Cyber Swachhta Kendra: ಸೈಬರ್ ಸ್ವಚ್ಛತಾ ಕೇಂದ್ರದಿಂದ ನಿಮಗೂ ಬಂದಿರಬಹುದು ಈ ಮೆಸೇಜ್: ನಿರ್ಲಕ್ಷ್ಯ ಮಾಡದಿರಿ
ಭಾರತದಲ್ಲಿ ಸೈಬರ್ ಸುರಕ್ಷತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೇಂದ್ರ ಸರ್ಕಾರ ಸೈಬರ್ ಸ್ವಚ್ಛತಾ ಕೇಂದ್ರವನ್ನು ಸ್ಥಾಪಿಸಿದ್ದು ಇದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸೈಬರ್ ವಂಚನೆಗೆ ಗುರಿಯಾದರೆ ಸೂಚನೆ ನೀಡುತ್ತದೆ.
ಕಳೆದ ಕೆಲವು ದಿನಗಳಿಂದ ಅನೇಕ ಜನರ ಮೊಬೈಲ್ಗಳಿಗೆ (Mobile) ಸೈಬರ್ ಸ್ವಚ್ಛತಾ ಕೇಂದ್ರದಿಂದ ಎಸ್ಎಮ್ಎಸ್ ಒಂದು ಬರುತ್ತಿದೆ. ”ಸೈಬರ್ ಸ್ವಚ್ಛತಾ ಕೇಂದ್ರದ ಭಾಗವಾಗಿ, ನಿಮ್ಮ ಡಿಜಿಟಲ್ ಸಾಧನಗಳನ್ನು ಅಪಾಯದಿಂದ ಪಾರುಮಾಡಲು CERT-In GoI ಸಲಹೆಯೊಂದನ್ನು ನೀಡುತ್ತದೆ. https://www.csk.gov.in ನಲ್ಲಿ ಬಾಟ್ ಮಾಡುವ ಮೂಲಕ ನಿಮ್ಮ ಸಾಧನವನ್ನು ಸುರಕ್ಷಿತವಾಗಿರಿಸಿ,” ಎಂದ ಸಂದೇಶ ಕಳುಹಿಸುತ್ತಿದೆ. ಅನೇಕರು ಈ ಮುಖ್ಯ ಮಾಹಿತಿಯನ್ನು ನಿರ್ಲಕ್ಷಿಸಿರಬಹುದು. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಯಿಂದ (Cyber Crime) ಪಾರಾಗಲು ಇದು ಬಹುಮುಖ್ಯ. ಭಾರತದಲ್ಲಿ ಸೈಬರ್ ಸುರಕ್ಷತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೇಂದ್ರ ಸರ್ಕಾರ ಸೈಬರ್ ಸ್ವಚ್ಛತಾ ಕೇಂದ್ರವನ್ನು (Cyber Swachhta Kendra) ಸ್ಥಾಪಿಸಿದ್ದು ಇದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸೈಬರ್ ವಂಚನೆಗೆ ಗುರಿಯಾದರೆ ಸೂಚನೆ ನೀಡುತ್ತದೆ.
ಸೈಬರ್ ಸ್ವಚ್ಛತಾ ಕೇಂದ್ರದ ಕೆಲಸ ಏನು?:
ಸೈಬರ್ ಸ್ವಚ್ಛತಾ ಕೇಂದ್ರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಪ್ರಾರಂಭಿಸಲಾಗಿದೆ. ಕಂಪ್ಯೂಟರ್ ವೈರಸ್ ಸೇರಿದಂತೆ ಆಂಡ್ರಾಯ್ಡ್ ಸೋಂಕು ತಡೆಗಟ್ಟುವ ಸಲುವಾಗಿ ಬಳಕೆದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಅಂದರೆ ಸೈಬರ್ ಸ್ವಚ್ಛತಾ ಕೇಂದ್ರವು ಬಾಟ್ನೆಟ್ ಕ್ಲೀನಿಂಗ್ ಮತ್ತು ಮಾಲ್ವೇರ್ ಅನಾಲಿಸಿಸ್ ಕೇಂದ್ರವಾಗಿದೆ. ಈ ಉಪಕ್ರಮವು ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪಿಸಿಗಳನ್ನು ಸೈಬರ್ ದಾಳಿಯಿಂದ ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಇದು ಇಂಟರ್ನೆಟ್ ಸೇವಾ ಪೂರೈಕೆದಾರರ ಸಹಯೋಗದೊಂದಿಗೆ ಬಾಟ್‌ಗಳಿಂದ ಸೋಂಕಿತ ಇಂಟರ್ನೆಟ್ ಪ್ರೋಟೋಕಾಲ್ ವಿಳಾಸಗಳನ್ನು ಪತ್ತೆಹಚ್ಚುತ್ತದೆ. ಹೀಗೆ ವೈರಸ್ ದಾಳಿಯಾದ ಬಳಕೆದಾರರಿಗೆ ಸಂದೇಶವನ್ನು ಕಳುಹಿಸುತ್ತದೆ. ಜೊತೆಗೆ ಸೈಬರ್ ಭದ್ರತಾ ಸಾಧನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಒದಗಿಸುತ್ತದೆ.
Cyber Crime: ಫಾಸ್ಟ್ಯಾಗ್ ರಿಚಾರ್ಜ್ ಮಾಡುವಾಗ ಒಂದು ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ: ತಪ್ಪಿಯೂ ಹೀಗೆ ಮಾಡಬೇಡಿ
ಬಾಟ್ನೆಟ್ ಎಂದರೇನು?:
ಬಾಟ್ನೆಟ್ ಎಂದರೆ, ಅನೇಕ ಕಂಪ್ಯೂಟರ್‌ಗಳನ್ನು ಸೈಬರ್ ಅಪರಾಧಿಗಳು ತಮ್ಮ ವಶಕ್ಕೆ ಪಡೆದುಕೊಂಡು ಮಾಲ್‌ವೇರ್ ಅನ್ನು ಡಿಜಿಟಲ್ ಸಾಧನಕ್ಕೆ ಹರಿಯಬಿಡುತ್ತಾರೆ, ವೈರಸ್ ಅಟ್ಯಾಕ್ ಆಗುವಂತೆ ಮಾಡುತ್ತಾರೆ. ಹೀಗಾದಾಗ ಸೈಬರ್ ಸ್ವಚ್ಛತಾ ಕೇಂದ್ರ ನಿಮಗೆ ಎಚ್ಚರಿಸುತ್ತದೆ. ಸೈಬರ್ ಸ್ವಚ್ಛತಾ ಕೇಂದ್ರದಿಂದ ನಿಮಗೆ ಎಚ್ಚರಿಕೆ ಸಂದೇಶ ಬರಬೇಕು ಎಂದಾದಲ್ಲಿ ಮೊದಲಿಗೆ ನೀವು ಅಧಿಕೃತ ಸೈಬರ್ ಸ್ವಚ್ಛತಾ ಕೇಂದ್ರ ವೆಬ್‌ಸೈಟ್‌ಗೆ ಹೋಗಬಹುದು . ಇಲ್ಲಿ, ನಿಮ್ಮ ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಅಥವಾ ಪಿಸಿಯನ್ನು ವೈರಸ್ ದಾಳಿಯಿಂದ ರಕ್ಷಿಸಲು ಅಗತ್ಯವಿರುವ ಮಾಹಿತಿ ನೀಡಲಾಗಿದೆ. ಸೈಬರ್ ಬೆದರಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇದು ಖಂಡಿತವಾಗಿಯೂ ನಿಮ್ಮ ಅಮೂಲ್ಯವಾದ ಡೇಟಾವನ್ನು ಸುರಕ್ಷಿತಗೊಳಿಸುವ ಉತ್ತಮ ಮಾರ್ಗವಾಗಿದೆ.
ನೀವು ಈ SMS ಪಡೆದರೆ ನಿಮ್ಮ ಸಾಧನ ವೈರಸ್ ದಾಳಿಗೆ ಒಳಗಾಗಿದೆ ಎಂಬರ್ಥವೇ?:
ಮೇಲೆ ಕಾಣುವ ಫೋಟೋದಲ್ಲಿರುವ SMS ನಿಮಗೆ ಬಂದಿದೆ ಎಂದಾದರೆ ನಿಮ್ಮ ಸಾಧನವು ವೈರಸ್ ದಾಳಿಗೆ ಒಳಗಾಗಿದೆ ಎಂದು ಅರ್ಥವಲ್ಲ. ಆದರೂ, ನೀವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಅಂತಹ ಯಾವುದೇ ಘಟನೆಗಳಿಂದ ನಿಮ್ಮ ಸಾಧನವನ್ನು ಸುರಕ್ಷಿತವಾಗಿರಿಸಲು ಕೇಂದ್ರ ಸರ್ಕಾರ ಕಳುಹಿಸಿದ ಎಚ್ಚರಿಕೆಯ ಕರೆಯಾಗಿದೆ. ನಿಮ್ಮ ಡಿಜಿಟಲ್ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, https://www.csk.gov.in ಸೈಬರ್ ಸ್ವಚ್ಛತಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೆಳಗೆ ಸೂಚಿಸಿರುವ ರೀತಿ ಮಾಡಿ ಇದರ ಉಪಯೋಗವನ್ನು ಪಡೆಯಬಹುದು.
Cyber Crime: ಮತ್ತೊಂದು ಸೈಬರ್ ಕ್ರೈಮ್ ಪ್ರಕರಣ ದಾಖಲು: ಓಟಿಪಿ ಹಾಕಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ
ವೆಬ್‌ಸೈಟ್‌ಗೆ ಭೇಟಿ ನೀಡಿ ಹೀಗೆ ಮಾಡಿ:
- ನಿಮಗೆ ಬಂದಿರುವ SMS ನಲ್ಲಿ ಒಂದು ಲಿಂಕ್ ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ಈಗ ಸೈಬರ್ ಸ್ವಚ್ಛತಾ ಕೇಂದ್ರದ ಅಧಿಕೃ ವೆಬ್ಸೈಟ್ ತೆರೆಯುತ್ತದೆ ಹಾಗೂ ಕೆಳಗಡೆ ಸ್ಕ್ರಾಲ್ ಮಾಡಿ.
- ಕೆಳಗಡೆ ಕಾಣಿಸುವ ಸೆಕ್ಯೂರಿಟಿ ಟೂಲ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿರಿ.
- ಇಲ್ಲಿ, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮತ್ತು ಕಂಪ್ಯೂಟರ್ ಅನ್ನು ಸುರಕ್ಷಿತಗೊಳಿಸಲು ಆ್ಯಂಟಿ ವೈರಸ್ಗಳನ್ನು ನೀಡಲಾಗಿದೆ.
- ಈ ಆ್ಯಂಟಿ ವೈರಸ್ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡವ ಆಯ್ಕೆ ನೀಡಲಾಗಿದೆ.
- ಇದನ್ನು ಡೌನ್‌ಲೋಡ್ ಮಾಡಿ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿರಿಸಬಹುದು.
ನಾನು ಇದನ್ನು ಮಾಡಲೇಬೇಕೆ?:
ನಿಮ್ಮ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳಾದ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳಲ್ಲಿನ ಅಮೂಲ್ಯವಾದ ಡೇಟಾವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಇದನ್ನು ಮಾಡಿದರೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಕೇಂದ್ರ ಸರ್ಕಾರ ಕಳುಹಿಸಿರುವ ಈ ಎಸ್ಎಮ್ಎಸ್ ಅನ್ನು ನಿರ್ಲಕ್ಷಿಸದೆ ಹೇಳಿದಂತೆ ಮಾಡಿದರೆ ನಿಮ್ಮ ವೈಯಕ್ತಿಕ ಮತ್ತು ಪ್ರಮುಖ ಡೇಟಾವನ್ನು ಹ್ಯಾಕರ್‌ಗಳಿಂದ ರಕ್ಷಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 pm, Wed, 15 February 23