ನಿಮ್ಮ ಮನೆಗೆ ದಿನವೂ ಹೆಬ್ಬಾವು ನುಸುಳುತ್ತಿದೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಭಯವಾಗುತ್ತದೆ ಅಲ್ಲವೇ? ಆದರೆ ಇಲ್ಲೊಂದು ಪ್ರಕರಣದಲ್ಲಿ ಅದು ನಿಜವಾಗಿದೆ. ಕೇವಲ ಅಷ್ಟೇ ಅಲ್ಲ, ಬರೋಬ್ಬರಿ 4 ಹೆಬ್ಬಾವುಗಳು (Carpet Python) ಮನೆಗೆ ಎಂಟ್ರಿ ಕೊಟ್ಟಿವೆ. ಆಸ್ಟ್ರೇಲಿಯಾದ ಬುಡೆರಿಮ್ನಲ್ಲಿ ಈ ಪ್ರಕರಣ ಕಂಡುಬಂದಿದ್ದು, ಇದರ ಸವಿವರ ಸಮೇತ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ‘ಸನ್ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್’ ಖಾತೆಯಿಂದ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ, ಹೆಬ್ಬಾವುಗಳು ಏಕೆ ಮನೆಯೊಳಗೆ ಬರುತ್ತವೆ, ಅದೂ ಕೂಡ ಒಂದೇ ಮನೆಗೆ ನಾಲ್ಕಾರು ಹಾವುಗಳು ಏಕೆ ಬರುತ್ತವೆ ಎನ್ನುವುದನ್ನು ವಿವರಿಸಲಾಗಿದೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯುವುದಿಲ್ಲ. ಬಹಳ ಅಪರೂಪಕ್ಕೆ ಅದರಲ್ಲೂ ವಿಶೇಷವಾಗಿ ಹೆಬ್ಬಾವುಗಳ ಸಂತಾನೋತ್ಪತ್ತಿಯ ಸಮಯದಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತವೆ ಎಂದು ಮಾಹಿತಿ ನೀಡಲಾಗಿದೆ.
ಸಂತಾನೋತ್ಪತ್ತಿಯ ಸಮಯದಲ್ಲಿ ಬುಡೆರಿಮ್ನ ಮನೆಯೊಂದಕ್ಕೆ ಹೆಬ್ಬಾವುಗಳು ಆಗಮಿಸಿವೆ. 2-3 ದಿನಗಳ ಅವಧಿಯಲ್ಲಿ ಒಟ್ಟು 4 ಹೆಬ್ಬಾವುಗಳು ಮನೆಗೆ ಬಂದಿವೆ. 2 ವಾರಗಳ ಅವಧಿಯಲ್ಲಿ ಒಟ್ಟು 6 ಹಾವುಗಳು ಮನೆಗೆ ಎಂಟ್ರಿ ಕೊಟ್ಟಿವೆ ಎಂದು ಪೋಸ್ಟ್ನಲ್ಲಿ ವಿವರಿಸಲಾಗಿದೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ:
ಮನೆಗೆ ಹೆಬ್ಬಾವುಗಳು ಬಂದಿರುವ ಈ ವಿಡಿಯೋವನ್ನು ಸುಮಾರು 10000 ಜನರು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಉರಗ ತಜ್ಞರೋರ್ವರು ಈ ಬಗ್ಗೆ ವಿವರಿಸಿದ್ದು, ಬಂದಿರುವ ಹಾವುಗಳು ಗಂಡು ಹಾಗೂ ಹೆಣ್ಣಾಗಿವೆ. ಸಂತಾನೋತ್ಪತ್ತಿಯ ಕಾರಣದಿಂದ ಅವು ಆಗಮಿಸಿವೆ ಎಂದಿದ್ದಾರೆ.
ಈ ವಿಡಿಯೋಗೆ ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಉರಗ ಪ್ರೇಮಿಗಳು ಸಂತಸ ಹಂಚಿಕೊಳ್ಳುತ್ತಾ, ‘ನಾವು ಆಸ್ಟ್ರೇಲಿಯಾಕ್ಕೆ ಸ್ಥಳಾಂತರವಾಗಬೇಕು’’ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?
ಅನಿಮಾಲಿಯಾ ಸೈಟ್ನ ಮಾಹಿತಿಯ ಪ್ರಕಾರ, ಕಾರ್ಪೆಟ್ ಹೆಬ್ಬಾವುಗಳು ತಮ್ಮ ಚರ್ಮದ ಮೇಲೆ ಓರಿಯೆಂಟಲ್ ಕಾರ್ಪೆಟ್ ಮಾದರಿಗಳನ್ನು ಹೊಂದಿರುವ ದೊಡ್ಡ ಗಾತ್ರದ ಹಾವುಗಳಾಗಿವೆ. ಅವುಗಳ ಬಣ್ಣವು ಕಪ್ಪು, ಬಿಳಿ, ಕೆನೆ ಅಥವಾ ಚಿನ್ನದ ಬಣ್ಣಗಳ ಮಾದರಿಯಲ್ಲಿರುವುದು ಹೆಚ್ಚು. ಈ ಜಾತಿಯ ಹಾವುಗಳಲ್ಲಿ ಗಂಡು ಹಾವುಗಳು ಸಾಮಾನ್ಯವಾಗಿ ಹೆಣ್ಣಿಗಿಂತ ಚಿಕ್ಕದಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ ಹೆಣ್ಣು ಹೆಬ್ಬಾವುಗಳು ನಾಲ್ಕು ಪಟ್ಟು ಹೆಚ್ಚು ಭಾರವಾಗಿರುವುದೂ ಇದೆ.
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Thu, 19 May 22