AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಂಜೆ ಶಾಲೆ ಬಿಟ್ಟ ನಂತರ ಹಣ್ಣುಗಳನ್ನು ಮಾರಿ ಅಮ್ಮನಿಗೆ ಸಹಾಯ ಮಾಡುವ ಬಾಲಕ, ಜವಾಬ್ದಾರಿ ಅಂದ್ರೆ ಇದೇ ಅಲ್ವಾ

ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾನಿಲಯವು ಕಲಿಸುವುದಿಲ್ಲ ಎನ್ನುವ ಮಾತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳನ್ನು ನೋಡಿದಾಗ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕನೊಬ್ಬನು ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣವೊಂದರಲ್ಲಿ ಹಣ್ಣುಗಳನ್ನು ಮಾರಿ ಬಡತನದಲ್ಲಿಯೆ ತನ್ನ ತಾಯಿಗೆ ಹೆಗಲಾಗಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯು ಹರಿದು ಬಂದಿದೆ.

Video: ಸಂಜೆ ಶಾಲೆ ಬಿಟ್ಟ ನಂತರ ಹಣ್ಣುಗಳನ್ನು ಮಾರಿ ಅಮ್ಮನಿಗೆ ಸಹಾಯ ಮಾಡುವ ಬಾಲಕ, ಜವಾಬ್ದಾರಿ ಅಂದ್ರೆ ಇದೇ ಅಲ್ವಾ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Sep 28, 2024 | 11:54 AM

Share

ಬಡತನ, ಹಸಿವು ಹಾಗೂ ಹೆಗಲ ಮೇಲಿನ ಜವಾಬ್ದಾರಿಗಳು ಸಣ್ಣ ವಯಸ್ಸಿನಲ್ಲಿ ಬದುಕಿನ ಪಾಠ ಹಾಗೂ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಹೀಗಾಗಿ ಅದೆಷ್ಟೋ ಮಕ್ಕಳು ಕಷ್ಟ ಪಟ್ಟು ಕೆಲಸ ಮಾಡಿ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ತಾವೇ ನೋಡಿಕೊಂಡು ಮನೆಗೂ ಕೂಡ ನೆರವಾಗುತ್ತಿದ್ದಾರೆ. ಇಂತಹ ಅದೆಷ್ಟೋ ಉದಾಹರಣೆಗಳನ್ನು ನಾವು ದಿನನಿತ್ಯ ಬದುಕಿನಲ್ಲಿ ನೋಡುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಬಾಲಕನು ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಾ ತಾಯಿಗೆ ನೆರವಾಗುತ್ತಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು Nirupadi k Gomarsi ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಜೀವನ ಅಂದ್ರೆ ಹಿಂಗೂ ಇರುತ್ತೆ. ಸರ್ಕಾರಿ ಶಾಲೆಯಲ್ಲಿ 4ನೆ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ತನ್ನ ಮನೆಗೆಲಸವನ್ನು ಮುಗಿಸಿ, ಲಿಂಗಸುಗೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿದ್ದಾನೆ. ಕೆಲಸ ಮಾಡಿಕೊಂಡು ಇವನ ಅಣ್ಣ, ತಂಗಿ, ಅವ್ವ, ಅಪ್ಪನ ಜೊತೆ ಸುಖವಾಗಿ ಇದ್ದಾನಂತೆ. ಬಡತನದ ಈ ದುಡಿಮೆಗೆ ಎಲ್ಲರೂ ಅಭಿನಂದಿಸಿ’ ಬರೆದುಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ಆಕಾಶ ಎನ್ನುವ ಬಾಲಕನು ಬಸ್ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವುದನ್ನು ನೋಡಬಹುದು. ತಾಯಿಯು ಅದೇ ಬಸ್ ನಿಲ್ದಾಣದಲ್ಲಿ ಬೇರೊಂದು ಸ್ಥಳದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದು ಈ ಬಾಲಕನು ಬುಟ್ಟಿ ಹಿಡಿದುಕೊಂಡು ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರಿರುವಲ್ಲಿಗೆ ತೆರಳಿ, ಹಣ್ಣು ಬೇಕಾ ಎಂದು ಕೇಳುತ್ತಾನೆ. ಪ್ರಯಾಣಿಕರು ಬೇಕು ಎಂದರೆ ಹಣ್ಣನ್ನು ಕತ್ತರಿಸಿ ಉಪ್ಪು ಹಾಕಿ ನೀಡುವುದು ಈತನಿಗೆ ಕೆಲಸದ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಅದಲ್ಲದೇ ಇದರಲ್ಲಿ ನಿಂಗೆಷ್ಟು ಲಾಭ ಕೇಳಿದರೆ, ಲಾಭ ಏನಿಲ್ಲ ಎಲ್ಲಾ ದುಡ್ಡನ್ನು ಅಮ್ಮನಿಗೆ ಕೊಡ್ತೇನೆ, ಅವರು ಪುಸ್ತಕ ಪೆನ್ನು ಪೆನ್ಸಿಲ್ ತೆಗ್ಸಿಕೊಡ್ತಾರೆ ಎನ್ನುತ್ತಾನೆ ಈ ಪೋರ. ಅಷ್ಟೇ ಅಲ್ಲದೇ, ಇವನ ಕೆಲಸಕ್ಕೆ ಜನರು ಕರುಣೆಯಿಂದ ಉಚಿತವಾಗಿ ಹಣ ಕೊಟ್ಟರೆ ತೆಗೆದುಕೊಳ್ಳದೆ ನಯವಾಗಿ ತಿರಸ್ಕರಿಸಿ ದುಡಿಮೆಯಲ್ಲಿ ತನ್ನ ಪ್ರಾಮಾಣಿಕತೆಯನ್ನು ಮೆರೆಯುತ್ತಾನೆ.

ಇದನ್ನೂ ಓದಿ: ಚಾಲಕ ಸೇರಿದಂತೆ ಹೊತ್ತಿ ಉರಿದ ಕಾರು, ಜೀವ ಪಣಕ್ಕಿಟ್ಟು ಕಾಪಾಡಿದ ಸ್ಥಳೀಯರು

ಈ ವಿಡಿಯೋ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು, ‘ಈ ಬಾಲಕನಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಇಂತಹ ಮಕ್ಕಳೇ, ನಾಳೆ ದೇಶ ಗೌರವಿಸುವಂತಹ ದೊಡ್ಡ ಸ್ಥಾನ ಹಾಗೂ ಮಾನವನ್ನು ಅಲಂಕರಿಸುತ್ತಾರೆ’ ಎಂದಿದ್ದಾರೆ. ಇನ್ನೊಬ್ಬರು, ‘ಬಡತನ ಕಲಿಸುವ ಪಾಠ ಜೀವನವನ್ನು ರೂಪಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ