ವಿಟ್ಟರ್, ಫೇಸ್ಬುಕ್ ಚಾಲನೆಯಲ್ಲಿ ಇಲ್ಲ. 2021ರಲ್ಲಿ ಭಾರತ ಟಿಕ್ ಟಾಕ್ ಸೇರಿದಂತೆ ಹಲವು ಆ್ಯಪ್ಗಳನ್ನು ನಿಷೇಧಿಸಿದೆ. ವಿವಿಧ ದೇಶಗಳಲ್ಲಿ ಈ ರೀತಿ ನಿರ್ದಿಷ್ಟ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ. ವಾಟ್ಸಾಪ್ ಮತ್ತು ಥ್ರೆಡ್ ಎರಡೂ ಕೂಡ ಮೆಟಾ ಪ್ಲಾಟ್ಫಾರ್ಮ್ಸ್ಗೆ ಸೇರಿದ ಅಪ್ಲಿಕೇಶನ್ಗಳಾಗಿವೆ. ಎಕ್ಸ್ ಆ್ಯಪ್ಗೆ ಪ್ರತಿಸ್ಪರ್ಧಿಯಾಗಿ ಥ್ರೆಡ್ ಅನ್ನು ರೂಪಿಸಲಾಗಿದೆ.
ಚೀನಾದಲ್ಲಿ ಈ ರೀತಿ ಸೋಷಿಯಲ್ ಮೀಡಿಯಾ ಮೇಲಿನಿ ನಿರ್ಬಂಧ ಬಹಳ ಕಠಿಣತರದ್ದಾಗಿದೆ. ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾದ ಯಾವುದೇ ಮಾಹಿತಿ ತನ್ನ ಕಣ್ತಪ್ಪಿ ಹರಿದಾಡದಂತೆ ಸಾಧ್ಯವಾದಷ್ಟೂ ಎಚ್ಚರ ವಹಿಸುತ್ತದೆ. ಅದರಲ್ಲೂ ರಾಜಕೀಯವಾಗಿ ಸೂಕ್ಷ್ಮವೆನಿಸುವ ಮಾಹಿತಿಯನ್ನು ಚೀನಾ ಸರ್ಕಾರ ತಪ್ಪದೇ ನಿರ್ಬಂಧಿಸುತ್ತದೆ.
ಇದನ್ನೂ ಓದಿ: ಟ್ವಿಟ್ಟರ್ ಅಥವಾ ಎಕ್ಸ್ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್
ಆ್ಯಪಲ್ ಸಂಸ್ಥೆಗೆ ಚೀನಾ ಬಹಳ ಮುಖ್ಯವಾದ ದೇಶ. ಅಮೆರಿಕ ಬಿಟ್ಟರೆ ಅದಕ್ಕೆ ದೊಡ್ಡ ಮಾರುಕಟ್ಟೆ ಎಂದರೆ ಚೀನಾವೇ. ಅದರ ಐಫೋನ್ ಮತ್ತಿತರ ಉತ್ಪನ್ನಗಳಲ್ಲಿ ಹೆಚ್ಚಿನವು ಚೀನಾದಲ್ಲೇ ನಿರ್ಮಿತವಾಗುತ್ತವೆ. ಈ ಕಾರಣಕ್ಕೆ ಚೀನಾ ಸರ್ಕಾರದ ಆದೇಶವನ್ನು ಆ್ಯಪಲ್ ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಆ್ಯಪಲ್ ಅನ್ನೇ ಚೀನಾ ನಿಷೇಧಿಸುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ