Nokia G60 5G: ಮೊಟ್ಟ ಮೊದಲ ನೋಕಿಯಾ 5G ಫೋನ್ ಈಗ ಖರೀದಿಗೆ ಲಭ್ಯ: ಬೆಲೆ ಎಷ್ಟು?, ಏನು ಫೀಚರ್ಸ್?
Nokia 5G Smartphone: ಹೊಸ ಅವತಾರದೊಂದಿಗೆ ನೋಕಿಯಾ ಭಾರತದಲ್ಲಿ ಮತ್ತೆ ಧೂಳೆಬ್ಬಿಸುತ್ತಿದೆ. ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ ಜಿ60 5ಜಿ (Nokia G60 5G).
ಭಾರತದಲ್ಲಿ 5ಜಿ ಯುಗ ಆರಂಭವಾಗಿದ್ದೇ ತಡ ಸ್ಮಾರ್ಟ್‌ಫೋನ್ ಕಂಪನಿಗಳು ಒಂದರ ಹಿಂದೆ ಒಂದರಂತೆ ಆಕರ್ಷಕವಾದ 5ಜಿ (5G) ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಅದುಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಇದೀಗ ನೋಕಿಯಾ ಸರದಿ. ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಹೇಳ ಹೆಸರಿಲ್ಲದಂತಾಗಿದೆ. ಚೀನೀ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್ಗಳ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಭಾರತದಲ್ಲಿ ದೊಡ್ಟ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿಲ್ಲ. ಆದರೆ, ಕಳೆದ ವಾರ ಹೊಸ ಅವತಾರದೊಂದಿಗೆ ನೋಕಿಯಾ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಾಡಿತ್ತು. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ ಜಿ60 5ಜಿ (Nokia G60 5G). ಇದೀಗ ಈ ಫೋನ್ ಖರೀದಿಗೆ ಸಿಗುತ್ತಿದೆ.
ನೋಕಿಯಾ G60 5G ಸ್ಮಾರ್ಟ್‌ಫೋನ್ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಿ ಅನಾವರಣಗೊಂಡಿರುವ ಈ ಫೋನಿನ 6GB RAM, 128GB ಸ್ಟೋರೇಜ್ ಆಯ್ಕೆಗೆ 29,999 ರೂ. ನಿಗದಿ ಮಾಡಲಾಗಿದೆ. ನೋಕಿಯಾ ಭಾರತದ ಅಧಿಕೃತ ವೆಬ್ಸೈಟ್ ಮತ್ತು ಆಯ್ದ ರಿಟೇಲ್ ಸ್ಟೋರ್ಗಳಲ್ಲಿ ಈ ಫೋನನ್ನು ಖರೀದಿಸಬಹುದು. ಇದರ ಜೊತೆಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದ್ದು 3,599 ರೂ. ವಿನ ನೋಕಿಯಾ ಈಯರ್ ಬರ್ಡ್ಸ್ ಅನ್ನು ಉಚಿತವಾಗಿ ನಿಮ್ಮದಾಗಿಸಬಹುದು.
ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ನೋಕಿಯಾ G60 5G 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ನಿಂದ ಕೂಡಿದೆ. ಈ ಡಿಸ್ ಪ್ಲೇ ಕೂಡ ವಿಭಿನ್ನವಾಗಿದ್ದು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಪಡೆದುಕೊಂಡಿದೆ.
ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ವೇಗದೊಂದಿಗೆ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್ 12 OS ಅಳವಡಿಸಲಾಗಿದೆ. ಇದು 3 ವರ್ಷಗಳ ಆಂಡ್ರಾಯ್ಡ್ ಒಎಸ್ ಅಪ್‌ಗ್ರೇಡ್ ಮತ್ತು ಮಾಸಿಕ ಸೆಕ್ಯುರ್ ಅಪ್ಡೇಟ್ ನೀಡಲಿದೆ. ಈ ಫೋನಿನ ಹಿಂಭಾಗ ಮತ್ತು ಮುಂಭಾಗದ ಡಿಸೈನ್ ಅತ್ಯುತ್ತಮವಾಗಿದ್ದು ಯುವಕ-ಯುವತಿಯರನ್ನು ಆಕರ್ಷಿಸುವ ರೀತಿಯಲ್ಲಿದೆ.
ನೋಕಿಯಾ G60 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡರೆ, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
ದೊಡ್ಡ ಮಟ್ಟದ ಬ್ಯಾಟರಿ ನೀಡಲಾಗಿಲ್ಲ. ಇದು 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ ತಕ್ಕಂತೆ 20W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಈ ಫೋನಿನ ಬೆಲೆಗೆ ಹೋಲಿಸಿದರೆ ಇದು ಕಡಿಮೆ ವೇಗದ ಚಾರ್ಜಿಂಗ್ ಸಪೋರ್ಟ್ ಆಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಐಫೋನ್ ನೂತನ ಸರಣಿಯಲ್ಲಿ ಇರುವಂತೆ eSIM ಆಯ್ಕೆ ಇರಲಿದೆ. ಉಳಿದಂತೆ ವೈಫೈ 6, ಬ್ಲೂಟೂತ್ 5.1, GPS, USB ಟೈಪ್-ಸಿ ಪೋರ್ಟ್ ಬೆಂಬಲ ಪಡೆದುಕೊಂಡಿದೆ.