ಮೊಬಿಕ್ವಿಕ್ನ 35 ಲಕ್ಷ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳುವಾಗಿದೆ ಎಂದ ಸಂಶೋಧಕ; ಅಂಥದ್ದೇನೂ ಆಗಿಲ್ಲ ಎಂದ ಕಂಪೆನಿ
ಗುರುಗಾಂವ್ ಮೂಲದ ಮೊಬಿಕ್ವಿಕ್ ಕಂಪೆನಿಯ 35 ಲಕ್ಷ ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ಕಳುವು ಮಾಡಲಾಗಿದೆ ಎಂದು ಸ್ವತಂತ್ರ ಸಂಶೋಧಕರೊಬ್ಬರ ಹೇಳಿಕೆಯನ್ನು ಆಧರಿಸಿ ವಾಣಿಜ್ಯ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಈ ಆರೋಪವನ್ನು ಕಂಪೆನಿ ನಿರಾಕರಿಸಿದೆ.
ಗುರುಗಾಂವ್ ಮೂಲದ ಪಾವತಿ (ಪೇಮೆಂಟ್) ಸ್ಟಾರ್ಟ್ ಅಪ್ ಮೊಬಿಕ್ವಿಕ್ನ (MobiKwik) 35 ಲಕ್ಷ ಬಳಕೆದಾರರ ಸೂಕ್ಷ್ಮ ಮಾಹಿತಿಯುಳ್ಳ ಭಾರೀ ಪ್ರಮಾಣದ ಡೇಟಾಬೇಸ್ ಅನ್ನು ಮಾರ್ಚ್ 29ನೇ ತಾರೀಕಿನ ಸೋಮವಾರದಂದು ಹ್ಯಾಕರ್ ಫೋರಂನಿಂದ ಆನ್ಲೈನ್ನಲ್ಲಿ ಮಾರಾಟಕ್ಕೆ ಇಡಲಾಗಿದೆ.ಈ ದೊಡ್ಡ ಮಟ್ಟದ ಡೇಟಾ ಕಳುವಿನಲ್ಲಿ 3,60,99,759 ಫೈಲ್ಗಳು ಒಳಗೊಂಡಿವೆ ಎಂದು ವರದಿ ಆಗಿದೆ. ಇದನ್ನು ಹೊರತುಪಡಿಸಿದಂತೆ 8.2 ಟಿಬಿ (ಟೆರಾಬೈಟ್) ಡೇಟಾ ಸಹ ಇತ್ತು. ಅದರಲ್ಲಿ 9,92,24,559 ಬಳಕೆದಾರರ ಫೋನ್ನಂಬರ್ಗಳು, ಇಮೇಲ್ ವಿಳಾಸ, ಹ್ಯಾಶ್ಡ್ ಪಾಸ್ವರ್ಡ್ಗಳು, ವಿಳಾಸಗಳು, ಬ್ಯಾಂಕ್ ಖಾತೆಗಳು ಮತ್ತು ಕಾರ್ಡ್ಗಳ ಮಾಹಿತಿಗಳಿವೆ.
ಹ್ಯಾಕರ್ನಿಂದ ಡಾರ್ಕ್ ವೆಬ್ ಕೂಡ ಸ್ಥಾಪಿಸಲಾಗಿದೆ. ಅಲ್ಲಿಂದ ಫೋನ್ ನಂಬರ್ ಅಥವಾ ಇಮೇಲ್ ಐಡಿ ಹುಡುಕಾಡಬಹುದು ಮತ್ತು ನಿರ್ದಿಷ್ಟವಾದ ಫಲಿತಾಂಶ ಪಡೆಬಹುದು ಎಂದು ಟೆಕ್ನಾಡು ವರದಿ ಮಾಡಿದ್ದು, ಸ್ವತಂತ್ರ ಸಂಶೋಧಕ ರಾಜಶೇಖರ್ ರಜಾರಿಯಾ ಅವರ ಹೇಳಿಕೆಯನ್ನು ಉದಾಹರಿಸಲಾಗಿದೆ. ಆದರೆ ಈ ಮಾಹಿತಿ ಕಳುವಿನ ಆರೋಪವನ್ನು ಮೊಬಿಕ್ವಿಕ್ ನಿರಾಕರಿಸಿದೆ.
“ಮಾಧ್ಯಮಗಳ ಹುಚ್ಚು ಇರುವ ಕೆಲವರು- ಸೋ ಕಾಲ್ಡ್ ಭದ್ರತಾ ಸಂಶೋಧಕರು ಪದೇಪದೇ ಯಾವ್ಯಾವುದೋ ಫೈಲ್ಗಳನ್ನು ಹುಟ್ಟು ಹಾಕುತ್ತಾ ನಮ್ಮ ಸಂಸ್ಥೆಯ ಹಾಗೂ ಇದರ ಜತೆಗೆ ಮಾಧ್ಯಮ ಪ್ರತಿನಿಧಿಗಳ ಸಮಯವನ್ನು ಹಾಳು ಮಾಡುತ್ತಿದ್ದಾರೆ. ನಾವು ಪೂರ್ತಿ ತನಿಖೆ ಮಾಡಿದ್ದೇವೆ. ಯಾವುದೇ ಭದ್ರತಾ ಲೋಪ ಕಂಡುಬಂದಿಲ್ಲ. ನಮ್ಮ ಬಳಕೆದಾರರು ಮತ್ತು ಕಂಪೆನಿಯ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಭದ್ರವಾಗಿದೆ,” ಎಂದು ಮೊಬಿಕ್ವಿಕ್ ಪ್ರತಿಕ್ರಿಯೆ ನೀಡಿರುವುದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.
ಪ್ರಮುಖ ಮಾಹಿತಿಯ ಪ್ರಕಾರ, ಯಾರಾದರೂ ಖರೀದಿ ಮಾಡಬೇಕು ಎಂದು ಬಯಸಿದಲ್ಲಿ 1.5 ಬಿಟ್ಕಾಯಿನ್ (84 ಸಾವಿರ ಅಮೆರಿಕನ್ ಡಾಲರ್) ಪಾವತಿಸಿ ಸಂಪೂರ್ಣ ಡೇಟಾಬೇಸ್ ಖರೀದಿಸಬಹುದು ಅಥವಾ ಡಾರ್ಕ್ ವೆಬ್ ಪೋರ್ಟಲ್ನಲ್ಲಿ ಆಫ್ಲೈನ್ನಲ್ಲಿ ಪಡೆಯಬಹುದು. ಈ ಪ್ಯಾಕ್ನಲ್ಲಿರುವ ದತ್ತಾಂಶದಲ್ಲಿ ಕೆಳಕಂಡಂಥವು ಒಳಗೊಂಡಿವೆ. – ಒಟ್ಟಾರೆ 350 ಜಿಬಿ MySQL ಡಂಪ್ಗಳು: 500 ಡೇಟಾಬೇಸ್ಗಳು – 9.9 ಕೋಟಿ ಡೇಟಾ- ಮೇಲ್, ಫೋನ್, ಪಾಸ್ವರ್ಡ್ಗಳು, ವಿಳಾಸಗಳು ಮುಂತಾದವು – 4 ಕೋಟಿ- 10 ಅಂಕಿಯ ಕಾರ್ಡ್, ತಿಂಗಳು, ವರ್ಷ, ಕಾರ್ಡ್ ಹ್ಯಾಶ್ ಮುಂತಾದವು – ಕಂಪೆನಿ ಡೇಟಾ – 7.5 ಟೆರಾಬೈಟ್ನ 30 ಲಕ್ಷ ವರ್ತಕರ ಪಾಸ್ಪೋರ್ಟ್ಗಳು, ಆಧಾರ್ ಕಾರ್ಡ್ಗಳು, ಪ್ಯಾನ್ ಕಾರ್ಡ್ಗಳು ಮುಂತಾದವು ಸೇರಿಸಿ ಕೆವೈಸಿ (Know Your Customer- ನಿಮ್ಮ ಗ್ರಾಹಕರ ತಿಳಿಯಿರಿ) ಡೇಟಾ.
ಇದನ್ನೂ ಓದಿ: 5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ