ಲಸಿಕೆ ಕೊರತೆ ಎದುರಾಗಿದೆ ಏಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಎಡವಿದ್ದೆಲ್ಲಿ? ಲಸಿಕೆ ಕೊರತೆಯ ಸಮಸ್ಯೆಗೆ ಪರಿಹಾರ ಏನು?

ಭಾರತ, ಕರ್ನಾಟಕದಲ್ಲಿ ಏಕೆ ಲಸಿಕೆಯ ಕೊರತೆ ಎದುರಾಯಿತು? ಕೇಂದ್ರ ಸರ್ಕಾರ ಲಸಿಕೆಯ ಹಂಚಿಕೆಯ ವಿಷಯದಲ್ಲಿ ಎಡವಿದ್ದು ಎಲ್ಲಿ? ಭಾರತದಲ್ಲಿ ಲಸಿಕೆಯ ಕೊರತೆಯ ಸಮಸ್ಯೆಗೆ ಪರಿಹಾರ ಏನು? ಹೀಗೆ ಹತ್ತಾರು ಪ್ರಶ್ನೆಗಳು ಈಗ ಜನರ ನಡುವೆ ಚರ್ಚೆಯಾಗುತ್ತಿವೆ.

ಲಸಿಕೆ ಕೊರತೆ ಎದುರಾಗಿದೆ ಏಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಎಡವಿದ್ದೆಲ್ಲಿ? ಲಸಿಕೆ ಕೊರತೆಯ ಸಮಸ್ಯೆಗೆ ಪರಿಹಾರ ಏನು?
ಲಸಿಕೆ ಕೊರತೆ ಎದುರಾಗಿದೆ ಏಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಎಡವಿದ್ದೆಲ್ಲಿ? ಲಸಿಕೆ ಕೊರತೆಯ ಸಮಸ್ಯೆಗೆ ಪರಿಹಾರ ಏನು?
Follow us
ಸಾಧು ಶ್ರೀನಾಥ್​
| Updated By: ಡಾ. ಭಾಸ್ಕರ ಹೆಗಡೆ

Updated on:May 11, 2021 | 8:14 PM

ಭಾರತದಲ್ಲಿ ಈಗ ಕೊರೊನಾ ಲಸಿಕೆಗೆ ಬಾರಿ ಕೊರತೆ ಎದುರಾಗಿದೆ. ಮೇ, 1 ರಿಂದ ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಲು ಅವಕಾಶ ನೀಡಿದೆ. ಕೋವಿನ್ ಪೋರ್ಟಲ್ ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅಪಾಯಿಂಟ್ ಮೆಂಟ್ ಸಿಗುತ್ತಿಲ್ಲ. ಅಪಾಯಿಂಟ್ ಮೆಂಟ್ ಪಡೆದವರು, ಲಸಿಕಾ ಕೇಂದ್ರಕ್ಕೂ ಹೋದರೇ, ಅಲ್ಲೂ ಲಸಿಕೆ ಸ್ಟಾಕ್ ಇಲ್ಲ ಎನ್ನುವ ಉತ್ತರ ಸಿಗುತ್ತಿದೆ. ಬೆಂಗಳೂರು, ಮುಂಬೈ, ದೆಹಲಿಯಂಥ ನಗರಗಳಿಂದ ಜನರು ಸುತ್ತಮುತ್ತಲ ಗ್ರಾಮೀಣ ಭಾಗದ ಲಸಿಕಾ ಕೇಂದ್ರಗಳಿಗೆ ಹೋಗಿ ಕೊರೊನಾ ಲಸಿಕೆ ಪಡೆಯಲು ಈಗ ಮುಗಿಬೀಳುತ್ತಿದ್ದಾರೆ. ಭಾರತ, ಕರ್ನಾಟಕದಲ್ಲಿ ಏಕೆ ಲಸಿಕೆಯ ಕೊರತೆ ಎದುರಾಯಿತು? ಕೇಂದ್ರ ಸರ್ಕಾರ ಲಸಿಕೆಯ ಹಂಚಿಕೆಯ ವಿಷಯದಲ್ಲಿ ಎಡವಿದ್ದು ಎಲ್ಲಿ? ಭಾರತದಲ್ಲಿ ಲಸಿಕೆಯ ಕೊರತೆಯ ಸಮಸ್ಯೆಗೆ ಪರಿಹಾರ ಏನು? ಹೀಗೆ ಹತ್ತಾರು ಪ್ರಶ್ನೆಗಳು ಈಗ ಜನರ ನಡುವೆ ಚರ್ಚೆಯಾಗುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಟಿವಿ9 ಪ್ರತಿನಿಧಿ ಚಂದ್ರಮೋಹನ್ ಮಾಡಿದ್ದಾರೆ. ಕೊರೊನಾ ಲಸಿಕೆಯ ಬಗೆಗಿನ ಪ್ರಶ್ನೆ ಮತ್ತು ಉತ್ತರಗಳ ವಿವರ ಇಲ್ಲಿದೆ.

ಪ್ರಶ್ನೆ-1- ಭಾರತದಲ್ಲಿ ಈಗ ಕೊರೊನಾ ಲಸಿಕೆಗೆ ಕೊರತೆ ಎದುರಾಗಿದೆಯೇ?

ಭಾರತದಲ್ಲಿ ಈಗ ಕೊರೊನಾ ವೈರಸ್ ವಿರುದ್ಧದ ಲಸಿಕೆಗೆ ಭಾರಿ ಕೊರತೆ ಎದುರಾಗಿದೆ. ಎಸ್‌ಐಐ, ಭಾರತ್ ಬಯೋಟೆಕ್ ತಿಂಗಳಿಗೆ 8 ಕೋಟಿ ಡೋಸ್ ಲಸಿಕೆ ಉತ್ಪಾದಿಸುತ್ತಿವೆ. ಆದರೇ, ದೇಶದಲ್ಲಿ 18-44 ವರ್ಷ ವಯೋಮಾನದವರು 60 ಕೋಟಿ ಇದ್ದಾರೆ. ಈ ವಯೋಮಾನದವರಿಗೆ 2 ಡೋಸ್ ಲಸಿಕೆ ನೀಡಲು 120 ಕೋಟಿ ಡೋಸ್ ಬೇಕು. ಆದರೇ, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ 30 ರಾಜ್ಯಗಳ ಲಸಿಕೆಯ ಬೇಡಿಕೆಯನ್ನು 2 ಕಂಪನಿಗಳಿಗೆ ಪೂರೈಸಲಾಗುತ್ತಿಲ್ಲ. ಹೀಗಾಗಿ ವಿದೇಶಗಳಿಂದ ಲಸಿಕೆ ಅಮದಿಗೆ ಮುಂದಾಗಿರುವ ಯುಪಿ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಈಗಾಗಲೇ ಲಸಿಕೆ ಪೂರೈಕೆಗೆ ಯುಪಿ ಸರ್ಕಾರ ಜಾಗತಿಕ ಟೆಂಡರ್ ಕರೆದಿದೆ. ಈಗ ಮಹಾರಾಷ್ಟ್ರ ಸರ್ಕಾರದಿಂದಲೂ ಲಸಿಕೆ ಪೂರೈಕೆಗೆ ಜಾಗತಿಕ ಟೆಂಡರ್ ಕರೆಯಲು ತೀರ್ಮಾನವಾಗಿದೆ.

ಪ್ರಶ್ನೆ-2- ಕೊರೊನಾ 3ನೇ ಅಲೆ ಅಪ್ಪಳಿಸುವ ಮೊದಲೇ ಜನರಿಗೆ ಲಸಿಕೆ ಸಿಗುವುದಿಲ್ಲವೇ?

ದೇಶದಲ್ಲಿ ಸೆಪ್ಟೆಂಬರ್-ಆಕ್ಟೋಬರ್ ವೇಳೆಗೆ ಕೊರೊನಾ ಮೂರನೇ ಅಲೆ ಅಪ್ಪಳಿಸುವ ಭೀತಿ ಇದೆ. ಜುಲೈ ತಿಂಗಳ ವೇಳೆಗೆ ಎಸ್ಐಐ, ಭಾರತ್ ಬಯೋಟೆಕ್ ತಮ್ಮ ಲಸಿಕೆ ಉತ್ಪಾದನೆ ಹೆಚ್ಚಿಸಲಿವೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಎರಡು ಕಂಪನಿಗಳು ಪ್ರತಿ ತಿಂಗಳು 13 ಕೋಟಿ ಡೋಸ್ ಲಸಿಕೆ ಉತ್ಪಾದಿಸಲಿವೆ. ಪ್ರಸ್ತುತ ಎರಡು ಕಂಪನಿಗಳಿಂದ ಪ್ರತಿ ತಿಂಗಳು 8 ಕೋಟಿ ಡೋಸ್ ಲಸಿಕೆ ಮಾತ್ರ ಉತ್ಪಾದನೆ ಆಗ್ತಿದೆ. ಪ್ರತಿ ತಿಂಗಳ ಉತ್ಪಾದನೆಯನ್ನು 8 ಕೋಟಿ ಡೋಸ್ ನಿಂದ 13 ಕೋಟಿ ಡೋಸ್ ಗೆ ಹೆಚ್ಚಳ ಸಾಧ್ಯತೆಯಿದೆ. ಲಸಿಕೆ ಉತ್ಪಾದನೆ ಹೆಚ್ಚಾದರೂ, ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಕಷ್ಟ.

ಎಸ್‌ಐಐ, ತನಗೆ ಲೈಸೆನ್ಸ್ ನೀಡಿದ ಅಸ್ಟ್ರಾಜನಿಕ್ ಕಂಪನಿಗೆ ಭಾರತದಲ್ಲಿ ಲಸಿಕೆ ಉತ್ಪಾದಿಸಿ ಪೂರೈಸಬೇಕು. ಎಸ್‌ಐಐ, ಅಸ್ಟ್ರಾಜನಿಕ್ ಕಂಪನಿಗೆ ಈಗಾಗಲೇ 40 ಕೋಟಿ ಡೋಸ್ ಲಸಿಕೆ ಪೂರೈಸಿದೆ. ಈಗ ಮತ್ತೆ 50 ಲಕ್ಷ ಡೋಸ್ ಅನ್ನು ಇಂಗ್ಲೆಂಡ್ ಗೆ ರಫ್ತು ಮಾಡಲು ಕೇಂದ್ರ ಸರ್ಕಾರದ ಅನುಮತಿ ಕೇಳಿತ್ತು. ಆದರೆ, ಕೇಂದ್ರ ಸರ್ಕಾರ 50 ಲಕ್ಷ ಡೋಸ್ ಲಸಿಕೆಯ ರಫ್ತಿಗೆ ಅನುಮತಿ ನೀಡಿಲ್ಲ. ಈ ಲಸಿಕೆ ಖರೀದಿಗೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬಡರಾಷ್ಟ್ರಗಳಿಗೆ ಲಸಿಕೆ ನೀಡುವ ಗವಿ ಮೈತ್ರಿಕೂಟಕ್ಕೂ ಎಸ್‌ಐಐ ಲಸಿಕೆ ನೀಡಬೇಕು. ಭಾರತ್ ಬಯೋಟೆಕ್ ಕಂಪನಿ ಜೂನ್ ತಿಂಗಳಿನಿಂದ ಕೋಲಾರದ ಮಾಲೂರಿನಲ್ಲಿ ಲಸಿಕೆ ಉತ್ಪಾದಿಸಲಿದೆ. ಮಾಲೂರಿನಲ್ಲಿ ತಿಂಗಳಿಗೆ 1 ಕೋಟಿ ಡೋಸ್ ಲಸಿಕೆ ಉತ್ಪಾದನೆ ನಿರೀಕ್ಷೆಯಿದೆ. ಭಾರತ್ ಬಯೋಟೆಕ್ ಗುಜರಾತ್ ನಲ್ಲೂ ಒಂದು ಉತ್ಪಾದನಾ ಘಟಕ ಹೊಂದಿದೆ.

ಭಾರತದ ಕನಿಷ್ಠ 100 ಕೋಟಿ ಜನರಿಗೆ ಲಸಿಕೆಗೆ 2 ಡೋಸ್ ನಂತೆ 200 ಕೋಟಿ ಡೋಸ್ ಲಸಿಕೆ ಬೇಕು. 200 ಕೋಟಿ ಡೋಸ್ ಲಸಿಕೆಯನ್ನು ಎಸ್ಐಐ, ಭಾರತ್ ಬಯೋಟೆಕ್ ಎರಡೇ ಕಂಪನಿ ಉತ್ಪಾದಿಸಿ ನೀಡಿವುದು ಕಷ್ಟ. ಈ ವರ್ಷದೊಳಗೆ 200 ಕೋಟಿ ಡೋಸ್ ಲಸಿಕೆ ಪೂರೈಕೆಯು ಈ ಎರಡು ಕಂಪನಿಗಳಿಂದ ಕಷ್ಟ ಸಾಧ್ಯ. ಭಾರತ ಜನವರಿಯಿಂದ ಇಲ್ಲಿಯವರೆಗೂ 17 ಕೋಟಿ ಜನರಿಗೆ ಲಸಿಕೆ ನೀಡಿದೆ. ಭಾರತವು 3 ಕೋಟಿ ಜನರಿಗೆ ಮಾತ್ರ 2 ಡೋಸ್ ಲಸಿಕೆ ನೀಡಿದೆ. ಇದು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.3ಕ್ಕಿಂತ ಕಡಿಮೆ ಆಗಿದೆ. ಪ್ರತಿ ತಿಂಗಳು 20-25 ಕೋಟಿ ಡೋಸ್ ಲಸಿಕೆ ಪೂರೈಕೆಯಾದರೇ, ಈ ವರ್ಷದ ಅಂತ್ಯದೊಳಗೆ ಲಸಿಕೆ ನೀಡಿಕೆ ಸಾಧ್ಯವಾಗಲಿದೆ.

ಪ್ರಶ್ನೆ-3- ಲಸಿಕೆ ಉತ್ಪಾದನೆ, ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಎಡವಟ್ಟು ಏನು?

ಕೊರೊನಾ ಲಸಿಕೆ ಪೂರೈಕೆಗೆ ಕಳೆದ ವರ್ಷವೇ ಖರೀದಿ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಕಳೆದ ವರ್ಷ ಲಸಿಕಾ ಕಂಪನಿಗಳೊಂದಿಗೆ ಖರೀದಿ ಒಪ್ಪಂದವನ್ನೇ ಮಾಡಿಕೊಳ್ಳಲಿಲ್ಲ. ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಮೇಲೆ ಮಾತ್ರ ಸರ್ಕಾರದ ಅವಲಂಬನೆಯಾಗಿದೆ. ಈ ಎರಡು ಕಂಪನಿಗಳ ಜೊತೆಗೆ ಈ ವರ್ಷದ ಜನವರಿಯಲ್ಲಿ ವಿದೇಶಿ ಲಸಿಕಾ ಕಂಪನಿಗಳ ಜೊತೆಯೂ ಲಸಿಕೆ ಖರೀದಿ ಒಪ್ಪಂದ ಮಾಡಿಕೊಂಡಿದ್ದರೆ, ಲಸಿಕೆಯ ಕೊರತೆ ಬೀಳುತ್ತಿರಲಿಲ್ಲ. ಆಮೆರಿಕಾದಲ್ಲಿ 33 ಕೋಟಿ ಜನಸಂಖ್ಯೆ ಇದೆ. ಆದರೆ, 40 ಕೋಟಿ ಡೋಸ್ ಲಸಿಕೆ ಖರೀದಿಗೆ ಒಪ್ಪಂದವಾಗಿದೆ. ಇದರಿಂದಾಗಿ ಈಗ ಆಮೆರಿಕಾದ ಬಳಿ ತನ್ನ ಅಗತ್ಯಕ್ಕಿಂತ ಹೆಚ್ಚಿನ ಡೋಸ್ ಲಸಿಕೆ ಲಭ್ಯವಿದೆ.

ಪ್ರಶ್ನೆ-4- ಸದ್ಯಕ್ಕೆ ಭಾರತದಲ್ಲಿ ಎಲ್ಲೆಲ್ಲಿ ಕೊರೊನಾ ಲಸಿಕೆ ಉತ್ಪಾದನೆಯಾಗುತ್ತಿದೆ?

ಭಾರತದಲ್ಲಿ ಈಗ 2 ಕಂಪನಿಗಳು ಮಾತ್ರ ಕೊರೊನಾ ವೈರಸ್ ವಿರುದ್ಧದ ಲಸಿಕೆ ಉತ್ಪಾದಿಸಿ ಪೂರೈಸುತ್ತಿವೆ. ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿ ಪುಣೆಯಲ್ಲೇ ಲಸಿಕೆ ಉತ್ಪಾದಿಸುತ್ತಿದೆ. ಈಗ ಉತ್ಪಾದನೆಯಾಗುತ್ತಿರುವ ಘಟಕದ ಜೊತೆಗೆ ಇನ್ನೊಂದು ಹೊಸ ಘಟಕದಲ್ಲಿ ಸದ್ಯದಲ್ಲೇ ಉತ್ಪಾದನೆ ಆರಂಭವಾಗಲಿದೆ. ಜೂನ್ ತಿಂಗಳ ಬಳಿಕ ಸೆರಮ್ ಇನ್ಸ್ ಟಿಟ್ಯೂಟ್ ನಿಂದಲೂ ಲಸಿಕೆ ಉತ್ಪಾದನೆ ದ್ವಿಗುಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಇನ್ನು ಭಾರತ್ ಬಯೋಟೆಕ್ ಕಂಪನಿ ಹೈದರಾಬಾದ್ ನಲ್ಲಿ ಉತ್ಪಾದನಾ ಘಟಕ ಹೊಂದಿದೆ. ಸದ್ಯ ಹೈದರಾಬಾದ್ ಘಟಕದಲ್ಲಿ ತಿಂಗಳಿಗೆ 1 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯಾಗುತ್ತಿದೆ. ಜೂನ್ ತಿಂಗಳಿನಿಂದ ಕರ್ನಾಟಕದ ಕೋಲಾರದ ಮಾಲೂರಿನಲ್ಲಿ ಲಸಿಕೆ ಉತ್ಪಾದನೆ ನಡೆಯಲಿದ್ದು, ಮಾಲೂರು ಘಟಕದಲ್ಲೂ ತಿಂಗಳಿಗೆ 1 ಕೋಟಿ ಡೋಸ್ ಲಸಿಕೆ ಉತ್ಪಾದನೆ ನಿರೀಕ್ಷೆಯಿದೆ.

ಎಸ್‌ಐಐ, ಭಾರತ್ ಬಯೋಟೆಕ್ ಕಂಪನಿಗಳೆಡರಿಂದ ಜುಲೈ ಅಂತ್ಯದ ವೇಳೆಗೆ ತಿಂಗಳಿಗೆ 13 ಕೋಟಿ ಡೋಸ್ ಲಸಿಕೆ ಉತ್ಪಾದನೆಗೆ ಪ್ಲ್ಯಾನ್ ಮಾಡಲಾಗಿದೆ. ಭಾರತ್ ಬಯೋಟೆಕ್ ಕಂಪನಿಯೇ ಜುಲೈ ತಿಂಗಳ ಅಂತ್ಯದ ವೇಳೆಗೆ 6 ರಿಂದ 7 ಕೋಟಿ ಡೋಸ್ ಲಸಿಕೆ ಉತ್ಪಾದಿಸಲಿದೆ. ಇನ್ನು ರಷ್ಯಾದಿಂದ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಅಮದು ಆಗಿದೆ. ಸ್ಪುಟ್ನಿಕ್ ಲಸಿಕೆಯನ್ನು ಹೈದರಾಬಾದ್‌ನ ರೆಡ್ಡೀಸ್ ಲ್ಯಾಬೋರೇಟರಿ ಉತ್ಪಾದಿಸಿ, ಮಾರಾಟ ಮಾಡಲಿದೆ. ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದಿಸಿ ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡುವ ಪ್ಲ್ಯಾನ್ ಇದೆ. ಜೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಜೆನೋವಾ ಕಂಪನಿಗಳು ಲಸಿಕೆಯ ವೈದ್ಯಕೀಯ ಪ್ರಯೋಗ ನಡೆಸ್ತಿವೆ. ಈ ತಿಂಗಳಲ್ಲೇ ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ನಿಂದ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರುವ ನಿರೀಕ್ಷೆಯಿದೆ. ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಗೆ ತಿಂಗಳಿಗೆ 1 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇದೆ.

ಪ್ರಶ್ನೆ-5- ದೇಶದಲ್ಲಿ ಲಭ್ಯವಿರುವ ಕೊರೊನಾ ಲಸಿಕೆ ಎಷ್ಟು? ಎಷ್ಟು ಲಸಿಕೆ ಉತ್ಪಾದನೆಯಾಗಿದೆ? ಎಷ್ಟು ಪೂರೈಕೆಯಾಗಿದೆ?

ಸೆರಮ್ ಇನ್ಸ್ ಟಿಟ್ಯೂಟ್ ನಿಂದ 26 ಕೋಟಿ ಡೋಸ್ ಲಸಿಕೆ ಖರೀದಿಗೆ ಕೇಂದ್ರದ ಒಪ್ಪಂದವಾಗಿದೆ. ಇದರ ಪೈಕಿ ಈಗಾಗಲೇ 15 ಕೋಟಿ ಡೋಸ್ ಲಸಿಕೆ ಪೂರೈಸಿರುವ ಸೆರಮ್ ಇನ್ಸ್ ಟಿಟ್ಯೂಟ್ ಮೇ-ಜೂನ್,ಜುಲೈ ತಿಂಗಳಲ್ಲಿ ಬಾಕಿ ಇರುವ 11 ಕೋಟಿ ಡೋಸ್ ಲಸಿಕೆ ಕೇಂದ್ರ ಸರ್ಕಾರಕ್ಕೆ ಪೂರೈಕೆಯಾಗಲಿದೆ. ಭಾರತ್ ಬಯೋಟೆಕ್ ಕಂಪನಿಗೆ ಮೇ, ಜೂನ್, ಜುಲೈ ತಿಂಗಳಲ್ಲಿ 5 ಕೋಟಿ ಡೋಸ್ ಪೂರೈಕೆಗೆ ಆರ್ಡರ್ ಇದೆ. ಈ ಎರಡು ಕಂಪನಿಗಳು ಇದುವರೆಗೂ ಸುಮಾರು 18 ಕೋಟಿ ಡೋಸ್ ಲಸಿಕೆಯನ್ನು ಪೂರೈಸಿವೆ. ಈ 18 ಕೋಟಿ ಡೋಸ್ ಲಸಿಕೆ ಪೈಕಿ 17 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಈಗ ರಾಜ್ಯ ಸರ್ಕಾರಗಳ ಬಳಿ ಕೇಂದ್ರ ಸರ್ಕಾರ ನೀಡಿರುವ 1 ಕೋಟಿ ಡೋಸ್ ಲಸಿಕೆ ಮಾತ್ರ ಇದೆ.

ಪ್ರಶ್ನೆ-6- ತುರ್ತಾಗಿ ಜನರಿಗೆ ಲಸಿಕೆ ನೀಡದೇ ಹೋದರೇ, ಆಗುವ ದುಷ್ಪರಿಣಾಮ ಏನು?

ಜನರಿಗೆ ತುರ್ತಾಗಿ ಲಸಿಕೆ ನೀಡದೇ ಹೋದರೇ, ಕೊರೊನಾದಿಂದ ಸಂಭವಿಸುವ ಸಾವು ಹೆಚ್ಚಳದ ಭೀತಿಯಿದೆ. ಆಗಸ್ಟ್ ವೇಳೆಗೆ ಭಾರತದಲ್ಲಿ 10 ಲಕ್ಷ ಜನರು ಕೊರೊನಾದಿಂದ ಸಾವಿಗೀಡಾಗುವ ಸಾಧ್ಯತೆಯಿದೆ ಎಂದಿರುವ ಲ್ಯಾನ್ಸೆಟ್ ಜರ್ನಲ್ ಮೊದಲ ಡೋಸ್ ಲಸಿಕೆ ನೀಡಿ, 2ನೇ ಡೋಸ್ ನೀಡದೇ ಹೋದರೇ, ಲಸಿಕೆಯಿಂದ ಪೂರ್ಣ ರಕ್ಷಣೆ ಸಿಗಲ್ಲ. ಭಾರತದ ಬಿ.1.617 ರೂಪಾಂತರಿ ವೈರಸ್ ಲಸಿಕೆಯಿಂದಲೂ ಎಸ್ಕೇಪ್ ಆಗ್ತಿದೆ ಅನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ(WHO). ಹೀಗಾಗಿ 18 ವರ್ಷ ಮೇಲ್ಪಟ್ಟವರು, 12-18 ವರ್ಷದವರಿಗೆ ಲಸಿಕೆ ನೀಡಿದರೇ, ಜೀವ ಉಳಿಸಲು ಸಾಧ್ಯ ಎಂಬಂತಾಗಿದೆ. ಕೆನಡಾದಲ್ಲಿ 12 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡಲಾಗ್ತಿದೆ. ಆಮೆರಿಕಾದಲ್ಲೂ ಇಂದು 12-15 ವರ್ಷದವರಿಗೆ ಕೊರೊನಾ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ. ಫೈಜರ್ ಕಂಪನಿಯ ಲಸಿಕೆಯನ್ನು 12-15 ವರ್ಷದವರಿಗೆ ನೀಡಲು ಎಫ್‌ಡಿಎ ಒಪ್ಪಿಗೆ ನೀಡಿದೆ. ಫೈಜರ್ ಕಂಪನಿಯ ಲಸಿಕೆಯನ್ನು ಕೆನಡಾದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಲಾಗ್ತಿದೆ. 3ನೇ ಅಲೆಯಲ್ಲಿ ಕೊರೊನಾ ಮಕ್ಕಳ ಮೇಲೆ ದಾಳಿ ಮಾಡುವ ಭೀತಿ ಇದೆ. ಮಕ್ಕಳನ್ನು ಕೊರೊನಾದಿಂದ ರಕ್ಷಿಸಲು 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲೇಬೇಕು.

ಪ್ರಶ್ನೆ-7- ಮಾನವ ಕುಲಕ್ಕೆ ಮಹಾಮಾರಿಯಾಗುತ್ತಾ ಕೊರೊನಾದ ಮೂರನೇ ಅಲೆ?

ಕೊರೊನಾದ ಮೂರನೇ ಅಲೆ ಮಾನವ ಕುಲಕ್ಕೆ ದೊಡ್ಡ ಗಂಡಾಂತರವನ್ನೇ ತರುವ ಭೀತಿ ಇದೆ. ಈಗಾಗಲೇ 2ನೇ ಅಲೆಯಲ್ಲೇ ಭಾರತದಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸುತ್ತಿವೆ. ನಿತ್ಯ 4 ಸಾವಿರದವರೆಗೂ ಭಾರತದಲ್ಲಿ ಕೊರೊನಾದಿಂದ ಸಾವು ಸಂಭವಿಸುತ್ತಿವೆ. 3ನೇ ಅಲೆ ಮತ್ತಷ್ಟು ಭೀಕರವಾಗಿರಲಿದೆ ಎಂಬುದು ವಿಜ್ಞಾನಿಗಳ ಎಚ್ಚರಿಕೆ. ವಿಜ್ಞಾನಿಗಳ ಎಚ್ಚರಿಕೆಯನ್ನು ಕಡೆಗಣಿಸದೇ, 3ನೇ ಅಲೆಯ ಕೊರೊನಾ ಎದುರಿಸಲು ಸಿದ್ದತೆ ಅಗತ್ಯವಾಗಿದೆ.

ಪ್ರಶ್ನೆ-8- ಮೂರನೇ ಅಲೆಗೂ ಮುನ್ನ ಲಸಿಕೆ ನಿರ್ಲಕ್ಷ್ಯ ಮಾಡಿದರೇ, ಘೋರ ದುರಂತ ಎದುರಾಗುತ್ತಾ?

ಕೊರೊನಾದ ಮೂರನೇ ಅಲೆಗೂ ಮುನ್ನ ಭಾರತದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ನೀಡಲೇಬೇಕು. 3ನೇ ಅಲೆಯನ್ನು ನಿರ್ಲಕ್ಷ್ಯ ಮಾಡಿದರೆ, ಘೋರ ದುರಂತ ಸಂಭವಿಸಬಹುದು. ಕೊರೊನಾದಿಂದ 2ನೇ ಅಲೆಯಲ್ಲೇ 10 ಲಕ್ಷ ಜನರು ಸಾವನ್ನಪ್ಪುವ ಭೀತಿ ಇದೆ ಎಂದ ಲ್ಯಾನ್ಸೆಟ್ ಜರ್ನಲ್ ಹೇಳಿದೆ. ಆಗಸ್ಟ್ ತಿಂಗಳ ವೇಳೆಗೆ ಭಾರತದಲ್ಲಿ ಕೊರೊನಾದಿಂದ 10 ಲಕ್ಷ ಜನರು ಸಾವನ್ನಪ್ಪುವ ಭೀತಿ ಇದೆ. 3ನೇ ಅಲೆಯಲ್ಲೇ 2ನೇ ಅಲೆಗಿಂತ ಹೆಚ್ಚಿನ ಸಾವು-ನೋವು ಸಂಭವಿಸಬಹುದು. ಹೀಗಾಗಿ ಕೊರೊನಾದ 2 ಮತ್ತು 3ನೇ ಅಲೆಯನ್ನ ನಿರ್ಲಕ್ಷ್ಯ ಮಾಡಲೇಬಾರದು. ಈಗಲೇ, ಇಂದೇ ಎಲ್ಲರಿಗೂ ಕೊರೊನಾ ಲಸಿಕೆ ನೀಡಿ, ಜನರ ಪ್ರಾಣ ಉಳಿಸಿ ಎಂದು ಸರ್ಕಾರವನ್ನ ಆಗ್ರಹಿಸಬೇಕು.

ಪ್ರಶ್ನೆ-9- ಕರ್ನಾಟಕಕ್ಕೆ ಕೊರೊನಾ ಲಸಿಕೆ ತಂದು ಹಂಚಿಕೆ ಮಾಡಲು ಎದುರಾಗಿರುವ ಸಮಸ್ಯೆಗಳೇನು?

ಕರ್ನಾಟಕ ರಾಜ್ಯ ಸರ್ಕಾರವು ಕೊರೊನಾ ಲಸಿಕೆಯ ಪೂರೈಕೆಗೆ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ ಆರ್ಡರ್ ನೀಡಿದೆ. ಎರಡು ಬಾರಿ 2 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದೆ. ಈಗ ಎಸ್‌ಐಐ 18 ವರ್ಷ ಮೇಲ್ಪಟ್ಟವರಿಗೆ 3ರಿಂದ 4 ಲಕ್ಷ ಡೋಸ್ ಲಸಿಕೆ ಮಾತ್ರ ಪೂರೈಸಿದೆ. ಆದರೇ, ಕರ್ನಾಟಕದಲ್ಲಿ 18-44 ವರ್ಷ ವಯೋಮಾನದವರು 3.26 ಕೋಟಿ ಜನರಿದ್ದಾರೆ. 3.26 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲು 6.5 ಕೋಟಿ ಡೋಸ್ ಲಸಿಕೆ ಬೇಕು. ಎಸ್ಐಐ ಗೆ ಒಂದೇ ತಿಂಗಳಲ್ಲಿ 6.5 ಕೋಟಿ ಡೋಸ್ ಲಸಿಕೆಯನ್ನು ಕರ್ನಾಟಕ ರಾಜ್ಯವೊಂದಕ್ಕೆ ಪೂರೈಸಲಾಗಲ್ಲ. ದೇಶದ ಇನ್ನುಳಿದ 29 ರಾಜ್ಯಗಳಿಗೂ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ಪೂರೈಸಬೇಕು. ಹೀಗಾಗಿ ಕರ್ನಾಟಕದಲ್ಲಿ ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯ ಕೊರತೆ ಎದುರಾಗಿದೆ. ಭಾರತ್ ಬಯೋಟೆಕ್ ಕಂಪನಿಗೆ ಪ್ರತಿ ತಿಂಗಳು 1 ಕೋಟಿ ಡೋಸ್ ಲಸಿಕೆ ಉತ್ಪಾದನೆ ಸಾಮರ್ಥ್ಯ ಮಾತ್ರ ಇದೆ. ಭಾರತ್ ಬಯೋಟೆಕ್ ಕಂಪನಿಗೆ ಈಗಾಗಲೇ ಲಸಿಕೆ ಪೂರೈಕೆಗೆ 14 ರಾಜ್ಯಗಳು ಆರ್ಡರ್ ನೀಡಿವೆ. 14 ರಾಜ್ಯಗಳ ಆರ್ಡರ್ ಪೂರೈಸಿದ ಬಳಿಕ ಕರ್ನಾಟಕಕ್ಕೆ ಲಸಿಕೆ ಪೂರೈಸಬೇಕಾಗುತ್ತೆ. ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಗೆ ಭಾರಿ ಸಮಯ ಕಾಯಬೇಕು.

ಪ್ರಶ್ನೆ-10- ಪೇಟೇಂಟ್ ಗಾಗಿ ಫೈಟಿಂಗ್ ಶುರುವಾಗಿದ್ಯಾ? ದೇಶದಲ್ಲಿ ಎಷ್ಟು ಲಸಿಕಾ ಉತ್ಪಾದನಾ ಕಂಪನಿಗಳಿವೆ? ಎಲ್ಲ ಕಂಪನಿಗಳಿಗೂ ಏಕೆ ಲಸಿಕೆ ಉತ್ಪಾದನೆಗೆ ಅವಕಾಶ ಕೊಡ್ತಿಲ್ಲ?

ದೇಶದಲ್ಲಿ ಸದ್ಯ ಎಸ್‌ಐಐ, ಭಾರತ್ ಬಯೋಟೆಕ್ ಕಂಪನಿಗಳು ಕೊರೊನಾ ಲಸಿಕೆ ಉತ್ಪಾದಿಸುತ್ತಿವೆ. ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್, ಬಯೋಲಾಜಿಕಲ್ ಇ, ಜೆನೋವಾ ಕಂಪನಿಗಳು ಲಸಿಕೆಯ ವೈದ್ಯಕೀಯ ಪ್ರಯೋಗ ನಡೆಸ್ತಿವೆ. ದೇಶದಲ್ಲಿ ಲಸಿಕೆ ಉತ್ಪಾದನಾ ಸಾಮರ್ಥ್ಯ, ಮೂಲಸೌಕರ್ಯ, ಅನುಭವ ಹೊಂದಿರುವ ಸುಮಾರು 21 ಕಂಪನಿಗಳಿವೆ. ಇವುಗಳ ಪೈಕಿ ಇನ್ನೂ 15 ಕಂಪನಿಗಳು ಸದ್ಯ ಕೊರೊನಾ ಲಸಿಕೆಯನ್ನು ಉತ್ಪಾದಿಸುತ್ತಿಲ್ಲ. ಉಳಿದ 15 ಕಂಪನಿಗಳಿಗೆ ಲಸಿಕೆಯ ಉತ್ಪಾದನೆಗೆ ಕೇಂದ್ರ ಸರ್ಕಾರ ಕಂಪಲ್ಸರಿ ಲೈಸೆನ್ಸ್ ನೀಡಲು ಅವಕಾಶ ಇದೆ. ಭಾರತದ ಪೇಟೇಂಟ್ ಕಾಯಿದೆಯಲ್ಲಿ ಕಂಪಲ್ಸರಿ ಲೈಸೆನ್ಸ್ ನೀಡಿಕೆಗೆ ಅವಕಾಶ. ಲಸಿಕೆಯ ಪೇಟೇಂಟ್ ಹೊಂದಿರುವ ಕಂಪನಿಯ ಒಪ್ಪಿಗೆ ಇಲ್ಲದೇ, ಲಸಿಕೆ ಉತ್ಪಾದನೆಗೆ 3ನೇ ಕಂಪನಿಗೆ ಕೇಂದ್ರ ಸರ್ಕಾರವು ಲೈಸೆನ್ಸ್ ನೀಡುವುದನ್ನೇ ಕಂಪಲ್ಸರಿ ಲೈಸೆನ್ಸ್ ಎನ್ನುತ್ತೇವೆ.

ಕಂಪಲ್ಸರಿ ಲೈಸೆನ್ಸ್ ಪಡೆದ ಕಂಪನಿಯು ಪೇಟೇಂಟ್ ಹೊಂದಿರುವ ಕಂಪನಿಗೆ ರಾಯಲ್ಟಿ ಅಥವಾ ರಾಜಧನ ನೀಡಲಿದೆ. ಪೇಟೇಂಟ್ ಹೊಂದಿರುವ ಕಂಪನಿಯೇ ವಾಲಂಟರಿ ಲೈಸೆನ್ಸ್ ಅನ್ನು ಬೇರೆ ಕಂಪನಿಗಳಿಗೆ ಲಸಿಕೆ ಉತ್ಪಾದನೆಗೆ ಪರಸ್ಪರ ಒಪ್ಪಂದ ಮಾಡಿಕೊಂಡು ನೀಡಬಹುದು. ಈಗಾಗಲೇ ಭಾರತ್ ಬಯೋಟೆಕ್ ಕಂಪನಿಯು ಮಹಾರಾಷ್ಟ್ರದ ಹಾಫ್ ಕೈನೇ ಬಯೋಫಾರ್ಮಾಸೂಟಿಕಲ್ಸ್ ಕಂಪನಿಗೆ ವಾಲಂಟರಿ ಲೈಸೆನ್ಸ್ ನೀಡಿದೆ. ಮುಂಬೈನಲ್ಲಿರುವ ಹಾಫ್ ಕೈನೇ ಬಯೋಫಾರ್ಮಾಸೂಟಿಕಲ್ಸ್ ಕಂಪನಿಯ ಲಸಿಕೆ ಉತ್ಪಾದನೆಗೆ ಕೇಂದ್ರ-ಮಹಾರಾಷ್ಟ್ರ ಸರ್ಕಾರ ಹಣ ಹೂಡಿಕೆ ಮಾಡಿವೆ. ಈಗಾಗಲೇ ಹಾಫ್ ಕೈನೇ ಬಯೋಫಾರ್ಮಾಸೂಟಿಕಲ್ಸ್ ಕಂಪನಿಯು ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭಿಸಿದೆ.

ಪ್ರಶ್ನೆ-11— ಇಂಥ ಸಂದಿಗ್ಧ ಸ್ಥಿತಿಯಲ್ಲಿ ಲಸಿಕೆಯ ತಂತ್ರಜ್ಞಾನವನ್ನು ಬೇರೆ ಕಂಪನಿಗಳಿಗೆ ಏಕೆ ನೀಡುತ್ತಿಲ್ಲ?

ಲಸಿಕೆಯ ಉತ್ಪಾದನೆಯ ತಂತ್ರಜ್ಞಾನವನ್ನು ಬೇರೆ ಕಂಪನಿಗಳಿಗೂ ನೀಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಸುಪ್ರೀಂಕೋರ್ಟ್ ಕೂಡ ಲಸಿಕೆಯ ಕಂಪಲ್ಸರಿ ಲೈಸೆನ್ಸ್ ನೀಡುವ ಬಗ್ಗೆ ಏಕೆ ಪರಿಗಣಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಸುಪ್ರೀಂಕೋರ್ಟ್ ಪ್ರಶ್ನೆಗೆ ಕೇಂದ್ರ ಸರ್ಕಾರ ಭಾನುವಾರ ರಾತ್ರಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಉತ್ತರ ನೀಡಿದೆ. ಕೊರೊನಾ ಲಸಿಕೆಯ ಉತ್ಪಾದನೆಗೆ ಕಂಪಲ್ಸರಿ ಲೈಸೆನ್ಸ್ ನೀಡಿಕೆಯು ಕೊನೆಯ ಆಯ್ಕೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತ್ ಬಯೋಟೆಕ್ ಕಂಪನಿಯು ಲಸಿಕೆ ಸಂಶೋಧನೆ, ಉತ್ಪಾದನೆಗೆ ಸಾಕಷ್ಟು ರಿಸ್ಕ್ ತೆಗೆದುಕೊಂಡಿದೆ. ಹೀಗಾಗಿ ಕಂಪಲ್ಸರಿ ಲೈಸೆನ್ಸ್ ನೀಡುವ ಆಯ್ಕೆಯು ಸಾಧುವಲ್ಲ. ಕಂಪಲ್ಸರಿ ಲೈಸೆನ್ಸ್ ನೀಡುವ ಆಯ್ಕೆ ಕೊನೆಯ ಆಯ್ಕೆ ಎಂದಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ಭಾರತದಲ್ಲಿ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಅವಧಿಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗಲ್ಲ. ಕೇಂದ್ರ ಸರ್ಕಾರ ತನ್ನ ತೀರ್ಮಾನ ಬದಲಾಯಿಸಿಕೊಂಡು ಇನ್ನೂಳಿದ 15 ಕಂಪನಿಗಳ ಪೈಕಿ ಕನಿಷ್ಠ 10 ಕಂಪನಿಗಳಿಗಾದರೂ, ಕಂಪಲ್ಸರಿ ಲೈಸೆನ್ಸ್ ನೀಡಿದರೇ, ಈಗಿರುವ ಲಸಿಕೆಯ ಉತ್ಪಾದನೆಯನ್ನ ನಾಲ್ಕೈದು ಪಟ್ಟು ಹೆಚ್ಚಿಸಬಹುದು. ತಿಂಗಳಿಗೆ 20 ರಿಂದ 25 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾದರೇ, ಬೇಗನೇ ಭಾರತದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗುತ್ತೆ.

ಪ್ರಶ್ನೆ -12-ಲಸಿಕೆಯ ಪೇಟೇಂಟ್ ಗಾಗಿ ಲಸಿಕಾ ಕಂಪನಿಗಳ ನಡುವೆ ಫೈಟಿಂಗ್ ಶುರುವಾಗಿದೆಯೇ?

ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆಯ ಪೇಟೇಂಟ್ ವಿನಾಯಿತಿಗೆ ಲಸಿಕಾ ಕಂಪನಿಗಳು ವಿರೋಧಿಸುತ್ತಿವೆ. ಫೈಜರ್, ಮಾಡೆರ್ನಾ ಕಂಪನಿಗಳು ಪೇಟೇಂಟ್ ವಿನಾಯಿತಿಗೆ ವಿರೋಧಿಸುತ್ತಿವೆ. ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು, ಜರ್ಮನ್ ರಾಷ್ಟ್ರ ಕೂಡ ಪೇಟೇಂಟ್ ವಿನಾಯಿತಿಗೆ ವಿರೋಧಿಸಿದೆ. ಭಾರತ, ದಕ್ಷಿಣ ಆಫ್ರಿಕಾ ಲಸಿಕೆಯ ಪೇಟೇಂಟ್ ನಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಬೇಕೆಂದು ಆಗ್ರಹಿಸಿವೆ. ಇದಕ್ಕೆ ಈಗ ಆಮೆರಿಕಾದ ಬೆಂಬಲ ಕೂಡ ಸಿಕ್ಕಿದೆ. ಆದರೇ, ವಿಶ್ವ ವ್ಯಾಪಾರ ಸಂಘಟನೆಯಲ್ಲಿ 164 ಸದಸ್ಯ ರಾಷ್ಟ್ರಗಳಿವೆ. ಎಲ್ಲ ರಾಷ್ಟ್ರಗಳ ಒಪ್ಪಿಗೆ ಬೇಕು. ಒಂದೇ ಒಂದು ಸದಸ್ಯ ರಾಷ್ಟ್ರದ ಒಪ್ಪಿಗೆ ಇಲ್ಲದಿದ್ದರೂ, ಕೊರೊನಾ ಲಸಿಕೆಯ ಪೇಟೇಂಟ್ ಗೆ ತಾತ್ಕಾಲಿಕ ವಿನಾಯಿತಿ ಸಿಗಲ್ಲ.

Published On - 7:38 pm, Tue, 11 May 21

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ