DC vs RR IPL 2025: ರಾಜಸ್ಥಾನ್ ರಾಯಲ್ಸ್ ಸೋಲಿಗೆ ಕಾರಣವಾಗಿದ್ದು ಅವರದ್ದೇ ತಂಡದ ಈ 5 ಆಟಗಾರರು
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 32 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೂಪರ್ ಓವರ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡುವೆ ಈ ಪಂದ್ಯವು ಸಾಕಷ್ಟು ರೋಚಕತೆ ಸೃಷ್ಟಿಸಿತು. ಐಪಿಎಲ್ 18 ನೇ ಋತುವಿನ ಮೊದಲ ಸೂಪರ್ ಓವರ್ ಅನ್ನು ನಾವು ನೋಡುವ ಅವಕಾಶ ಸಿಕ್ಕಿತು. ರಾಜಸ್ಥಾನ್ ತಂಡ ತಾವು ಮಾಡಿದ ಕೆಲವು ತಪ್ಪುಗಳಿಂದ ಸೋಲು ಕಾಣಬೇಕಾಯಿತು.

ಬೆಂಗಳೂರು (ಏ. 17): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಮೊದಲ ಸೂಪರ್ ಓವರ್ ಬುಧವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ (Delhi Capitals vs Rajasthan Royals) ನಡುವೆ ನಡೆಯಿತು. ಈ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಗೆಲುವು ಸಾಧಿಸಿತು. ಇದಕ್ಕೂ ಮೊದಲು 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ತಲಾ 51 ರನ್ ಗಳಿಸುವ ಮೂಲಕ 4 ವಿಕೆಟ್‌ಗೆ 188 ರನ್ ಗಳಿಸಿತು. ರಾಜಸ್ಥಾನದ ಸೋಲಿನ ಅವರದ್ದೇ ತಂಡದ ಈ 5 ಆಟಗಾರರು ಪ್ರಮುಖ ಕಾರಣರಾದರು. ಈ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರೆ ಬಹುಶಃ ಪಂದ್ಯವು ಸೂಪರ್ ಓವರ್‌ಗೆ ತಲುಪುತ್ತಿರಲಿಲ್ಲ.
ಧ್ರುವ್ ಜುರೆಲ್: ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ಗೆಲುವಿಗೆ 9 ರನ್‌ಗಳು ಬೇಕಾಗಿದ್ದವು. ಆದರೆ ಅವರು ದೊಡ್ಡ ಹಿಟ್‌ಗಳನ್ನು ಸಿಡಿಸುವಲ್ಲಿ ವಿಫಲರಾದರು. ಜುರೆಲ್ 17 ಎಸೆತಗಳಲ್ಲಿ 26 ರನ್ ಗಳಿಸಿ ರನೌಟ್ ಆದರು.
ತುಷಾರ್ ದೇಶಪಾಂಡೆ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವೇಗಿ ತುಷಾರ್ ದೇಶಪಾಂಡೆ ತುಂಬಾ ದುಬಾರಿಯಾದರು. ಅವರು ತಮ್ಮ 3 ಓವರ್‌ಗಳಲ್ಲಿ 12.70 ರ ಎಕಾನಮಿಯಲ್ಲಿ 38 ರನ್‌ಗಳನ್ನು ನೀಡಿದರು.
ಸಂದೀಪ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ ತಂಡದ 20ನೇ ಓವರ್ ಅನ್ನು ಸಂದೀಪ್ ಶರ್ಮಾ ಎಸೆದರು. ಈ ಓವರ್‌ನಲ್ಲಿ ಸಂದೀಪ್ 19 ರನ್‌ಗಳನ್ನು ಬಿಟ್ಟುಕೊಟ್ಟರು. ಅಲ್ಲದೆ ಇವರು ಎಸೆದಿದ್ದು 11 ಎಸೆತಗಳನ್ನು. ಈ ಓವರ್‌ನಲ್ಲಿ ಸಂದೀಪ್ 4 ವೈಡ್ ಮತ್ತು 1 ನೋ ಬಾಲ್ ಕೂಡ ಎಸೆದರು. ಸಂದೀಪ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ 11 ಎಸೆತಗಳ ಓವರ್ ಎಸೆದ ನಾಲ್ಕನೇ ಬೌಲರ್ ಎನಿಸಿಕೊಂಡರು.
ರಿಯಾನ್ ಪರಾಗ್: ಈ ಪಂದ್ಯದಲ್ಲಿ ರಿಯಾನ್ ಪರಾಗ್ ಅವರ ಬ್ಯಾಟ್ ಸದ್ದು ಮಾಡಲೇ ಇಲ್ಲ. ಅವರು 11 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲು ಸಾಧ್ಯವಾಯಿತು. ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಶಿಮ್ರಾನ್ ಹೆಟ್ಮೆಯರ್: ಮಿಚೆಲ್ ಸ್ಟಾರ್ಕ್ ವಿರುದ್ಧದ ಕೊನೆಯ ಓವರ್‌ನಲ್ಲಿ ಶಿಮ್ರಾನ್ ಹೆಟ್ಮೆಯರ್ ಕೂಡ 19 ರನ್ ಗಳಿಸುವಲ್ಲಿ ವಿಫಲರಾದರು. ಅವರು 9 ಎಸೆತಗಳಲ್ಲಿ 15 ರನ್ ಗಳಿಸಿ ಅಜೇಯರಾಗಿ ಮರಳಿದರು.
ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದುವರೆಗೆ ಒಟ್ಟು ಐದು ಬಾರಿ ಸೂಪರ್ ಓವರ್ ಹಂತಕ್ಕೆ ತಲುಪಿದ್ದು, ಅದರಲ್ಲಿ ನಾಲ್ಕು ಬಾರಿ ಗೆದ್ದಿದೆ. ಈ ಮೂಲಕ ದೆಹಲಿ ತಂಡವು ಐಪಿಎಲ್‌ನಲ್ಲಿ ಅತಿ ಹೆಚ್ಚು ಸೂಪರ್ ಓವರ್‌ಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಷಯದಲ್ಲಿ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಮೂರು ಬಾರಿ ಸೂಪರ್ ಓವರ್‌ನಲ್ಲಿ ಗೆದ್ದು ಯಶಸ್ಸು ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




