ಗ್ರಾಹಕರ ಸೈಬರ್ ಸುರಕ್ಷತೆ ಕುರಿತು ನಾರ್ಟನ್ ವರದಿ: ಇ ಕಾಮರ್ಸ್​ ಸೈಟ್ ಉಪಯೋಗಿಸುವ ಮುನ್ನ ಎಚ್ಚರವಾಗಿರಿ

| Updated By: Vinay Bhat

Updated on: Oct 21, 2022 | 11:44 AM

ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಭರಣಗಳು, ಬಟ್ಟೆಗಳು ಸೇರಿದಂತೆ ಹತ್ತು ಹಲವು ಉತ್ಪನ್ನಗಳನ್ನು ಮಾರಾಟ ಮಾಡುವ ಇ-ಕಾಮರ್ಸ್‌ ವೇದಿಕೆಗಳನ್ನು ನಕಲು ಮಾಡಿ, ಸೈಬರ್ ಅಪರಾಧಿಗಳು ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ.

ಗ್ರಾಹಕರ ಸೈಬರ್ ಸುರಕ್ಷತೆ ಕುರಿತು ನಾರ್ಟನ್ ವರದಿ: ಇ ಕಾಮರ್ಸ್​ ಸೈಟ್ ಉಪಯೋಗಿಸುವ ಮುನ್ನ ಎಚ್ಚರವಾಗಿರಿ
ಸಾಂದರ್ಭಿಕ ಚಿತ್ರ
Follow us on

ನಾರ್ಟನ್‌ಲೈಫ್‌ಲಾಕ್‌ನ ಜಾಗತಿಕ ಮಟ್ಟದ ಸಂಶೋಧನಾ ತಂಡವು ಗ್ರಾಹಕರ ಸೈಬರ್ ಸುರಕ್ಷತೆಗೆ (Cyber Security) ಸಂಬಂಧಿಸಿದ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಈ ವರ್ಷದ ಜುಲೈನಿಂದ ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಸೈಬರ್‌ ಸುರಕ್ಷತೆಗೆ ಸಂಬಂಧಿಸಿದಂತೆ ಎದುರಾದ ಪ್ರಮುಖ ಅಪಾಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಇದರಲ್ಲಿ ತಿಳಿಸಲಾಗಿದೆ. ಸೈಬರ್‌ ಅಪಾಯಗಳನ್ನು ತಡೆಯಲು ಭಾರತದಲ್ಲಿ ಸೆಪ್ಟೆಂಬರ್‌ ತಿಂಗಳೊಂದರಲ್ಲಿಯೇ (30 ದಿನಗಳ ಅವಧಿಯಲ್ಲಿ) ಒಟ್ಟು 47 ಲಕ್ಷ ವೆಬ್‌ ವಿಳಾಸಗಳನ್ನು, ವೆಬ್‌ ಕೊಂಡಿಗಳನ್ನು ಬ್ಲಾಕ್‌ ಮಾಡಿದೆಯಂತೆ. ಕಳ್ಳ ಮಾರ್ಗದ ಮೂಲಕ ಪಡೆಯಲಾದ ವಿವರಗಳನ್ನು ಬಳಸಿ ಪ್ರಮುಖ ಕಂಪನಿಗಳ ಮೇಲೆ ಚೆಗೆ ನಡೆದ ಸೈಬರ್ ದಾಳಿಗಳನ್ನು ನಾರ್ಟನ್ ಲ್ಯಾಬ್ಸ್ ವಿಶ್ಲೇಷಣೆಗೆ ಒಳಪಡಿಸಿದ್ದು ಸೈಬರ್ ವಂಚಕರು ಮಾಹಿತಿಯನ್ನು ಕದ್ದು, ಅದನ್ನು ಬಳಸಿ, ಬಾಧಿತರಾದವರಿಂದ ಹಣ ಕೀಳುವ ಉದ್ದೇಶ ಹೊಂದಿದ್ದರು ಎಂದು ಹೇಳಿದೆ. ಅಲ್ಲದೆ, ಸ್ವಯಂಚಾಲಿತ ಇ-ಮೇಲ್‌ಗಳು (E- Mail), ದೃಢೀಕರಣಕ್ಕೆ ಬಳಕೆಯಾಗುವ ಗುಪ್ತಸಂಖ್ಯೆಗಳನ್ನು ಕಳುಹಿಸಲು ನೆರವಾಗುವ ವಿಶ್ವಾಸಾರ್ಹ ತಂತ್ರಜ್ಞಾನಗಳ (Technology) ಅಡಿಪಾಯವನ್ನೇ ಹಾಳುಮಾಡುವ ಗುರಿ ಕೂಡ ಅವರಿಗೆ ಇತ್ತು ಎಂದು ತಿಳಿಸಿದೆ.

‘ಒಂದು ಬಾರಿ ಮಾತ್ರ ಬಳಸುವ ಗುಪ್ತಸಂಖ್ಯೆಗಳನ್ನು (ಒಟಿಪಿ) ಗೊತ್ತುಮಾಡಿಕೊಳ್ಳುವ ಕೆಲಸದಲ್ಲಿ ಸೈಬರ್ ಅಪರಾಧಿಗಳು ಪಳಗಿಬಿಟ್ಟಿದ್ದಾರೆ. ಅಲ್ಲದೆ, ಇಂತಹ ಒಟಿಪಿ ಅಥವಾ ಗುಪ್ತನಾಮ ರವಾನಿಸುವ ವ್ಯವಸ್ಥೆಯ ತಳಹದಿಯನ್ನೇ ಹಾಳು ಮಾಡಿದರೆ ತಮ್ಮ ಯತ್ನ ಇನ್ನಷ್ಟು ಫಲ ಕೊಡುತ್ತದೆ ಎಂಬುದು ಕೂಡ ಅವರಿಗೆ ಗೊತ್ತಿದೆ’ ಎಂದು ನಾರ್ಟನ್‌ಲೈಫ್‌ಲಾಕ್‌ನ ತಾಂತ್ರಿಕ ನಿರ್ದೇಶಕ ಮತ್ತು ಸಂಶೋಧಕ ಜೆಫ್ ನಾಥನ್ ಹೇಳಿದ್ದಾರೆ.

ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಭರಣಗಳು, ಬಟ್ಟೆಗಳು ಸೇರಿದಂತೆ ಹತ್ತು ಹಲವು ಉತ್ಪನ್ನಗಳನ್ನು ಮಾರಾಟ ಮಾಡುವ ಇ-ಕಾಮರ್ಸ್‌ ವೇದಿಕೆಗಳನ್ನು ನಕಲು ಮಾಡಿ, ಸೈಬರ್ ಅಪರಾಧಿಗಳು ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಕಲಿ ವೆಬ್‌ಸೈಟ್‌ಗಳು ಬಹುತೇಕ ಸಂದರ್ಭಗಳಲ್ಲಿ ಅಸಲಿ ಎಂಬಂತೆ ಕಾಣಿಸುತ್ತವೆ. ಇವುಗಳ ಬಗ್ಗೆ ಒಳ್ಳೆಯ ವಿಮರ್ಶೆಗಳು ವೆಬ್‌ ಲೋಕದಲ್ಲಿ ಕಾಣಿಸುತ್ತವೆ, ಇವು ಸಾಮಾಜಿಕ ಜಾಲತಾಣ ಖಾತೆಗಳ ಜೊತೆ ನಂಟು ಹೊಂದಿರುತ್ತವೆ. ಆದರೆ, ಇಂತಹ ವೇದಿಕೆಗಳ ಮೂಲಕ ಉತ್ಪನ್ನಗಳ ಖರೀದಿಗೆ ಮುಂದಾದರೆ ನಕಲಿ ಉತ್ಪನ್ನ ಮನೆ ಬಾಗಿಲಿಗೆ ಬರಬಹುದು. ಕೆಲವೊಮ್ಮೆ ಯಾವ ಉತ್ಪನ್ನವೂ ಮನೆಗೆ ಬರದಿರಬಹುದು. ಉತ್ಪನ್ನಗಳ ಬೆಲೆಯು ನಂಬಲು ಸಾಧ್ಯವಿಲ್ಲದ ಮಟ್ಟದಲ್ಲಿ ಇದ್ದರೆ, ಅಸಹಜ ರೀತಿಯಲ್ಲಿ ಪಾವತಿ ವ್ಯವಸ್ಥೆ ಇದ್ದರೆ ಅದನ್ನು ಎಚ್ಚರಿಕೆಯಿಂದ ಕಾಣಬೇಕು ಎಂದು ನಾರ್ಟನ್ ಲ್ಯಾಬ್ಸ್ ಗ್ರಾಹಕರಲ್ಲಿ ಮನವಿ ಮಾಡಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಜಾಹೀರಾತುಗಳು ಮತ್ತು ಅನಗತ್ಯವಾಗಿ ಮೊಬೈಲ್‌ಗೆ ಬರುವ ಸಂದೇಶಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.

ಇದನ್ನೂ ಓದಿ
WhatsApp: ದೀಪಾವಳಿಯ ಖುಷಿಯಲ್ಲಿದ್ದವರಿಗೆ ಶಾಕ್: ಈ ಆಂಡ್ರಾಯ್ಡ್-ಐಫೋ​ನ್​ನಲ್ಲಿ ವಾಟ್ಸ್​ಆ್ಯಪ್ ಬಂದ್
ಭಾರತದಲ್ಲಿ 200MP ಕ್ಯಾಮೆರಾದ ಮೋಟೋ ಎಡ್ಜ್ 30 ಆಲ್ಟ್ರಾಕ್ಕೆ ಭರ್ಜರಿ ಬೇಡಿಕೆ: ಮತ್ತೊಂದು ಹೊಸ ವೇರಿಯೆಂಟ್ ರಿಲೀಸ್
Redmi Note 12 Series: 210W ಫಾಸ್ಟ್ ಚಾರ್ಜರ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ರೆಡ್ಮಿ ನೋಟ್ 12 ಸರಣಿ
ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್​​ಗೆ ₹ 1,337 ಕೋಟಿ ದಂಡ ವಿಧಿಸಿದ ಸಿಸಿಐ

ನಾರ್ಟನ್‌ ಲ್ಯಾಬ್ಸ್‌ ಕಂಡುಕೊಂಡಿರುವ ಸಂಗತಿಗಳ ಪೈಕಿ ಇನ್ನೊಂದು ಮಹತ್ವದ, ಅಪಾಯಕಾರಿ ಆಗಿರುವ ವಿಚಾರ ಇದೆ. ಶೇಕಡ 80ರಷ್ಟು ವೆಬ್‌ಸೈಟ್‌ಗಳು ತಮ್ಮಲ್ಲಿ ಗ್ರಾಹಕರು ಯಾವೆಲ್ಲ ವಿಷಯಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ ಎಂಬುದನ್ನು ಜಾಹೀರಾತುದಾರರ ಜೊತೆ ಉದ್ದೇಶಪೂರ್ವಕವಾಗಿ ಅಥವಾ ಅಚಾತುರ್ಯದಿಂದ ಹಂಚಿಕೊಳ್ಳುತ್ತಿವೆ. ಗ್ರಾಹಕರ ಮೇಲೆ ಕಣ್ಣಿರಿಸಿರುವ ವ್ಯಕ್ತಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ, ಗ್ರಾಹಕನ ಐಪಿ ವಿಳಾಸ, ವೆಬ್‌ಸೈಟ್‌ನಲ್ಲಿ ಇರುವ ವಸ್ತು ವಿಷಯ, ವೆಬ್‌ಸೈಟ್‌ನ ಡೊಮೈನ್‌ ಮತ್ತು ಇನ್ನೂ ಹಲವು ಮಾಹಿತಿಗಳನ್ನು ಪಡೆಯಲು ಸಾಧ್ಯವಿದೆ. ಹೀಗೆ ಮಾಡಿದಾಗ ಗ್ರಾಹಕ ಯಾವ ವಿಷಯದ ಬಗ್ಗೆ ಹುಡುಕಾಟ ನಡೆಸುತ್ತಿದ್ದ ಎಂಬುದು ಹೊರಗಿನವರಿಗೆ ಗೊತ್ತಾಗುತ್ತದೆ. ಅದು ಆ ಗ್ರಾಹಕನಿಗೆ ಕಾಯಿಲೆಗಳ ಬಗ್ಗೆ ಇರುವ ಆತಂಕ ಆಗಿರಬಹುದು, ಕೌಟುಂಬಿಕ ವಿಚಾರ ಆಗಿರಬಹುದು ಅಥವಾ ಆತ ಎದುರಿಸುತ್ತಿರುವ ಕಾನೂನು ಸಮಸ್ಯೆಯೂ ಆಗಿರಬಹುದು. ಇದನ್ನು ಬಳಸಿ ಜಾಹೀರಾತುದಾರರು ಅನಿರೀಕ್ಷಿತ ಬಗೆಗಳಲ್ಲಿ ಹಾಗೂ ಗ್ರಾಹಕನಿಗೆ ಮುಜುಗರ ಆಗುವ ರೀತಿಯಲ್ಲಿ ಜಾಹೀರಾತು ರೂಪಿಸಬಹುದು.

ಮತ್ತಷ್ಟು ಟೆಕ್ನಾಲಜಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ