ಸಮುದ್ರದಲ್ಲಿ ಈಜಾಡುವುದು, ಆಟವಾಡುವುದು ರೋಮಾಂಚನಕಾರಿಯಾಗಿದೆ. ಆದರೆ ಕೆಲವೊಮ್ಮೆ ಇದು ಕೆಲವೊಮ್ಮೆ ಅಪಾಯಕಾರಿಯೂ ಆಗಿರಬಹುದು. ಸಮುದ್ರದಲ್ಲಿ ಕಂಡುಬರುವ ಅಪಾಯಕಾರಿ ಜೀವಿಗಳು ಕೆಲವೊಮ್ಮೆ ಜನರ ಜೀವವನ್ನೇ ತೆಗೆದುಬಿಡುತ್ತದೆ. ಇದೇ ರೀತಿಯ ಪ್ರಕರಣವೊಂದು ಇತ್ತೀಚಿಗೆ ಈಜಿಪ್ಟ್ ನಲ್ಲಿ ನಡೆದಿದೆ. ಈ ಘಟನೆಯ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ವರದಿಗಳ ಪ್ರಕಾರ, ಈಜಿಪ್ಟ್ ನ ಹುರ್ಘಡಾದ ಸಮುದ್ರದಲ್ಲಿ ವ್ಯಕ್ತಿಯೊಬ್ಬ ಈಜಾಡುತ್ತಿರುವ ವೇಳೆ ದೈತ್ಯ ಶಾರ್ಕ್ ಮೀನು ಆತನ ಮೇಲೆ ದಾಳಿ ಮಾಡಿದೆ. ಆತನ ರಕ್ಷಣೆಗೆಂದು ಬೋಟ್ ಮೂಲಕ ರಕ್ಷಣಾಗಾರರು ಹೋಗುವಷ್ಟರಲ್ಲಿ ಶಾರ್ಕ್ ಆತನ ಪ್ರಾಣವನ್ನೇ ತೆಗೆದುಬಿಟ್ಟಿತ್ತು.
ಶಾರ್ಕ್ ದಾಳಿಗೆ ಬಲಿಯಾದ ವ್ಯಕ್ತಿ 23 ವರ್ಷ ವಯಸ್ಸಿನ ವ್ಲಾದಿಮಿರ್ ಪೊಪೊವ್ ಎಂದು ಗುರುತಿಸಲಾಗಿದೆ. ರಷ್ಯಾದ TASS ಸುದ್ದಿ ಸಂಸ್ಥೆ ಶಾರ್ಕ್ ದಾಳಿಗೆ ಬಲಿಯಾದ ವ್ಯಕ್ತಿ ರಷ್ಯಾ ಮೂಲದವರು ಆದರೆ ಅವರು ಈಜಿಪ್ಟ್ ನಲ್ಲಿ ವಾಸವಿದ್ದಾರೆ ಎಂದು ತಿಳಿಸಿದೆ. ಈ ಭೀಕರ ದಾಳಿಯನ್ನು ಆ ವ್ಯಕ್ತಿಯ ತಂದೆ ಕಣ್ಣಾರೆ ಕಂಡಿದ್ದಾರೆ. ನಾವು ವಿಶ್ರಾಂತಿ ಪಡೆಯಲೆಂದು ಬೀಚ್ಗೆ ಹೋಗಿದ್ದೆವು. ನನ್ನ ಮಗನ ಮೇಲೆ ಶಾರ್ಕ್ ಮೀನು ದಾಳಿ ಮಾಡಿತು. ಇದೆಲ್ಲಾ ಕೇವಲ ಸೆಕೆಂಡುಗಳಲ್ಲಿ ಸಂಭವಿಸಿತು, ನಮ್ಮ ಕೈಯಲ್ಲಿ ಆತನ ಪ್ರಾಣ ರಕ್ಷಣೆ ಮಾಡಲಾಗಿಲ್ಲ’ ಎಂದು ಮರುಕ ವ್ಯಕ್ತಪಡಿಸಿದ್ದಾರೆ.
recent shark shark in egypt pic.twitter.com/xvO0xIGJNn
— clips that go hard (@clipsthatgohard) June 8, 2023
‘ಈ ದಾಳಿಕೋರ ಶಾರ್ಕ್ ನ್ನು ಸೆರೆಹಿಡಿದು ಅದರ ಪರೀಕ್ಷೆಗಾಗಿ ಮತ್ತು ದಾಳಿಯ ಸಂಭವನೀಯ ಕಾರಣಗಳನ್ನು ನಿರ್ಧರಿಸಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆಯಲು ಪ್ರಯೋಗಾಲಯಕ್ಕೆ ವರ್ಗಾಯಿಸಲಾಗಿದೆ’ ಎಂದು ಈಜಿಪ್ಟ್ ನ ಪರಿಸರ ಸಚಿವಾಲಯವು ಹೇಳಿಕೆ ನೀಡಿದೆ.
ಈ ಹೃದಯ ವಿದ್ರಾವಕ ಘಟನೆಯ ವೀಡಿಯೋವನ್ನು ಕ್ಲಿಪ್ಸ್ ದಾಟ್ ಗೋ ಹಾರ್ಡ್ (@clipsthatgohard) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೈರಲ್ ವೀಡಿಯೋದಲ್ಲಿ ವ್ಯಕ್ತಿಯು ತನ್ನ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: Viral Brain Teaser: ಡ್ರ್ಯಾಗನ್ಗಳ ನಡುವೆ ಅಡಗಿ ಕುಳಿತಿರುವ ಮೂರು ಮೊಸಳೆಗಳನ್ನು ಕಂಡುಹಿಡಿಯಿರಿ ನೋಡಾ
ಸಮುದ್ರದ ಮಧ್ಯೆ ವ್ಯಕ್ತಿಯು ಈಜಾಡುತ್ತಿದ್ದಾಗ ಶಾರ್ಕ್ ಮೀನು ಆತನ ಮೇಲೆ ಹಠಾತ್ತನೆ ದಾಳಿ ಮಾಡುತ್ತದೆ. ತಕ್ಷಣ ಆತ ಜೀವವನ್ನು ಉಳಿಸಲು ಸಹಾಯ ಕೇಳುತ್ತಾನೆ, ಹೇಗಾದರೂ ಈಜಿಕೊಂಡು ದಡ ಸೇರಬೇಕು ಎಂದುಕೊಳ್ಳುತ್ತಾನೆ. ಆದರೆ ಬಲಶಾಲಿ ಶಾರ್ಕ್ ಅಷ್ಟರಲ್ಲಿ ಆತನನ್ನು ಎಳೆದು ತಿಂದೇ ಬಿಡುತ್ತದೆ. ಆ ವ್ಯಕ್ತಿಯ ರಕ್ಷಣೆಗೆಂದು ಬೋಟ್ ನಲ್ಲಿ ರಕ್ಷಣಾಗಾರರು ಹೋಗುವಷ್ಟರಲ್ಲಿ ಶಾರ್ಕ್ ಆ ಮನುಷ್ಯನ ಪ್ರಾಣವನ್ನೇ ತೆಗೆದುಬಿಟ್ಟಿತ್ತು. ಅಲ್ಲೇ ಅಕ್ಕಪಕ್ಕದಲ್ಲಿ ನಿಂತಿದ್ದ ಜನರು ಈ ಭಯಾನಕ ದೃಶ್ಯವನ್ನು ವೀಕ್ಷಿಸುತ್ತಾ ಚೀರಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ಜೂನ್ 9 ರಂದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 11.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವರು ಕಮೆಂಟ್ಸ್ ಗಳ ಮೂಲಕ ಆ ವ್ಯಕ್ತಿಯ ಸಾವಿಗೆ ಮರುಕ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ‘ಈ ವಿಡಿಯೋದಲ್ಲಿ ವೀಕ್ಷಿಸಲು ಕಷ್ಟಕರವಾದದು ಏನೆಂದರೆ ಎಲ್ಲರು ಚಿತ್ರೀಕರಣ ಮಾಡುತ್ತಿದ್ದಾರೆ ಆದರೆ ಆ ವ್ಯಕ್ತಿಯ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ದೋಣಿ ಯಾಕೆ ಆತನ ರಕ್ಷಣೆಗೆ ಅಷ್ಟು ತಡವಾಗಿ ಹೋದದ್ದು, ಹದಗೆಟ್ಟ ವ್ಯವಸ್ಥೆ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದು ತುಂಬಾ ಭಯಾನಕವಾಗಿದೆ. ಜನರು ಯಾಕೆ ಸಮುದ್ರದಲ್ಲಿ ಈಜಲು ಹೋಗುತ್ತಾರೆ ಎಂಬುದು ನನಗೆ ತಿಳಿದಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ