Google Gemini AI in Kannada: ಕನ್ನಡದಲ್ಲೂ ಬಂತು ಬಹುನಿರೀಕ್ಷಿತ ಗೂಗಲ್ ಜೆಮಿನಿ ಲೈವ್ AI: ಹೇಗೆ ಉಪಯೋಗಿಸುವುದು?
ಗೂಗಲ್ ಬಹುನಿರೀಕ್ಷಿತ ಜೆಮಿನಿ ಲೈವ್ ಫೀಚರ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ. ವಿಶೇಷ ಎಂದರೆ ಇದು ಕನ್ನಡ ಭಾಷೆಯಲ್ಲಿ ಕೂಡ ಕಾರ್ಯನಿರ್ವಹಿಸುತ್ತದೆ. ಇದು ChatGPT ನ ಸುಧಾರಿತ ಧ್ವನಿ ಮೋಡ್ ವೈಶಿಷ್ಟ್ಯದಂತೆಯೆ ಭಾವನಾತ್ಮಕ ಪದಗಳನ್ನು ನೀಡುತ್ತದೆ.
ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಹುನಿರೀಕ್ಷಿತ ಜೆಮಿನಿ ಲೈವ್ (Google Gemini AI) ಫೀಚರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯ 10 ನೇ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ AI ಚಾಲಿತ ಹೊಸ ವೈಶಿಷ್ಟ್ಯಗಳನ್ನು ಘೋಷಿಸಿದೆ. ಇದು ಹಿಂದಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು ಮತ್ತು ಉರ್ದು ಸೇರಿದಂತೆ ಭಾರತದ ಅನೇಕ ಭಾಷೆಗಳಲ್ಲಿ ಕೆಲಸ ನಿರ್ವಹಿಸುತ್ತದೆ. ಈ ವೈಶಿಷ್ಟ್ಯವನ್ನು ಆರಂಭದಲ್ಲಿ ಕೆಲ ಬಳಕೆದಾರರಿಗೆ ಮಾತ್ರ ಪ್ರಾರಂಭಿಸಲಾಗಿತ್ತು. ಆದರೆ ಪ್ರಸ್ತುತ ಎಲ್ಲಾ ಆಂಡ್ರಾಯ್ಡ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದು.
ಗೂಗಲ್ ಜೆಮಿನಿ ಲೈವ್ AI ಎಂದರೇನು?:
ಸರಳವಾಗಿ ಹೇಳುವುದಾದರೆ, ಧ್ವನಿ ಚಾಟ್‌ನ ಮೂಲಕ ನೀವು ಎಲ್ಲ ಮಾಹಿತಿಯನ್ನು ಪಡೆಯುವ ಒಂದು ಆ್ಯಪ್ ಆಗಿದೆ. ಇದರಲ್ಲಿ ಬಳಕೆದಾರರು ಮತ್ತು AI ಇಬ್ಬರೂ ಪರಸ್ಪರ ಮಾತನಾಡಬಹುದು ಮತ್ತು ಪ್ರತಿಕ್ರಿಯೆಯನ್ನು ನೀಡಬಹುದು. AI ಸ್ವಾಭಾವಿಕವಾಗಿ ಕೆಲಸ ಮಾಡುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ. ಇದು ChatGPT ನ ಸುಧಾರಿತ ಧ್ವನಿ ಮೋಡ್ ವೈಶಿಷ್ಟ್ಯದಂತೆಯೆ ಭಾವನಾತ್ಮಕ ಪದಗಳನ್ನು ನೀಡುತ್ತದೆ ಮತ್ತು ಬಳಕೆದಾರರು ಪದಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಹೇಳಿದೆ.
ಈ ವೈಶಿಷ್ಟ್ಯವು ನಿಮ್ಮ ಎಲ್ಲಾ ಸಂಭಾಷಣೆಗಳ ಇತಿಹಾಸವನ್ನು ಸಹ ನಿರ್ವಹಿಸುತ್ತದೆ. ಹಿಂದಿನ ಸಂವಾದಗಳನ್ನು ಪರಿಶೀಲಿಸಲು ಅಥವಾ ಅಗತ್ಯವಿರುವಂತೆ ಸಂಭಾಷಣೆಗಳನ್ನು ಮರುಪ್ರಾರಂಭಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಜೆಮಿನಿ ಲೈವ್ ಉಚಿತವಾಗಿ ಲಭ್ಯವಿರುವುದರಿಂದ ಗೂಗಲ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು AI ಚಾಟ್‌ಬಾಟ್ ನೀಡಬಹುದಾದ ಸಂಭಾಷಣೆಗಳ ಗುಣಮಟ್ಟದ ಕುರಿತು ಹೆಚ್ಚಿನ ಇನ್‌ಪುಟ್‌ಗಳನ್ನು ಸಂಗ್ರಹಿಸಲು ಅನುಮತಿಸುತ್ತದೆ.
ಗೂಗಲ್ ಜೆಮಿನ್ ಲೈವ್ ಅನ್ನು ಹೇಗೆ ಬಳಸುವುದು?:
- ಮೊದಲಿಗೆ, ನಿಮ್ಮ ಆಂಡ್ರಾಯ್ಡ್ ಸಾಧನಗಳಲ್ಲಿ, ಜೆಮಿನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಜೆಮಿನಿ ಅಪ್ಲಿಕೇಶನ್ ತೆರೆಯಿರಿ.
- ಡಿಸ್ಪ್ಲೇ ಕೆಳಗಿನ ಬಲಭಾಗದಲ್ಲಿ ತರಂಗರೂಪದ ಐಕಾನ್ ಕಾಣಿಸಿಕೊಳ್ಳುತ್ತದೆ.
- ಈಗ ಈ ಐಕಾನ್ ಮೇಲೆ ಕ್ಲಿಕ್ ಮಾಡಿ.
- ಮೊದಲ ಬಾರಿಗೆ ಬಳಕೆದಾರರು ರೂಲ್ಸ್ ಮೆನುವನ್ನು ನೋಡುತ್ತಾರೆ, ಅದನ್ನು ಅವರು ಅಕ್ಸೆಪ್ಟ್ ಮಾಡಿಕೊಳ್ಳಬೇಕು.
- ಈಗ ನೀವು ಜೆಮಿನಿ ಲೈವ್ ಇಂಟರ್ಫೇಸ್ ಅನ್ನು ನೋಡುತ್ತೀರಿ.
- AI ಯೊಂದಿಗೆ ಸುಲಭವಾಗಿ ಮಾತನಾಡಿ.
- ನೀವು AI ನಿಂದ ವಿರಾಮವನ್ನು ತೆಗೆದುಕೊಳ್ಳಲು ಬಯಸಿದರೆ, ಇದಕ್ಕಾಗಿ ಹೋಲ್ಡ್ ಬಟನ್ ಅನ್ನು ಸಹ ನೀಡಲಾಗಿದೆ.
ಜೆಮಿನಿ ಲೈವ್ ಹ್ಯಾಂಡ್ಸ್-ಫ್ರೀ ಬೆಂಬಲದೊಂದಿಗೆ ಕೂಡ ಬರುತ್ತದೆ, ಅಂದರೆ ಈ ಅಪ್ಲಿಕೇಶನ್ ಅನ್ನು ಹಿನ್ನೆಲೆಯಲ್ಲಿ ಅಥವಾ ಫೋನ್ ಲಾಕ್ ಆಗಿದ್ದರೂ ಸಹ ಬಳಕೆದಾರರು AI ಚಾಟ್‌ಬಾಟ್‌ನೊಂದಿಗೆ ಸಂವಹನ ನಡೆಸಬಹುದು. ಆಗಸ್ಟ್‌ನಲ್ಲಿ ನಡೆದ ಗೂಗಲ್ನ ಪಿಕ್ಸೆಲ್ 9 ಸರಣಿಯ ಬಿಡುಗಡೆ ಸಮಾರಂಭದಲ್ಲಿ ಈ ವೈಶಿಷ್ಟ್ಯವನ್ನು ಮೊದಲು ಘೋಷಿಸಲಾಗಿತ್ತು.
Published On - 3:29 pm, Thu, 3 October 24