Cyber Crime: ಫಾಸ್ಟ್ಯಾಗ್ ರಿಚಾರ್ಜ್ ಮಾಡುವಾಗ ಒಂದು ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ: ತಪ್ಪಿಯೂ ಹೀಗೆ ಮಾಡಬೇಡಿ
FASTag Scam: ಉಡುಪಿಯ ಬ್ರಹ್ಮಾವರದ ನಿವಾಸಿ ಪ್ರಾನ್ಸಿಸ್ ಪಾಯಸ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಕಳೆದ ಜನವರಿ 29 ರಂದು ಪ್ರಾನ್ಸಿಸ್ ತಮ್ಮ ಕಾರಿನಲ್ಲಿ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಹೆಜಮಾಡಿಯ ಟೋಲ್ ಪ್ಲಾಜಾದಲ್ಲಿ ತನ್ನ ಫಾಸ್ಟ್‌ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಕಡಿಮೆ ಇರುವುದು ಗಮನಿಸಿದ್ದಾರೆ.
ದೇಶದಲ್ಲಿ ಸೈಬರ್ ಕ್ರೈಮ್ (Cyber Fraud) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಕ್ಕೊಂದು ಹೊಸ ಹೊಸ ಪ್ರಕರಣಗಳು ವರದಿ ಆಗುತ್ತಲೇ ಇದೆ. ಆನ್‌ಲೈನ್ ಸ್ಕ್ಯಾಮ್‌ಗಳ ಬಗ್ಗೆ ಎಚ್ಚರಿಕೆ ವಹಿಸಿದರೂ ಕೂಡ ವಂಚಕರು ಮಾತ್ರ ಹೊಸ ಹೊಸ ಮಾರ್ಗಗಳ ಮೂಲಕ ಜನರನ್ನು ವಂಚಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇದೆ. ವಿದ್ಯುತ್ ಬಿಲ್, ಓಟಿಪಿ, ಕ್ರೆಡಿಟ್ ಕಾರ್ಡ್ ಸ್ಕ್ಯಾಮ್, ಮಿಸ್ಡ್‌ಕಾಲ್ (Missed Call) ಕೊಡುವ ಮೂಲಕ ಫೋನ್‌ಗೆ ಸಿಮ್ ಸ್ವ್ಯಾಪ್ ಮಾಡಿ ಹಣ ದೋಚಿಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಗುರುಗ್ರಾಮ ಮಹಿಳೆ ಬ್ಯಾಂಕ್ ಎಸ್ಎಮ್ಎಸ್ ಮೇಲೆ ಕ್ಲಿಕ್ ಮಾಡಿ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ವರದಿ ಆಗಿತ್ತು. ಇದೀಗ ಫಾಸ್ಟ್ಯಾಗ್ ಸಹಾಯವಾಣಿಯ ಹೆಸರಿನಲ್ಲಿ ಉಡುಪಿಯ ಬ್ರಹ್ಮಾವರದ ನಿವಾಸಿಯೊಬ್ಬರಿಗೆ ಒಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
ಉಡುಪಿಯ ಬ್ರಹ್ಮಾವರದ ನಿವಾಸಿ ಪ್ರಾನ್ಸಿಸ್ ಪಾಯಸ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಕಳೆದ ಜನವರಿ 29 ರಂದು ಪ್ರಾನ್ಸಿಸ್ ತಮ್ಮ ಕಾರಿನಲ್ಲಿ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಹೆಜಮಾಡಿಯ ಟೋಲ್ ಪ್ಲಾಜಾದಲ್ಲಿ ತನ್ನ ಫಾಸ್ಟ್ಯಾಗ್ನಲ್ಲಿ ಬ್ಯಾಲೆನ್ಸ್ ಕಡಿಮೆ ಇರುವುದು ಗಮನಿಸಿದ್ದಾರೆ. ತಕ್ಷಣ ಫಾಸ್ಟ್‌ಟ್ಯಾಗ್ ಹೆಲ್ಪ್‌ಲೈನ್ ಸಂಖ್ಯೆಯನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಇಲ್ಲಿ ತೋರಿಸಿದ ಫಾಸ್ಟ್ಯಾಗ್ ಸಹಾಯವಾಣಿ ಹೆಲ್ಪ್‌ಲೈನ್ ನಂಬರ್ಗೆ ಕರೆ ಮಾಡಿದ್ದಾರೆ. ಅಸಲಿಗೆ ಅದು ಫೇಕ್ ನಂಬರ್ ಆಗಿತ್ತು.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಪಾಯಸ್ ಅವರ ಕರೆಯನ್ನು ಸ್ವಿಕರಿಸಿದ ವ್ಯಕ್ತಿ ನಾನು ಪೇಟಿಎಂ ಫಾಸ್ಟ್ಯಾಗ್ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಇದನ್ನು ನಂಬಿದ ಪಾಯಸ್ ಫಾಸ್ಟ್ಯಾಗ್ ರೀಚಾರ್ಜ್ ಮಾಡುವುದಕ್ಕೆ ಆತ ಹೇಳಿದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ತನ್ನ ಮೊಬೈಲ್‌ಗೆ ಬಂದಿದ್ದ ಒಟಿಪಿ ಸಂಖ್ಯೆಯನ್ನು ಕೂಡ ಹಂಚಿಕೊಂಡಿದ್ದಾರೆ. ಓಟಿಪಿ ಶೇರ್ ಮಾಡಿದ ಕೂಡಲೇ ಕರೆ ಕಡಿತಗೊಳಿಸಿದ ವಂಚಕ ಪಾಯಸ್ ಅವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾನೆ. ಪಾಯಸ್ ಮೊದಲಿಗೆ 49,000ರೂ. ಡೆಬಿಟ್ ಆಗಿದೆ. ನಂತರ 19,999ರೂ., 19,998ರೂ., 9,999ರೂ., ಮತ್ತು 1,000ರೂ. ಹೀಗೆ ಹಂತಹಂತವಾಗಿ ಒಟ್ಟು 99,997 ರೂ. ಹಣವನ್ನು ಕಳೆದುಕೊಂಡಿದ್ದಾರೆ.
JIO-Vi-Airtel: 365 ದಿನಗಳ ವ್ಯಾಲಿಡಿಟಿ ಹೊಂದಿರುವ ಬೆಸ್ಟ್ ಯೋಜನೆಗಳು ಇಲ್ಲಿದೆ ನೋಡಿ
ಇದು ಸ್ಕ್ಯಾಮ್ ಎಂದು ಅರಿತ ಪಾಯಸ್ ಕೂಡಲೇ ಉಡುಪಿ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಪಾಯಸ್ ಅವರು ವಂಚಕ ಹೇಳಿದ ರೀತಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದನ್ನು ಇನ್ಸ್ಟಾಲ್ ಮಾಡಿರುವುದರಿಂದ ಹಣ ಎಗರಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರವಷ್ಟೆ ಗುರುಗ್ರಾಮದಲ್ಲಿ ವಾಸಿಸುತ್ತಿರುವ ಮಾಧ್ವಿ ದತ್ತಾ ಎಂಬ ಮಹಿಳೆಗೆ ಜನವರಿ 21 ರಂದು ಇನ್ಬಾಕ್ಸ್ಗೆ ಒಂದು ಎಸ್ಎಮ್ಎಸ್ ಬಂದಿದೆ. ”ನಿಮ್ಮ ಹೆಚ್ಡಿಎಫ್ಸಿ ಖಾತೆಯ ಅವದಿ ಇಂದಿಗೆ ಮುಕ್ತಾಯಗೊಳ್ಳುತ್ತದೆ, ತಕ್ಷಣವೆ ಇಲ್ಲಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಮತ್ತು ಪಾನ್ ಕಾರ್ಡ್ ನಂಬರ್ಗೆ ಲಿಂಕ್ ಮಾಡಿ”, ಎಂಬ ಸಂದೇಶ ಬಂದಿದೆ. ಇದು ಬ್ಯಾಂಕ್ನಿಂದ ಬಂದ ಮೆಸೇಜ್ ಎಂದು ನಂಬಿದ ಮಹಿಳೆ ಲಿಂಕ್ ತೆರೆದ ತಕ್ಷಣ ಒಂದು ವೆಬ್ ಪೇಜ್ ಓಪನ್ ಆಗಿದೆ. ಅಲ್ಲಿರುವ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ನಂತರ ಓಟಿಪಿ ಹಾಕುವಂತೆ ಸೂಚಿಸಲಾಗಿದೆ. ಮಹಿಳೆ ಓಟಿಪಿ ಹಾಕಿದ ತಕ್ಷಣ ಖಾತೆಯಿಂದ 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 2 February 23