Covid Vaccine Fake Apps: ಕೋವಿಡ್- 19 ಲಸಿಕೆ ನೋಂದಣಿ ಹೆಸರಲ್ಲಿ ಮಾಹಿತಿಗೆ ಕನ್ನ ಹಾಕುವ ಈ ಆ್ಯಪ್​ಗಳ ಬಗ್ಗೆ ಹುಷಾರಾಗಿರಿ

| Updated By: Digi Tech Desk

Updated on: May 15, 2021 | 2:33 PM

Covid Vaccination: ಕೋವಿಡ್- 19 ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಕಲಿ ಆ್ಯಪ್​ಗಳ ಹಾವಳಿ ಹೆಚ್ಚಾಗಿದೆ. ಸಂದೇಶದ ಮೂಲಕ ಬರುವ ಆ್ಯಪ್ ಡೌನ್​ಲೋಡ್ ಮಾಡಿಕೊಂಡಲ್ಲಿ ವೈಯಕ್ತಿಕ ಮಾಹಿತಿಯೇ ಕಳುವಾಗುತ್ತದೆ.

Covid Vaccine Fake Apps: ಕೋವಿಡ್- 19 ಲಸಿಕೆ ನೋಂದಣಿ ಹೆಸರಲ್ಲಿ ಮಾಹಿತಿಗೆ ಕನ್ನ ಹಾಕುವ ಈ ಆ್ಯಪ್​ಗಳ ಬಗ್ಗೆ ಹುಷಾರಾಗಿರಿ
ಸಾಂದರ್ಭಿಕ ಚಿತ್ರ
Follow us on

ಕೋವಿಡ್- 19 ಲಸಿಕೆ ನೋಂದಣಿ ಆ್ಯಪ್​ಗಳ ಹೆಸರಲ್ಲಿ ನಕಲಿಗಳು ಅವೆಷ್ಟೋ ಸೃಷ್ಟಿಯಾಗಿವೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಎಚ್ಚರಿಕೆಯನ್ನು ನೀಡಿದೆ. ಲಸಿಕೆಗಳನ್ನು ಪಡೆಯುವುದಕ್ಕೆ ಬಹಳ ಮಂದಿ ಬುಕ್ಕಿಂಗ್ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ, ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನಕಲಿ ಅಪ್ಲಿಕೇಷನ್​ಗಳ ಮೂಲಕ ಹ್ಯಾಕರ್​ಗಳು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ. ಈ ಆ್ಯಪ್ ಮೂಲಕ ಕೋವಿಡ್-19 ಲಸಿಕೆಗೆ ನೋಂದಣಿ ಮಾಡಿಕೊಳ್ಳಬಹುದು ಎಂಬ ನಕಲಿ ಸಂದೇಶ ಎಸ್ಸೆಮ್ಮೆಸ್ ಮೂಲಕವಾಗಿ ಹರಿಬಿಟ್ಟಿದ್ದಾರೆ. CERT-In ಹೇಳಿರುವ ಪ್ರಕಾರ, ಸಂದೇಶದಲ್ಲಿ ಲಿಂಕ್ ಇದೆ. ಅದು ದುರುದ್ದೇಶಪೂರಿತ ಆ್ಯಪ್​ ಅನ್ನು ಆಂಡ್ರಾಯಿಡ್ ಸಾಧನದಲ್ಲಿ ಇನ್​ಸ್ಟಾಲ್ ಮಾಡುತ್ತದೆ. ಈ ಆ್ಯಪ್​ ಅನಗತ್ಯವಾದ ಅನುಮತಿಯನ್ನು ಪಡೆದುಕೊಳ್ಳುತ್ತದೆ. ಆ ನಂತರ ಹ್ಯಾಕರ್​ಗಳು ಕಾಂಟ್ಯಾಕ್ಟ್ ಲಿಸ್ಟ್ ಸೇರಿದಂತೆ ಬಳಕೆದಾರರ ಇತರ ಡೇಟಾಗಳನ್ನು ಪಡೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

CERT-In ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಪ್ರತಿ ಎಸ್ಸೆಮ್ಮೆಸ್ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ಅದೇ ದುರುದ್ದೇಶಪೂರಿತ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳುವುದಕ್ಕೇ ಕೇಳಿಕೊಳ್ಳುತ್ತದೆ. ಕೋವಿಡ್-19 ಲಸಿಕೆ ನೋಂದಣಿಯ ಒಟ್ಟು 5 ನಕಲಿ ಆ್ಯಪ್​ಗಳಿವೆ. ಅದರಲ್ಲಿ Covid-19.apk, Vaci__Regis.apk, MyVaccin_v2.apk, Cov-Regis.apk, ಮತ್ತು Vccin-Apply.apk ಒಳಗೊಂಡಿದೆ. ಈ ನಕಲಿ ಆ್ಯಪ್​ಗಳ ಪೈಕಿ ಯಾವುದನ್ನೂ ಡೌನ್​ಲೋಡ್ ಮಾಡದಂತೆ ಬಳಕೆದಾರರಿಗೆ ಸಲಹೆ ನೀಡಲಾಗಿದೆ. ಇದರಿಂದ ನಿಮ್ಮ ಪಾಸ್​ವರ್ಡ್​ಗಳು, ಇತರ ವೈಯಕ್ತಿಕ ಮಾಹಿತಿಗಳು ಕಳುವಾಗಬಹುದು ಎಂದು ಎಚ್ಚರಿಸಲಾಗಿದೆ.

ಕೋವಿಡ್​- 19 ಲಸಿಕೆಗೆ ನೋಂದಣಿ ಮಾಡಿಸುವುದು ಹೇಗೆ?
ಕೋವಿಡ್-19 ಲಸಿಕೆ ಹಾಕಿಸುವುದಕ್ಕೆ ಎರಡೇ ಪ್ಲಾಟ್​ಫಾರ್ಮ್​ಗಳು ಇರೋದು. ಒಂದೋ ಸರ್ಕಾರ CoWIN ಪೋರ್ಟಲ್​ಗೆ ಭೇಟಿ ನೀಡಬೇಕು ಅಥವಾ ಆರೊಗ್ಯಸೇತು ಆ್ಯಪ್​ ಅನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್​ಲೋಡ್ ಮಾಡಬೇಕು. ಜನರು ಮೊದಲಿಗೆ ನೋಂದಣಿ ಮಾಡಿಸಬೇಕು ಹಾಗೂ ಆ ನಂತರ ಅದೇ ಪ್ಲಾಟ್​ಫಾರ್ಮ್​ನಲ್ಲಿ ಕೋವಿಡ್​- 19 ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅಪಾಯಿಂಟ್​ಮೆಂಟ್ ಬುಕ್ ಮಾಡಲು ಆಯ್ಕೆ ದೊರೆಯುತ್ತದೆ.

ನೋಂದಣಿ ಪ್ರಕ್ರಿಯೆ ಸಂಪೂರ್ಣಗೊಂಡ ಮೇಲೆ ಒಂದು ವೇಳೆ ನಿಮಗೆ ಕೋವಿಡ್- 19 ಲಸಿಕೆಗೆ ಸ್ಲಾಟ್ ಸಿಗದಿದ್ದಲ್ಲಿ ಆ ನಂತರ ನಿಮಗೆ ಸುಲಭವಾಗಿ ಅಲರ್ಟ್ ಸಿಗುತ್ತದೆ. Under45.in, GetJab.in, ಮತ್ತು FindSlot.in ಇಂಥ ವೆಬ್​ಸೈಟ್​ಗಳು ಲಸಿಕೆ ಸ್ಲಾಟ್​ಗಳು ಸಿಗುತ್ತಿವೆಯೇ ಎಂಬ ಬಗ್ಗೆ ಟ್ರ್ಯಾಕ್ ಮಾಡುತ್ತಿರುತ್ತವೆ. ಆರೋಗ್ಯ ಸೇತು ಆ್ಯಪ್​ನಲ್ಲಿ ಕೋವಿಡ್​-19ಗೆ ಸಂಬಂಧಿಸಿದ ಎಲ್ಲ ತಾಜಾ ಮಾಹಿತಿಗಳು ದೊರೆಯುತ್ತವೆ.

ಇದನ್ನೂ ಓದಿ: ಲಸಿಕೆ ಕೊರತೆ ಎದುರಾಗಿದೆ ಏಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಎಡವಿದ್ದೆಲ್ಲಿ? ಲಸಿಕೆ ಕೊರತೆಯ ಸಮಸ್ಯೆಗೆ ಪರಿಹಾರ ಏನು?

(These are the covid- 19 vaccine registration fake portals. You should beware of them and protect your personal data)

Published On - 2:29 pm, Sat, 15 May 21