ಡಿಸೆಂಬರ್ 21 ಶನಿವಾರದಂದು ಕಬ್ಬನ್ ರೀಡ್ಸ್ ವತಿಯಿಂದ ಕಬ್ಬನ್ ಪಾರ್ಕ್‌ನಲ್ಲಿ ಸೀಕ್ರೆಟ್ ಸಾಂತ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 500 ರಿಂದ 600 ರಷ್ಟು ಜನ ಭಾಗವಹಿಸಿದ್ದು, ಹಲವಾರು ಉಡುಗೊರೆಗಳನ್ನು ಕೂಡಾ ತರಲಾಗಿತ್ತು. ಮಾರ್ಗಸೂಚಿ ಉಲ್ಲಂಘಿಸಿ ಸಾಕಷ್ಟು ಜನರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಕಬ್ಬನ್ ಪಾರ್ಕ್ ಆಡಳಿತ ಮಂಡಳಿ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿತ್ತು. ಇದೀಗ ಈ ಬಗ್ಗೆ ಕಬ್ಬನ್ ರೀಡ್ಸ್ ಗಂಭೀರ ಆರೋಪವೊಂದನ್ನು ಮಾಡಿದ್ದು, ಇಲ್ಲಿನ ಆಡಳಿತ ಮಂಡಳಿ ನಮ್ಮ ಗಿಫ್ಟ್ಸ್‌ಗಳನ್ನು ಕಸಿದುಕೊಂಡು ಸೀಕ್ರೆಟ್ ಸಾಂತ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದು ಮಾತ್ರವಲ್ಲದೆ, ಧಮ್ಕಿ ಹಾಕಿ ನಮ್ಮನ್ನು ಹೊರ ದಬ್ಬಿದ್ರು ಎಂದು ಹೇಳಿದೆ. ಈ ಕುರಿತ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಮ್ಮ ತಂಡ ಆಯೋಜನೆ ಮಾಡಿದ್ದಂತಹ ಸೀಕ್ರೇಟ್ ಸಾಂತ ಕಾರ್ಯಕ್ರವನ್ನು ಸ್ಥಗಿತಗೊಳಿಸಿ, ನಮ್ಮಲ್ಲಿದ್ದ ಗಿಫ್ಟ್‌ಗಳನ್ನು ಕಸಿದುಕೊಂಡು, 35 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕಬ್ಬನ್ ಪಾರ್ಕ್ ಆಡಳಿತ ಮಂಡಳಿ ಬೆದರಿಕೆ ಹಾಕಿದೆ ಎಂದು ಕಬ್ಬನ್ ರೀಡ್ಸ್ ಹೇಳಿದೆ. ಈ ಕುರಿತ ಪೋಸ್ಟ್ ಒಂದನ್ನು ಕಬ್ಬನ್ ರೀಡ್ಸ್‌ನ (cabbonreads) ಅಧೀಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
“ನಾವು ಶಾಂತಿಯುತವಾಗಿ ಮತ್ತು ಕಾನೂನುಬದ್ಧವಾಗಿಯೇ ಕಾರ್ಯಕ್ರಮವನ್ನು ಆಯೋಜಿಸಿದ್ದೆವು ಆದರೆ ಈ ಕಾರ್ಯಕ್ರಮದ ಸಂದರ್ಭದಲ್ಲಿ ಕಬ್ಬನ್ ಪಾರ್ಕ್ ಆಡಳಿತ ಮಂಡಳಿಯ ಅಧಿಕಾರಿಗಳು ನೀಡಿದ ಕಿರುಕುಳ ನಿಜವಾಗಿಯೂ ನಮ್ಮನ್ನು ದಿಗ್ಭ್ರಮೆಗೊಳಿಸಿದೆ. ಅವರು ಓದುಗರ ಗುಂಪನ್ನು ಮಾತ್ರವಲ್ಲದೆ ಅಲ್ಲಿದ್ದ ಇತರೆ ಸದುದ್ದೇಶ ಗುಂಪುಗಳಿಗೂ ಬೆದರಿಕೆ ಹಾಕಿದ್ದಾರೆ” ಎಂಬ ಸುದೀರ್ಘ ಬರಹವನ್ನು ಬರೆದುಕೊಂಡು ಪತ್ರಕರ್ತ ಮಿತ್ರರು ನಮಗಾದ ಅನ್ಯಾಯದ ಬಗ್ಗೆ ನಮ್ಮೊಂದಿಗೆ ನಿಂತು ಹೋರಾಟ ನಡೆಸಬೇಕು ಎಂದು ಕೇಳಿಕೊಂಡಿದೆ.
ಇದನ್ನೂ ಓದಿ: 8 ವರ್ಷದ ಲವ್; ತನಗೆ ಮೋಸ ಮಾಡಿ ಇನ್ನೊಬ್ಬಳ ಜೊತೆ ಮದುವೆಯಾಗಲು ತಯಾರಾದ ಪ್ರೇಮಿಯ ಜನನಾಂಗವನ್ನೇ ಕತ್ತರಿಸಿದ ಯುವತಿ
ಇನ್ನೂ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ʼಮೊನ್ನೆ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಸೀಕ್ರೆಟ್ ಸಾಂತ ಕಾರ್ಯಕ್ರಮದಲ್ಲಿ ಹಲವಾರು ಗಿಫ್ಟ್ ಪ್ಯಾಕ್‌ಗಳನ್ನು, ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲಲ್ಲಿ ಎಸೆದಿರುವುದು ಕಂಡು ಬಂದಿದೆ ಅಲ್ಲದೆ ಹಲವರು ಉದ್ಯಾನವನದ ಹುಲ್ಲುಹಾಸಿನ ಮೇಲೆ ನಡೆದಾಡಿದ್ದಾರೆ ಮತ್ತು ಮಲಗಿದ್ದಾರೆ. ಇದರಿಂದ ಪಾರ್ಕ್‌ನ ಶಾಂತ ಪರಿಸರ ಹಾಳಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ. ಹಾಗಾಗಿ 20 ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಯಾವುದೇ ಸಭೆ, ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸುವ ಮುನ್ನ ತೋಟಗಾರಿಕೆ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಹೇಳಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ