ವಿಶ್ವದ ನಂಬರ್ 1 ವೆಬ್​ಸೈಟ್ ಆಗಿ ಗುರುತಿಸಿಕೊಂಡ ಭಾರತದಲ್ಲಿ ಬ್ಯಾನ್ ಆದ ಆ್ಯಪ್: ಟಾಪ್ 10 ಪಟ್ಟಿ ಇಲ್ಲಿದೆ

ವಿಶ್ವದ ನಂಬರ್ 1 ವೆಬ್​ಸೈಟ್ ಆಗಿ ಗುರುತಿಸಿಕೊಂಡ ಭಾರತದಲ್ಲಿ ಬ್ಯಾನ್ ಆದ ಆ್ಯಪ್: ಟಾಪ್ 10 ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ

ಭಾರತದಲ್ಲಿ ಕಳೆದ ವರ್ಷ, ಟಿಕ್ ಟಾಕ್ ಸೇರಿದಂತೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ಭದ್ರತೆಯನ್ನು ಉಲ್ಲೇಖಿಸಿ ನಿಷೇಧಿಸಲಾಯಿತು. ಸರ್ಕಾರದ ನಿಷೇಧದ ನಂತರ, ಗೂಗಲ್ ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಸೇರಿದಂತೆ ಎಲ್ಲಾ ನಿಷೇಧಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿತ್ತು.

TV9kannada Web Team

| Edited By: Zahir PY

Dec 27, 2021 | 8:49 PM

ಕಿರು ವೀಡಿಯೊ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ 2021 ರ ಅತ್ಯಂತ ಜನಪ್ರಿಯ ವೆಬ್​ಸೈಟ್ (ಡೊಮೇನ್‌) ಆಗಿ ಗುರುತಿಸಿಕೊಂಡಿದೆ. ಅದು ಕೂಡ ವಿಶ್ವ ಪ್ರಸಿದ್ಧ ಗೂಗಲ್ ಅನ್ನು ಹಿಂದಿಕ್ಕಿ ಎಂಬುದು ವಿಶೇಷ. ವೆಬ್ ಭದ್ರತಾ ಕಂಪನಿ ಕ್ಲೌಡ್‌ಫ್ಲೇರ್ ಒಂದು ವರ್ಷದ ಡೇಟಾ ವಿಶ್ಲೇಷಣೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ, ಗೂಗಲ್ ಸೇರಿದಂತೆ ವಿಶ್ವದ 9 ದೊಡ್ಡ ಕಂಪನಿಗಳನ್ನು ಟಿಕ್ ಟಾಕ್ ಹಿಂದಿಕ್ಕಿದೆ. 2020 ರಲ್ಲಿ ಫೇಸ್‌ಬುಕ್ ನಂಬರ್ 1 ಸ್ಥಾನದಲ್ಲಿದ್ದರೆ, ಗೂಗಲ್ ಅತ್ಯಂತ ಜನಪ್ರಿಯ ಡೊಮೇನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿತ್ತು. ಅಲ್ಲದೆ ಕಳೆದ ವರ್ಷ ಟಿಕ್‌ಟಾಕ್ 7 ನೇ ಸ್ಥಾನದಲ್ಲಿತ್ತು.

ಭಾರತದಲ್ಲಿ ಕಳೆದ ವರ್ಷ, ಟಿಕ್ ಟಾಕ್ ಸೇರಿದಂತೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ಭದ್ರತೆಯನ್ನು ಉಲ್ಲೇಖಿಸಿ ನಿಷೇಧಿಸಲಾಯಿತು. ಸರ್ಕಾರದ ನಿಷೇಧದ ನಂತರ, ಗೂಗಲ್ ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಸೇರಿದಂತೆ ಎಲ್ಲಾ ನಿಷೇಧಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿತ್ತು. ಇದಾಗ್ಯೂ ಈ ಬಾರಿ ಮತ್ತೆ ಜನಪ್ರಿಯತೆ ವಿಷಯದಲ್ಲಿ ಟಿಕ್​ ಟಾಕ್ ಡೊಮೇನ್ ನಂಬರ್ 1 ಸ್ಥಾನಕ್ಕೇರಿರುವುದು ವಿಶೇಷ.

ಕ್ಲೌಡ್‌ಫ್ಲೇರ್ ವರದಿಯ ಪ್ರಕಾರ, 17 ಫೆಬ್ರವರಿ 2021 ರಂದು ಟಿಕ್‌ಟಾಕ್ ಒಂದು ದಿನದ ಮಟ್ಟಿಗೆ ಅಗ್ರಸ್ಥಾನದಲ್ಲಿತ್ತು. ಇನ್ನು ಮಾರ್ಚ್ ಮತ್ತು ಮೇನಲ್ಲಿ ಟಿಕ್ ಟಾಕ್ ಕೆಲವು ದಿನಗಳವರೆಗೆ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಆದರೆ ಆಗಸ್ಟ್ 10, 2021 ರ ನಂತರ, ಟಿಕ್‌ಟಾಕ್ ಅಗ್ರಸ್ಥಾನದಲ್ಲೇ ಉಳಿದುಕೊಂಡಿತು. ಇದಾಗ್ಯೂ ಗೂಗಲ್ ಕೆಲ ದಿನಗಳವರೆಗೆ ನಂಬರ್ ಒನ್ ಸ್ಥಾನದಲ್ಲಿತ್ತು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ, ಟಿಕ್‌ಟಾಕ್ ಮತ್ತೆ ಅಗ್ರಸ್ಥಾನಕ್ಕೇರಿದೆ ಎಂದು ತಿಳಿಸಿದೆ.

ಕ್ಲೌಡ್‌ಫ್ಲೇರ್ ಬಿಡುಗಡೆ ಮಾಡಿರುವ ಟಾಪ್ ವೆಬ್​ಸೈಟ್ ಡೊಮೇನ್​ಗಳ ಪಟ್ಟಿಯಲ್ಲಿ ಟಿಕ್​ಟಾಕ್ ನಂಬರ್ 1 ಸ್ಥಾನದಲ್ಲಿದ್ದರೆ, ಗೂಗಲ್ 2ನೇ ಸ್ಥಾನ ಅಲಂಕರಿಸಿದೆ. ಇನ್ನು ಫೇಸ್​ಬುಕ್.ಕಾಮ್ (3), ಮೈಕ್ರೋಸಾಫ್ಟ್​. ಕಾಮ್ (4), ಆ್ಯಪಲ್.ಕಾಮ್ (5) ಮತ್ತು ಅಮೆಜಾನ್​ 6 ನೇ ಸ್ಥಾನದಲ್ಲಿದೆ. ನೆಟ್​ಫ್ಲಿಕ್ಸ್​ (7), ಯೂಟ್ಯೂಬ್ (8), ಟ್ವಿಟರ್ (9) ಹಾಗೂ ವಾಟ್ಸ್​ಆ್ಯಪ್​ 10ನೇ ಸ್ಥಾನ ಪಡೆದುಕೊಂಡಿದೆ.

ಕುಂದದ ಟಿಕ್‌ಟಾಕ್ ಜನಪ್ರಿಯತೆ: ಭಾರತದಲ್ಲಿ ಬ್ಯಾನ್​ ಹೊರತಾಗಿಯೂ ಅಮೆರಿಕ, ಯುರೋಪ್, ಬ್ರೆಜಿಲ್ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಟಿಕ್​ಟಾಕ್ ಶಾರ್ಟ್​ ವೀಡಿಯೊ ಅಪ್ಲಿಕೇಶನ್​ ಅತ್ಯಂತ ಜನಪ್ರಿಯ ಆ್ಯಪ್​ ಆಗಿ ಗುರುತಿಸಿಕೊಂಡಿದೆ. ಟಿಕ್ ಟಾಕ್ ಚೀನಾದ ದೈತ್ಯ ಬೈಟ್ ಡ್ಯಾನ್ಸ್ ಕಂಪನಿಯ ಒಡೆತನದಲ್ಲಿದ್ದು, ಈ ವರ್ಷದ ಆರಂಭದಲ್ಲಿ ಸಿಂಗಾಪುರ ಮೂಲದ ಬೈಟ್‌ಡ್ಯಾನ್ಸ್‌ನ ಸಿಎಫ್‌ಒ ಶೌಜಿ ಚೆವ್ ಅವರನ್ನು ಕಂಪನಿಯ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿತು. ಇದೀಗ 2021ರ ವಿಶ್ವದ ನಂಬರ್ 1 ಡೊಮೇನ್ ಆಗಿ ಟಿಕ್​ ಟಾಕ್ ಗುರುತಿಸಿಕೊಂಡಿರುವುದು ವಿಶೇಷ.

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(TikTok beats Google to emerge as most popular website in 2021)

Follow us on

Most Read Stories

Click on your DTH Provider to Add TV9 Kannada