Advisory: ಡೀಪ್ಫೇಕ್ ಹಾವಳಿ; ಫೇಸ್ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಸರ್ಕಾರದಿಂದ ಅಡ್ವೈಸರಿ ಬಿಡುಗಡೆ
Deepfake concerns: ಐಟಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾಗಿರುವ ಹಾನಿಕಾರಕ ಕಂಟೆಂಟ್ಗಳನ್ನು ನಿಯಂತ್ರಿಸಲು ಸೋಷಿಯಲ್ ಮೀಡಿಯಾ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಡೀಪ್ಫೇಕ್ ಇತ್ಯಾದಿ ಹಾನಿಕಾರಕ ಕಂಟೆಂಟ್ ಬಗ್ಗೆ ಬಳಕೆದಾರರಿಗೆ ಆಗಾಗ್ಗೆ ಎಚ್ಚರಿಸುವ ಕೆಲಸವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಮಾಡಬೇಕು. ಫೇಸ್ಬುಕ್ ಸೇರಿದಂತೆ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸರ್ಕಾರ ಅಡ್ವೈಸರಿ ಬಿಡುಗಡೆ ಮಾಡಿದೆ.
ನವದೆಹಲಿ, ಡಿಸೆಂಬರ್ 27: ರಶ್ಮಿಕಾ ಮಂದಣ್ಣರ ಡೀಪ್ಫೇಕ್ ವಿಡಿಯೋ ಬೆಳಕಿಗೆ ಬಂದ ಬಳಿಕ ಅದರ ಕಾವು ಸಾಕಷ್ಟೇರಿದೆ. ಡೀಪ್ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಮಾರಕ ಎಂಬುದು ವೇದ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು ಡೀಪ್ಫೇಕ್ ವಿಡಿಯೋ ಸೇರಿದಂತೆ ಹಾನಿಕಾರಕ ಕಂಟೆಂಟ್ ಕುರಿತು ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಅಡ್ವೈಸರಿ (Govt Advisory) ಹೊರಡಿಸಿದೆ. ಅದರ ಪ್ರಕಾರ, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ತಮ್ಮ ಬಳಕೆದಾರರಿಗೆ ಅಮಾನ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತಿರಬೇಕು ಎಂದಿದೆ.
‘ಐಟಿ ನಿಯಮಗಳಿಗೆ ಬದ್ಧವಾಗಿರಲು ಎಲ್ಲಾ ಇಂಟರ್ಮೀಡಿಯರಿಗಳಿಗೆ (ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಡ್ವೈಸರಿ ನೀಡಲಾಗಿದೆ ಎಂದು ಮಾಧ್ಯಮ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಂಟರ್ಮೀಡಿಯರಿ ಕಂಪನಿಗಳ ಜೊತೆ ಚರ್ಚೆಗಳನ್ನು ನಡೆಸಿದ್ದರು. ಅವರೊಂದಿಗೆ ಸಮಾಲೋಚನೆ ನಡೆಸಿಯೇ ಈ ಅಡ್ವೈಸರಿ ನೀಡಲಾಗಿದೆ.
ಇದನ್ನೂ ಓದಿ: Wipro: ಮಾಜಿ ಸಿಎಫ್ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ
‘ಐಟಿ ನಿಯಮಗಳ ಅಡಿಯಲ್ಲಿ, ಅದರಲ್ಲೂ 3(1)(ಬಿ) ನಿಯಮದ ಅಡಿಯಲ್ಲಿ ಅನುಮತಿಸಲಾಗದ ಕಂಟೆಂಟ್ ಬಗ್ಗೆ ಟರ್ಮ್ಸ್ ಆಫ್ ಸರ್ವಿಸ್ ಮತ್ತು ಯೂಸರ್ ಅಗ್ರೀಮೆಂಟ್ಸ್ ಇತ್ಯಾದಿ ಮೂಲಕ ಬಳಕೆದಾರರಿಗೆ ಬಹಳ ನೇರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಮೊದಲ ನೊಂದಣಿ ಸಮಯದಲ್ಲಿ ಮಾತ್ರವಲ್ಲದೇ ನಿಯಮಿತವಾಗಿ ಇಂಥ ಕಂಟೆಂಟ್ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿರಬೇಕು. ಅದರಲ್ಲೂ, ಗ್ರಾಹಕರು ಪ್ರತೀ ಬಾರಿ ಲಾಗಿನ್ ಆಗುವಾಗ ಮತ್ತು ಪ್ಲಾಟ್ಫಾರ್ಮ್ನಲ್ಲಿ ಯಾವುದಾದರೂ ಮಾಹಿತಿ ಅಪ್ಲೋಡ್ ಮಾಡುವಾಗ ಈ ರಿಮೈಂಡರ್ಗಳನ್ನು ಸಂವಹನ ಮಾಡುತ್ತಿರಬೇಕು,’ ಎಂದು ಅಡ್ವೈಸರಿಯಲ್ಲಿ ತಿಳಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹಾನಿ ಮಾಡುವಂತಹ 11 ಕಂಟೆಂಟ್ಗಳನ್ನು ಲಿಸ್ಟ್ ಮಾಡಲಾಗಿದೆ. ಇಂಥ ಕಂಟೆಂಟ್ ಅನ್ನು ಬಳಕೆದಾರರು ಬಳಕೆ ಮಾಡುವುದನ್ನು ತಡೆಯಲು ಸೋಷಿಯಲ್ ಮೀಡಿಯಾ ಸಂಸ್ಥೆಗಳು ಪ್ರಾಮಾನಿಕ ಪ್ರಯತ್ನ ಮಾಡಬೇಕು ಎಂಬುದು ಸರ್ಕಾರದ ಒತ್ತಾಯವಾಗಿದೆ.
ಇದನ್ನೂ ಓದಿ: ತಮಿಳುನಾಡು: ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ, ಹಲವು ಮಂದಿ ಅಸ್ವಸ್ಥ
ಇಂಥ ಹಾನಿಕಾರಕ ಕಂಟೆಂಟ್ಗಳಲ್ಲಿ ಡೀಪ್ಫೇಕ್ ಕಂಟೆಂಟ್ ಕೂಡ ಒಂದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಉಪಯೋಗಿಸಿ, ಬಹಳ ನಿಖರವಾಗಿ ವ್ಯಕ್ತಿಯ ಚಹರೆ, ಧ್ವನಿ ಬದಲಾಯಿಸಲಾಗುವ ಕಂಟೆಂಟ್ಗೆ ಡೀಪ್ಫೇಕ್ ಎನ್ನಲಾಗುತ್ತದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ರೊಬ್ಬರ ಅರೆಬೆತ್ತಲೆ ವಿಡಿಯೋವೊಂದನ್ನು ಬಳಸಿ, ಆ ಮಹಿಳೆಯ ಮುಖಕ್ಕೆ ರಶ್ಮಿಕಾ ಮಂದಣ್ಣರ ಮೊಗವನ್ನು ಸೇರಿಸಲಾಗಿತ್ತು. ಮೇಲ್ನೋಟಕ್ಕೆ ಯಾರಿಗೂ ಕೂಡ ಇದು ನಕಲಿ ವಿಡಿಯೋ ಎಂದು ಅರಿವಿಗೆ ಬಾರದಷ್ಟು ನಿಖರವಾಗಿರುತ್ತದೆ ಈ ಡೀಪ್ಫೇಕ್ ವಿಡಿಯೋ.
ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನೇ ಡೀಪ್ಫೇಕ್ ಮಾಡಲಾಗಿತ್ತು. ಬಿಸಿನೆಸ್ಮ್ಯಾನ್ಗಳ ವಿಡಿಯೋ ತಿರುಚಲಾಗಿತ್ತು. ಇಂಥ ಹಲವು ಡೀಪ್ಫೇಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗಿವೆ. ಸರ್ಕಾರ ಕೂಡ ಇಂತಹ ಡೀಪ್ಫೇಕ್ ಸೃಷ್ಟಿಕರ್ತರನ್ನು ಅಪರಾಧಿಯಾಗಿ ಪರಿಗಣಿಸಲಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಈಗ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೂ ಅಡ್ವೈಸರಿ ಬಿಡುಗಡೆ ಮಾಡಿದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Wed, 27 December 23