ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ದಿನಕ್ಕೊಂದು ನೂತನ ಫೀಚರ್ಗಳನ್ನು ಘೋಷಣೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಬಳಕೆದಾರರನ್ನು ಹೆಚ್ಚಿಸುತ್ತಿರುವ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಿಶೇಷ ಆಯ್ಕೆಗಳನ್ನು ನೀಡುತ್ತಿದೆ. ಈಗಾಗಲೇ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿ ನಿಂತಿದ್ದು, ಕೆಲವೊಂದು ಪರೀಕ್ಷಾ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ವಾಟ್ಸ್ಆ್ಯಪ್ (WhatsApp) ನೂತನ ಡಿಸೈನ್ನಲ್ಲಿ ಕಾಣಿಸಿಕೊಳ್ಳಲಿದೆ. ಈ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಆಯ್ಕೆಯನ್ನು ನೀಡುವ ಬಗ್ಗೆ ವರದಿ ಆಗಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ವಿಡಿಯೋ ಮೆಸೇಜ್ (Video Message) ಫೀಚರ್ ಅನ್ನು ನೀಡಲಿದೆಯಂತೆ.
ವಾಟ್ಸ್ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ಬಳಕೆದಾರರು ತಮ್ಮ ಕಾಂಟೆಕ್ಟ್ನಲ್ಲಿ 60 ಸೆಕೆಂಡುಗಳವರೆಗೆ ಶಾರ್ಟ್ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಮತ್ತು ಹಂಚಿಕೊಳ್ಳುವ ಫೀಚರ್ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಹೇಳಿದೆ. ಇದಕ್ಕೆ ವಿಡಿಯೋ ಮೆಸೇಜ್ ಎಂದು ಹೆಸರಿಡಲಾಗಿದೆ. ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಶೇರ್ ಮಾಡುವುದು ಮತ್ತು ಈ ವಿಡಿಯೋ ಮೆಸೇಜ್ ಬೇರೆ ಬೇರೆ ಆಗಿದೆ. ಹೊಸ ಆಯ್ಕೆಯ ಮೂಲಕ ಬಳಕೆದಾರರು ಒಬ್ಬರ ಚಾಟ್ ತೆರೆದು ರಿಯಲ್ ಟೈಮ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಬಹುದು.
Tecno Phantom V Fold: ಅತಿ ಕಡಿಮೆ ದರಕ್ಕೆ ದೊರೆಯುತ್ತಿದೆ ಟೆಕ್ನೋ ಮೊದಲ ಫೋಲ್ಡಿಂಗ್ ಫೋನ್
ವಿಡಿಯೋ ಮೆಸೇಜ್ ಫೀಚರ್ ಎಂಡ್-ಟು-ಎಂಡು ಎನ್ಕ್ರಿಪ್ಟೆಡ್ ಆಗಿದೆ. ಬಳಕೆದಾರ ರಿಸೀಸ್ ಮಾಡಿಕೊಂಡ ವಿಡಿಯೋ ಮೆಸೇಜ್ ಅನ್ನು ಫಾರ್ವಡ್ ಮಾಡಲು ಸಾಧ್ಯವಿಲ್ಲ. ಹಾಗೆಯೆ ಇದು ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ. ನಿಮಗೆ ಆ ವಿಡಿಯೋ ಬೇಕಿದ್ದಲ್ಲಿ ಸ್ಕ್ರೀನ್ ರೆಕಾರ್ಡ್ ಆಯ್ಕೆಯ ಮೂಲಕ ಸೇವ್ ಮಾಡಿಕೊಳ್ಳಬಹುದು. ಇದು ವೀವ್ ಒನ್ಸ್ ಮೋಡ್ ಆಯ್ಕೆಯನ್ನು ಹೊಂದಿಲ್ಲ. ಸದ್ಯಕ್ಕೆ ಈ ಆಯ್ಕೆ ಪರೀಕ್ಷಾ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ವಿಡಿಯೋ ಮೆಸೇಜ್ ಆಯ್ಕೆ ಸಿಗಲಿದೆಯಂತೆ.
ಇದರ ಜೊತೆಗೆ ವಾಟ್ಸ್ಆ್ಯಪ್ ತನ್ನ ನೋಟವನ್ನು ಬದಲಾಯಿಸಲು ಮುಂದಾಗಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ ಹೊಸ ಸ್ಟೈಲ್ನಲ್ಲಿ ಬಿಡುಗಡೆ ಆಗಲಿದೆ. ಅಂದರೆ ನೀವು ವಾಟ್ಸ್ಆ್ಯಪ್ ತೆರೆದ ಬಳಿಕ ಸೆಟ್ಟಿಂಗ್ಸ್, ಚಾಟ್ ಲಿಸ್ಟ್ ಹೊಸ ಮಾದರಿಯಲ್ಲಿ ಗೋಚರಿಸಲಿದೆ. ಮೊದಲಿಗೆ ಈ ಆಯ್ಕೆ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ. ನಂತರ ಆಂಡ್ರಾಯ್ಡ್ನಲ್ಲಿ ಬರಲಿದೆ.
ಇನ್ನು ವಾಟ್ಸ್ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಲಿದೆ. ನೀವು ವಾಟ್ಸ್ಆ್ಯಪ್ನಲ್ಲಿ ಏನಾದರು ಸ್ಟೇಟಸ್ ಹಂಚಿಕೊಂಡರೆ ಅದು ನೇರವಾಗಿ ಫೇಸ್ಬುಕ್ ಸ್ಟೇಟಸ್ನಲ್ಲೂ ಕಾಣಿಸಲಿದೆ. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಂಚಿಕೊಂಡರೆ ಅದನ್ನು ಎಫ್ಬಿಗೂ ಶೇರ್ ಮಾಡಬೇಕಿತ್ತು. ಆದರೀಗ ಹೊಸ ಫೀಚರ್ ಪ್ರಕಾರ ಅಟೋಮೆಟ್ ಆಗಿ ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿದ ಸ್ಟೇಟಸ್ ಫೇಸ್ಬುಕ್ ಸ್ಟೇಟಸ್ಗೂ ಅಪ್ಲೋಡ್ ಆಗಲಿದೆ. ಹಾಗಂತ ಇದು ಕಡ್ಡಾಯವಲ್ಲ. ವಾಟ್ಸ್ಆ್ಯಪ್ನಲ್ಲಿ ಹೊಸ ಆಯ್ಕೆಯೊಂದು ಕಾಣಿಸಲಿದ್ದು ಆನ್-ಆಫ್ ಮಾಡುವ ಮೂಲಕ ಇದನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸದ್ಯದಲ್ಲೇ ಈ ಆಯ್ಕೆ ಸಿಗಲಿದೆಯಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ