ಶನಿವಾರ ಭಾರತ ಸೇರಿದಂತೆ ಜಾಗತಿಕವಾಗಿ ಲಕ್ಷಾಂತರ ಬಳಕೆದಾರರು ಭಾರಿ ಅಡಚಣೆಯನ್ನು ಅನುಭವಿಸಿದ ನಂತರ ಗೂಗಲ್ ಅಂತಿಮವಾಗಿ ಜಿಮೇಲ್ ಸೇವೆಯನ್ನು ಮರುಸ್ಥಾಪಿಸಿದೆ. ಜಿಮೇಲ್ ಬಳಕೆದಾರರು ಮೇಲ್ಗಳನ್ನು ಸ್ವೀಕರಿಸದಿರುವ ಹಾಗೂ ಕಳುಹಿಸಲು ಸಾಧ್ಯವಾಗದಿರುವ ಬಗ್ಗೆ ದೂರು ನೀಡಿದ್ದರು. ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್ಟಾಪ್ ಆವೃತ್ತಿಗಳೆರಡರಲ್ಲೂ ಪ್ರಪಂಚದಾದ್ಯಂತ ಈ ಸಮಸ್ಯೆಯ ಪರಿಣಾಮ ಬೀರಿತ್ತು. ಇದೀಗ ಸರ್ವರ್ ಡೌನ್ (Gmail server down)ಸಮಸ್ಯೆ ಸರಿಪಡಿಸಲಾಗಿದ್ದು, “ಜಿಮೇಲ್ನಲ್ಲಿನ ಸಮಸ್ಯೆಯನ್ನು ಈಗ ಸಂಪೂರ್ಣವಾಗಿ ತಗ್ಗಿಸಲಾಗಿದೆ. ತಲುಪದ ಸಂದೇಶಗಳ ಎಲ್ಲಾ ಬ್ಯಾಕ್ಲಾಗ್ ಅನ್ನು ತೆರವುಗೊಳಿಸಲಾಗಿದೆ ಮತ್ತು ಮೇಲ್ ಸೇವೆಗಳು ಸಹಜ ಸ್ಥಿತಿಗೆ ಮರಳಿದೆ” ಎಂದು ಗೂಗಲ್ ವರ್ಕ್ಸ್ಪೇಸ್ ಅಪ್ಡೇಟ್ನಲ್ಲಿ ತಿಳಿಸಿದೆ.
“ನಾವು ಈ ಸಮಸ್ಯೆಯನ್ನು ಪರಿಹರಿಸುವಾಗ ತಾಳ್ಮೆ ವಹಿಸಿದ ನಿಮಗೆ ಧನ್ಯವಾದಗಳು” ಎಂದು ಹೇಳಿದ ಕಂಪನಿ, ಇಮೇಲ್ ವಿತರಣೆಯು ಇನ್ನು ಮುಂದೆ ವಿಫಲಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ಅಲ್ಲದೆ, ಗೂಗಲ್ ಇಂಜಿನಿಯರಿಂಗ್ ತಂಡವು ಬ್ಯಾಕ್ಲಾಗ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಎಲ್ಲಾ ಸಂದೇಶಗಳನ್ನು ತಲುಪಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಆದಾಗ್ಯೂ, ಜಾಗತಿಕ ಸರ್ವರ್ ಡೌನ್ ಹಿಂದಿನ ಕಾರಣವನ್ನು ಗೂಗಲ್ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: Google Pixel 6a: ಫ್ಲಿಪ್ಕಾರ್ಟ್ನಿಂದ ಬಂಪರ್ ಆಫರ್: ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್ಫೋನ್ ಬೆಲೆ ಕೇಳಿದ್ರೆ ದಂಗಾಗ್ತೀರಾ
ಜಿಮೇಕ್ನಲ್ಲಿ ಮೇಲ್ಗಳನ್ನು ಕಳುಹಿಸಲು ಸಾಧ್ಯವಾಗದಿರುವುದು ಮತ್ತು ಸ್ವೀಕರಿಸಲು ಸಾಧ್ಯವಾಗದಿರುವ ಬಗ್ಗೆ ಹಲವರು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. “ಎಲ್ಲರಿಗೂ ಜಿಮೇಲ್ ಡೌನ್ ಆಗಿದೆಯೇ ಅಥವಾ ನನ್ನ ಖಾತೆಯಲ್ಲಿ ಏನಾದರೂ ತಪ್ಪಾಗಿದೆಯೇ? ನಾನು ಯಾವುದೇ ಮೇಲ್ ಸ್ವೀಕರಿಸುತ್ತಿಲ್ಲ” ಎಂದು ಜಿಮೇಲ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದರು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 am, Sun, 11 December 22