ಇಲ್ಲಿ ಮೀನು ತಿನ್ನಬೇಕಾ, ಹಾಗಿದ್ರೆ ನೀವೇ ಗಾಳ ಹಾಕಿ! ತಾಳ್ಮೆಯ ಫಲ ಎಂದೂ ರುಚಿ

Self Fishing : ನಿನ್ನ ಮೀನು ನೀನೇ ಹಿಡೀ, ಮೀನಿನೊಂದಿಗೆ ಫೋಟೋ ಹೊಡೀ, ಖುಷಿಗೆ ಹಲಗೆಯನ್ನೂ ಹೊಡಿ, ಟೇಬಲ್​ಗೆ ಮೀನೂಟ ಬರುವ ತನಕ ಹರಟೆ ಹೊಡೀ; ನಡೀರಿ ಜಪಾನಿಗೆ ಹೀಗೇ ಇಲ್ಲೇ...

ಇಲ್ಲಿ ಮೀನು ತಿನ್ನಬೇಕಾ, ಹಾಗಿದ್ರೆ ನೀವೇ ಗಾಳ ಹಾಕಿ! ತಾಳ್ಮೆಯ ಫಲ ಎಂದೂ ರುಚಿ
At This Japanese Restaurant, Catch The Fish You Want to Eat
Updated By: ಶ್ರೀದೇವಿ ಕಳಸದ

Updated on: Nov 01, 2022 | 11:31 AM

Viral Video : ನೀವು ಮೀನುಪ್ರಿಯರಾಗಿದ್ದರೆ, ಹೋದಲ್ಲೆಲ್ಲ ರುಚಿಯಾದ ಮೀನು ಎಲ್ಲಿ ಸಿಗುತ್ತದೆ ಎಂದು ಹುಡುಕಿಕೊಂಡು ಹೋಗುತ್ತೀರಿ. ಆದರೆ, ರುಚಿಯ ಜೊತೆಗೆ ನೆನಪಲ್ಲಿ ಉಳಿಯುವಂಥ ಒಂದು ಅನುಭವವೂ ಬೇಕು ಎಂದರೆ ಜಪಾನ್​ನಲ್ಲಿರುವ ಈ ರೆಸ್ಟೋರೆಂಟ್​ಗೆ ಭೇಟಿ ಕೊಡಬೇಕು. ಈ ರೆಸ್ಟೋರೆಂಟ್​ನಲ್ಲಿ ನೀವೇ ನಿಮಗೆ ಬೇಕಾದ ಮೀನು ಹಿಡಿಯಬಹುದು. ಹಾಗಂತ ಅಡುಗೆಯನ್ನೂ ನೀವೇ ಮಾಡಬೇಕಿಲ್ಲ. ಆದರೆ ನಾನು ಹಿಡಿದ ಮೀನು! ಎನ್ನುವ ಮಜಾ ಇರುತ್ತದಲ್ಲ ಅದು ಖಂಡಿತ ನಿಮಗೆ ಸಿಗುತ್ತದೆ. ನೋಡಿ ಈ ವಿಡಿಯೋ.

ಒಸಾಕಾದಲ್ಲಿರುವ ಝೌವೊ ಫಿಶಿಂಗ್ ರೆಸ್ಟೋರೆಂಟ್‌ನ ವಿಡಿಯೋ ಇದು. ಗ್ರಾಹಕರು ತಮಗೆ ಬೇಕಾದ ಮೀನುಗಳಿಗೆ ಗಾಳ ಹಾಕಿ ಹಿಡಿಯಬಹುದು. ಅದಕ್ಕೆ ಬೇಕಾದ ಸಹಾಯವನ್ನು ರೆಸ್ಟೋರೆಂಟ್​ ಸಿಬ್ಬಂದಿ ಮಾಡುತ್ತದೆ. ನೀವು ಮೀನು ಹಿಡಿದ ಸಂಭ್ರಮಕ್ಕೆ ಮೀನಿನ ಜೊತೆ ಫೋಟೋ ತೆಗೆದುಕೊಡಲಾಗುತ್ತದೆ ಮತ್ತು ಡ್ರಮ್​ ಬಾರಿಸಿ ಸಂಭ್ರಮಿಸಲಾಗುತ್ತದೆ. ನಂತರ ನೀವು ಹಿಡಿದ ಮೀನು ಅಡುಗೆಮನೆಗೆ ಹೋಗುತ್ತದೆ. ನಂತರ ನಿಮ್ಮ ಟೇಬಲ್​ಗೆ ಅದು ಖಾದ್ಯವಾಗಿ ತಯಾರಾಗಿ ಬರುವ ತನಕ ನೀವು ಕಾಯಬೇಕು. ಕಾಯುವಿಕೆಯಲ್ಲಿಯೇ ರುಚಿ ಅಡಗಿರುವುದು! ಅಂದರೆ ಈ ರೆಸ್ಟೋರೆಂಟ್​ನಲ್ಲಿ ನಿಮಗೊಂದು ಆಹ್ಲಾದಕರ ಅನುಭವ ಬೇಕೆಂದರೆ ಸಾಕಷ್ಟು ತಾಳ್ಮೆ ಬೇಕು.

ನೆಟ್ಟಿಗರು ಇದನ್ನು ನೋಡಿ ಖುಷಿಪಟ್ಟಿದ್ದಾರೆ. ರೆಸ್ಟೋರೆಂಟ್​ನ ಒಳಾಂಗಣ ವಿನ್ಯಾಸ ಮತ್ತು ಈ ಪರಿಕಲ್ಪನೆ ಬಹಳ ಆಕರ್ಷಕವಾಗಿದೆ ಎಂದಿದ್ದಾರೆ. ಜೊತೆಗೆ ಒಂದು ಊಟಕ್ಕೆ ಎಷ್ಟು ಹಣ ತೆರಬೇಕು ಎಂದೂ ಕೇಳಿದ್ದಾರೆ. ತಾವು ಭೇಟಿಕೊಡಬೇಕಿರುವ ಪಟ್ಟಿಯಲ್ಲಿ ಈ ರೆಸ್ಟೋರೆಂಟ್​ನ ಹೆಸರನ್ನೂ ಸೇರಿಸಿಕೊಂಡಿದ್ದಾರೆ. ನನ್ನ ಮಕ್ಕಳು ಫಿಷಿಂಗ್​ಗೆ ಕರೆದಕೊಂಡು ಹೋಗೆಂದು ಪದೇಪದೇ ಕೇಳುತ್ತಿರುತ್ತಾರೆ. ಈಗ ಈ ಜಾಗ ಸಿಕ್ಕಿತು. ಎಂದಿದ್ದಾರೆ ಒಬ್ಬರು. ಜಪಾನಿನ ಇನ್ನೊಂದು ರೆಸ್ಟೋರೆಂಟ್​ನಲ್ಲಿ ನಾನಿದನ್ನು ನೋಡಿದ್ದೇನೆ. ಅಲ್ಲಿ ನಾವೇ ಖಾದ್ಯವನ್ನೂ ತಯಾರಿಸಲು ಅವಕಾಶವಿತ್ತು. ಬೆಲೆಯೂ ತಕ್ಕಮಟ್ಟಿಗೆ ಇತ್ತು. ನಾವೆಲ್ಲ ಚೆನ್ನಾಗಿ ಮಜಾ ಮಾಡಿದೆವು ಎಂದಿದ್ದಾರೆ ಮತ್ತೊಬ್ಬರು. ಹಸಿವು ತಡೆದುಕೊಳ್ಳುವವರಿಗೆ ಮಾತ್ರ ಇಂಥ ರೆಸ್ಟೋರೆಂಟ್​ ಲಾಯಕ್ಕು, ನನಗಂತೂ ಆಗುವುದಿಲ್ಲಪ್ಪಾ ಎಂದಿದ್ದಾರೆ ಇನ್ನೊಬ್ಬರು.

ನೀವು ಹೋಗ್ತೀರಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

 

Published On - 11:23 am, Tue, 1 November 22