
ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಅತಿ ಹೆಚ್ಚು ಫೀಚರ್ಗಳನ್ನು ಪರಿಚಯಿಸಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್‌ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾರಕ್ಕೆ ಒಂದು ಹೊಸ ಫೀಚರ್ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್ಆ್ಯಪ್ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್ಗಳು ಬರಲಿಕ್ಕಿದ್ದು ಪರೀಕ್ಷಾ ಹಂತದಲ್ಲಿದೆ. ಇದರ ನಡುವೆ ವಾಟ್ಸ್‌ಆ್ಯಪ್ ದಿಢೀರ್ ಆಗಿ ತನ್ನ ಆಂಡ್ರಾಯ್ಡ್ (Android) ಮತ್ತು ಐಓಎಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ಪರಿಚಯಿಸಿದೆ. ಇನ್ನುಂದೆ ವಾಟ್ಸ್ಆ್ಯಪ್ನಲ್ಲಿ (WhatsApp) ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಮೆಟಾ ಒಡೆತನದ ಕಂಪನಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ಆಯ್ದ ಬಳಕೆದಾರರಿಗೆಷ್ಟೆ ಈ ಫೀಚರ್ ಸಿಗುತ್ತಿದ್ದು ಮುಂದಿನ ವಾರದಿಂದ ಎಲ್ಲರಿಗೂ ಬಳಕೆಗೆ ಸಿಗಲಿದೆಯಂತೆ.
ವಾಟ್ಸ್ಆ್ಯಪ್ನ ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಕಾಣಲಿದೆ. ವಾಟ್ಸ್‌ಆ್ಯಪ್ ತೆರೆದು ನ್ಯೂ ಚಾಟ್ನಲ್ಲಿ ಕಾಂಟೆಕ್ಟ್ ಲಿಸ್ಟ್ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು. ಈ ಚಾಟ್ ಬಾಕ್ಸ್ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್ಗಳನ್ನು ಕಳುಹಿಸಬಹುದು. ಈ ಮೂಲಕ ಅಗತ್ಯ ದಾಖಲೆಗಳನ್ನು ಇಲ್ಲಿ ಸೇವ್ ಮಾಡಿಡಬಹುದು.
ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಹಾಕಿ:
ಇನ್ನು ಸದ್ಯದಲ್ಲೇ ವಾಟ್ಸ್‌ಆ್ಯಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದಂತೆ. ವಾಯ್ಸ್ ನೋಟ್ ಅನ್ನು ಸ್ಟೇಟಸ್ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಐಒಎಸ್ ಬಳಕೆದಾರರಿಗೆ ಸಿಗಲಿದೆ. ಈವರೆಗೆ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಂದರೆ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್ಗಳ ಕಾಲ ಇದು ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಐಒಎಸ್ ಬೇಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ವೆಬ್ ಬಳಕೆದಾರರಿಗೆ ಸ್ಕ್ರೀನ್ ಲಾಕ್ ಫೀಚರ್:
ಡೆಸ್ಕ್ಟಾಪ್ನಲ್ಲಿ ವಾಟ್ಸ್‌ಆ್ಯಪ್ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್ ಲಾಕ್ ಎಂಬ ಹೊಸ ಆಯ್ಕೆ ನೀಡುವುದಾಗಿ ಘೋಷಿಸಿದೆ. ವಾಟ್ಸ್‌ಆ್ಯಪ್ ಹಿಂದಿನಿಂದಲೂ ಬಳಕೆದಾರರ ಪ್ರೈವಸಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಇದೀಗ ಭದ್ರತೆಯನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ವಾಟ್ಸ್‌ಆ್ಯಪ್ ವೆಬ್ನಲ್ಲಿ ಬರುವ ಸ್ಕ್ರೀನ್ ಲಾಕ್ ಎಂಬ ಹೊಸ ಫೀಚರ್ನಲ್ಲಿ ವಾಟ್ಸ್‌ಆ್ಯಪ್ ಓಪನ್ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್ಟಾಪ್ನಲ್ಲಿ ವಾಟ್ಸ್‌ಆ್ಯಪ್ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಹಾಗಂತ ಇದು ಕಡ್ಡಾಯವಲ್ಲ. ಬಳಕೆದಾರರು ಈ ಸ್ಕ್ರೀನ್ ಲಾಕ್ ಫೀಚರ್ ಅನ್ನು ಬೇಕಾದಾಗ ಮಾತ್ರ ಉಪಯೋಗಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 29 November 22