ದೆಹಲಿ: ವಯಸ್ಸು ದೇಹಕ್ಕೆ ಆಗುವುದೇ ಹೊರತು, ಮನಸ್ಸಿಗಲ್ಲ. ಈ ಮಾತನ್ನು ಸಾಬೀತುಮಾಡುವಂತಹ ಸ್ಫೂರ್ತಿಭರಿತ ಜೀವನ ನಡೆಸಿದವರು ನಮ್ಮಲ್ಲಿ ವಿರಳದಲ್ಲಿ ವಿರಳ. ಅಂಥವರ ಬಳಿ ಮಾತನಾಡುವುದು, ಅವರ ಕಥೆ ಕೇಳುವುದು ಅಥವಾ ಅವರ ಕುರಿತು ಓದುವುದು ಸಹ ನಮ್ಮಲ್ಲಿ ಉತ್ಸಾಹ ತುಂಬುವ ಚೋದಕಶಕ್ತಿಯಾಗುತ್ತದೆ. ಅಂತಹುದೇ ಒಂದು ಸ್ಫೂರ್ತಿ ಕಥೆ ಇಲ್ಲಿದೆ. ಚಂಡಿಗಡದ ಮೂವರು ಕಾಲೇಜು ಗೆಳೆಯರು ಬರೋಬ್ಬರಿ ಸತತ 40 ದಿನಗಳ ಕಾಲ 4500 ಕಿಮೀಗಳ ಪ್ರವಾಸ ಮಾಡಿದ್ದಾರೆ. ಅರೇ! ಇಷ್ಟು ದೂರದ ಪ್ರವಾಸವನ್ನು ಸ್ಫೂರ್ತಿಗೀತವೆಂದು ಹಾಡುತ್ತಿದ್ದೀರಾ ಎಂದು ಅಂದುಕೊಂಡಿರಾ? ಅದರಲ್ಲೇ ಇದೆ ವಿಶೇಷ.
ಈ ಮೂವರು ಗೆಳೆಯರೂ 60ಕ್ಕಿಂತ ಹೆಚ್ಚು ವಯಸ್ಸಿನವರು. ತಮ್ಮ ಕಾಲೇಜಿನ ಅವಧಿಯಲ್ಲಿ ಗೆಳೆತನದ ಬಾಂಧವ್ಯ ಹೊಂದಿದ್ದ ಚಂಡೀಗಡ ಮೂಲದ ರಾಬಿನ್ ನಕೈ, ಅಮೃತಾ ಮತ್ತು ಉಷಾ ಎಂಬುವವರೇ ಈ ಪ್ರವಾಸಮಾಡಿದ ಸಾಹಸಿಗಳು. ಇವರಲ್ಲಿ ರಾಬಿನ್ ನಕೈ ಮತ್ತು ಅಮ್ರತಾ ಇಬ್ಬರೂ ದಂಪತಿಗಳು ಎಂಬುದು ಇನ್ನೂ ವಿಶೇಷ.
ರಾಜಸ್ಥಾನದ ಉದಯಪುರದಿಂದ ಆರಂಭದವಾದ ಈ ತ್ರಿವಳಿ ಗೆಳೆಯರ ಪ್ರವಾಸ ಮುಂದೆ ಮುಂಬೈ, ಪಂಜಿಮ್, ಹಂಪಿ, ಬೆಂಗಳೂರು ಮತ್ತು ಚೆನ್ನೈವರೆಗೆ ಸಾಗಿತು. ಚೆನ್ನೈನಿಂದ ಅಂಡಮಾನ್ಗೆ ವಿಮಾನ ಏರಿ ದ್ವೀಪಸಮೂಹವನ್ನೂ ಕಂಡು, ಪುದುಚೇರಿಯ ಮೂಲಕ ಮರಳಿದರು. 60ರ ನಂತರವೂ ಪ್ರವಾಸದಂತಹ ಚೈತನ್ಯದಾಯಕ ವಿಷಯಗಳಲ್ಲಿ ತೊಡಗಿಕೊಂಡ ಈ ಗೆಳೆಯರ ಬಗ್ಗೆ ಪ್ರಶಂಸೆ ಕೇಳಿಬಂದಿದೆ.
ನಮಗೆ ಮೊದಲಿಂದಲೂ ಪ್ರವಾಸ ರೋಮಾಂಚನಕಾರಿ ಸಂಗತಿ. ಈ ಇಳಿವಯಸ್ಸಿನಲ್ಲಿ ಪ್ರವಾಸ ಕೈಗೊಳ್ಳುತ್ತೇವೆ ಎಂದಾಗ ನಮ್ಮ ಸುತ್ತಮುತ್ತಲಿನವರು ಆಶ್ಚರ್ಯ ವ್ಯಕ್ತಪಡಿಸಿದರು. ಅದರಲ್ಲೂ 4500 ಸಾವಿರ ಕಿಮೀ ಪ್ರವಾಸವನ್ನು 40 ದಿನಗಳಲ್ಲಿ ಮುಗಿಸಿದ ನಂತರ ನಮ್ಮ ಬಗ್ಗೆ ಇತರರ ಕುತೂಹಲ ಹೆಚ್ಚಾಗಿದೆ ಎಂದು ಎನ್ಡಿಟಿವಿ ಜಾಲತಾಣಕ್ಕೆ ಈ ಗೆಳೆಯರ ತಂಡ ಪ್ರತಿಕ್ರಿಯೆ ನೀಡಿದೆ.
ಪ್ರವಾಸ ಕಾಲದಲ್ಲಿ ತಾವು ವೀಕ್ಷಿಸಿದ ಸ್ಥಳದ, ಭೇಟಿಯಾದ ಜನರ ಕುರಿತು ರಾಬಿನ್ ನಕೈ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವೈವಿಧ್ಯಮಯ ಪೋಸ್ಟ್ಗಳು ನಿಮಗಾಗಿ..
ಇದನ್ನೂ ಓದಿ: 73 ವರ್ಷದ ನಿವೃತ್ತ ಮಹಿಳೆಯಿಂದ ಜೀವನ ಸಂಗಾತಿ ಅರಸಿ ಜಾಹೀರಾತು; ಜೀವನೋತ್ಸಾಹಕ್ಕೆ ಕೇಳಿಬಂತು ಪ್ರಶಂಸೆ
60 ಅಡಿ ಆಳದ ಎರಡು ಬಾವಿ ನಿರ್ಮಾಣ; ಇಡಿ ಊರಿಗೆ ನೀರನ್ನು ಉಣಿಸಿದ ಕಾರವಾರದ ಮಹಿಳೆ