Marriage : ಅವರನ್ನು ಕರೆದಿರಾ, ಇವರನ್ನು ಕರೆದಿರಾ, ಅವರ ಕಡೆಯಿಂದ ಎಷ್ಟು ಜನ ಬರುತ್ತಾರೆ, ನಮ್ಮ ಕಡೆಯಿಂದ ಎಷ್ಟು ಜನ ಬರಬಹುದು, ಎಲ್ಲರಿಗೂ ವಸತಿ ಊಟದ ವ್ಯವಸ್ಥೆ ಮಾಡಿ ಆಯಿತಾ? ಮದುವೆಯೆಂದರೆ ಮುಗಿಯದ ಧಾವಂತ. ಕರೆದವರು ಬಂದರೆ ಖುಷಿ, ಕರೆಯದೇ ಪರಿಚಿತರು ಬಂದರೆ ಇನ್ನೂ ಖುಷಿ. ಆದರೆ ಕರೆಯದೇ ಅಪರಿಚಿತರು ಬಂದರೆ? ತುಸು ಕಸಿವಿಸಿ. ಊಹೆಗೆ ನಿಲುಕದ ಅತಿಥಿಯೊಬ್ಬರು ಬಂದರೆ? ಅದರಲ್ಲೂ ನಾಲ್ಕು ಕಾಲುಳ್ಳವರು, ಕಾಡಿನಲ್ಲಿ ವಾಸಿಸುವವರು, ಕಪ್ಪಗೆ ದೈತ್ಯದೇಹಿಯೊಬ್ಬರು… ಹಾಗೆ ಬಂದವರು ತಿಂಡಿತೀರ್ಥಗಳನ್ನೆಲ್ಲಾ ಮನಬಂದಂತೆ ಸೇವಿಸಿ ದಿಕ್ಕಾಪಾಲು ಮಾಡಿದರೆ ಹೇಗಿರುತ್ತದೆ? ನೋಡಿ ಈ ಕೆಳಗಿನ ಫೋಟೋ. ಕರಡಿರಾಯರು (Bear) ಮದುವೆಗೆ ಬಂದಿದ್ದಾರೆ!
ಅಮೆರಿಕದ ಕೊಲೊರಾಡೋದ ಬೌಲ್ಡರ್ ಕೌಂಟಿಯಲ್ಲಿ ಬ್ರ್ಯಾಂಡನ್ ಮಾರ್ಟಿನೇಜ್ ಮತ್ತು ಕೈಲಿನ್ ಮ್ಯಾಕ್ರೊಸ್ಸಿ ಮಾರ್ಟಿನೇಜ್ ಅವರ ವಿವಾಹ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹೀಗೆ ಕರೆಯದೇ ಬಂದ ಈ ದೈತ್ಯಅತಿಥಿಯನ್ನು ನೋಡಿದ ವಧುವರರು ಮತ್ತು ಅತಿಥಿಗಳು ದಿಗ್ಭ್ರಾಂತರಾಗಿದ್ದಾರೆ. ಈ ಫೋಟೋಗಳನ್ನು ವಧುವರರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Viral: ಯಾಕಾದರೂ ಮುಳ್ಳುಹಂದಿ ನುಂಗಿದೇನೋ ಎಂದು ಪಶ್ಚಾತ್ತಾಪ ಪಟ್ಟ ಇಸ್ರೇಲಿ ಹಾವು, ಮುಂದೆ?
ಈ ದಂಪತಿಯ ವಿವಾಹ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಮಳೆ ಸುರಿಯಲಾರಂಭಿಸಿತ್ತು. ಆ ಮಳೆಯಲ್ಲಿಯೇ ಮದುವೆಯೂ ಶುರುವಾಯಿತು. ಆದರೆ ಅನಿರೀಕ್ಷಿತವಾಗಿ ನಾಲ್ಕು ಕಾಲಿನ ಈ ಅಭ್ಯಾಗತರು ಕಾಣಿಸಿಕೊಂಡು ಅಲ್ಲಿದ್ದರನ್ನೆಲ್ಲ ಅಚ್ಚರಿ ಮತ್ತು ಕಂಗಾಲಿಗೆ ತಳ್ಳಿದರು. ರುಚಿರುಚಿಯಾದ ಖಾದ್ಯಗಳನ್ನು ತಿಂದರು. ದಂಪತಿ ಈ ಪೋಸ್ಟ್ ಅನ್ನು ಆ. 2 ರಂದು ಹಂಚಿಕೊಂಡಿದ್ದಾರೆ.
ನೆಟ್ಟಿಗರು ತಮಾಷೆಯಿಂದ ಈ ಪೋಸ್ಟ್ಗೆ ಪ್ರತಿಕ್ರಿಯೆ ಮಾಡಿದ್ದಾರೆ. ಹೇಗೆ ನಾನು ನಿಮ್ಮ ಮದುವೆಗೆ ಕರೆಯದೇ ಬಂದೆ! ಚೀಝ್ ಸ್ಲೈಸ್ ಸಿಕ್ಕಿದ್ದಕ್ಕೆ ನಾನು ಬಹಳ ಖುಷಿಗೊಂಡಿದ್ದೇನೆ ಎಂದಿದ್ಧಾರೆ ಒಬ್ಬರು. ನಮಗೆ ಸಿಹಿತಿಂಡಿ ಸಿಗಲೇ ಇಲ್ಲ. ಇದು ಮೋಸ ಅಲ್ಲವಾ? ನಮ್ಮನ್ನು ನೀವು ಮತ್ತೊಮ್ಮೆ ಕರೆದು ಉಪಚರಿಸಬೇಕು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ: Viral Video: ಸಂಗೀತಪ್ರೇಮಿ ಮಂಗಗಳ ಸಂಗದಲ್ಲಿ ಹೀಗೊಬ್ಬ ಪಿಯಾನೋಸಂತ
ನೀವು ನನಗೋಸ್ಕರ ಇನ್ನೊಮ್ಮೆ ಮದುವೆ ಮಾಡಿಕೊಳ್ಳಿ, ನನ್ನನ್ನೂ ಆಮಂತ್ರಿಸಿ. ಆಗ ನೀವೂ ಗಾಬರಿಗೊಳ್ಳುವುದಿಲ್ಲ. ನಾನೂ ಹೀಗೆ ನುಗ್ಗಿ ತಿನ್ನುವ ಪ್ರಮೇಯವೇ ಬರುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು. ಅಂತೂ ನಿಮ್ಮ ಮದುವೆ ನಿಮಗೆ ಮತ್ತು ಅತಿಥಿಗಳಿಗೆ ಒಳ್ಳೆಯ ನೆನಪು ಎಂದಿದ್ದಾರೆ ಅನೇಕರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:48 am, Thu, 10 August 23