5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ

5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ

ಕೊರೊನಾ ನಂತರ ಡಿಜಿಟಲ್ ಪೇಮೆಂಟ್ ವ್ಯಾಪಕವಾಗಿದೆ. ಇದು ಸುರಕ್ಷಿತವೂ ಹೌದು. ಆದರೆ ಸಂಪೂರ್ಣವಾಗಿ ಸುರಕ್ಷಿತವೇ ಅಂದರೆ, ಅದಕ್ಕೆ ಉತ್ತರ 'ಇಲ್ಲ' ಅಂತಲೇ ನೀಡಬೇಕಾಗುತ್ತದೆ. ಡಿಜಿಟಲ್ ಪಾವತಿ ಮಾಡುವ ವೇಳೆ ಅನುಸರಿಸಬೇಕಾದ 5 ಕ್ರಮಗಳ ಬಗ್ಗೆ ಇಲ್ಲಿದೆ ವಿವರ.

Srinivas Mata

|

Mar 29, 2021 | 1:27 PM


ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಆಗುತ್ತಿರುವಂತೆಯೇ ನಾನಾ ವಲಯಗಳಲ್ಲಿ ಬದಲಾವಣೆ ಕೂಡ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಡಿಜಿಟಲ್ ಪೇಮೆಂಟ್ (ಪಾವತಿ) ಕೂಡ ಹೊರತಲ್ಲ. ಡಿಜಿಟಲ್ ಪಾವತಿ ಎಂಬುದು ಸಂಪೂರ್ಣವಾಗಿ ಹೊಸ ಚಿಂತನೆ ಅಂತೇನೂ ಅಲ್ಲ. ಆದರೆ ಕೋವಿಡ್- 19 ಎಂಬ ಜಾಗತಿಕ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ಭಾರತದಲ್ಲಿ ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್​ಗಳು, ಮೊಬೈಲ್ ಬ್ಯಾಂಕಿಂಗ್ ಮುಂತಾದವುಗಳ ಮೂಲಕ ಪಾವತಿ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳುವುದರ ವೇಗ ಹೆಚ್ಚಾಯಿತು. ಇದಕ್ಕೆ ಬಹಳ ಅನುಕೂಲಕರವಾದ ಮತ್ತು ದೊಡ್ಡ ಮಟ್ಟದಲ್ಲಿ ಸುರಕ್ಷಿತ ದಾರಿಯಿರುವ ಕಾರಣ ಇದನ್ನೇ ಆರಿಸಿಕೊಳ್ಳಬಹುದು. ಆದರೆ ಆನ್​ಲೈನ್ ಪಾವತಿ ವೇಳೆ ಸೈಬರ್ ಭದ್ರತೆ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಸುರಕ್ಷಿತವಾಗಿ ಡಿಜಿಟಲ್ ಪೇಮೆಂಟ್ ಮಾಡುವ 5 ಟಿಪ್ಸ್​ಗಳು ಇಲ್ಲಿವೆ.

ಕಾರ್ಡ್ ಮಾಹಿತಿ ಸಂಗ್ರಹಿಸುವುದನ್ನು ತಪ್ಪಿಸಿ
ಇದು ಬಹಳ ಬೇಸಿಕ್ ವಿಷಯ ಅಂತ ನಿಮಗೆ ಅನ್ನಿಸಬಹುದು. ಆದರೆ ಆನ್​ಲೈನ್​ನಲ್ಲಿ ನೀವು ಖರೀದಿ ಮಾಡುವಾಗ ನಿಮ್ಮ ಡೆಬಿಟ್/ಕ್ರೆಡಿಟ್ ಮಾಹಿತಿಗಳು ಸೇವ್ (ಸಂಗ್ರಹ) ಆಗಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಬೇಗ ಪಾವತಿ ಆಗಿಬಿಡಲಿ, ಪದೇ ಪದೇ ಮಾಹಿತಿಯನ್ನು ಆರಂಭದಿಂದ ಭರ್ತಿ ಮಾಡುವ ಅಗತ್ಯ ಇಲ್ಲದಿರಲಿ ಎಂಬ ಕಾರಣಕ್ಕೆ ನಮ್ಮಲ್ಲಿ ಹಲವರು ಕಾರ್ಡ್​​ಗಳ ಮಾಹಿತಿಯನ್ನು ಸಂಗ್ರಹಿಸಲು ಬಯಸುತ್ತೇವೆ. ಆದರೆ ಆನ್​ಲೈನ್​​ನಲ್ಲಿ ಖರೀದಿ ಮಾಡಿದ ಮೇಲೆ ನಿಮ್ಮ ಕಾರ್ಡ್ ಮಾಹಿತಿಯನ್ನು ಅಳಿಸುವುದು ಉತ್ತಮ. ಆಗ ಮಾಹಿತಿ ಕಳುವಿನ ಸಾಧ್ಯತೆ ಕಡಿಮೆ ಇರುತ್ತದೆ.

ವಹಿವಾಟಿಗೆ ಖಾಸಗಿ ವಿಂಡೋ ಬಳಸಿ
ಅನುಮಾನಾಸ್ಪದವಾದ ಅಪ್ಲಿಕೇಷನ್​ಗಳು ಮತ್ತು ವೆಬ್​ಸೈಟ್​ಗಳಿಂದ ಡಿಜಿಟಲ್ ಪಾವತಿ ಮಾಡಬಾರದು ಹಾಗೂ ಆ್ಯಪ್ ಸ್ಟೋರ್​ಗಳಲ್ಲಿ ಸಲಹೆ ನೀಡುವ ನಂಬಲರ್ಹವಾದ ಅಧಿಕೃತ ಅಪ್ಲಿಕೇಷನ್​ಗಳನ್ನೇ ಬಳಸಬೇಕು. ಖಾಸಗಿ ಅಥವಾ ವರ್ಚುವಲ್ ಬ್ರೌಸರ್ ಬಳಸುವುದು ಉತ್ತಮ. HTTPS:// ಹೀಗೆ ಆರಂಭವಾಗುವುದರೊಂದಿಗೆ ವಹಿವಾಟು ನಡೆಸುವುದರಿಂದ ಹಣಕಾಸು ವಹಿವಾಟಿನ ಸುರಕ್ಷತೆ ಹೆಚ್ಚಾಗುತ್ತದೆ. ಸುರಕ್ಷಿತ ಆನ್​ಲೈನ್ ಬ್ಯಾಂಕಿಂಗ್​ಗಾಗಿ ಮತ್ತು ಕುಕೀಸ್ ತಡೆಯುವುದಕ್ಕೆ ಹಾಗೂ ಕ್ರೆಡೆನ್ಷಿಯಲ್ ಸಂಗ್ರಹ ಆಗದಿರಲಿ ಎಂದೇ ಅವುಗಳನ್ನು ರೂಪಿಸಲಾಗಿದೆ. ಇನ್ನು ವಹಿವಾಟು ಮುಗಿಸಿದ ಮೇಲೆ ಕಡ್ಡಾಯವಾಗಿ ಲಾಗ್​ಔಟ್ ಆಗಬೇಕು.

ಪಾಸ್​ವರ್ಡ್ ಹಂಚಿಕೊಳ್ಳಬೇಡಿ
ಇದು ಸಾಮಾನ್ಯವಾದ ಸಲಹೆ. ಆದರೆ ಆರ್ಥಿಕ ವಹಿವಾಟಿನ ಸುರಕ್ಷತೆಯ ಭಾಗದಲ್ಲಿ ಒಂದು. ಇಂಟರ್​ನೆಟ್ ಬ್ಯಾಂಕಿಂಗ್ ಖಾತೆಯ ಪಾಸ್​ವರ್ಡ್​ಗಳು ಹೆಚ್ಚು ಬಲಿಷ್ಠವಾಗಿರಬೇಕು. ಯಾರ ಜತೆಗೂ ಇದನ್ನೂ ಹಂಚಿಕೊಳ್ಳಬಾರದು. ನಿಯಮಿತವಾಗಿ ಪಾಸ್​ವರ್ಡ್ ಬದಲಾವಣೆ ಮಾಡಬೇಕು. ನಿಮ್ಮ ಎಟಿಎಂ PIN ಅಥವಾ ಪಾಸ್​ವರ್ಡ್ ಕೇಳಿಕೊಂಡು ಯಾರಾದರೂ ಫೋನ್ ಮಾಡಿದಲ್ಲಿ ಆ ಬಗ್ಗೆ ಬ್ಯಾಂಕ್​ಗೆ ಮಾಹಿತಿ ನೀಡಬೇಕು. ಒನ್ ಟೈನ್ ಪಾಸ್​ವರ್ಡ್ (ಒಟಿಪಿ) ಬಳಸಿಯೇ ವಹಿವಾಟು ಮಾಡುವುದು ಹೆಚ್ಚು ಸುರಕ್ಷಿತ. ವರ್ಚುವಲ್ ಕೀ ಬೋರ್ಡ್ ಬಳಸಿ ಮಾಹಿತಿ ಟೈಪ್ ಮಾಡುವುದು ಕೂಡ ಸುರಕ್ಷತಾ ವಿಧಾನ ಅನುಸರಿಸುವ ಮಾರ್ಗ.

ಸಾರ್ವಜನಿಕ ಕಂಪ್ಯೂಟರ್​​ಗಳು/ವೈ-ಫೈ ನೆಟ್​ವರ್ಕ್​ಗಳನ್ನು ಬಳಸಬೇಡಿ
ಆನ್​ಲೈನ್ ವಹಿವಾಟುಗಳನ್ನು ಮಾಡುವಾಗ ಸಾರ್ವಜನಿಕ ಸಾಧನಗಳು ಅಥವಾ ವೈ- ಫೈ ನೆಟ್​ವರ್ಕ್​ಗಳನ್ನು ಬಳಸದಿರುವುದು ಉತ್ತಮ. ಏಕೆಂದರೆ ಅವುಗಳ ಮೇಲೆ ಸೈಬರ್ ದಾಳಿ, ಕಳುವು ಮತ್ತು ಇತರ ವಂಚನೆ ಚಟುವಟಿಕೆಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜತೆಗೆ ದೃಢೀಕೃತವಾದ ಮತ್ತು ಗೌರವಾನ್ವಿತ ವೆಬ್​ಸೈಟ್​ಗಳನ್ನೇ ಬಳಸುವುದು ಸಹ ಅಷ್ಟೇ ಮುಖ್ಯ. ಆನ್​ಲೈನ್ ವಹಿವಾಟುಗಳಿಗೆ ನಂಬಿಕಸ್ತ ವೆಬ್​ಸೈಟ್​ಗಳು ಉನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸುತ್ತವೆ.

ವಂಚಕ ಅಪ್ಲಿಕೇಷನ್​ಗಳಿಂದ ಎಚ್ಚರಿಕೆಯಿಂದ ಇರಬೇಕು
ಪ್ಲೇಸ್ಟೋರ್ ಮತ್ತು ಆ್ಯಪ್ ಸ್ಟೋರ್​​ಗಳಲ್ಲಿ ನಂಬಿಕೆಗೆ ಅರ್ಹವಲ್ಲದ ಅಪ್ಲಿಕೇಕ್ಷನ್​ಗಳನ್ನು ಹಲವಾರು ಇರುತ್ತವೆ. ಅದೃಷ್ಟ ಏನೆಂದರೆ, ನೆಗೆಟಿವ್ ರಿವ್ಯೂವ್ ಮೂಲಕ ಅವುಗಳನ್ನು ಪತ್ತೆ ಹಚ್ಚಬಹುದು. ಕಡಿಮೆ ಸಂಖ್ಯೆಯ ಡೌನ್​ಲೋಡ್​ಗಳು ಮತ್ತು ವೆರಿಫೈಡ್ ಬ್ಯಾಡ್ಜ್ ಇಲ್ಲದಿರುವುದು ಸಹ ಅಂಥ ಆ್ಯಪ್​ಗಳಿಂದ ದೂರ ಇರುವುದಕ್ಕೆ ಎಚ್ಚರಿಕೆ ಎಂದು ಭಾವಿಸಬೇಕಾಗುತ್ತದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ಮೊಬೈಲ್ ವ್ಯಾಲೆಟ್ ಅಪ್ಲಿಕೇಷನ್ ಆಗಿದ್ದರೂ ಅದು ನಂಬಿಕೆಗೆ ಅರ್ಹವಾಗಿಯೇ ಇರಬೇಕು. ಇನ್​ಸ್ಟಾಲ್ ಮಾಡಿಕೊಳ್ಳುವ ವೇಳೆ ಆ್ಯಪ್​​ನಿಂದ ಕ್ಯಾಮೆರಾ, ಫೋನ್ ಕಾಂಟ್ಯಾಕ್ಟ್​ಗಳು, ಎಸ್ಸೆಮ್ಮೆಸ್ ಓದುವುದಕ್ಕೆ ಸೇರಿ ಮುಂತಾದವುಕ್ಕೆ ಅನುಮತಿ ಕೇಳಿದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು ಅಥವಾ ಬಳಸುವುದಕ್ಕೆ ಅವಕಾಶ ನಿರಾಕರಿಸಬೇಕು.

ಇದನ್ನೂ ಓದಿ: Android Smart Phones: ಆಂಡ್ರಾಯಿಡ್ ಸ್ಮಾರ್ಟ್​ಫೋನ್ ಬಳಕೆದಾರರು ತಪ್ಪಿಸಬೇಕಾದ 15 ತಪ್ಪುಗಳಿವು


Follow us on

Related Stories

Most Read Stories

Click on your DTH Provider to Add TV9 Kannada