ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?
Narendra Modi Enters Whatsapp Channels: ವಾಟ್ಸಾಪ್ನ ಹೊಸ ಫೀಚರ್ ಆಗಿರುವ ಚಾನಲ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆಯಾಗಿದ್ದಾರೆ. ತಮ್ಮ ಮೊದಲ ಪೋಸ್ಟ್ನಲ್ಲಿ ಅವರು ಸಂಸತ್ ಭವನದ ಫೋಟೋವನ್ನು ಹಾಕಿದ್ದಾರೆ. ಯಾರು ಬೇಕಾದರೂ ಮೋದಿ ಅವರ ವಾಟ್ಸಾಪ್ ಚಾನಲ್ ಅನ್ನು ಫಾಲೋ ಮಾಡಬಹುದು. ನಿಮ್ಮ ಫೋನ್ ನಂಬರ್ ಇತ್ಯಾದಿ ವಿವರ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಚಾನಲ್ ಅಡ್ಮಿನ್ಗೂ ಈ ಮಾಹಿತಿ ಗೊತ್ತಾಗುವುದಿಲ್ಲ.

ನವದೆಹಲಿ, ಸೆಪ್ಟೆಂಬರ್ 19: ವಿಶ್ವದ ಅತಿದೊಡ್ಡ ಚಾಟಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಇತ್ತೀಚೆಗೆ ಹೊಸ ಫೀಚರ್ ಆದ ವಾಟ್ಸಾಪ್ ಚಾನಲ್ಸ್ ಅನ್ನು ಅನಾವರಣಗೊಳಿಸಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ವಾಟ್ಸಾಪ್ ಚಾನಲ್ಸ್ (Whatsapp Channels) ಸೇರಿದ್ದಾರೆ. ತಮ್ಮ ವಾಟ್ಸಾಪ್ ಚಾನಲ್ನಲ್ಲಿ ಅವರು ಮಾಡಿದ ಮೊದಲ ಪೋಸ್ಟ್ ಹೊಸ ಸಂಸದೀಯ ಭವನದ ಫೋಟೋ.
‘ವಾಟ್ಸಾಪ್ ಕಮ್ಯೂನಿಟಿ ಸೇರಲು ಖುಷಿ ಎನಿಸುತ್ತಿದೆ. ಸಂವಾದಗಳನ್ನು ನಡೆಸುವ ನಮ್ಮ ಪ್ರಯಾಣದಲ್ಲಿ ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದೇವೆ. ಇಲ್ಲಿ ನಾವು ಸಂಪರ್ಕದಲ್ಲಿ ಇರೋಣ. ಹೊಸ ಸಂಸತ್ ಭವನ ಕಟ್ಟಡದ ಚಿತ್ರ ಇಲ್ಲಿದೆ…’ ಎಂದು ನರೇಂದ್ರ ಮೋದಿ ಅವರು ತಮ್ಮ ವಾಟ್ಸಾಪ್ ಚಾನಲ್ಸ್ನಲ್ಲಿ ಹಾಕಿದ ಮೊದಲ ಪೋಸ್ಟ್ನಲ್ಲಿ ಬರೆದಿದ್ದಾರೆ. ಕಟ್ಟಡದ ಚಿತ್ರವನ್ನೂ ಲಗತ್ತಿಸಿದ್ದಾರೆ.
ನರೇಂದ್ರ ಮೋದಿ ಅವರು ವಾಟ್ಸಾಪ್ ಚಾನಲ್ನಲ್ಲಿ ಇನ್ಮುಂದೆ ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ಅವರ ಚಾನಲ್ ಫಾಲೋ ಮಾಡುತ್ತಿರುವವರು ಇದನ್ನು ನೋಡಬಹುದು. ಅಕ್ಷಯ್ ಕುಮಾರ್, ವಿಜಯ ದೇವರಕೊಂಡ, ಕತ್ರಿನಾ ಕೈಫ್ ಇತ್ಯಾದಿ ಹಲವು ಸೆಲಬ್ರಿಟಿಗಳು ವಾಪ್ಸಾಪ್ ಚಾನಲ್ಸ್ ಸೇರಿದ್ದಾರೆ. ಬೆಳೆಯುತ್ತಿರುವ ಈ ಪಟ್ಟಿಗೆ ನರೇಂದ್ರ ಮೋದಿ ಸೇರ್ಪಡೆ ಇನ್ನಷ್ಟು ಪುಷ್ಟಿ ಕೊಟ್ಟಿದೆ.
ಇದನ್ನೂ ಓದಿ: ಸಾಮಾಜಿಕ ತಾಣಗಳಲ್ಲಿ ಮೋದಿ ಹವಾ: ಭಾರತದ ಪ್ರಧಾನಿಗೆ ಒಟ್ಟು ಎಷ್ಟು ಫಾಲೋವರ್ಸ್ ಇದ್ದಾರೆ ನೋಡಿ
ನರೇಂದ್ರ ಮೋದಿ ಅವರ ವಾಟ್ಸಾಪ್ ಚಾನಲ್ಸ್ ಅನ್ನು ಫಾಲೋ ಮಾಡಲು ಲಿಂಕ್ ಈ ಕೆಳಕಂಡಂತಿದೆ:
whatsapp.com/channel/0029Va8IaebCMY0C8oOkQT1F
ಏನಿದು ವಾಟ್ಸಾಪ್ ಚಾನಲ್ಸ್?
ಈಗಿರುವ ವಾಟ್ಸಾಪ್ ಕಮ್ಯೂನಿಟಿ ರೀತಿಯದ್ದೇ ಮತ್ತೊಂದು ಫೀಚರ್ ಈ ವಾಟ್ಸಾಪ್ ಚಾನಲ್ಸ್. ಸದ್ಯ ಪ್ರಾಯೋಗಿಕವಾಗಿ ಇದನ್ನು ಅನಾವರಣಗೊಳಿಸಲಾಗಿದೆ. ಎಲ್ಲರಿಗೂ ಇದು ಇನ್ನೂ ಲಭ್ಯ ಇಲ್ಲ. ಮುಂಬರುವ ದಿನಗಳಲ್ಲಿ ಇದು ಎಲ್ಲರಿಗೂ ಸಿಗಬಹುದು.
ಯಾರು ಬೇಕಾದರೂ ಪ್ರತ್ಯೇಕವಾಗಿ ಚಾನಲ್ಸ್ ಆರಂಭಿಸಬಹುದು. ಟೆಕ್ಸ್ಟ್, ಫೋಟೋ, ವಿಡಿಯೋ, ಪೋಲ್ ಇತ್ಯಾದಿಯನ್ನು ಇದರಲ್ಲಿ ಪೋಸ್ಟ್ ಮಾಡಬಹುದು. ಹಾಗೆಯೇ, ಯಾರು ಬೇಕಾದರೂ ಯಾವ ಚಾನಲ್ ಅನ್ನು ಫಾಲೋ ಮಾಡಬಹುದು. ಆದರೆ, ಇದು ಏಕ ಸಂವಾದಿಯಾಗಿರುತ್ತದೆ. ಅಂದರೆ ಚಾನಲ್ ಅಡ್ಮಿನ್ ಮಾತ್ರ ಅದರಲ್ಲಿ ಪೋಸ್ಟ್ ಮಾಡಬಹುದು. ಫಾಲೋ ಮಾಡುತ್ತಿರುವವರು ಈ ಪೋಸ್ಟ್ಗೆ ಉತ್ತರಿಸಲು ಆಗುವುದಿಲ್ಲ. ಚಾನಲ್ ಜೊತೆ ಸಂವಾದಿಸಲು ಸಾಧ್ಯವಿಲ್ಲ. ಪೋಲ್ನಲ್ಲಿ ಪಾಲ್ಗೊಳ್ಳಬಹುದು, ಇಮೋಜಿ ರಿಯಾಕ್ಷನ್ ಕೊಡಬಹುದು ಅಷ್ಟೇ. ವಾಟ್ಸಾಪ್ ಕಮ್ಯೂನಿಟಿಯಲ್ಲಿಯೂ ಇದೇ ರೀತಿಯ ಫೀಚರ್ಗಳಿವೆ.
ಆದರೆ, ವಾಟ್ಸಾಪ್ ಚಾನಲ್ ಅನ್ನು ನೀವು ಫಾಲೋ ಮಾಡಿದರೆ ನಿಮ್ಮ ಫೋನ್ ನಂಬರ್ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಚಾನಲ್ ಅಡ್ಮಿನ್ಗೂ ಕೂಡ ನಿಮ್ಮ ಫೋನ್ ನಂಬರ್ ಗೊತ್ತಾಗುವುದಿಲ್ಲ. ಅಷ್ಟರಮಟ್ಟಿಗೆ ಇದು ಗೌಪ್ಯತೆ ಹೊಂದಿರುತ್ತದೆ. ಈ ವಿಚಾರದಲ್ಲಿ ವಾಟ್ಸಾಪ್ ಕಮ್ಯೂನಿಟಿಗಿಂತ ಚಾನ್ಸ್ ಭಿನ್ನ ಎನಿಸುತ್ತದೆ.
ಇದನ್ನೂ ಓದಿ: ಹಳೇ ಸಂಸತ್ ಕಟ್ಟಡ ಇನ್ಮುಂದೆ ಸಂವಿಧಾನ ಸದನ, ಪ್ರಧಾನಿ ಮೋದಿ ಹೇಳಿದ್ದೇನು?
ವಾಟ್ಸಾಪ್ ಚಾನಲ್ ಆರಂಭಿಸುವುದು ಹೇಗೆ?
ಈ ಫೀಚರ್ ಇನ್ನೂ ಎಲ್ಲರಿಗೂ ನೀಡಿಲ್ಲ. ನಿಮಗೆ ಈ ಫೀಚರ್ ಲಭ್ಯವಾಗಿದೆಯಾ ಎಂಬುದನ್ನು ನೋಡಲು ವಾಟ್ಸಾಪ್ನ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಆಗಬೇಕು.
- ವಾಟ್ಸಾಪ್ ವೆಬ್ ಓಪನ್ ಮಾಡಿದರೆ ಚಾನಲ್ ಐಕಾನ್ ಕಾಣುತ್ತದೆ.
- ಅದನ್ನು ಕ್ಲಿಕ್ ಮಾಡಿ ಪ್ಲಸ್ ಚಿಹ್ನೆ (+) ಮೇಲೆ ಕ್ಲಿಕ್ ಮಾಡಿ ಚಾನಲ್ ಕ್ರಿಯೇಟ್ ಮಾಡಬಹುದು.
ಚಾನಲ್ ಹೆಸರು, ವಿವರ, ಐಕಾನ್ ಇತ್ಯಾದಿಯನ್ನು ಸೇರಿಸಿ ನಿಮ್ಮದೇ ಹೊಸ ವಾಟ್ಸಾಪ್ ಚಾನಲ್ ಆರಂಭಿಸಬಹುದು.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ