WhatsApp: ಯಾರು ಬೇಕಿದ್ದರೂ ನಿಮ್ಮ ವಾಟ್ಸ್​ಆ್ಯಪ್​ ಹ್ಯಾಕ್​ ಮಾಡಬಹುದು; ಸ್ಕ್ರೀನ್​ ಶೇರ್​ ಮಾಡುವಾಗ ಇರಲಿ ಎಚ್ಚರ!

| Updated By: Skanda

Updated on: Aug 12, 2021 | 11:06 AM

ಇತ್ತೀಚೆಗಷ್ಟೇ ಕೇರಳದ ಶಿಕ್ಷಕಿಯೊಬ್ಬರಿಗೆ ಅವರ ವಾಟ್ಸ್​ಆ್ಯಪ್​ ಹ್ಯಾಕ್​ ಆಗಿರುವ ವಿಚಾರ ಗಮನಕ್ಕೆ ಬಂದಿದೆ. ಅದು ಹೇಗಾಯಿತು? ಯಾರು ಇದನ್ನು ಮಾಡಿದರು? ಎಂದು ತಲೆ ಕೆಡಿಸಿಕೊಂಡು ಹುಡುಕಾಡಿದಾಗ ಅವರ ವಿದ್ಯಾರ್ಥಿಯೇ ಹ್ಯಾಕ್​ ಮಾಡಿರುವುದು ಬೆಳಕಿಗೆ ಬಂದಿದೆ.

WhatsApp: ಯಾರು ಬೇಕಿದ್ದರೂ ನಿಮ್ಮ ವಾಟ್ಸ್​ಆ್ಯಪ್​ ಹ್ಯಾಕ್​ ಮಾಡಬಹುದು; ಸ್ಕ್ರೀನ್​ ಶೇರ್​ ಮಾಡುವಾಗ ಇರಲಿ ಎಚ್ಚರ!
ವಾಟ್ಸಾಪ್ (ಪ್ರಾತಿನಿಧಿಕ ಚಿತ್ರ)
Follow us on

ಕಳೆದೊಂದು ದಶಕದಲ್ಲಿ ತಂತ್ರಜ್ಞಾನ ಅಚ್ಚರಿಯ ರೀತಿಯಲ್ಲಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ನಾವು ಬೇಡವೆಂದರೂ ಕಾಲದ ಅನಿವಾರ್ಯತೆ ನಮ್ಮನ್ನು ತಂತ್ರಜ್ಞಾನಗಳ ಸುಳಿಯಲ್ಲಿ ಸಿಲುಕಿಸುತ್ತದೆ. ಹೀಗಾಗಿ ಸ್ಮಾರ್ಟ್​ಫೋನ್​, ಇಂಟರ್​ನೆಟ್, ಸಾಮಾಜಿಕ ಜಾಲತಾಣಗಳು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿವೆ. ಕೊರೊನಾ ಆರಂಭವಾದ ಮೇಲೆ ಚಿಕ್ಕ ಮಕ್ಕಳಿಗೂ ಸ್ಮಾರ್ಟ್​ಫೋನ್​ ಅನಿವಾರ್ಯ ಆಗಿರುವುದರಿಂದ ಅದೀಗ ಮನುಷ್ಯನ ಮೂಲಭೂತ ಅವಶ್ಯಕತೆಯೇ ಆಗಿಬಿಟ್ಟಿದೆ. ಅದರಲ್ಲೂ ಈಗಿನ ಮಕ್ಕಳು ತಂತ್ರಜ್ಞಾನದ ಒಳಗುಟ್ಟುಗಳನ್ನು ಗ್ರಹಿಸಿಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದಿರುವುದರಿಂದ ಅದು ಅವರ ಕುತೂಹಲಗಳನ್ನು ಕೆದಕುತ್ತಾ, ಹೊಸತೇನನ್ನೋ ಪರಿಚಯಿಸುತ್ತಾ ಅವರನ್ನು ಹೆಚ್ಚೆಚ್ಚು ಆವರಿಸಿಕೊಳ್ಳುತ್ತದೆ. ಆದರೆ, ಇದು ಎಷ್ಟೋ ಬಾರಿ ಸಮಸ್ಯೆಗಳಿಗೂ ಕಾರಣವಾಗುವ ವಿಚಾರ ಎನ್ನುವುದನ್ನು ಕಡೆಗಣಿಸುವಂತಿಲ್ಲ.

ಇತ್ತೀಚೆಗಷ್ಟೇ ಕೇರಳದ ಶಿಕ್ಷಕಿಯೊಬ್ಬರಿಗೆ ಅವರ ವಾಟ್ಸ್​ಆ್ಯಪ್​ ಹ್ಯಾಕ್​ ಆಗಿರುವ ವಿಚಾರ ಗಮನಕ್ಕೆ ಬಂದಿದೆ. ಅದು ಹೇಗಾಯಿತು? ಯಾರು ಇದನ್ನು ಮಾಡಿದರು? ಎಂದು ತಲೆ ಕೆಡಿಸಿಕೊಂಡು ಹುಡುಕಾಡಿದಾಗ ಅವರ ವಿದ್ಯಾರ್ಥಿಯೇ ಹ್ಯಾಕ್​ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಅತ್ಯಂತ ಪ್ರಮುಖ ವಿಚಾರವಾಗಿದ್ದು, ಯಾರು ಬೇಕಾದರೂ ನಿಮ್ಮ ವಾಟ್ಸ್​ಆ್ಯಪ್​ ಹ್ಯಾಕ್​ ಮಾಡಬಹುದು ಎನ್ನುವುದಕ್ಕೆ ನಿದರ್ಶನವಾಗಿರುವುದರಿಂದ ಹೇಗೆ ಎಚ್ಚರಿಕೆ ವಹಿಸಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.

ವಾಟ್ಸ್​ಆ್ಯಪ್​ ಹ್ಯಾಕ್​ ಆಗಿದ್ದು ಹೇಗೆ?
ಈಗ ಆನ್​ಲೈನ್​ ತರಗತಿಗಳು ನಡೆಯುತ್ತಿವೆಯಾದ್ದರಿಂದ ಪಾಠ ಮಾಡುತ್ತಿದ್ದ ಶಿಕ್ಷಕಿ ತಮ್ಮ ಮೊಬೈಲ್​ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದರು. ಅಂದರೆ ಪಾಠ ಮಾಡುವಾಗ ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಕಿಯ ಮೊಬೈಲ್​ ಸ್ಕ್ರೀನ್​ ಕಾಣಿಸುತ್ತಿತ್ತು. ಇದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್​ಗೆ ಶಿಕ್ಷಕಿಯ ನಂಬರ್​ ಹಾಕಿ ಲಾಗಿನ್​ ಆಗಲು ಪ್ರಯತ್ನಿಸಿದ್ದಾನೆ. ಆಗ ಶಿಕ್ಷಕಿಯ ಮೊಬೈಲ್​ಗೆ ಓಟಿಪಿ ಸಂಖ್ಯೆ ಹೋಗಿದ್ದು, ಸ್ಕ್ರೀನ್​ ಶೇರ್ ಆಗಿತ್ತಾದ್ದರಿಂದ ವಿದ್ಯಾರ್ಥಿಗೆ ಆ ಸಂಖ್ಯೆ ಕಾಣಿಸಿದೆ. ಬಳಿಕ ಆತ ಅದನ್ನು ಬಳಸಿಕೊಂಡು ಶಿಕ್ಷಕಿಯ ವಾಟ್ಸ್​ಆ್ಯಪ್​ ಅಕೌಂಟ್​ಗೆ ಲಾಗಿನ್​ ಆಗಿದ್ದಾನೆ.

ವಿದ್ಯಾರ್ಥಿ ತನ್ನ ಮೊಬೈಲ್​ನಿಂದ ಲಾಗಿನ್​ ಆಗುತ್ತಿದ್ದಂತೆಯೇ ಶಿಕ್ಷಕಿಯ ಮೊಬೈಲ್​ನಲ್ಲಿ ಅಕೌಂಟ್​ ಲಾಗ್​ ಔಟ್​ ಆಗಿದೆ. ಪಾಠ ಮುಗಿಸಿದ ಬಳಿಕ ವಾಟ್ಸ್​ಆ್ಯಪ್​ ಕೆಲಸ ಮಾಡದೇ ಇರುವುದನ್ನು ಗಮನಿಸಿದ ಶಿಕ್ಷಕಿಗೆ ಹ್ಯಾಕ್​ ಆಗರುವ ವಿಚಾರ ಗಮನಕ್ಕೆ ಬಂದಿದೆ. ಆರಂಭದಲ್ಲಿ ಇದನ್ನು ಯಾರು ಮಾಡಿದರೆಂದು ಗೊತ್ತಾಗಲಿಲ್ಲವಾದರೂ ಸೈಬರ್​ ಪೊಲೀಸರು ವಿದ್ಯಾರ್ಥಿಯ ಮೊಬೈಲ್​ನಿಂದ ಲಾಗಿನ್​ ಆಗಿರುವುದನ್ನು ದೃಢಪಡಿಸಿದ್ದಾರೆ. ಸದ್ಯ ಶಿಕ್ಷಕಿ ತನ್ನ ವಿದ್ಯಾರ್ಥಿಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲವಾದರೂ ಇದು ಎಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಸಂಗತಿಯಾಗಿದೆ.

ಸ್ಕ್ರೀನ್​ ಶೇರ್ ಮಾಡುವಾಗ ಎಚ್ಚರವಿರಲಿ
ಈಗ ಸ್ಕ್ರೀನ್​ ಶೇರ್ ಮಾಡಿಕೊಂಡು ಪಾಠ ಮಾಡುವುದು ಅನಿವಾರ್ಯ ಆಗಿರುವುದರಿಂದ ಶಿಕ್ಷಕರಿಗೆ ಇದೊಂದು ದೊಡ್ಡ ಸವಾಲೇ ಸರಿ. ತಂತ್ರಜ್ಞಾನದ ಕುರಿತು ಹೆಚ್ಚು ಮಾಹಿತಿ ಇಲ್ಲದ ಶಿಕ್ಷಕರನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿ ವಾಟ್ಸ್​ಆ್ಯಪ್​ ಮಾಡತ್ರವಲ್ಲದೇ ಓಟಿಪಿ ಬಳಸಿಕೊಂಡು ನಿಮ್ಮ ಇನ್ನಿತರ ವ್ಯವಹಾರಗಳಿಗೂ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಮೊಬೈಲ್​ನಲ್ಲಿ ಪ್ರೈವೆಸಿ ಸೆಟ್ಟಿಂಗ್​ ಎಷ್ಟು ಭದ್ರವಾಗಿದೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳುವುದು ಅನಿವಾರ್ಯ. ಒಂದುವೇಳೆ ಸ್ಕ್ರೀನ್​ ಶೇರ್ ಮಾಡಿದಾಗ ಯಾವುದೇ ಮೆಸೇಜ್​ ಅಥವಾ ನೋಟಿಫಿಕೇಶನ್​ ಬಂದರೂ ಅದು ನೇರವಾಗಿ ಡಿಸ್​ಪ್ಲೇ ಆಗದಂತೆ ಸೆಟ್ಟಿಂಗ್ಸ್​ನಲ್ಲಿ ಬದಲಾಯಿಸಿಕೊಳ್ಳಿ ಅಥವಾ ನಿಮ್ಮ ಬಳಿ ಪ್ರತ್ಯೇಕ ಮೊಬೈಲ್​, ಲ್ಯಾಪ್​ಟಾಪ್​ ಇದ್ದಲ್ಲಿ ಅದನ್ನೇ ಬಳಸಿ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬೇಡಿ ಎನ್ನುವುದು ನಮ್ಮ ಕಳಕಳಿ.

(Student hacks into teacher Whatsapp during online classes be careful while sharing screen)

ಇದನ್ನೂ ಓದಿ:
WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನು ಯಾರು ಬ್ಲಾಕ್​ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ? 

WhatsApp: ವಾಟ್ಸ್​ಆ್ಯಪ್​ ಡೆಸ್ಕ್​ಟಾಪ್​ನಲ್ಲಿ ವಿಡಿಯೋ ಕರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ