ಗುರು ಬದುಕಿಗೆ ದಾರಿ, ಜೀವನಕ್ಕೆ ಜ್ಯೋತಿ. ಹೌದು ಗುರುಗಳು ವಿದ್ಯಾರ್ಥಿಗಳು ಮತ್ತು ರಾಷ್ಟ್ರದ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರು ನಮ್ಮನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವಲ್ಲಿ, ಪಠ್ಯಪುಸ್ತಕಗಳನ್ನು ಮೀರಿದ ಮೌಲ್ಯಗಳನ್ನು ನಮ್ಮಲ್ಲಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ನೀಡಿದ ಜ್ಞಾನ ನಮ್ಮ ಬದುಕನ್ನು ಉತ್ತಮವಾಗಿ ರೂಪಿಸುತ್ತದೆ. ಇಂತಹ ನಿಸ್ವಾರ್ಥ ಮನಸ್ಸಿನ ಗುರುಗಳಿಗೆ ಪ್ರತಿಯೊಬ್ಬರ ಬದುಕಿನಲ್ಲೂ ದೇವರ ಸ್ಥಾನವಿದೆ. ಇದೀಗ ನಿಸ್ವಾರ್ಥ ಮನಸ್ಸಿನ ಗುರುಗಳಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದ್ದು, ಶಿಕ್ಷಕರೊಬ್ಬರು ತನ್ನ ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಕೂತು ಪಾಠ ಕೇಳಬೇಕು, ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗಬೇಕು ಎಂದು ತನಗೆ ಬಂದಂತಹ ಬೋನಸ್ ಹಣದಿಂದ ತರಗತಿಯನ್ನು ನವೀಕರಣಗೊಳಿಸಿದ್ದಾರೆ. ಗುರುಗಳ ಈ ಉತ್ತಮ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಈ ಘಟನೆ ಮಲೇಷ್ಯಾದಲ್ಲಿ ನಡೆದದ್ದು ಎಂದು ಹೇಳಲಾಗುತ್ತಿದೆ. ಇಲ್ಲಿನ ಶಾಲೆಯೊಂದರ ಶಿಕ್ಷಕರಾದ ಕಮಲ್ ಡಾರ್ವಿನ್ ಎಂಬವರು ತಮ್ಮ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಲಿಕೆ ಮತ್ತು ಕಲಿಕಾ ಸಾಮಾರ್ಥ್ಯವನ್ನು ಸುಧಾರಿಸಲು ತಮ್ಮ ಬೋನಸ್ ಹಣದಿಂದ ತರಗತಿಯ ನವೀಕರಣ ಕೆಲಸ ಮಾಡಿದ್ದಾರೆ.
ಇಂದಿಗೂ ಪ್ರಪಂಚದಲ್ಲಿನ ಅದೆಷ್ಟೋ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಸೌಲಭ್ಯಗಳು ಇಲ್ಲವೇ ಇಲ್ಲ. ಮೂತಭೂತ ಸೌಕರ್ಯದ ಕೊರತೆಯಿಂದ ಮಕ್ಕಳು ಸರಿಯಾಗಿ ಕಲಿಯುತ್ತಾ ಗಮನ ಕೂಡಾ ಹರಿಸುವುದಿಲ್ಲ. ಆದ್ದರಿಂದ ನನ್ನ ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಕೂತು ಪಾಠ ಕೇಳಬೇಕು, ಅವರು ಯಾವುದೇ ರೀತಿಯ ಸೌಕರ್ಯಗಳಿಂದ ವಂಚಿತರಾಗಬಾರದೆಂದು ಕಮಲ್ ಡಾರ್ವಿನ್ ಬೋನಸ್ ಹಣವನ್ನು ತನಗಾಗಿ ಉಪಯೋಗಿಸಿಕೊಳ್ಳದೆ, ತರಗತಿಯನ್ನು ನವೀರಕಣಗೊಳಿಸಲು ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊಸ ಟೇಬಲ್, ಚೇರ್, ಕಪಾಟುಗಳನ್ನು ತರಿಸಿದ್ದಾರೆ. ಹೀಗೆ ಸುಸಜ್ಜಿತ ಸೌಕರ್ಯಗಳೊಂದಿಗೆ ತರಗತಿಯನ್ನು ಸುಂದರವಾಗಿ ಮೇಕ್ ಓವರ್ ಮಾಡಿದ್ದಾರೆ. ಇವರ ಈ ನಿಸ್ವಾರ್ಥ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭರಪೂರ ಮೆಚ್ಚುಗೆ ಲಭಿಸಿದೆ.
ಇದನ್ನೂ ಓದಿ: ನಾಯಿಗಳು ಮಧ್ಯರಾತ್ರಿ ವಿಚಿತ್ರವಾಗಿ ಕೂಗುವುದೇಕೆ? ಇದರ ಹಿಂದಿನ ನಿಜವಾದ ಕಾರಣ ಏನು?
@weirdkaya ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ಫೋಟೋವೊಂದನ್ನು ಹಂಚಿಕೊಳ್ಳಲಾಗಿದ್ದು, ಹಲವಾರು ಕಾಮೆಂಟ್ಸ್ಗಳು ಹರಿದು ಬಂದಿವೆ. ಒಬ್ಬ ಬಳಕೆದಾರರು ʼಶಿಕ್ಷಕರು ಕಷ್ಟಪಟ್ಟು ಗಳಿಸಿದ ಹಣವನ್ನು ವಿದ್ಯಾರ್ಥಿಗಳ ಹಿತದೃಷ್ಟಿಗಾಗಿ ಬಳಸುತ್ತಿದ್ದರೆ, ಇದನ್ನು ನೋಡಿ ಸುಮ್ಮನೆ ಕೂರುವ ಸಚಿವರುಗಳಿಗೆ ನಾಚಿಕೆಯಾಗಬೇಕುʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಐದನೇ ತರಗತಿಯಲ್ಲಿರುವಾಗ ನನ್ನ ಶಿಕ್ಷಕರು ಅವರ ಸ್ವಂತ ಹಣದಿಂದ ತರಗತಿಗೆ ಪೈಂಟ್ ಬಳಿಯುವ ಕಾರ್ಯವನ್ನು ಮಾಡಿದ್ದರುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಅದ್ಭುತ ಶಿಕ್ಷಕನನ್ನು ಪಡೆದ ಆ ವಿದ್ಯಾರ್ಥಿಗಳೇ ಧನ್ಯರುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ